ಕರ್ಕಿಕೊಡದ ಶಿಲುಬೆ ಬೆಟ್ಟ

7

ಕರ್ಕಿಕೊಡದ ಶಿಲುಬೆ ಬೆಟ್ಟ

Published:
Updated:

ಕಣ್ಣು ಹಾಯಿಸಿದಷ್ಟು ದೂರ ಮಲೆನಾಡಿನ ಸುಂದರ ಹಚ್ಚ ಹಸಿರು ಪ್ರಕೃತಿ, ಕಾಫಿ, ಟೀ ತೋಟಗಳ ರಮಣೀಯ ಸೊಬಗು, ಅವುಗಳ ನಡುವೆ ಎತ್ತರದಲ್ಲಿ ಕಂಗೊಳಿಸುವ ಬೆಟ್ಟ.ಇದೇ `ಶಿಲುಬೆ ಬೆಟ್ಟ~. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಜಯಪುರದಿಂದ 3 ಕಿಮೀ ದೂರದ ಕರ್ಕಿಕೊಡ ಚಹಾ ತೋಟದಲ್ಲಿದೆ.ಇದಕ್ಕೆ ಈ ಹೆಸರು ಬರಲೂ ವಿಶಿಷ್ಟ ಕಾರಣವೂ ಇದೆ. ಸುಮಾರು 150 ವರ್ಷಗಳ ಹಿಂದೆ ಕೇರಳ ಮೂಲದ ಕ್ರಿಶ್ಚಿಯನ್ನರು ಇಲ್ಲಿ ಕೆಲಸಕ್ಕಾಗಿ ವಲಸೆ  ಬಂದಿದ್ದರು. ಅವರು ಪ್ರತಿ ವರ್ಷ ಗುಡ್‌ಫ್ರೈಡೆಯಂದು (ಯೇಸುಕ್ರಿಸ್ತ ಶಿಲುಬೆಯೇರಿದ ದಿನ) ಈ ತೋಟದಲ್ಲಿನ ಚಿಕ್ಕ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ ಶಿಲುಬೆಯನ್ನು ಹಿಡಿದು ಮೆರವಣಿಗೆಯಲ್ಲಿ 3 ಕಿಮೀ ದೂರದ ಬೆಟ್ಟಕ್ಕೆ ಹೋಗುತ್ತಿದ್ದರು. ಶಿಲುಬೆಯನ್ನು ಬೆಟ್ಟದ ಬಂಡೆಗಳ ಮಧ್ಯೆ ಪ್ರತಿಷ್ಠಾಪಿಸಿ ಮಧ್ಯಾಹ್ನದ ವರೆಗೆ ಪ್ರಾರ್ಥನೆ ಮಾಡುತ್ತಾ ಶ್ರದ್ಧೆ ಸಂಭ್ರಮಗಳಿಂದ ಗುಡ್‌ಫ್ರೈಡೆ ಆಚರಣೆ ಮಾಡುತ್ತಿದ್ದರು. ಅದಕ್ಕಾಗಿಯೇ ಈ ಹೆಸರು ಬಂತು ಎನ್ನುತ್ತಾರೆ.ಅಲ್ಲಿ ಪ್ರಾರ್ಥನೆ ಮಾಡಿದ ಮಲೆಯಾಳಿ ಕುಟುಂಬಗಳಲ್ಲಿ ನೆಮ್ಮದಿ, ಸುಖ, ಸಂತಾನವಿಲ್ಲದ ದಂಪತಿಗಳು ಮಕ್ಕಳನ್ನು ಪಡೆದ ವಿಷಯಗಳು, ಗುಣವಾದ ವ್ಯಾಧಿಗಳು, ನಿರುದ್ಯೋಗಿಗಳು ಪರದೇಶದಲ್ಲಿ ಉದ್ಯೋಗ ಗಳಿಸಿಕೊಳ್ಳುವುದು ಇತ್ಯಾದಿ ಸಂಗತಿ ಸುತ್ತಲಿನ ಊರುಗಳಿಗೆ ಹಬ್ಬಿದವು. ದಿನಗಳು ಉರುಳಿದಂತೆ ಈ ಬೆಟ್ಟದ ಬಗ್ಗೆ ಜನರಲ್ಲಿ ಭಕ್ತಿ ಗೌರವ ಹೆಚ್ಚಿತು.ಮುಂದೆ ತುಳು ಭಾಷಿಕರು ಕೂಡ ಇದನ್ನು `ಕುರ್ಸು ಗುಡ್ಡೆ~ (ಶಿಲುಬೆ ಬೆಟ್ಟ) ಎಂದು ಕರೆಯಲು ಪ್ರಾರಂಭಿಸಿದರು.ದಿನ ಕಳೆದಂತೆ ಕೇರಳದ ಕ್ರಿಶ್ಚಿಯನ್ನರು ಮರೆಯಾದರು. ಆದರೆ ಅವರು ಆರಂಭಿಸಿದ ಆಚರಣೆಯನ್ನು ಇಲ್ಲಿನ ರೋಮನ್ ಕೆಥೋಲಿಕರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮೆರವಣಿಗೆಯಲ್ಲಿ ಶಿಲುಬೆ ಹಿಡಿದು ಪ್ರಾರ್ಥನೆ ಮಾಡುತ್ತ ಬೆಟ್ಟದತ್ತ ಹೋಗುತ್ತಾರೆ.ಮಾನವನ ಪಾಪ ಪರಿಹಾರಕ್ಕಾಗಿ ಯೇಸುಕ್ರಿಸ್ತರು ಶಿಲುಬೆಯನ್ನು ಹೊತ್ತು 14 ಸ್ಥಳಗಳಲ್ಲಿ ಅನುಭವಿಸಿದ ಯಾತನೆಯ ವೃತ್ತಾಂತವನ್ನು ಪಠಿಸುತ್ತಾರೆ. 14 ಕಡೆ ಶಿಲುಬೆ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಾರೆ.ಇನ್ನೊಂದು ವಿಶೇಷ ಎಂದರೆ ಇಲ್ಲಿಗೆ ಹೋಗುವ ಭಕ್ತರಲ್ಲಿ ಜಾತಿ- ಧರ್ಮದ ಭೇದಗಳಿಲ್ಲ. ಕ್ರಿಸ್ತನ ಉಪಕಾರಕ್ಕೆ ಪ್ರತಿಯಾಗಿ ಮೇಣದ ಬತ್ತಿ ಉರಿಸುವುದು, ಹರಕೆ ಈಡೇರಿದ್ದಕ್ಕಾಗಿ ಅಕ್ಕಿ ಮತ್ತು ಹೆಸರುಬೇಳೆ ಅರ್ಪಿಸುವ ವಾಡಿಕೆಯಿದೆ.

 

ಸಾಮಾನ್ಯವಾಗಿ ಕ್ರೈಸ್ತ ದೇವಾಲಯಗಳಲ್ಲಿ ಭೋಜನ ಉಣಬಡಿಸುವ ಸಂಪ್ರದಾಯವಿಲ್ಲ. ಆದರೆ ಶಿಲುಬೆ ಬೆಟ್ಟದಲ್ಲಿ ಮಾತ್ರ ಗುಡ್‌ಫ್ರೈಡೆ ಸಂದರ್ಭದಲ್ಲಿ ಭಕ್ತರು ತಂದ ಅಕ್ಕಿಯಿಂದ ಗಂಜಿ ಮತ್ತು ಹೆಸರುಕಾಳಿನ ಪಲ್ಯ ತಯಾರಿಸಿ ಭಕ್ತಾದಿಗಳಿಗೆ ಉಣಬಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry