ಕರಾವಳಿ ರಕ್ಷಣೆ

ಗುರುವಾರ , ಜೂಲೈ 18, 2019
25 °C

ಕರಾವಳಿ ರಕ್ಷಣೆ

Published:
Updated:

ದೇಶದ ಹಲವು ರಾಜ್ಯಗಳಲ್ಲಿನ ಕರಾವಳಿ ಪ್ರದೇಶಗಳು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಹಲವು ಬಗೆಯ ಉದ್ಯಮಗಳಿಂದ ಪರಿಸರ ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿವೆ. ಇದನ್ನು ಪರಿಹರಿಸಲು ಇನ್ನು ಮುಂದೆ ಕರಾವಳಿ ಪ್ರದೇಶದಲ್ಲಿ ಯಾವುದೇ ಹೊಸ ಉದ್ಯಮ ಸ್ಥಾಪನೆಗೆ ಅವಕಾಶ ನೀಡದಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್ ಅವರ ದೃಢ ನಿರ್ಧಾರ ಸ್ವಾಗತಾರ್ಹ.

ಈಗಾಗಲೇ ಕರಾವಳಿ ಪ್ರದೇಶ ನಿಯಂತ್ರಣ ವಲಯ ಕಾಯ್ದೆಗೆ ಕಠಿಣವಾದ ನಿಯಮಾವಳಿಗಳನ್ನು ಸೇರಿಸಿ ತಿದ್ದುಪಡಿ ಮಾಡಿರುವುದರಿಂದ ಈ ನಿರ್ಧಾರ ಆ ಕಾಯ್ದೆಗೆ ಬಲ ನೀಡಿದಂತಾಗಿದೆ. ಆದರೂ, ಕೆಲವು ಉದ್ಯಮಿಗಳು ಉಷ್ಣ ವಿದ್ಯುತ್ ಸ್ಥಾವರ ಮತ್ತು ಬಂದರು ಯೋಜನೆಗಳ ಸ್ಥಾಪನೆಗೆ ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರಗಳು ಕೂಡ ವಿವೇಚನೆ ಇಲ್ಲದೆ ಇಂತಹ ಯೋಜನೆಗಳಿಗೆ ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತಲೇ ಇವೆ. ಆಂಧ್ರಪ್ರದೇಶದ ಪೋಲಾವರಂ, ಛತ್ತೀಸ್‌ಗಡದ ದಾಂತೇವಾಡ ಮತ್ತು ಒಡಿಶಾದ ಮಲ್ಕನ್‌ಗಿರಿ ಪ್ರದೇಶಗಳಲ್ಲಿ ಸ್ಥಾಪಿಸಬೇಕೆಂಬ ವಿದ್ಯುತ್ ಯೋಜನೆಗಳ ಪ್ರಸ್ತಾವಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿರುವುದು ಆ ಪ್ರದೇಶಗಳ ಸಂರಕ್ಷಣೆಯ ದೃಷ್ಟಿಯಿಂದ ಅನಿವಾರ್ಯ. ಇಂತಹ ಹಲವಾರು ಯೋಜನೆಗಳಿಂದ ಈಗಾಗಲೇ ಕರಾವಳಿ ಪ್ರದೇಶಗಳಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ. ಹಲವಾರು ವರ್ಷಗಳಿಂದ ಕರಾವಳಿ ಮತ್ತು ಅರಣ್ಯ ಪ್ರದೇಶಗಳನ್ನೇ ನಂಬಿ ಬದುಕಿರುವ ಜನರನ್ನು ಎತ್ತಂಗಡಿ ಮಾಡುವುದು ಮತ್ತು ಅವರಿಗೆ ಸರಿಯಾಗಿ ಪುನರ್‌ವಸತಿ ಸೌಲಭ್ಯ ಕಲ್ಪಿಸದಿರುವುದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಪರಿಸ್ಥಿತಿ ತಪ್ಪಬೇಕು.ರಾಜ್ಯದ ಉಡುಪಿ ಜಿಲ್ಲೆಯಲ್ಲಿನ ಉಷ್ಣ ವಿದ್ಯುತ್ ಸ್ಥಾವರದಿಂದ ಹಾರುಬೂದಿ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಅಲ್ಲಿನ ಜನರಿಗೆ ಚರ್ಮವ್ಯಾಧಿ ಮತ್ತು ಸುತ್ತಮುತ್ತಲಿನ ಪ್ರದೇಶದ ಬೆಳೆಗಳು ನಾಶವಾಗುತ್ತಿರುವುದು ಕಂಡುಬಂದಿದೆ. ಈ ಕುರಿತಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದಕ್ಷತೆ ಬಗೆಗೆ ಜನರಿಗೆ ಸಮಾಧಾನವಿಲ್ಲ. ಕೇಂದ್ರ ಸರ್ಕಾರ ಸಮುದ್ರ ತೀರದ ರಕ್ಷಣೆ ಮತ್ತು ಅರಣ್ಯ ನಾಶವನ್ನು ತಡೆಯಲು ಕಾಯ್ದೆ ಮಾಡಿದರೆ ಸಾಲದು. ಪರಿಸರ ರಕ್ಷಣೆ ಕಾರ್ಯವನ್ನು ನಿರ್ವಹಿಸಬೇಕಾದ ಕೇಂದ್ರ ಮತ್ತು ರಾಜ್ಯಗಳ ಪರಿಸರ ಮಾಲಿನ್ಯ ಮಂಡಳಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡುವಂತೆ ಚುರುಕು ಮುಟ್ಟಿಸಬೇಕು.ಕರಾವಳಿ ಮತ್ತು ಅರಣ್ಯ ಪ್ರದೇಶಗಳಲ್ಲಿ ಯಾವುದೇ ಯೋಜನೆಯನ್ನು ಕೈಗೊಳ್ಳುವ ಮುನ್ನ ಅಲ್ಲಿನ ಪರಿಸರ ನಾಶವಾಗದಂತೆ, ಜೀವಿವೈವಿಧ್ಯ ಮತ್ತು ವಿವಿಧ ಬಗೆಯ ಪ್ರಭೇದಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಕಡಲ ಕಿನಾರೆಯ ಸೌಂದರ್ಯಕ್ಕೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ. ಜೊತೆಗೆ ಕರಾವಳಿ ಪ್ರದೇಶವನ್ನೇ ನಂಬಿರುವ ಮೀನುಗಾರರ ಬದುಕು ಚಿಂದಿಯಾಗದಂತೆಯೂ ಗಮನ ವಹಿಸಬೇಕಾದುದು ಮುಖ್ಯ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಕರಾವಳಿ ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕೇಂದ್ರದ ಕಠಿಣ ಕ್ರಮ ಅನಿವಾರ್ಯ ಎನ್ನುವುದನ್ನು ಒಪ್ಪಲೇಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry