ಭಾನುವಾರ, ನವೆಂಬರ್ 17, 2019
27 °C

ಕರೆಂಟ್ ಕಾಟ; ನೀರಿಗಾಗಿ ಪರದಾಟ

Published:
Updated:

ಜಕ್ಕನಾಯ್ಕನಕೊಪ್ಪ(ಚನ್ನಮ್ಮನ ಕಿತ್ತೂರು):  ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ನರಳುತ್ತಿರುವ ಕಿತ್ತೂರು ವಿಧಾನಸಭೆ ಕ್ಷೇತ್ರದ ಉತ್ತರ ಭಾಗಕ್ಕಿರುವ ಜಕ್ಕನಾಯ್ಕನಕೊಪ್ಪ ಗ್ರಾಮದಲ್ಲಿ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.ಸರಿಯಾಗಿ ವಿದ್ಯುತ್ ಇದ್ದರೆ ಮಾತ್ರ ಈ ಊರ ಜನರು ನೀರು ಕುಡಿಯಬೇಕು. ಇಲ್ಲದಿದ್ದರೆ ಇಲ್ಲ. ನೀರಿಗಾಗಿ ಹಾಗೂ ಕರೆಂಟ್‌ಗಾಗಿ ಜನತೆ ಮಾಡಿಕೊಂಡ ಮನವಿ ಮಾತ್ರ ಇಲ್ಲಿ ಅರಣ್ಯರೋದನವಾಗಿದೆ.ಮೊದಲೇ ಬಯಲು ಸೀಮೆ ನಾಡಾಗಿರುವ ಈ ಗ್ರಾಮದ ಜನರು ಈಗ ಹೆಚ್ಚಿರುವ ನೆತ್ತಿ ಸುಡುವ ಬಿರುಬಿಸಿಲಿನಿಂದಾಗಿ ಕಂಗೆಟ್ಟು ಹೋಗಿದ್ದಾರೆ. ಬೆಳಿಗ್ಗೆ 9ಗಂಟೆಗೆ ಬಿಸಿಲು ಏರುತ್ತಿದ್ದಂತೆಯೇ ಇಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಬರುವುದು ಮತ್ತೆ ಮಧ್ಯಾಹ್ನ 1ಗಂಟೆಗೆ. ಕೇವಲ ಎರಡು ತಾಸಿನವರೆಗೆ ಕೊಟ್ಟು ಮತ್ತೆ 3ಗಂಟೆಗೆ ತೆಗೆಯುತ್ತಾರೆ. ಮರಳಿ ಬರುವುದು ಸಂಜೆ 6ಗಂಟೆಗೆ. ಅನಂತರ ಬಂದ ಕರೆಂಟು ರಾತ್ರಿ ಹೊತ್ತು ಮತ್ತೊಮ್ಮೆ ಸ್ಥಗಿತಗೊಳ್ಳುತ್ತದೆ.ಬೆಳವಲು ನಾಡು: ಈ ಪುಟ್ಟ ಗ್ರಾಮದ ಜನರು ಒಕ್ಕಲುತನವನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಇರುವ ಜಮೀನುಗಳಲ್ಲಿ  ಶೇಂಗಾ, ಸೋಯಾಬಿನ್, ಹತ್ತಿ ಮತ್ತಿತರ ಮಳೆಯಾಧಾರಿತ ಬೆಳೆಗಳನ್ನು ಬೆಳೆಯುತ್ತಾರೆ. ಬಸವೇಶ್ವರ ಓಣಿಯೇ ಇಲ್ಲಿ ದೊಡ್ಡ ಓಣಿಯಾಗಿದೆ.ಇದೇ ಓಣಿಯಲ್ಲಿ ಹನುಮಂತ ದೇವರ ದೇವಸ್ಥಾನವಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಈ ಊರು ಬರುತ್ತದೆ. ಹನುಮಂತ ದೇವರ ಗುಡಿ ಜೀರ್ಣೋದ್ಧಾರ ಮಾಡುವುದಾಗಿ ಉತ್ತರ ಕನ್ನಡ ಸಂಸದರು ರೂ.3ಲಕ್ಷ ನೀಡುವುದಾಗಿ ಘೋಷಿಸಿದ್ದರಿಂದ ಕಳೆದ ಅಗಸ್ಟ್ ತಿಂಗಳಲ್ಲಿ ಶೆಡ್ ಕೆಡವಲಾಗಿದೆ. ಆದರೆ ಇಲ್ಲಿಯವರೆಗೂ ದುಡ್ಡು ಬಿಡುಗಡೆಯಾಗಿಲ್ಲ. ಕೇಳಿದರೆ ಈ ಪ್ರಕರಣದ ಫೈಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದುಹೋಗಿದೆಯಂತೆ ಎಂದು ಸಂಬಂಧಪಟ್ಟವರು ಉತ್ತರ ನೀಡುತ್ತಾರೆ ಎಂದು ಗ್ರಾ. ಪಂ. ಸದಸ್ಯ ಫಕ್ಕೀರಪ್ಪ ಅಮ್ಮವ್ವಗೋಳ ತಿಳಿಸಿದರು.ಕುಡಿಯುವ ನೀರಿನ ತೊಂದರೆ ನೀಗಿಸಲು ಜಿಲ್ಲಾ ಪಂಚಾಯ್ತಿಯಿಂದ ಕೊಳವೆ ಬಾವಿ ಕೊರೆದು ವರ್ಷವಾಗುತ್ತ ಬಂದಿದೆ. ಆದರೆ ಇಲ್ಲಿಯವರೆಗೂ ಅದಕ್ಕೊಂದು ಪಂಪ್‌ಸೆಟ್ ಕೂಡ್ರಿಸುವ ವ್ಯವಸ್ಥೆ ಮಾಡಲಾಗಿಲ್ಲ. ವಿಚಿತ್ರವೆಂದರೆ ಪಂಪ್‌ಸೆಟ್ ಕೂಡ್ರಿಸದ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಲು ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಈ ವಿಷಯವಾಗಿ ಕೇಳಿದರೆ ಪಂಪ್‌ಸೆಟ್ ಮತ್ತು ವಿದ್ಯುತ್ ಶಕ್ತಿ ಪೂರೈಕೆಗೆಗಾಗಿ ಸರ್ಕಾರ ಅನುದಾನ ನೀಡಿಲ್ಲ ಎನ್ನುತ್ತಾರೆ. ಪಂಪ್ ಕೂಡ್ರಿಸಿದರೆ ಗ್ರಾಮದ ನೀರಿನ ತಾಪತ್ರಯವಾದರೂ ಕಡಿಮೆಯಾಗ ಬಹುದು ಎಂದು ಗ್ರಾಮಸ್ಥರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)