ಕರಿಮೆಣಸು: ಸೊರಗು ರೋಗಕ್ಕೆ ಕಸಿ ಮದ್ದು

7

ಕರಿಮೆಣಸು: ಸೊರಗು ರೋಗಕ್ಕೆ ಕಸಿ ಮದ್ದು

Published:
Updated:

ಕಾಳುಮೆಣಸು ಅಥವಾ ಕರಿಮೆಣಸಿಗೆ `ಸಾಂಬಾರ ಬೆಳೆಗಳ ರಾಜ ಹಾಗೂ ಕಪ್ಪು ಹೊನ್ನು~ ಎಂಬ ಹೆಗ್ಗಳಿಕೆಯಿದೆ. ದಕ್ಷಿಣ ಭಾರತದಲ್ಲಿ ಜನಪ್ರಿಯವಾದ ಈ ಬೆಳೆಯನ್ನು ಬ್ರೆಜಿಲ್, ಇಂಡೋನೇಷ್ಯಾ, ಮಲೇಷ್ಯಾ, ಶ್ರೀಲಂಕಾಗಳಲ್ಲಿಯೂ ಬೆಳೆಯುತ್ತಾರೆ.ಕರ್ನಾಟಕದ ಮಲೆನಾಡಿನ ಕಾಫಿ, ಅಡಿಕೆ ತೋಟಗಳಲ್ಲಿ ಬೆಳೆದ ಕರಿಮೆಣಸು ಇಡೀ ತೋಟಕ್ಕೆ ಸೌಂದರ್ಯ ನೀಡುವಂತಿರುತ್ತದೆ. ಆದರೆ ಈ ಎಲ್ಲ ವೈಭವ ಕೇವಲ ಕ್ಷಣಮಾತ್ರದ ರೋಗದಿಂದ ನಿರ್ನಾಮವಾಗುವಂತಹದ್ದು. ಅಂಥದ್ದು ಈಗ ಘಟಿಸಿದೆ. ಬಹುತೇಕ ಕಾಫಿ, ಅಡಿಕೆ ತೋಟದಲ್ಲಿನ ಬೆಳೆ ಸೊರಗು ರೋಗದಿಂದ ನಾಶವಾಗಿದೆ. ಮೆಣಸಿಗೆ ಉತ್ತಮ ಬೆಲೆಯಿದೆ; ಆದರೆ ಬೆಳೆಯಿಲ್ಲ.ಸೊರಗು ರೋಗ ಮಲೆನಾಡಿನ ಕರಿಮೆಣಸಿನ ಬೆಳೆಗಾರರಿಗೆ ಒಂದು ದುಃಸ್ವಪ್ನ. ಇದರಲ್ಲಿ ಎರಡು ವಿಧ. ಶೀಘ್ರ ಸೊರಗು ರೋಗ ಮತ್ತು ನಿಧಾನ ಸೊರಗು ರೋಗ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಲ್ಲಿ ಈ ರೋಗಗಳ ಲಕ್ಷಣ ಜಾಸ್ತಿ. ಶೀಘ್ರ ಸೊರಗು ರೋಗ ಭಾರಿ ಮಳೆಯ ದಿನಗಳಲ್ಲಿ ಕಂಡು ಬಂದರೆ, ನಿಧಾನ ಸೊರಗು ರೋಗ ಮಳೆಗಾಲದ ಕೊನೆಗೆ ಕಾಣಿಸಿಕೊಳ್ಳುತ್ತದೆ.ಪ್ರಾರಂಭದ ಹಂತದಲ್ಲಿ ಲಕ್ಷಣಗಳು ಕಂಡ ಕೂಡಲೇ ಬೋರ್ಡೋ ದ್ರಾವಣ, ಟ್ರೈಕೋಡರ್ಮ, ಪಂಚಗವ್ಯ, ಕಹಿಬೇವಿನಪುಡಿ ಉಪಚಾರ ಮಾಡಿದರೆ ರೋಗ ಉಲ್ಬಣಿಸುವುದನ್ನು ನಿಯಂತ್ರಿಸಬಹುದು. ರೋಗ ಬಂದ ಮೇಲೆ ಈ ಉಪಚಾರ ಮಾಡಿದರೆ ನಿಯಂತ್ರಣ ಕಷ್ಟ.ಹೆಚ್ಚಾಗಿ ಬೇರು ಹಾಗೂ ಕಾಂಡಗಳು ಕೊಳೆತು ಹೋಗಿ ಇಡೀ ಬಳ್ಳಿಯೇ ಒಣಗಿ ಸಾಯುವುದು ಖಚಿತ. ಮೇಲೆ ಹೇಳಿದ ಎರಡೂ ರೋಗಗಳು ಮಣ್ಣಿನ ಮೂಲಕ ಬೇರು ಹಾಗೂ ಕಾಂಡಕ್ಕೆ ಹೋಗಿ ಬಳ್ಳಿಯನ್ನೆ ಕೊಂದುಬಿಡುತ್ತವೆ. ಈ ರೋಗವನ್ನು ನಿಯಂತ್ರಿಸಲು ರೈತರು ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ.ಇಂತಹ ಸಮಯದಲ್ಲಿ ರೈತರಿಗೆ ಒಂದು ಸಂತೋಷದ ವಿಚಾರ ವರದಿಯಾಗಿದೆ. ಕೊಲ್ಕತ್ತದ ಭಾರತೀಯ ಸಾಂಬಾರ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಪಿ.ಎ. ಮ್ಯೋಥ್ಯೂ ಸೊರಗು ರೋಗ ಮುಕ್ತ `ಕಸಿ~ ಕರಿಮೆಣಸನ್ನು ಅಭಿವೃದ್ಧಿ ಪಡಿಸಿದ್ದಾರೆ.ಬ್ರೆಜಿಲಿಯನ್ ಹಿಪ್ಪಲಿಯನ್ನು (ಕಾಡುಹಿಪ್ಪಲಿ) ಅಡಿ ಗಿಡವಾಗಿ ಸ್ವೀಕರಿಸಿ ಕರಿ ಮೆಣಸಿನ ಬಳ್ಳಿಯನ್ನು ಕಸಿ ಕಟ್ಟಿದ್ದಾರೆ. ಈ ಬಳ್ಳಿಗೆ ಸೊರಗು ರೋಗ ಬರುವುದಿಲ್ಲ.ಕಸಿ ಸುಲಭ: ಕರ್ನಾಟಕದಲ್ಲಿ ಗೇರು ಸಂಶೋಧನಾ ಕೇಂದ್ರದ ವಿಶ್ರಾಂತ ವಿಜ್ಞಾನಿ ಡಾ. ಎನ್. ಯದುಕುಮಾರ್ ಅವರು ಕಸಿ ಕಟ್ಟಿದ ಮೆಣಸಿನ ಬಗ್ಗೆ ರೈತರಿಗೆ ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ.

 

ಇವರ ಪ್ರಕಾರ ಕರಿ ಮೆಣಸಿನ ಕಸಿ ಬಹಳ ಸುಲಭ. ಎಲೆ ತೆಗೆದ ಮೆಣಸಿನ ಕುಡಿಯನ್ನು 2 ಗಂಟುಗಳಷ್ಟು ಉದ್ದಕ್ಕೆ ಕತ್ತರಿಸಿ ಇಟ್ಟುಕೊಳ್ಳಬೇಕು. ಬ್ರೆಜೀಲಿಯನ್ ಹಿಪ್ಪಲಿಗಿಡದ ತುದಿಯ 1-2 ಗಂಟಿನಷ್ಟು ಭಾಗವನ್ನು ಕತ್ತರಿಸಿ ಬಿಡಬೇಕು (ಅಷ್ಟು ಮೆದುಭಾಗಕ್ಕೂ ಮತ್ತು ಗಂಟುಗಳ ಗಟ್ಟಿಭಾಗಕ್ಕೂ ಕಸಿ ಹಿಡಿಯುವುದಿಲ್ಲ. ಹಾಗಾಗಿ ಅಡಿ ಗಿಡ ಮತ್ತು ಮೇಲಿನ ಕರಿಮೆಣಸಿನ ಕುಡಿ ಎರಡರ ಗಂಟಿನ ಭಾಗಕ್ಕೆ ಕಸಿ ಕಟ್ಟಬಾರದು). ನಂತರ ಕಾಂಡವನ್ನು ಎರಡು ಇಂಚು ಆಳಕ್ಕೆ ಸೀಳಬೇಕು.ಮೆಣಸಿನ  ಬಳ್ಳಿಯನ್ನು `v~ ಆಕಾರಕ್ಕೆ ಕತ್ತರಿಸಿ ಹಿಪ್ಪಲಿ ಸೀಳಿನ ಒಳಗೆ ತುರುಕಿಸಿ ಪ್ಲಾಸ್ಟಿಕ್ ಹಾಳೆಯ ಬ್ಯಾಂಡೆಜ್ ಹಾಕಬೇಕು. ತೇವಾಂಶ ಆರದಂತೆ ಮೆಣಸಿನ ಕುಡಿಗೆ ಪೆಪ್ಸಿಕ್ಯಾಂಡಿಯಾ ಪ್ಲಾಸ್ಟಿಕ್ ಟೋಪಿ ಹಾಕಬೇಕು.  ನೆರಳಿನ ಬಲೆ ಚಪ್ಪರದೊಳಗೆ ಇಟ್ಟು ನೀರು ಕೊಡುತ್ತಾ ಇರಬೇಕು. 20 ದಿನಕ್ಕೆ ಚಿಗುರುತ್ತದೆ. ಆಮೇಲೆ ಟೋಪಿಯನ್ನು ತೆಗೆದು ನರ್ಸರಿಯಲ್ಲಿ 2 ತಿಂಗಳ ಕಾಲ ಇಟ್ಟು ಪ್ರಧಾನ ತೋಟದಲ್ಲಿ ನೆಡಬಹುದು.

ಗಮನಿಸಬೇಕಾದ ಅಂಶ* ಆಗಾಗ ನೀರು ಹಾಕುತ್ತಿರಬೇಕು. ನೀರಿನ ಕೊರತೆ ಇರುವಲ್ಲಿ ಕಸಿ ಮೆಣಸಿನ ಕೃಷಿ ಬೇಡ. ಹನಿ ನೀರಾವರಿ ಅತ್ಯುತ್ತಮ. ಕಸಿಯ ಪ್ಲಾಸ್ಟಿಕ್ ಬ್ಯಾಂಡೇಜನ್ನು ವರ್ಷದ ನಂತರ ತೆಗೆದರೆ ಸಾಕು. ನೆಡಲು ಒಂದೂವರೆ ಅಡಿ ಆಳದ ಹೊಂಡ ಸಾಕು. ಕಸಿ ಗಿಡವನ್ನು ಅಡಿಕೆ, ತೆಂಗಿನ ಮರಕ್ಕೆ ಆತುಕೊಳ್ಳುವಂತೆ ನೆಟ್ಟರೆ ಸೋಗೆ ಮಡಿಲು ಬಿದ್ದು ಹಾನಿಯಾಗುವ ಪ್ರಮೇಯ ಇರುವುದಿಲ್ಲ.* ರೋಗರಹಿತ. ಆದ್ದರಿಂದ ಕೀಟನಾಶಕ ಬೇಡ. ಸಾವಯವ ಕೃಷಿಗೆ ಚೆನ್ನಾಗಿ ಸ್ಪಂದಿಸುತ್ತದೆ.* ಸಾಮಾನ್ಯ ಕೃಷಿ ಕ್ರಮದಲ್ಲಿ ವರ್ಷಕ್ಕೊಂದೇ ಬಾರಿ ಇಳುವರಿ. ಕರಿಮುಂಡ ಜಾತಿಯಾದರೆ ಎರಡು ತಿಂಗಳಿಗೊಮ್ಮೆ ಗೊಬ್ಬರ ಕೊಟ್ಟರೆ ವರ್ಷದಲ್ಲಿ ನಾಲ್ಕೈದು ಬಾರಿ ಬೆಳೆ. ಒಂದೆರಡು ಸಿಮೆಂಟ್ ಕುಂಡಗಳಲ್ಲಿ ಬೆಳೆದರೆ ಮನೆ ಖರ್ಚಿಗೆ ಹಸಿಮೆಣಸಿನ ಬದಲು ಹಸಿ ಕಾಳುಮೆಣಸು ಬಳಸಬಹುದು.* ಹತ್ತು ಅಡಿ ಸಾಲುಗಳಲ್ಲಿ ನಾಲ್ಕೈದು ಅಡಿಗೊಂದರಂತೆ ಮರ, ಕಾಂಕ್ರೀಟ್ ಕಂಬ ನೆಟ್ಟು ಕಾಳು ಮೆಣಸು ಬೆಳೆಯಬಹುದು.  ಕಂಬಗಳಿಗೆ ಮುಂಡಾಸಿನಂತೆ ಕಬ್ಬಿಣದ ಸರಳಿನ ಹಂದರ ಮಾಡಿದರೆ 13-14 ಅಡಿ ಎತ್ತರಕ್ಕೂ ಬೆಳೆಯಬಹುದು.ಮಾಹಿತಿಗೆ ಡಾ. ಎನ್. ಯದುಕುಮಾರ್ ಅವರ ದೂರವಾಣಿ 94490 33758, 08251 285299.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry