ಕರಾವಳಿ: ಶ್ರೀಗಂಧ ಕಂಪು

ಮಂಗಳವಾರ, ಜೂಲೈ 16, 2019
28 °C

ಕರಾವಳಿ: ಶ್ರೀಗಂಧ ಕಂಪು

Published:
Updated:

ಮಂಗಳೂರು: ಕನ್ನಡ ನಾಡಿಗೂ ಶ್ರೀಗಂಧಕ್ಕೂ ಶತಮಾನಗಳ ನಂಟು. ಅನಾದಿ ಕಾಲದಿಂದಲೂ ಕರ್ನಾಟಕ ಗಂಧದ ಬೀಡು ಎಂದೇ ಕರೆಯಿಸಿಕೊಳ್ಳುತ್ತಿದೆ. ಸೊಪ್ಪಿನಿಂದ ಹಿಡಿದು ಬೇರಿನ ತುದಿಯವರೆಗೂ ಬಹೂಪಯೋಗವಿರುವ ಏಕೈಕ ಮರ ಇದು. ಶ್ರೀಗಂಧ ಇಂದು ಲಾಭದಾಯಕ ಉದ್ಯಮ.

ಸೂಕ್ತ ಹವಾಮಾನ ಹೊರತಾಗಿಯೂ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಶ್ರೀಗಂಧ ಬೆಳೆಸುವವರ ಸಂಖ್ಯೆ ಕಡಿಮೆ. ಗಂಧದ ಬಗ್ಗೆ ಜನಸಾಮಾನ್ಯರಿಗಿರುವ ತಪ್ಪು ತಿಳಿವಳಿಕೆ ಇನ್ನೂ ದೂರವಾಗದಿರುವುದು ಇದಕ್ಕೆ ಪ್ರಮುಖ ಕಾರಣ ಎಂಬುದು ತೋಟಗಾರಿಕೆ ಇಲಾಖೆ ವಿಶ್ಲೇಷಣೆ.

ಗಂಧದ ಮಾರಾಟಕ್ಕಿದ್ದ ನಿರ್ಬಂಧವನ್ನು ಇದೀಗ ಸಡಿಲಿಸಲಾಗಿದ್ದು ರೈತರು ಜಮೀನುಗಳಲ್ಲಿ ಬೆಳೆದಿರುವ ಗಂಧದ ಮರವನ್ನು ಅರಣ್ಯ ಇಲಾಖೆ ಅನುಮತಿ ಮೇರೆಗೆ ನೇರವಾಗಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಾದ ಸಾಬೂನು ಕಾರ್ಖಾನೆ ಅಥವಾ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪೂರ್ವ ನಿರ್ಧರಿತ ದರದಲ್ಲಿ ಮಾರಾಟ ಮಾಡಬಹುದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2010-11ರ ಸಾಲಿನಲ್ಲಿ 110 ಜನರಿಗೆ ರೂ.25,900 ಸಬ್ಸಿಡಿ ದರದಲ್ಲಿ ಶ್ರೀಗಂಧ ಗಿಡಗಳನ್ನು ವಿತರಿಸಲಾಗಿದೆ. 2011-12ರ ಸಾಲಿನಲ್ಲಿ 45 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡಲಾಗಿದ್ದು ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರೈತರೇ ಸ್ವಆಸಕ್ತಿಯಿಂದ ಗಿಡ ನೆಟ್ಟು ಖರ್ಚುವೆಚ್ಚದ ರಶೀದಿ ಕಳುಹಿಸಿಕೊಟ್ಟರೆ ಅದನ್ನು ಪರಿಗಣಿಸಿ ಸೂಕ್ತ ಸಹಾಯಧನ ನೀಡಲಾಗುವುದು ಎಂಬುದು ತೋಟಗಾರಿಕೆ ಇಲಾಖೆಯ ಮಾಹಿತಿ.

ಹತ್ತಾರು ವರ್ಷಗಳಿಂದ ನರ್ಸರಿ ಗಿಡ ವ್ಯಾಪಾರ ಹಾಗೂ ಶ್ರೀಗಂಧದ ಗಿಡ ನೆಟ್ಟು ಬೆಳೆಸಿರುವ ಸುಳ್ಯದ ಜಯರಾಂ, `ಇದೊಂದು ಲಾಭದಾಯಕ ಉದ್ಯಮ~ ಎನ್ನುತ್ತಾರೆ. ಐಟಿ ಬಿಟಿ ಕಡೆಗೆ ಆಕರ್ಷಿತರಾಗುವ ಯುವಜನತೆಗೆ ಗದ್ದೆಯಲ್ಲಿ ನಾಟಿ ಮಾಡುವುದು ಕೀಳಾಗಿ ಕಾಣುತ್ತಿದೆ. ಹಲವಾರು ವರ್ಷಗಳಿಂದ ಕೃಷಿ ಬದುಕಿನ ಏರಿಳಿತಗಳ ಅರಿವಿರುವ ರೈತರೂ ದಿಢೀರ್ ಲಾಭ ದೊರಕಬೇಕೆಂದು ರಬ್ಬರ್, ಗೇರುಬೀಜ, ವೆನಿಲ್ಲಾದ ಮೊರೆ ಹೋಗುತ್ತಿದ್ದಾರೆ. ದೀರ್ಘಾವಧಿ ಲಾಭ ನೀಡುವ ಶ್ರೀಗಂಧ ಬೆಳೆ ಬಗ್ಗೆ ಬಹುತೇಕರಿಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ ಅವರು.

`ಕಳೆದ ಆರು ವರ್ಷಗಳಲ್ಲಿ ಏಳು ಎಕರೆ ಪ್ರದೇಶದಲ್ಲಿ 3,000 ಶ್ರೀಗಂಧದ ಗಿಡಗಳನ್ನು ನೆಟ್ಟಿದ್ದೇನೆ. ಎರಡನೇ ವರ್ಷದಿಂದಲೇ ತಿರುಳು ಪರಿಮಳ ಬೀರಲಾರಂಭಿಸಿದರೂ ಸಂಪೂರ್ಣ ಕಟಾವಿಗೆ 15 ವರ್ಷ ಕಾಯಬೇಕು. ಬಲಿತ ಪ್ರತಿ ಮರವೂ ಕನಿಷ್ಠವೆಂದರೆ 25ರಿಂದ 30 ಕೆ.ಜಿ ತಿರುಳು ಹೊಂದಿರುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಶ್ರೀಗಂಧದ ಬೆಲೆ ರೂ.4,500 ಎಂದು ಅವರು ಮಾಹಿತಿ ನೀಡಿದರು.

ಬೇಸಿಗೆಯಲ್ಲಿ ವಾರಕ್ಕೆ ಎರಡು ಬಾರಿ ಪ್ರತಿ ಗಿಡಕ್ಕೆ ಮೂರು ಲೀಟರ್ ನೀರು ಕೊಡುತ್ತಿರಬೇಕು. ಮಳೆಗಾಲದಲ್ಲಿ ಮರದ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ವರ್ಷಕ್ಕೊಮ್ಮೆ ನಿಗದಿತ ಪ್ರಮಾಣದಲ್ಲಿ ಸಾವಯವ ಗೊಬ್ಬರ ಬಳಸಿದರೆ ಗಿಡದ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಹೆಚ್ಚೆಂದರೆ ಒಂದು ಮರ ಬೆಳೆಯಲು ವರ್ಷಕ್ಕೆ ರೂ.50 ಖರ್ಚು ಬೀಳಬಹುದು ಎಂಬ ಅಚ್ಚರಿಯ ಅಂಶವನ್ನು ಹೊರಗೆಡಹಿದ್ದಾರೆ ಅವರು.

ಕೆತ್ತನೆಗೆ, ದೇವಸ್ಥಾನಗಳಲ್ಲಿ, ಆಯುರ್ವೇದಿಕ್ ಔಷಧಗಳಲ್ಲಿ, ಎಣ್ಣೆ, ಸೋಪ್, ಪರ್‌ಪ್ಯೂಮ್, ಪೌಡರ್ ತಯಾರಿಕೆಗೆ ಅಗತ್ಯವಾಗಿರುವ ಶ್ರೀಗಂಧ ಬಹೂಪಯೋಗಿ ವಸ್ತು. ಬೇರುಗಳಿಂದ ಎಣ್ಣೆ ತೆಗೆದ ಬಳಿಕ ಉಳಿದ ಹುಡಿಯನ್ನು ಪೌಡರ್ ತಯಾರಿಕೆಗೂ ಬಳಸುತ್ತಾರೆ. ಮರದ ತಿರುಳು ಹಾಗೂ ಸಿಪ್ಪೆ ಕರಕುಶಲಕರ್ಮಿಗಳ ಕೈಯಲ್ಲಿ ಗಂಧದ ಮೂರ್ತಿಗಳಾಗುತ್ತವೆ. ವೈದ್ಯರ ಪ್ರಕಾರ ಗಂಧದ ಚಿಗುರೆಲೆಯ ಚಟ್ನಿ ಆರೋಗ್ಯವರ್ಧಕವೂ ಹೌದು. ಕಿಡ್ನಿ ಸಂಬಂಧಿ ಕಾಯಿಲೆ ಗುಣಮುಖವಾಗಲು ಇದು ಸಹಕಾರಿ. ಇನ್ನು ಶ್ರೀಗಂಧ ಬೆಳೆಗೆ ಕಾಡುವ ರೋಗಗಳೆಂದರೆ ಫಂಗಿಸೈಡ್ ಹಾಗೂ ಸೆಮ್‌ಬೋರರ್. ಬುಡದಲ್ಲಿ ಹೆಚ್ಚು ನೀರು ನಿಲ್ಲುವ ಮೂಲಕ ಉಂಟಾಗುವ ಫಂಗಸ್ ಗಿಡದ ಸಾವಿಗೆ ಕಾರಣವಾದರೆ, ಬೋರರ್ ಎಂಬ ಕೀಟ ಗಿಡವನ್ನು ಕೊರೆದು ತಿರುಳನ್ನು ನಾಶಗೊಳಿಸುತ್ತದೆ. ತೋಟಗಾರಿಕಾ ಇಲಾಖೆ ಸಂಪರ್ಕಿಸಿದರೆ ಇವೆಲ್ಲಕ್ಕೂ ಸೂಕ್ತ ಔಷಧಗಳು ಲಭ್ಯವಾಗುತ್ತವೆ.

ಬೆಳೆದ ರೈತನೇ ಇಲಾಖೆ ಅನುಮತಿಯೊಂದಿಗೆ ಮಾರಾಟ ಮಾಡುವ ಕಾನೂನು ಜಾರಿಗೊಂಡಿದ್ದರೂ `ಮುಕ್ತ ಮಾರುಕಟ್ಟೆ~ ಸಾಧ್ಯವಿಲ್ಲ. ಅಂದರೆ ಸರ್ಕಾರ ಸೂಚಿಸಿರುವ ಕೆಲವು ಕೇಂದ್ರಗಳಲ್ಲಿ ಮಾತ್ರ ಮಾರಾಟ ಮಾಡಬೇಕಿರುವುದರಿಂದ ರೈತರ ಸ್ವಾತಂತ್ರ್ಯ ಕಸಿದುಕೊಂಡಂತಾಗುತ್ತದೆ. ಕೇರಳ, ತಮಿಳುನಾಡು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಮುಕ್ತ ಮಾರುಕಟ್ಟೆ ಲಭ್ಯವಿದೆ. ಪ್ರಸ್ತುತ ಈ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿದ್ದು, ಶೀಘ್ರವೇ ಒಪ್ಪಿಗೆ ದೊರಕುವ ಸಾಧ್ಯತೆಗಳಿವೆ ಎಂಬುದು ತೋಟಗಾರಿಕಾ ಇಲಾಖಾಧಿಕಾರಿ ಪ್ರದೀಪ್ ಡಿಸೋಜ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry