ಭಾನುವಾರ, ಜೂನ್ 13, 2021
24 °C

ಕರಿಮೆಣಸಿಗೆ ದಾಖಲೆ ಬೆಲೆ

ಪ್ರಜಾವಾಣಿ ವಾರ್ತೆ ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

ಕಳಸ: ಈ ವರ್ಷ ಕುಸಿತ ಕಂಡ ಧಾರಣೆಯಿಂದಾಗಿ ಏಲಕ್ಕಿಯು ಬೆಳೆಗಾರರ ಕೈಬಿಟ್ಟರೆ, ಕಾಳುಮೆಣಸು ಮಾತ್ರ ಬೆಳೆಗಾರರ ಕೈಹಿಡಿಯುವಂತೆ ಕಾಣುತ್ತಿದೆ. `ಸಂಬಾರ ರಾಜ~ನ ಧಾರಣೆ ಪ್ರತಿ ಕೆ.ಜಿಗೆ ಮಂಗಳವಾರ ರೂ400 ಗಳಿಗೆ ತಲುಪಿದ್ದು ಇನ್ನಷ್ಟು ಏರುವ ಸಾಧ್ಯತೆ ಕಂಡು ಬರುತ್ತಿದೆ.15 ದಿನಗಳಲ್ಲಿ ಅಚ್ಚರಿ ಎಂಬಂತೆ ಮೆಣಸಿನ ಧಾರಣೆಯಲ್ಲಿ ಕೆ.ಜಿ.ಗೆ ರೂ100  ಏರಿಕೆ ಕಂಡು ಬಂದಿದೆ. ಕಾಳುಮೆಣಸಿನ ಮಾರುಕಟ್ಟೆ ಇತಿಹಾಸದಲ್ಲೇ ಈ ಪರಿಯ ಏರುಗತಿ ಇರಲಿಲ್ಲ.ಕಾಳುಮೆಣಸಿನ ಜಾಗತಿಕ ಉತ್ಪಾದನೆಯಲ್ಲಿ ತೀವ್ರ ಸ್ವರೂಪದ ಕಡಿತ ಉಂಟಾಗಿದ್ದೇ ಬೆಲೆ ಏರಿಕೆಗೆ ಕಾರಣ. ಜಾಗತಿಕ ಒಟ್ಟು ಉತ್ಪಾದನೆ 2.5 ಲಕ್ಷ ಟನ್‌ಗಳಾದರೆ, ಭಾರತದ ಪಾಲು 50 ಸಾವಿರ ಟನ್. ಆದರೆ, ಈ ಬಾರಿ ಭಾರತದ ಉತ್ಪಾದನೆಯೇ 25-30 ಸಾವಿರ ಟನ್ ಆಸುಪಾಸಿನಲ್ಲಿದೆ.ಭಾರತದ ಆಂತರಿಕ ಬಳಕೆಗೆ 30 ಸಾವಿರ ಟನ್ ಕಾಳುಮೆಣಸು ಬೇಕು. ಜತೆಗೆ ಭಾರತದ ಕಾಳುಮೆಣಸಿಗೆ ವಿಶ್ವದಲ್ಲೇ ಹೆಚ್ಚಿನ ಬೇಡಿಕೆ ಇದೆ. ಧಾರಣೆಯಲ್ಲೂ ಪ್ರತಿ ಟನ್‌ಗೆ 700-850 ಡಾಲರ್‌ನಷ್ಟು ಹೆಚ್ಚಿನ ಬೆಲೆ.ಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬ್ರೆಜಿಲ್‌ನಲ್ಲಿ ಜೂನ್ ಅಂತ್ಯದ ವೇಳೆಗೆ ಫಸಲು ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಜಾಗತಿಕ ಮಾರುಕಟ್ಟೆಯಲ್ಲಿ ಮೆಣಸಿನ ಬೇಡಿಕೆ ಹೆಚ್ಚಿದೆ.`ಏರುತ್ತಿರುವ ಧಾರಣೆ ಪರಿಣಾಮವಾಗಿ ದೊಡ್ಡ ಬೆಳೆಗಾರರು ಕಾಳುಮೆಣಸನ್ನು ಮಾರದೆ ದಾಸ್ತಾನು ಇಡುತ್ತಿದ್ದಾರೆ. ಸಣ್ಣ ಬೆಳೆಗಾರರು ಮಾತ್ರ  ಮಾರುತ್ತಿದ್ದಾರೆ~ ಎನ್ನುತ್ತಾರೆ ಕಳಸದ ವ್ಯಾಪಾರಿ ಅಬ್ದುಲ್ ಶರೀಫ್. ಕರ್ನಾಟಕದಲ್ಲಿ ಈ ವರ್ಷ ಶೇ  40 ಮೆಣಸಿನ ಫಸಲು ಕಡಿಮೆ ಇದ್ದರೆ ಕೇರಳದಲ್ಲಿ ಈ ಪ್ರಮಾಣ ಶೇ  50 ಕಡಿಮೆ ಇದೆ.ಇಂಡೋನೇಷ್ಯಾ ಮತ್ತು ವಿಯೆಟ್ನಾಂನಲ್ಲಿ ಮೆಣಸಿನ ಉತ್ಪಾದನೆ ಸರಾಸರಿ ಪ್ರಮಾಣದಲ್ಲಿ ಇದ್ದರೂ ಜಾಗತಿಕ ಬೇಡಿಕೆಯಿಂದ ಮೆಣಸಿನ ಬೆಲೆ ಇನ್ನಷ್ಟು ಏರುವ ಸಾಧ್ಯತೆಯೇ ಹೆಚ್ಚಿದೆ. ಕಳೆದ ವರ್ಷ 20 ಸಾವಿರ ಟನ್ ಕಾಳುಮೆಣಸನ್ನು ಭಾರತ ರಫ್ತು ಮಾಡಿ ರೂ 600 ಕೋಟಿಗಳಷ್ಟು ವಿದೇಶಿ ವಿನಿಮಯ ಗಳಿಸಿತ್ತು. ಈ ಬಾರಿ ಬೆಲೆ ಹೆಚ್ಚಿರುವುದರಿಂದ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ.2010ರಲ್ಲಿ ಕಾಳುಮೆಣಸಿನ ಸರಾಸರಿ ರಫ್ತು ಬೆಲೆ ರೂ193  ಆಗಿತ್ತು. 2011ರಲ್ಲಿ ರೂ 313ಕ್ಕೆ ಏರಿತ್ತು. 2012ರಲ್ಲಿ ರೂ500ರ ಗಡಿ ತಲುಪಿ ದಾಖಲೆ ನಿರ್ಮಿಸುವುದೇ ಎನ್ನುವ ಅನುಮಾನ ಮೂಡಿದೆ.ಮಲೆನಾಡಿನಲ್ಲಿ ಸೊರಗು ರೋಗ ಬಾಧೆಯಿಂದ ಶೇ 25ರಷ್ಟು ಫಸಲು ಮಾತ್ರ ಪಡೆಯಲು ಸಾಧ್ಯವಾಗಿರುವ ಬೆಳೆಗಾರರಿಗೆ ಏರಿದ ಬೆಲೆ ಸ್ವಲ್ಪ ಸಮಾಧಾನ ತರಬಹುದು ಅಷ್ಟೆ. ಕಾಫಿ ತೋಟದಲ್ಲಿ ಉಪ ಬೆಳೆಯಾಗಿರುವ ಇದು ಬೆಳೆಗಾರರಿಗೆ ಚೈತನ್ಯ ತುಂಬಿರುವುದನ್ನು ಮಾತ್ರ ಎಲ್ಲರೂ ಒಪ್ಪುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.