ಕರಿಬಸವಯ್ಯ ನಿಧನ: ಹಾಸ್ಯ ಲೋಕಕ್ಕೆ ಮಂಕು

7

ಕರಿಬಸವಯ್ಯ ನಿಧನ: ಹಾಸ್ಯ ಲೋಕಕ್ಕೆ ಮಂಕು

Published:
Updated:

ರಾಮನಗರ: ಬಡತನದಲ್ಲಿ ಹುಟ್ಟಿ ಬಡತನದಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಹಾಸ್ಯ ಕಲಾವಿದ ಕರಿಬಸವಯ್ಯ ಅವರು ತಮ್ಮ ವೃತ್ತಿ ಜೀವನದಲ್ಲಿ ಯಾರಿಗೂ ನೋವನ್ನುಂಟು ಮಾಡದ ಸ್ನೇಹ ಜೀವಿಯಾಗಿದ್ದರು ಎಂದು ರಂಗಭೂಮಿ ಕಲಾವಿದ ಬೈರೇಗೌಡ ತಿಳಿಸಿದರು.ನಗರದ ಅಮರ ಜ್ಯೋತಿ ಕಲಾ ಬಳಗದ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕರಿಬಸವಯ್ಯ ಅವರಿಗೆ ಶನಿವಾರ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ಹಾಸ್ಯ ಕಲಾವಿದ ಕರಿಬಸವಯ್ಯರವರ ಅಕಾಲಿಕ ನಿಧನದಿಂದ ಹಾಸ್ಯಲೋಕಕ್ಕೆ ಮಂಕು ಕವಿದಂತಾಗಿದೆ. ಅಲ್ಲದೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕುಗ್ರಾಮದಲ್ಲಿ ಜನಿಸಿದ ಕರಿಬಸವಯ್ಯನವರು ತಮ್ಮ ಪ್ರತಿಭೆಯಿಂದ ರಾಜ್ಯದ ಮನೆಮಾತಾಗಿದ್ದರು.

 

ಕನ್ನಡ ಚಿತ್ರರಂಗದ ಹಾಸ್ಯಲೋಕದಲ್ಲಿ ತಮ್ಮದೆ ಆದ ವಿಶಿಷ್ಟ ಚಾಪು ಮೂಡಿಸಿದ್ದರು. ನಟನೆಯ ಜೊತೆಗೆ ಅವರು ಹರಿಕಥೆ ನಡೆಸಿಕೊಡುವುದರಲ್ಲಿಯೂ ನಿಪುಣರಾಗಿದ್ದರು ಎಂದು ಅವರು ತಿಳಿಸಿದರು.ಕಳೆದ ಇಪ್ಪತ್ತು ವರ್ಷಗಳಿಂದ ಕರಿಬಸವಯ್ಯ ಅವರು ರಾಮನಗರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಪ್ರತಿ ವರ್ಷ ನವೆಂಬರ್‌ನಲ್ಲಿ ನಡೆಯುವ ರಂಗ ಗೀತೊತ್ಸವ ಕಾರ್ಯಕ್ರಮದಲ್ಲಿ ತಪ್ಪದೆ ಆಹ್ವಾನಿತರಾಗಿ ಆಗಮಿಸುತ್ತಿದ್ದ ಅವರು ಕಿರಿಯ ರಂಗಭೂಮಿ ಕಲಾವಿದರಿಗೆ ಮಾರ್ಗದರ್ಶಕವಾಗಿದ್ದರು. ಅಮರ ಜ್ಯೋತಿ ಕಲಾ ಬಳಗದ ಮಹಾ ಪೋಷಕರಾಗಿದ್ದ ಅವರು ಎಲ್ಲಾ ಕಾರ್ಯಕ್ರಮಗಳಿಗೂ ಸ್ಫೂರ್ತಿ ತುಂಬುತ್ತಿದ್ದರು ಎಂದು ನೆನೆದರು.ಮೂರು ದಶಕಗಳ ವೃತ್ತಿ ಜೀವನದಲ್ಲಿ ಯಾರಿಗೂ ನೋವನ್ನುಂಟು ಮಾಡಿದ ಕರಿಬಸವಯ್ಯ ಅವರನ್ನು ಕಳೆದುಕೊಂಡಿರುವ ರಂಗಭೂಮಿ ಕ್ಷೇತ್ರವಿಂದು ಬಡವಾಗಿದೆ. ಅವರ ನೆನಪಿನಲ್ಲಿ ತಾಲ್ಲೂಕಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಏರ್ಪಡಿಲಾಗುವುದು. ಈ ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರು ತಮ್ಮ ಪ್ರತಿಷ್ಟೆಗಳನ್ನು ಬಿಟ್ಟು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಅಮರಜ್ಯೋತಿ ಕಲಾಬಳಗದ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಕಳೆ 15 ವರ್ಷಗಳಿಂದ ಅವರು ಅಮರ ಜ್ಯೋತಿ ಕಲಾಬಳಗದ ಜೊತೆ ನಿರಂತರ ಒಡನಾಟವನ್ನು ಹೊಂದಿದ್ದರು.  ಅವರು ರಾಮನಗರವನ್ನು ತವರೂರು ಎಂದು ಕರೆಯುತ್ತಿದ್ದರು ಎಂದು ಸ್ಮರಿಸಿದರು.ಸ್ವರ ಮಾಧುರ್ಯ ಕಲಾ ಬಳಗದ ಗೌರವಾಧ್ಯಕ್ಷ ಕೆ.ಚಂದ್ರಯ್ಯ ಮಾತನಾಡಿ, ಕರಿಬಸವಯ್ಯ ಅವರು ಎಂದಿಗೂ ವೇದಿಕೆಯಲ್ಲಿ ಸ್ಥಾನಮಾನ ಬಯಸಿದವರಲ್ಲ. ಕಿರಿಯ ಕಲಾವಿದರೊಂದಿಗೆ ಯಾವುದೆ ಅಹಂ ಇಲ್ಲದೆ ಸಾಮಾನ್ಯ ವ್ಯಕ್ತಿಯಂತೆ ಅವರು ಬೆರೆಯುತ್ತಿದ್ದರು. ಹಾಗಾಗಿ ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು ಎಂದರು.ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಾದ್ರಳ್ಳಿರಾಜು ಮಾತನಾಡಿ, ಕನ್ನಡ ಚಿತ್ರರಂಗ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ತಮ್ಮ ಪರಿಶ್ರಮದ ಮೂಲಕ ಜನಪ್ರಿಯರಾಗಿದ್ದ ಕರಿಬಸವಯ್ಯನವರ ಅಕಾಲಿಕ ಮರಣದಿಂದ ನಾವು ಸರಳ ಸಜ್ಜನಿಕೆಯ ಕಲಾವಿದನನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.ಶ್ರದ್ದಾಂಜಲಿ ಸಭೆಯಲ್ಲಿ ಹಂಸಧ್ವನಿ ಕಲಾ ಬಳಗದ ಗೌರವಾಧ್ಯಕ್ಷ ಬೈರೇಗೌಡ, ನಾಡಪ್ರಭು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎಸ್.ಸಿದ್ದರಾಮೇಗೌಡ, ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಗೋವಿಂದರಾಜು, ಅಮರ ಜ್ಯೋತಿ ಕಲಾ ಬಳಗದ ಕಾರ್ಯದರ್ಶಿ ರವಿ,  ರಂಗ ನಿರ್ದೇಶಕ ಶಿವಾನಂದಮೂರ್ತಿ, ಜಯ ಕರ್ನಾಟಕ ಸಂಘಟನೆಯ ಸಮದ್, ರಂಗಭೂಮಿ ಕಲಾವಿದರುಗಳಾದ ಬಿ.ಸಿ.ಶಿವರಾಜು, ತಿಮ್ಮರಾಜು, ಮರಿಸ್ವಾಮಿ,  ವೆಂಕಟೇಶ್, ಚಿನ್ನಗಿರಿ, ಲಕ್ಷ್ಮೀಕುಮಾರ್, ಅರೇಹಳ್ಳಿರವಿ, ಡಾ.ರಾಜ್ ಕಲಾಬಳಗ, ಅರುಣೋದಯ ಕಲಾಬಳಗ, ಅರ್ಕಾವತಿ ಕೃಪಾ ಪೋಷಿತ ನಾಟಕ ಮಂಡಳಿಯ ಕಲಾವಿದರು ಹಾಗೂ ಕಾರು ಮಾಲೀಕರು ಮತ್ತು ಚಾಲಕರು ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry