ಕರಿಷ್ಮಾ ಮರುಪ್ರವೇಶ

7

ಕರಿಷ್ಮಾ ಮರುಪ್ರವೇಶ

Published:
Updated:
ಕರಿಷ್ಮಾ ಮರುಪ್ರವೇಶ

ವಿಕ್ರಮ್ ಭಟ್ ನಿರ್ದೇಶನದ `ಡೇಂಜರಸ್ ಇಷ್ಕ್~ ಚಿತ್ರದ ಮೂಲಕ ಕರಿಷ್ಮಾ ಕಪೂರ್ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಕಾನ್ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.ಕಪೂರ್ ಖಾಂದಾನ್‌ನ ಲೋಲೊ 2003ರ ನಂತರ ಬಾಲಿವುಡ್‌ನಿಂದ ದೂರವೇ ಉಳಿದಿದ್ದರು. `ಮೇರೆ ಜೀವನ್ ಸಾಥಿ~ 2006ರಲ್ಲಿ ಬಿಡುಗಡೆಗೊಂಡಿತ್ತು. ಆನಂತರ ಕರಿಷ್ಮಾ ಹಿರಿತೆರೆಯ ಮೇಲೆ ಕಾಣಿಸಿಕೊಂಡಿದ್ದು, `ಓಂ ಶಾಂತಿ ಓಂ~ ಚಿತ್ರದ ಗುಂಪುಗೀತೆಯಲ್ಲಿ. ಶಾರುಖ್ ಖಾನ್ ಆ ಗೀತೆಯಲ್ಲಿ ಎಷ್ಟು ಸಾಧ್ಯವೋ ಅಷ್ಟೂ ನಟನಟಿಯರನ್ನು ಕಲೆಹಾಕಿದ್ದರು.38ರ ಹರೆಯದ ಕರಿಷ್ಮಾ ಈಗ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.  2000ದಲ್ಲಿ `ಫಿಜಾ~, 2001ರಲ್ಲಿ `ಜುಬೇದಾ~ ಚಿತ್ರದ ನಟನೆಯ ಮೂಲಕ ಗಮನ ಸೆಳೆದಿದ್ದ ಅವರು ಈಗ ಇಬ್ಬರು ಮಕ್ಕಳ ತಾಯಿ. 2003ರಲ್ಲಿ ಸಂಜಯ್ ಕಪೂರ್ ಜೊತೆ ಮದುವೆಯಾದ ನಂತರ ಚಿತ್ರರಂಗದಿಂದ ಅವರು ದೂರವೇ ಉಳಿದಿದ್ದರು.ಈಗ ವಿಕ್ರಮ್ ಭಟ್ ತಮ್ಮ ಚಿತ್ರದ ಬಗ್ಗೆ, ಕರಿಷ್ಮಾ ಮರುಪ್ರವೇಶದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕರಿಷ್ಮಾ ಮಾತ್ರ ಎಲ್ಲಿಯೂ ಏನೂ ಬಾಯಿಬಿಟ್ಟಿಲ್ಲ.

`ಇದೊಂದು ಸವಾಲಿನ ಪಾತ್ರ. ಕರಿಷ್ಮಾ ಮರುಪ್ರವೇಶವನ್ನು ಮಾತ್ರ ಗಮನದಲ್ಲಿರಿಸಿಕೊಂಡು ಸೃಷ್ಟಿಸಿದ ಪಾತ್ರ ಇದಲ್ಲ. ಅವರು ಪಾತ್ರ ಒಪ್ಪಿಕೊಂಡ ನಂತರ ಚಿತ್ರಕತೆಯನ್ನು ಅಲ್ಲಲ್ಲಿ ಬೆಳೆಸಲಾಯಿತು.ಇದು ಜನ್ಮಜನ್ಮಾಂತರದ ಕತೆ. ಆದರೆ ಭಯಾನಕ ಚಿತ್ರ ಎಂಬಂತೆ ಮಾಧ್ಯಮ ಬಿಂಬಿಸುತ್ತಿದೆ. 3ಡಿ ತಂತ್ರಜ್ಞಾನ ಬಳಸಲಾಗಿದೆ. ಅದು ಭಯ ಹೆಚ್ಚಿಸಲು ಅಲ್ಲ, ಜನರನ್ನು ಸೆಳೆಯಲೂ ಅಲ್ಲ. ಚಿತ್ರಕ್ಕೆ ಅದರ ಅಗತ್ಯವಿತ್ತು ಅಷ್ಟೆ~ ಎಂದೆಲ್ಲ ವಿಕ್ರಮ್ ಹೇಳಿಕೊಂಡಿದ್ದಾರೆ.ವಿಕ್ರಮ್ ಮಾತು ಬದಿಗಿರಲಿ, ಸದ್ಯ ಪರದೇಸಿ ಹಾಡಿನ ಸುಂದರಿ, `ಸೆಕ್ಸಿ ಸೆಕ್ಸಿ ಸೆಕ್ಸಿ ಮುಝೆ ಲೋಗ್ ಬೋಲೆ~ ಎಂದು ಹಾಡಿ ಕುಣಿದ ಲೋಲೊ ಅಭಿಮಾನಿಗಳು `ಡೇಂಜರಸ್ ಇಷ್ಕ್~ಗಾಗಿ ಕಾಯುವಂತಾಗಿದೆ.ದಶಕದ ಹಿಂದೆ ಕರಿಷ್ಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಗ ಅವರ ತಂಗಿ ಕರೀನಾ ಬಿಡುವು ಮಾಡಿಕೊಂಡು ಅಕ್ಕ ಅಭಿನಯಿಸುವ ರೀತಿಯನ್ನು ನೋಡಿ ಖುಷಿಪಟ್ಟಿದ್ದುಂಟು. ಅಕ್ಕನಂತೆ ತಾನೂ ನಟಿಯಾಗಬೇಕು ಎಂಬ ಆಸೆ ಮೊಳೆತದ್ದೇ ಕೆಲವರ ವಿರೋಧದ ನಡುವೆಯೂ ಅವರು ನಟಿಯಾದರು. ಅಕ್ಕ ಸಂಸಾರದ ಸುಖ ಒಪ್ಪಿಕೊಂಡು, ಬಣ್ಣ ಅಳಿಸಿಕೊಂಡ ಮೇಲೆ ಆ ಜಾಗಕ್ಕೆ ತಂಗಿಯ ಪ್ರವೇಶವಾಗಿತ್ತು.ಕರೀನಾ ಈಗ ಜನಪ್ರಿಯ ತಾರೆ. ಕೆಲವೇ ತಿಂಗಳ ಹಿಂದೆ ಕರಿಷ್ಮಾ ತಮ್ಮ ಎರಡೂ ಮಕ್ಕಳ ಜೊತೆ ತಂಗಿ ಕರೀನಾ ಬಣ್ಣಹಚ್ಚಿದ್ದ ಚಿತ್ರದ ಶೂಟಿಂಗ್ ನೋಡಲು ಹೋಗಿದ್ದರು. ಆಗಲೂ ತಮ್ಮ ಅಭಿನಯದ ಕುರಿತು ಪ್ರಸ್ತಾಪ ಮಾಡಿರಲಿಲ್ಲ. ಎರಡು ಮಕ್ಕಳ ತಾಯಿಯಾದರೂ ಅಕ್ಕ ದೇಹವನ್ನು ಸಪೂರವಾಗಿ ಇಟ್ಟುಕೊಂಡಿರುವುದನ್ನು ಕರೀನಾ ಬೆರಗಿನಿಂದ ಹೊಗಳಿದ್ದರು.ಸೈಫ್ ಅಲಿ ಖಾನ್ ಜೊತೆ ಮದುವೆಯ ಸಿದ್ಧತೆಯಲ್ಲಿ ಕರೀನಾ ಮುಳುಗಿರುವ ಸಂದರ್ಭದಲ್ಲಿ ಕರಿಷ್ಮಾ ಮರುಪ್ರವೇಶವಾಗಿದೆ. `ಡೇಂಜರಸ್ ಇಷ್ಕ್~ ನಂತರ ಕರಿಷ್ಮಾ ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಾರೋ ಇಲ್ಲವೋ, ನೋಡಬೇಕು.   

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry