`ಕರ್ಜಗಿಗೆ ಬೆಣ್ಣೆ, ಗುತ್ತಲಕ್ಕೆ ಸುಣ್ಣ'

ಭಾನುವಾರ, ಜೂಲೈ 21, 2019
22 °C
ಅಧಿಕಾರಿಗಳಿಂದ ಬೆಳೆವಿಮೆಯಲ್ಲಿ ತಾರತಮ್ಯ: ಆರೋಪ

`ಕರ್ಜಗಿಗೆ ಬೆಣ್ಣೆ, ಗುತ್ತಲಕ್ಕೆ ಸುಣ್ಣ'

Published:
Updated:

ಹಾವೇರಿ: `ನೀರಾವರಿ ಪ್ರದೇಶ ಹೆಚ್ಚಿರುವ ಕರ್ಜಗಿ ಹೋಬಳಿಗೆ ಹೆಚ್ಚಿನ ವಿಮೆ ನೀಡಲಾಗಿದ್ದು, ಬರಪೀಡಿತ ಗುತ್ತಲ ಹೋಬಳಿಗೆ ಕಡಿಮೆ ವಿಮೆ ನೀಡಲಾಗಿದೆ. ಇದನ್ನು ನೋಡಿದರೆ, ರಾಷ್ಟ್ರೀಯ ಬೆಳೆವಿಮೆ ಯೋಜನೆಯ ಆಣೆವಾರಿ ಕಾರ್ಯದಲ್ಲಿ ಕರ್ಜಗಿಗೆ ಬೆಣ್ಣೆ, ಗುತ್ತಲ ಸುಣ್ಣ ಎನ್ನುವ ರೀತಿಯಲ್ಲಿ ತಾರತಮ್ಯ ಮಾಡಿರುವುದು ಸ್ಪಷ್ಟವಾಗುತ್ತಿದೆ' ಎಂದು ತಾ.ಪಂ.ಸದಸ್ಯರು ಆರೋಪಿಸಿದರು.ನಗರದ ತಾ.ಪಂ. ಸಭಾಭವನದಲ್ಲಿ ಮಂಗಳವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗುತ್ತಲ ಹೋಬಳಿ ವ್ಯಾಪ್ತಿಯ ನೆಗಳೂರ ತಾ.ಪಂ. ಸದಸ್ಯ ಡಾ. ವಿ.ಎಸ್. ಮರಗಬ್ಬಿನ, ಗುತ್ತಲದ ಸದಸ್ಯ ಪರಮೇಶಪ್ಪ ಕುರವತ್ತಿಗೌಡ್ರ ಅವರು, ಕೃಷಿ ಅಧಿಕಾರಿಗಳನ್ನು ಈ ಬಗ್ಗೆ ಪ್ರಸ್ತಾಪಿಸಿ, ನಿಜವಾದ ಫಲಾನುಭವಿಗಳಿಗೆ ವಿಮೆ ಸೌಲಭ್ಯ ದೊರೆಯದಿದ್ದರೆ, ಆ ಯೋಜನೆಯ ಪ್ರಯೋಜನವೇನು ಎಂದು ಪ್ರಶ್ನಿಸಿದರು.ಆಗ ತಾಲ್ಲೂಕು ಕೃಷಿ ಅಧಿಕಾರಿಗಳು ಮಾತನಾಡಿ, ಕೃಷಿ ವಿಮೆ ಕಂಪೆನಿಯವರು ಮೂರು ವರ್ಷದ ಬೆಳೆಹಾನಿಯ ಪರಿಶೀಲನೆ, ಬೆಳೆವಿಮೆ ಶೇಕಡಾವಾರು ತೆಗೆಯುತ್ತಾರೆ. ಅದರ ಆಧಾರದ ಮೇಲೆ ವಿಮೆ ನಿರ್ಧಾರವಾಗುತ್ತದೆ. ಇದರಲ್ಲಿ ಕೃಷಿ ಇಲಾಖೆಯೇ ಪಾತ್ರ ಏನಿಲ್ಲ. ಈ ವರ್ಷದ ಬೆಳೆ ವಿಮೆ ಬಂದಿರುವುದು ಇದರ ಆಧಾರದ ಮೇಲೆಯೇ ಎಂದು ಹೇಳಿದರು.ಅಧಿಕಾರಿಗಳ ಉತ್ತರಕ್ಕೆ ಸಿಟ್ಟಿಗೆದ್ದ ಸದಸ್ಯ ಕುರವತ್ತಿಗೌಡ್ರ, ಮೂರು ವರ್ಷದ ಹಾನಿ ನೋಡಿ ವಿಮೆ ಕೊಡುವುದಾದರೆ, ಇದೆಂತಹ ನಿಯಮ. ಮನುಷ್ಯನ ಮೇಲೆಯೂ ವಿಮೆ ಮಾಡಿರುತ್ತಾರೆ. ನಿಮ್ಮ ನಿಯಮದ ಪ್ರಕಾರ ವಿಮೆ ನೀಡುವುದಾದರೆ, ಮನುಷ್ಯ ಮೂರು ಬಾರಿ ಸಾಯಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

ಕಳೆದ ವರ್ಷ ಗುತ್ತಲ ಹೋಬಳಿಯಲ್ಲಿ ಸಂಪೂರ್ಣ ಬರಗಾಲ ಆವರಿಸಿತ್ತಲ್ಲದೇ, ಸರ್ಕಾರವೇ ಗೋಶಾಲೆ ತೆರೆದಿತ್ತು. ಇಷ್ಟಿದ್ದರೂ ಕೇವಲ ಶೇ 17ರಷ್ಟು ವಿಮೆ ಮಂಜೂರು ಮಾಡಲಾಗಿದೆ. ಕರ್ಜಗಿ ಹೋಬಳಿಗೆ ಶೇ 65ರಷ್ಟು ವಿಮೆ ಬಂದಿದೆ ಎಂದು ಸಭೆಗೆ ತಿಳಿಸಿದರು.ಬೆಳೆಹಾನಿ ಸಮೀಕ್ಷೆಯನ್ನು ಯಾರು ನಡೆಸಿದ್ದಾರೆ ಅವರನ್ನು ಸಭೆಗೆ ಕರೆಸಿ ಅವರಿಂದ ಯಾವ ರೀತಿ ಸಮೀಕ್ಷೆ ನಡೆಸಲಾಗಿದೆ ಎಂಬುದನ್ನು ತಿಳಿಸಲಿ ಎಂದರಲ್ಲದೇ, ವಿಮೆ ಕಂಪೆನಿಯ ನಿಯಮ ಹಾಗೇ ಇರುವುದಾದರೆ, ಅದನ್ನು ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವ ಠರಾವು ಪಾಸು ಮಾಡಬೇಕು ಎಂದು ಮನವಿ ಮಾಡಿದರು.2011-12ನೇ ಸಾಲಿನ ಸುವರ್ಣ ಭೂಮಿ ಯೋಜನೆಯಲ್ಲಿ ಕರ್ಜಗಿ ಹೋಬಳಿಯ ಫಲಾನುಭವಿಗಳಿಗೆ ಯೋಜನೆ ಅನುದಾನ ಲಭಿಸಿದೆ. ಗುತ್ತಲ ಹೋಬಳಿ ಫಲಾನುಭವಿ ರೈತರಿಗೆ ಎರಡನೇ ಕಂತು ಇದುವರೆಗೂ ಬಿಡುಗಡೆಯಾಗಿಲ್ಲ. 2012-13ನೇ ಸಾಲಿನ ರೈತರಿಗೆ ಎರಡು ಕಂತು ಬಂದಿವೆ. ಇಲ್ಲಿಯೂ ಗುತ್ತಲ ಹೋಬಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆಪಾದಿಸಿದರು.ನೆಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅನಾರೋಗ್ಯ ಪೀಡಿತರಾಗುವ ಮಕ್ಕಳನ್ನು ವಸತಿ ನಿಲಯದ ಮೇಲ್ವಿಚಾರಕರು ಮನೆಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ವಸತಿ ನಿಲಯದಲ್ಲಿ ಮಕ್ಕಳ ಸಂಖ್ಯೆ ಕುಸಿದಿದೆ. ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಸೌಲಭ್ಯ ಮೊರಾರ್ಜಿ ಶಾಲೆಯಲ್ಲಿ ಇಲ್ಲವೇ ಎಂದು ಸದಸ್ಯ ಮರಗಬ್ಬಿನ ಪ್ರಶ್ನಿಸಿದರು.ಇದಕ್ಕೆ ಸಮಾಜ ಕಲ್ಯಾಣಾಧಿಕಾರಿ ಉತ್ತರಿಸಿ, ಮೂರಾರ್ಜಿ ವಸತಿ ಶಾಲೆಗಳು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ತಿಳಿಸಿದರು.ಡೆಂಗೆ ಸಾವು: ತಾಲ್ಲೂಕಿನಲ್ಲಿ ಡೆಂಗೆ ಪ್ರಕರಗಳು ಹೆಚ್ಚಾಗುತ್ತಿದ್ದರೂ ಈವರೆಗೆ ಅದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರಲ್ಲದೇ, ತಾಲ್ಲೂಕಿನಲ್ಲಿ ಪತ್ತೆಯಾದ ಡೆಂಗೆ ಪ್ರಕರಣಗಳೆಷ್ಟು, ಎಷ್ಟು ಜನ ಮೃತಪಟ್ಟಿದ್ದಾರೆ ಎಂದು ತಾ.ಪಂ.ಉಪಾಧ್ಯಕ್ಷ ಬಸವರಾಜ ಕಳಸೂರ ಪ್ರಶ್ನಿಸಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಮಾತನಾಡಿ, ತಾಲ್ಲೂಕಿನಲ್ಲಿ ಈವರೆಗೆ 256 ಶಂಕಿತ ಡೆಂಗೆ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 23 ಜನರಿಗೆ ಖಚಿತವಾಗಿದೆ. ಒಬ್ಬರು ಮೃತಪಟ್ಟಿದ್ದಾರೆ. 22 ಜನರು ಆರಾಮ ಆಗಿದ್ದಾರೆ. ಡೆಂಗೆ ನಿಯಂತ್ರಣಕ್ಕೆ ಫಾಗಿಂಗ್ ಹಾಗೂ ನೈರ್ಮಲ್ಯಕ್ಕೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry