ಕರಿಘಟ್ಟದ ಶ್ರೀನಿವಾಸ

ಸೋಮವಾರ, ಮೇ 27, 2019
27 °C

ಕರಿಘಟ್ಟದ ಶ್ರೀನಿವಾಸ

Published:
Updated:

ಕಾವೇರಿ- ಲೋಕಪಾವನಿ ನದಿಗಳ ಸಂಗಮ ಸ್ಥಳದಲ್ಲಿರುವ ಕರಿಘಟ್ಟದ ವೆಂಕಟರಮಣ ಸ್ವಾಮಿ ದೇವಸ್ಥಾನ ಸಮುದ್ರ ಮಟ್ಟದಿಂದ 2,697 ಅಡಿಗಳ ಎತ್ತರದಲ್ಲಿದೆ. ಬೆಟ್ಟದ ಕಿಬ್ಬರಿಯಲ್ಲಿ ಕಪ್ಪು ಕಲ್ಲುಗಳು ಹೆಚ್ಚಾಗಿರುವುದರಿಂದ ಇದಕ್ಕೆ `ಕರಿಗಿರಿ~ ಎಂತಲೂ, ಬೆಟ್ಟದ ತುದಿಯನ್ನು ಮೋಡಗಳು ಚುಂಬಿಸುವಂತೆ ಭಾಸವಾಗುವುದರಿಂದ `ನೀಲಾಚಲ~ ಎಂಬ ಹೆಸರಿದೆ. ಶ್ರೀನಿವಾಸನ ಗುಡ್ಡ, ಕಾವಲು ಗೋಪುರ ಗುಡ್ಡ ಹಾಗೂ ಚಿನ್ನಾಯಕನಹಳ್ಳಿ ಗುಡ್ಡ ಎಂಬ ಮೂರು ಗುಡ್ಡಗಳನ್ನು ಕರಿಘಟ್ಟ ಒಳಗೊಂಡಿದೆ. ಕಾವಲು ಗೋಪುರ ಗುಡ್ಡ ಎತ್ತರ ಪ್ರದೇಶದಲ್ಲಿದೆ. ಅಲ್ಲಿ ನಿಂತು ನೋಡಿದರೆ ಮೈಸೂರು, ಶ್ರೀರಂಗಪಟ್ಟಣ, ಗಂಜಾಂ, ಪಾಂಡವಪುರ, ಕುಂತಿಬೆಟ್ಟ, ಮೇಲುಕೋಟೆ ಬೆಟ್ಟದ ಸರಹದ್ದುಗಳು ಸೇರಿದಂತೆ ಹತ್ತಾರು ಹಳ್ಳಿಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹಸಿರು ಪ್ರದೇಶವನ್ನು ಸೀಳಿಕೊಂಡು ಹರಿಯುವ ಕಾವೇರಿಯ ಅಂಕು ಡೊಂಕಾದ ನಡಿಗೆ ನಯನ ಮನೋಹರ.ಭೃಗು ಮಹರ್ಷಿಗಳು ಶಿಷ್ಯರೊಂದಿಗೆ ದಕ್ಷಿಣ ಭಾರತದಲ್ಲಿ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಇಲ್ಲಿ ಕೆಲಕಾಲ ತಂಗಿದ್ದರು ಎಂಬ ಐತಿಹ್ಯವಿದೆ. ಅವರೇ ಶ್ರೀನಿವಾಸನ ಮೂಲ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಪುರಾತತ್ವ ಇಲಾಖೆಯ ದಾಖಲೆಗಳ ಪ್ರಕಾರ ಈ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಯಿತು.ಮೈಸೂರಿನ ಅರಸರು ಅದನ್ನು ಅಭಿವೃದ್ಧಿಪಡಿಸಿದರು.  ದೇವಸ್ಥಾನ ತಲುಪಲು 550 ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಮೈಸೂರಿನ ಚಿಕ್ಕದೇವರಾಜ ಒಡೆಯರ್ ಅವರು ಈ ಮೆಟ್ಟಲುಗಳನ್ನು ಹಾಕಿಸಿದರು. ಮೆಟ್ಟಿಲು ಹತ್ತುವಾಗ ದಣಿವಾದರೆ ವಿಶ್ರಮಿಸಿಕೊಳ್ಳಲು ಇಕ್ಕೆಲಗಳಲ್ಲಿ ಅರವಟ್ಟಿಗೆಗಳಿವೆ.ದ್ರಾವಿಡ ಶೈಲಿಯ ಗರ್ಭಗುಡಿಯಲ್ಲಿ `ಕೃಷ್ಣ ಶಿಲೆ~ಯಿಂದ ಕಡೆದ ಆಕರ್ಷಕ ಶ್ರೀನಿವಾಸನ ವಿಗ್ರಹವಿದೆ. ಬಲಬದಿಯಲ್ಲಿ ಯೋಗಾ ವೆಂಕಟೇಶ ಹಾಗೂ ಎಡಬದಿಯಲ್ಲಿ ಭೋಗಾ ವೆಂಕಟೇಶನ ವಿಗ್ರಹಗಳಿವೆ. ದಕ್ಷಿಣಕ್ಕೆ ಪದ್ಮಾವತಿ ಅಮ್ಮನವರ ಗುಡಿ ಇದೆ. ಗರುಡ, ಆಂಜನೇಯ, ಸೀತಾರಾಮ, ಲಕ್ಷ್ಮಣರ ಆಕರ್ಷಕ ವಿಗ್ರಹಗಳು ಗಮನ ಸೆಳೆಯುತ್ತವೆ. ದೇವಸ್ಥಾನದ  ಹೊರಗೆ ಹತ್ತಾರು ಕಲ್ಲಿನ ಮಂಟಪಗಳಿವೆ. ಉತ್ತರ ದಿಕ್ಕಿಗೆ ಬಾಗಿಲು ಇರುವುದು ಈ ದೇವಸ್ಥಾನದ ವಿಶೇಷ.ಕರಿಘಟ್ಟದ ಶ್ರೀನಿವಾಸ ದೇವಸ್ಥಾನದಲ್ಲಿ ಮಾಘ ಹುಣ್ಣಿಮೆಯ (ಫೆಬ್ರುವರಿ ತಿಂಗಳಲ್ಲಿ) ಎರಡನೇ ದಿನ (ಕೃಷ್ಣ ಪಕ್ಷದಲ್ಲಿ) ದೊಡ್ಡಜಾತ್ರೆ  ಹಾಗೂ ಬ್ರಹ್ಮ ರಥೋತ್ಸವ ನಡೆಯುತ್ತದೆ.  ಶ್ರಾವಣ ಮಾಸದಲ್ಲಿ ಪ್ರತಿ ಶನಿವಾರ ಪಂಚಾಮೃತ ಅಭಿಷೇಕ ಇತರೆ ವಿಶೇಷ ಪೂಜೆಗಳು ನಡೆಯುತ್ತವೆ. ಕಡೇ ಶನಿವಾರ ಚಿಕ್ಕಜಾತ್ರೆ ನಡೆಯುತ್ತದೆ.ವೈಕುಂಠ ಏಕಾದಶಿಯಂದು (ಡಿಸೆಂಬರ್) ದೇವಸ್ಥಾನದ ಉತ್ತರದ ಭಾಗದ `ವೈಕುಂಠ ದ್ವಾರ~ ತೆರೆಯುವುದು ಇಲ್ಲಿನ ವಿಶೇಷ. ಮೇ ತಿಂಗಳಲ್ಲಿ ಮೈಸೂರಿನ ಪವಮಾನ ಪ್ರತಿಷ್ಠಾನ ಮೆಟ್ಟಿಲೋತ್ಸವ ನಡೆಸುತ್ತದೆ.ಭಕ್ತರ ಕೋರಿಕೆ ಮೇರೆಗೆ ಶ್ರೀನಿವಾಸ ಕಲ್ಯಾಣೋತ್ಸವ, ಪಂಚಾಮೃತ ಅಭಿಷೇಕ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಕಲ್ಯಾಣೋತ್ಸವಕ್ಕೆ ರೂ.5000 ಹಾಗೂ ಪಂಚಾಮೃತ ಅಭಿಷೇಕಕ್ಕೆ ರೂ.500 ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಮುಂಚಿತವಾಗಿ ಅರ್ಚಕರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್ 9341198456.ಕರಿಘಟ್ಟದ ದಾರಿ: ಶ್ರೀರಂಗಪಟ್ಟಣದಿಂದ 4, ಮೈಸೂರಿನಿಂದ 19 ಹಾಗೂ ಬೆಂಗಳೂರಿನಿಂದ 125 ಕಿ.ಮೀ ದೂರದಲ್ಲಿ ಕರಿಘಟ್ಟದ ಶ್ರೀನಿವಾಸ ದೇವಸ್ಥಾನವಿದೆ. ಅಲ್ಲಿಗೆ ಹೋಗಲು ಶ್ರೀರಂಗಪಟ್ಟಣ- ಬನ್ನೂರು ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳಿವೆ.ಗಂಜಾಂ ನಿಮಿಷಾಂಬ ದೇವಸ್ಥಾನಕ್ಕೆ ಬರುವವರು ಒಂದೂವರೆ ಕಿ.ಮೀ ದೂರ ಕಾವೇರಿ ನದಿ ಸೇತುವೆ ದಾಟಿ ಅಲ್ಲಿಗೆ ಹೋಗಬಹುದು. ಕಾರು, ಬೈಕ್‌ಗಳಲ್ಲಿ ದೇವಸ್ಥಾನದ ಬಳಿಗೆ ಹೋಗಲು ರಸ್ತೆ ಇದೆ. ಆದರೆ ಈ ರಸ್ತೆ ಅಲ್ಲಲ್ಲಿ ಹಾಳಾಗಿದೆ.ಚಾಲಕರು ಜಾಗರೂಕತೆಯಿಂದ ವಾಹನ ಓಡಿಸಬೇಕು. ಯಾತ್ರಾರ್ಥಿಗಳು ಉಳಿದುಕೊಳ್ಳಲು ವಸತಿ ಗೃಹಗಳಿಲ್ಲ. ಸಮೀಪದ ಶ್ರೀರಂಗಪಟ್ಟಣ ಅಥವಾ ಮೈಸೂರಿನಲ್ಲಿ ಉಳಿದುಕೊಳ್ಳಲು ಸಾಕಷ್ಟು ಹೊಟೇಲ್‌ಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry