ಕರೆದು ಕಟ್ಟೋರಿಲ್ಲ, ತುರಿಸಿ ಮೇವು ಹಾಕೋರಿಲ್ಲ!

7

ಕರೆದು ಕಟ್ಟೋರಿಲ್ಲ, ತುರಿಸಿ ಮೇವು ಹಾಕೋರಿಲ್ಲ!

Published:
Updated:
ಕರೆದು ಕಟ್ಟೋರಿಲ್ಲ, ತುರಿಸಿ ಮೇವು ಹಾಕೋರಿಲ್ಲ!

ಗಂಗಾವತಿ: ‘ನಮ್ಮ ಪಾಲಕರ ಅಲಕ್ಷ್ಯ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ ನಗಸರಭೆಯ ನಿರ್ಲಕ್ಷ್ಯದಿಂದಾಗಿ ಕಳೆದ ಹತ್ತು ವರ್ಷದಿಂದ ನಾವು ಅಲೆಮಾರಿಗಳಾಗಿದ್ದೇವೆ. ಕೊಂಚ  ನಮ್ಮತ್ತಲೂ ಗಮನ ನೀಡಿ. ನಮ್ಮ ನೋವನ್ನು ಆಲಿಸಿ

ನ್ಯಾಯದೊರಕಿಸಿಕೊಡಿ.ವಿಷಯವಿಲ್ಲದೇ ಇದೇನು ಪೀಠಿಕೆ ಎಂದು ಬೇಸರಿಸಿಕೊಳ್ಳದಿರಿ, ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ನಾವು, ಅದೇಕೋ ನಮ್ಮ ಪಾಲಕರು ಅದರಲ್ಲೂ ವಿಶೇಷವಾಗಿ ನಗರಸಭೆಗೆ ಬೇಡವಾದ ವಸ್ತುವಿನಂತಾಗಿದ್ದೇವೆ ಎನ್ನುವುದೇ ನಮ್ಮ ಒಡಲಾಳದ ನೋವು.ಕಾಮಧೇನು ಎನಿಸಿಕೊಳ್ಳುವ ನಾವು ಸಮಾಜದಲ್ಲಿ ಪೂಜ್ಯನೀಯರು. ಹಾಲು, ಮೊಸರು, ಬೆಣ್ಣೆ, ತುಪ್ಪ ನೀಡಿ  ಸಮಸ್ತ ಮಾನವ ಕುಲಕೋಟಿಯ ಉದ್ಧಾರಕ್ಕೆ ಸಮರ್ಪಿಸಿಕೊಂಡಿದ್ದೇವೆ. ಗಂಜಳ ಸಗಣಿ ನೀಡುವ ಮೂಲಕ ಭೂತಾಯಿಯ ಸಾರ ಹೆಚ್ಚಿಸಲು ಅನಾದಿಕಾಲದಿಂದಲೂ ಶ್ರಮಿಸುತ್ತಿದ್ದೇವೆ.’ನೀನಾರಿಗಾದೆಯೋ ಎಲೆ ಮಾನವ’ ಎಂಬಂತೆ ಜೀವಿಸದೇ ನಾವು ಜೀವಂತ ಇದ್ದಾಗಲೂ, ಸತ್ತಾಗಲೂ  ಮೌಲ್ಯ ಉಳಿಸಿಕೊಂಡಿದ್ದೇವೆ. ಮನೆಯಲ್ಲಿ ಹೆಚ್ಚಾದ ನಾಯಿ, ಬೆಕ್ಕುಗಳನ್ನು ಹಾದಿಗಳಲ್ಲಿ ಬಿಟ್ಟುಹೋಗುವುದು ನೋಡಿದ್ದೀರಿ. ಆದರೆ ನಾವೇನು ಮಾಡಿದ್ದೇವೆ ನೀವೇ ಹೇಳಿ?.ನಮ್ಮನ್ನು ಸಾಕಬೇಕಾದವರು ಬೀದಿಗೆ ಬಿಟ್ಟು ಹೋಗಿದ್ದಾರೆ. ಸೌಜನ್ಯಕ್ಕೂ ಕಾಳಜಿ ವಹಿಸುವರಿಲ್ಲ. ದಿನ ನಿತ್ಯ ನಾವು  ಆಹಾರ, ನೀರು ಅರಸುತ್ತಾ ಅವರಿವರ ಮನೆ, ವಠಾರ, ಬೀದಿಗಳಲ್ಲಿ ಅಲೆಯುತ್ತಿದ್ದೇವೆ. ನಮ್ಮನ್ನು ನಂಬಿಕೊಂಡ ಕಂದಮ್ಮ ಕರುಗಳು ಅನಾಥವಾಗಿ ಅಲೆಯುತ್ತಿದ್ದೇವೆ. ನಗರದ ರಸ್ತೆಗಳೆ ನಮ್ಮ ಮನೆಗಳಾಗಿವೆ.ಪತ್ರಿಕೆಗಳಲ್ಲೂ ಸಾಕಷ್ಟು ಬಾರಿ ನಮ್ಮ ಅಳಲು ತೋಡಿಕೊಂಡಿದ್ದೇವೆ. ಆದರೂ ನಮ್ಮ ಪಾಲಕರು ಮತ್ತು ನಗರಸಭೆಗೆ ಮಾತ್ರ ಕಿಂಚಿತ್‌ ದಯೆ ಬಂದಿಲ್ಲ ಎನ್ನುವುದೇ ಬೇಸರದ ಸಗತಿ. ಸಮಾಜದ ದೃಷ್ಟಿಯಲ್ಲಿ ಅನಾಥರಾಗಿರುವ ನಮಗೊಂದು ನೆಲೆ, ಹೊಟ್ಟೆಗಿಷ್ಟು ಮೇವು–ನೀರು ಸಾಕು.ಆದರೆ ಮೇವಿಲ್ಲದ್ದರಿಂದ ರಸ್ತೆಯಲ್ಲಿ ಬಿದ್ದಿರುವ ಪೇಪರ್‌ ರದ್ದಿ, ಪ್ಲಾಸ್ಟಿಕ್‌, ಗೋಡೆಯ ವಾಲ್‌ಪೋಸ್ಟರೇ ಆಹಾರ. ಚರಂಡಿ ತ್ಯಾಜ್ಯವೆ ನಮಗೆ ನೀರು. ನಗರದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ನಮಗೆ ಬದುಕಲು ಅವಕಾಶ ಕೊಡಿ ಎಂದು ಮೌನದ ಮನವಿ ಸಲ್ಲಿಸುತ್ತಿದ್ದೇವೆ.ನಮಗೊಂದು ನೆಮ್ಮದಿಯ ಬದುಕು ಬೇಕಿದೆ. ನೆಲೆ ಕಲ್ಪಿಸಿದರೆ ವಾಹನಗಳಿಗೆ ಅಡ್ಡಿಯಾಗದೆ, ಜನರಿಗೆ ತೊಂದರೆ ನೀಡಿದೆ ನಮ್ಮ ಪಾಡಿಗೆ ನಾವು ಹೋಗುತ್ತೇವೆ’.

ನಿಮ್ಮ ದಯಾ ವಿವೇಚನೆಯ ನಿರೀಕ್ಷೆಯಲ್ಲಿ ಗಂಗಾವತಿ ನಗರದ ಸಮಸ್ತ ರಸ್ತೆವಾಸಿ ಬಿಡಾಡಿ ಜಾನುವಾರುಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry