ಗುರುವಾರ , ಮೇ 13, 2021
16 °C

ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಗುರುವಾರ ಮುಂಗಾರು ಚುರುಕಾಗಿದೆ.

ಶಿವಮೊಗ್ಗ  ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಲಿಂಗನಮಕ್ಕಿ ಅಣೆಕಟ್ಟೆ ಭರ್ತಿಗೆ ಒಂದೂಮುಕ್ಕಾಲು ಅಡಿ ಮಾತ್ರ ಬಾಕಿ ಇದೆ.ಅಣೆಕಟ್ಟೆಯ ಗರಿಷ್ಠ ಮಟ್ಟ 1,819 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ 1,817.1 ಅಡಿ ನೀರಿದೆ. ಒಳಹರಿವು 11,342 ಕ್ಯೂಸೆಕ್ ಇದೆ ಎಂದು ಜಲಾಶಯದ ಎಂಜಿನಿಯರ್ ತಿಳಿಸಿದ್ದಾರೆ.ಉಡುಪಿ  ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಎಡೆಬಿಡದೆ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಮನೆಗಳ ಗೋಡೆ ಕುಸಿದು ಹಾನಿ ಸಂಭವಿಸಿದೆ. ಗಾಳಿಮಳೆಯ ಆರ್ಭಟಕ್ಕೆ ಕೆಲವೆಡೆ ಮರಗಳು ಉರುಳಿಬಿದ್ದಿವೆ. ಬೆಳಗಿನ ಹೊತ್ತು ಕೆಲವೆಡೆ ವಿದ್ಯುತ್ ಕಡಿತ ಉಂಟಾಗಿತ್ತು.ಮೀನುಗಾರಿಕೆ ಸ್ಥಗಿತ: ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡ ಕಾರಣ ಗುರುವಾರವೂ ಬಹಳಷ್ಟು ದೋಣಿಗಳು ಮೀನುಗಾರಿಕೆಗೆ ತೆರಳಲಿಲ್ಲ. ಮೀನುಗಾರಿಕೆ ಹಠಾತ್ ಸ್ಥಗಿತಗೊಳಿಸಿ ಬಂದರಿಗೆ ಮರಳಿರುವ ದೋಣಿಗಳು ಎರಡು ದಿನಗಳಿಂದ ಲಂಗರು ಹಾಕಿವೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಗುರುವಾರ ಹೆಚ್ಚುಕಮ್ಮಿ ದಿನವಿಡೀ ಮಳೆಯಾಯಿತು. ಬುಧವಾರ ಹಿಡಿದ ಮಳೆ ವಿಶ್ರಾಂತಿ ಪಡೆದಂತೆ ಕಾಣಲಿಲ್ಲ.ಚಿಕ್ಕಮಗಳೂರು ಜಿಲ್ಲೆಯ ಕಳಸ, ಶೃಂಗೇರಿ ಹಾಗೂ ತರಿಕೆರೆಯಲ್ಲೂ ಮಳೆಯಾಗಿದೆ. ಶೃಂಗೇರಿಯಲ್ಲಿ ತುಂಗಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.ಹವಾಮಾನ ವರದಿ

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದೆ. ಕೋಟ, ಉಡುಪಿ, ಆಳಂದ 8 ಸೆಂ.ಮೀ, ಕೊಲ್ಲೂರು, ಕುಂದಾಪುರ, ಹೊನ್ನಾವರ, ಕದ್ರಾ, ಮೂಡುಬಿದರೆ 7, ಮಂಗಳೂರು, ಮೂಲ್ಕಿ, ಬಂಟ್ವಾಳ, ಮಾಣಿ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಗೇರುಸೊಪ್ಪ 6, ಕಾರ್ಕಳ, ಭಟ್ಕಳ, ಶಿರಾಳಿ 5, ಸುಬ್ರಹ್ಮಣ್ಯ, ಸುಳ್ಯ, ಸಿದ್ಧಾಪುರ, ಗೋಕರ್ಣ, ಆಗುಂಬೆ 4 ಸೆಂ.ಮೀ ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳವರೆಗೆ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.