ಕರುಣಾಮಯಿ ವಿನ್ಯಾಸ್

7

ಕರುಣಾಮಯಿ ವಿನ್ಯಾಸ್

Published:
Updated:

ಮೈಸೂರಿನ ಹೂಟಗಳ್ಳಿ  ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜೀಸ್ ಕಂಪನಿಯು ಉದ್ಯೋಗಿಗಳ ನೇಮಕಾತಿಯಲ್ಲಿ ಇತರ ಕಂಪನಿಗಳಿಗಿಂತ ಭಿನ್ನವಾಗಿದೆ. ಮಾನಸಿಕ ವೈಕಲ್ಯಕ್ಕೆ  ಒಳಗಾಗಿರುವವರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರ ಬದುಕಿಗೆ ಹೊಸ ಆಸರೆ ನೀಡಿದೆ.

 

`ವಿನ್ಯಾಸ್~ ಕಂಪನಿ ಕೇವಲ ಉಪಕರಣಗಳ   ಬಿಡಿ ಭಾಗಗಳನ್ನಷ್ಟೇ    ಜೋಡಿಸುವುದಿಲ್ಲ.  ಮನಸ್ಸು ಜೋಡಿಸುತ್ತದೆ. ಮಾನವೀಯತೆಯನ್ನೂ ಬೆಳೆಸುತ್ತದೆ...ಅಂದು ಸಂಬಳ ಬಟವಾಡೆ ದಿನ. ಬಟವಾಡೆ ಗುಮಾಸ್ತ ಆ 8 ಮಂದಿ ವಿಶೇಷ ನೌಕರರಿಗೆ ಸಂಬಳ ವಿತರಿಸಿ ಕೇಳಿದ. `ಇದು ಮೊದಲನೆ ಸಂಬಳ. ಇದನ್ನು ತೆಗೆದುಕೊಂಡು ಏನು ಮಾಡ್ತೀರಿ?~. ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡಿದರು.

 

ಆದರೆ, ಒಬ್ಬ ಹುಡುಗ ಮಾತ್ರ `ಅರ್ಧ ಸಂಬಳ ಅಮ್ಮನಿಗೆ ಕೊಟ್ಟು ಬಿಡುತ್ತೇನೆ. ಉಳಿದ ಅರ್ಧ ಸಂಬಳದಲ್ಲಿ ನನಗೆ ಬೇಕಾದ್ದು ತೆಗೆದುಕೊಂಡು ತಿನ್ನುತ್ತೇನೆ~ ಎಂದು ಉತ್ತರಿಸಿದ. ಅದನ್ನು ಕೇಳಿ ಬಟವಾಡೆ ಗುಮಾಸ್ತನ ಕಣ್ಣಲ್ಲಿ ನೀರು ಹರಿಯತೊಡಗಿತು. ದುಃಖ ಮತ್ತು ಸಂತೋಷ ಎರಡೂ ಒಟ್ಟಿಗೇ ಆಯಿತು.ಧನ್ಯತೆಯ ಭಾವ ಹೊರಹೊಮ್ಮಿತು. ಆ ಕಂಪನಿಯಲ್ಲಿ ಈಗ ಪ್ರತಿ ತಿಂಗಳೂ ಸಂಬಳದ ಬಟವಾಡೆಯ ದಿನ ಧನ್ಯತೆಯ ಭಾವ ಹೊರಹೊಮ್ಮುತ್ತಲೇ ಇರುತ್ತದೆ. ಜೊತೆಗೆ ಆ ಮಕ್ಕಳು ಸಂಬಳವನ್ನು ತೆಗೆದುಕೊಂಡು ಬಂದು ಕೊಟ್ಟಾಗ ಪಾಲಕರಿಗೂ ಅಂತಹದೇ ಭಾವ.ಇನ್ನೊಂದು ದಿನ ಆ ಕಂಪನಿಯ ಎಕ್ಸಿಕ್ಯೂಟಿವ್ ಒಬ್ಬರಿಗೆ ತುಂಬಾ ಕೆಲಸವಿತ್ತು. ಯಾರನ್ನೂ ನೋಡಲು ಪುರುಸೊತ್ತು ಇರಲಿಲ್ಲ. ಅದಕ್ಕೆ ಅವರು ರಿಸೆಪ್ಷನಿಸ್ಟ್ ಬಳಿ ಬಂದು `ನಾನು ಒಳಗೆ ಕೆಲಸ ಮಾಡುತ್ತಿರುತ್ತೇನೆ. ಯಾರೇ ನನ್ನನ್ನು ಕೇಳಿದರೂ ನಾನು ಹೊರಕ್ಕೆ ಹೋಗಿದ್ದೇನೆ ಎಂದು ಹೇಳಿ~ ಎಂದು ವಿನಂತಿಸಿಕೊಂಡರು.`ನೀವು ಒಳಕ್ಕೆ ಕೆಲಸ ಮಾಡುತ್ತಿರುವಾಗ ನೀವು ಇಲ್ಲ ಹೊರಕ್ಕೆ ಹೋಗಿದ್ದೀರಿ ಎಂದು ನಾನು ಹೇಗೆ ಹೇಳಲಿ?~ ಎಂದು ರಿಸೆಪ್ಷನಿಸ್ಟ್ ಪ್ರಶ್ನೆ ಮಾಡಿದ. ಅದಕ್ಕೆ ಎಕ್ಸಿಕ್ಯೂಟಿವ್ `ಹೌದು ನಾನು ಒಳಗೇ ಇರುತ್ತೇನೆ.ಆದರೂ ನನಗೆ ತುಂಬಾ ಕೆಲಸವಿದೆ. ಯಾರನ್ನೂ ನೋಡಲು ಸಾಧ್ಯವಾಗುವುದಿಲ್ಲ. ಅದಕ್ಕೇ ಹಾಗೆ ಹೇಳು ಎಂದು ಹೇಳಿದ್ದು~ ಎಂದು ಸಮಜಾಯಿಷಿ ನೀಡಿದ. ಆದರೆ, ಅದಕ್ಕೆ ರಿಸೆಪ್ಷನಿಸ್ಟ್ ಒಪ್ಪಲಿಲ್ಲ.

 

`ನೀವು ಒಳಗೇ ಇರುವಾಗ ನೀವು ಹೊರಕ್ಕೆ ಹೋಗಿದ್ದೀರಿ ಎಂದು ಹೇಳಲು ಸಾಧ್ಯವಿಲ್ಲ~ ಎಂದು ಸ್ಪಷ್ಟವಾಗಿ ನಿರಾಕರಿಸಿಬಿಟ್ಟ. ಕೊನೆಗೂ ಎಕ್ಸಿಕ್ಯೂಟಿವ್ ಸಂದರ್ಶಕರನ್ನು ಭೇಟಿ ಮಾಡಲೇ ಬೇಕಾಯಿತು.ಈ ಘಟನೆಯನ್ನು ವಿವರಿಸಿ ಆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎನ್.ನರೇಂದ್ರ ಹೇಳುತ್ತಾರೆ. `ನಮ್ಮ ಫ್ರಂಟ್ ಆಫೀಸ್ ಅತ್ಯಂತ ಪ್ರಾಮಾಣಿಕವಾಗಿದೆ. ಅದಕ್ಕೇ ಬ್ಯಾಕ್ ಆಫೀಸ್ ಕೂಡ ಪ್ರಾಮಾಣಿಕವಾಗಿಯೇ ಇರುತ್ತದೆ.~ ಆ ಮಾತುಗಳನ್ನು ಹೇಳುವಾಗ ಅವರ ಕಣ್ಣುಗಳು ಹೊಳೆಯುತ್ತವೆ. ಸಂತೃಪ್ತಿಯ ಭಾವ ಉಕ್ಕುತ್ತದೆ.ಇದಕ್ಕೆಲ್ಲಾ ಕಾರಣವಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಇನ್ನೊವೇಟಿವ್ ಟೆಕ್ನಾಲಜೀಸ್ ಕಂಪನಿ ಇತರ ಕಂಪನಿಗಳಿಗಿಂತ ಭಿನ್ನವಾಗಿರುವುದೇ ಈ ಕಾರಣಕ್ಕಾಗಿ.ಆ ಕಂಪನಿಯಲ್ಲಿ ನಾವು ನೀವು ಬುದ್ಧಿಮಾಂದ್ಯರು ಎಂದು ಕರೆಯುವ 9 ಮಂದಿಯನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಾಗಿದೆ.ರಿಸೆಪ್ಷನಿಸ್ಟ್ ಕೂಡ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥನಾದವ. ಆದರೆ, ಆ ವ್ಯಕ್ತಿ ಎಂದೂ ತನ್ನ  ಕೆಲಸಕ್ಕೆ ದ್ರೋಹ ಮಾಡುವುದಿಲ್ಲ. ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ. ನೀವು ನೋಡಿದ ತಕ್ಷಣ ಆತನ ಕೊರತೆಗಳು ಕಾಣುವುದೂ ಇಲ್ಲ.ಒಪ್ಪವಾಗಿ ವಸ್ತ್ರ ಧರಿಸಿಕೊಂಡು ಉತ್ತಮ ಇಂಗ್ಲಿಷ್‌ನಲ್ಲಿ ಮಾತನಾಡುವ ಆತನನ್ನು ನೋಡಿದರೆ ಈತ ಡೌನ್ ಸಿಂಡ್ರೋಮ್‌ನಿಂದ ಬಳಲುವ ವ್ಯಕ್ತಿ ಅನ್ನಿಸುವುದೇ ಇಲ್ಲ.ವಿನ್ಯಾಸ್ ಇನ್ನೊವೇಟಿವ್ ಟೆಕ್ಲೊಜೀಸ್ ಕಂಪನಿ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಜೋಡಿಸುವ ಸಂಸ್ಥೆ. ಬೇರೆ ಬೇರೆ ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ಉಪಕರಣಗಳನ್ನು ಜೋಡಿಸಿಕೊಡುವ ಕೆಲಸವನ್ನು 2001ರಿಂದ ನಡೆಸಿಕೊಂಡು ಬಂದಿದೆ.ಕೇವಲ 20 ಮಂದಿ ಕೆಲಸಗಾರರಿಂದ ಆರಂಭವಾದ ಕಂಪನಿಯಲ್ಲಿ ಈಗ ಸುಮಾರು 600 ಮಂದಿ ಕೆಲಸಗಾರರು ಇದ್ದಾರೆ. ಅದರಲ್ಲಿ 9 ಮಂದಿ ಬುದ್ಧಿಮಾಂದ್ಯರು ಹಾಗೂ 26 ಮಂದಿ ವಾಕ್ ಮತ್ತು ಶ್ರವಣ ದೋಷದ ಸಿಬ್ಬಂದಿ, 3 ಮಂದಿ ದೈಹಿಕ ಅಂಗವಿಕಲರೂ ಇದ್ದಾರೆ.

 

ಈ ಹಿನ್ನೆಲೆಯಲ್ಲಿಯೇ ವಿನ್ಯಾಸ್ ಕಂಪನಿ ಕೇವಲ ಉಪಕರಣದ ಭಾಗಗಳನ್ನು ಮಾತ್ರ ಜೋಡಿಸುವುದಿಲ್ಲ. ಮನಸ್ಸುಗಳನ್ನೂ ಜೋಡಿಸುತ್ತದೆ. ಮಾನವೀಯತೆಯನ್ನೂ ಬೆಳೆಸುತ್ತದೆ.2007ರಿಂದ ಈ ಕಂಪನಿಯಲ್ಲಿ ಅಂಗವೈಕಲ್ಯವನ್ನು ಹೊಂದಿರುವ ವ್ಯಕ್ತಿಗಳು ದುಡಿಯತೊಡಗಿದ್ದಾರೆ. ಅದರಲ್ಲಿಯೂ ಹುಟ್ಟಿನಿಂದಲೇ ಮಾನಸಿಕ ವೈಕಲ್ಯಕ್ಕೆ ಒಳಗಾಗಿರುವ ವ್ಯಕ್ತಿಗಳು ಇದ್ದಾರೆ.

 

ಅವರ ಜೊತೆ ಕೆಲಸ ಮಾಡುವುದೇ ಒಂದು ಹೆಮ್ಮೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎನ್.ನರೇಂದ್ರ ಅವರ ಜೊತೆಗೆ ಇತರ ಸಿಬ್ಬಂದಿ ಕೂಡ ಭಾವಿಸಿದ್ದಾರೆ. ಅದರಂತೆಯೇ ನಡೆದುಕೊಳ್ಳುತ್ತಾರೆ.

 

ನರೇಂದ್ರ ಅವರ ತಂದೆ ಡಾ.ಎಚ್.ಎಸ್.ನಾರಾಯಣನ್ ಖ್ಯಾತ ಮನೋವಿಜ್ಞಾನಿ. ಅವರ ಪ್ರಭಾವದಿಂದಲೇ ಮಾನಸಿಕ ಅಸ್ವಸ್ಥರನ್ನು ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ಧೈರ್ಯವನ್ನು ನರೇಂದ್ರ ಅವರು ಮಾಡಿದ್ದಾರೆ. ಇದಕ್ಕೆ ನರೇಂದ್ರ ಅವರ ಪತ್ನಿ ಮೀರಾ ಕೂಡ ಸಾಥ್ ನೀಡಿದ್ದಾರೆ.2007ರಲ್ಲಿ ಮೊದಲು 15 ದಿನ ಈ ಮಕ್ಕಳಿಗೆ ಇಲ್ಲಿ ತರಬೇತಿ ನೀಡಲಾಯಿತು. ನಂತರ ಅವರ ತರಬೇತುದಾರ ರಾಘವೇಂದ್ರ ಮಧ್ಯಸ್ಥ ಅವರನ್ನೂ ಕೆಲಸಕ್ಕೆ ತೆಗೆದುಕೊಂಡು ಈ ವ್ಯಕ್ತಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಯಿತು.ಮೊದ ಮೊದಲು ಈ ವ್ಯಕ್ತಿಗಳು  ಗುಂಪಾಗಿಯೇ ಇರುತ್ತಿದ್ದರು. ಒಟ್ಟಿಗೇ ಕೆಲಸಕ್ಕೆ ಬರುತ್ತಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಆ ಮೇಲೆ ಅವರನ್ನು ಇತರ ಸಿಬ್ಬಂದಿ ಜೊತೆಗೆ  ಕೆಲಸಕ್ಕೆ ಬಿಡಲಾಯಿತು.ಈಗ ಎಲ್ಲರೂ ಕೆಲಸಕ್ಕೆ ಹೊಂದಿಕೊಂಡಿದ್ದಾರೆ. ನಿಷ್ಠೆಯಿಂದ ಕೆಲಸ ಮಾಡುತ್ತಾರೆ. ಯಾವುದೇ ತಕರಾರು ಇಲ್ಲ. ಉಳಿದ ಕಾರ್ಮಿಕರೂ ಕೂಡ ಇವರೊಂದಿಗೆ ಹೊಂದಿಕೊಂಡಿದ್ದಾರೆ.ಬುದ್ಧಿಮಾಂದ್ಯರೂ ಸೇರಿದಂತೆ ಎಲ್ಲ ಅಂಗವಿಕಲರಿಗೆ ಇತರರಷ್ಟೇ ಸಂಬಳ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಅದಕ್ಕೆ ತಕ್ಕಂತೆಯೇ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ನರೇಂದ್ರ ಅವರ ಈ ಸಾಹಸವನ್ನು ಮೆಚ್ಚಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 2011ನೇ ಸಾಲಿನ `ಬೆಸ್ಟ್ ಎಂಪ್ಲಾಯರ್~ ಪ್ರಶಸ್ತಿ ನೀಡಿ ಗೌರವಿಸಿದೆ.ನರೇಂದ್ರ ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ಅವರನ್ನು ಅಭಿನಂದಿಸಲು ಒಂದು ಸಮಾರಂಭ ನಡೆಯಿತು. ಆ ಸಮಾರಂಭದಲ್ಲಿ ನರೇಂದ್ರ ಅವರಿಗೆ ಹೂಮಾಲೆ ಹಾಕುವಾಗ ಅಂಗವೈಕಲ್ಯಕ್ಕೆ ಈಡಾದ ಸಿಬ್ಬಂದಿಗಳೂ ಮತ್ತು ಅವರ ಪಾಲಕರು ನಿರಂತರ ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು.ಈ ಘಟನೆಯನ್ನು ನೆನೆದು `ಇದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ. ನಾನು ಎಲ್ಲಿದ್ದೇನೆ ಎನ್ನುವುದೇ ನನಗೆ ತಿಳಿಯಲಿಲ್ಲ. ಚಪ್ಪಾಳೆ ತಟ್ಟುತ್ತಿದ್ದ ಆ ಮಕ್ಕಳು ಹಾಗೂ ಅವರ ಪಾಲಕರ ಕಣ್ಣಲ್ಲಿ ಮೂಡಿದ್ದ ಬೆಳಕು ನನ್ನ ಇಡೀ ಜೀವನಕ್ಕೆ ಸಾಕಾಗುವಷ್ಟು ಜ್ಯೋತಿಯನ್ನು ನೀಡಿತ್ತು. ನನ್ನ ಬದುಕು ಸಾರ್ಥಕವಾಯಿತು ಅನ್ನಿಸಿಬಿಟ್ಟಿತು. ಇದಕ್ಕಿಂತ ಹೆಚ್ಚಿನದೇನನ್ನೂ ಸಾಧಿಸಬೇಕಾಗಿಲ್ಲ ಎನ್ನುವ ಭಾವನೆಯನ್ನು ಹುಟ್ಟಿ ಹಾಕಿತು~ ಎಂದು ನರೇಂದ್ರ ಭಾವುಕರಾಗುತ್ತಾರೆ.ನರೇಂದ್ರ ಅವರೊಂದಿಗೆ ಕಂಪನಿ ಸ್ಥಾಪನೆಯಲ್ಲಿ ನೆರವಾದ ಅವರ ಪಾಲುದಾರರೂ ಕೂಡ ಈ ಮಹಾನ್ ಕೆಲಸದಲ್ಲಿಯೂ ಪಾಲುದಾರರಾಗಿದ್ದಾರೆ.ಪ್ರತಿ ವರ್ಷ ಬುದ್ಧಿ ವೈಕಲ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಉತ್ಸಾಹವನ್ನೂ ತೋರಿದ್ದಾರೆ. ನರೇಂದ್ರ ಅವರಿಗೆ ಸಾಧ್ಯವಾಗಿದ್ದು ಇತರರಿಗೂ ಸಾಧ್ಯವಾಗುತ್ತದೆ ಎನ್ನುವುದು ಅವರ ನಂಬಿಕೆ.

 

ಆ ನಂಬಿಕೆ ಸುಳ್ಳಲ್ಲ. ನರೇಂದ್ರ ಅವರನ್ನು  narendra@vinyasit.net   ಮೂಲಕ ಸಂಪರ್ಕಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry