ಕರ್ತವ್ಯಕ್ಕೆ ಸಿದ್ಧ; ಆದರೂ ಕಡ್ಡಾಯ ರಜೆ ಶಿಕ್ಷೆ:ವಾರಗಟ್ಟಲೆ ಸಂಬಳಕ್ಕೆ ಬಿತ್ತು ಕತ್ತರಿ!

7

ಕರ್ತವ್ಯಕ್ಕೆ ಸಿದ್ಧ; ಆದರೂ ಕಡ್ಡಾಯ ರಜೆ ಶಿಕ್ಷೆ:ವಾರಗಟ್ಟಲೆ ಸಂಬಳಕ್ಕೆ ಬಿತ್ತು ಕತ್ತರಿ!

Published:
Updated:

ಮಂಡ್ಯ: ಒಂಬತ್ತು ದಿನಗಳಿಂದ ಜಿಲ್ಲೆಯಾದ್ಯಂತ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಇದಕ್ಕೆ ಕಾರಣ `ತಮಿಳುನಾಡಿಗೆ ನೀರು ಬಿಡಬಾರದು~ ಎಂದು ನಡೆದಿರುವ ಹೋರಾಟ. ಆದರೆ ಸಂಸ್ಥೆಯ  350ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ನಿತ್ಯವೂ ಕಡ್ಡಾಯ ರಜೆ ಹಾಕಬೇಕಾದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಅವರಿಗೆ ಸಂಬಳ ಇಲ್ಲದಂತಾಗಿದೆ.ಜಿಲ್ಲೆಯಲ್ಲಿ ನಿತ್ಯ 460 ಬಸ್‌ಗಳು ಬೇರೆ, ಬೇರೆ ಮಾರ್ಗದಲ್ಲಿ (ರೂಟ್) ಸಂಚರಿಸುತ್ತವೆ. ಅದರಲ್ಲಿ ಅರ್ಧದಷ್ಟು ಮಾರ್ಗಗಳಲ್ಲಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲ್ಲೂಕಿನಲ್ಲಿ ಬಸ್ ಸಂಚಾರ ಹೆಚ್ಚೂ ಕಡಿಮೆ ಸ್ತಬ್ಧವಾಗಿದೆ.ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಜಿಲ್ಲೆಯ ವಿವಿಧೆಡೆ ರಸ್ತೆ ತಡೆ ನಡೆಸಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಇದನ್ನು ಗಮನಿಸಿರುವ ರಸ್ತೆ ಸಾರಿಗೆ ನಿಗಮವು ಹಲವೆಡೆ ಬಸ್ ಸಂಚಾರವನ್ನು ರದ್ದುಗೊಳಿಸಿದೆ. ಬಸ್ ಮೇಲೆ ಕಲ್ಲು ತೂರಿ ಹಾನಿ ಉಂಟುಮಾಡಬಹುದು ಎನ್ನುವುದೂ ಸೇರಿಕೊಂಡಿದೆ.ಬಸ್‌ಗಳ ಸಂಚಾರ ಮಾರ್ಗ ರದ್ದುಪಡಿಸುವುದರಿಂದ ನಿಗಮದ ಆದಾಯದಲ್ಲಿ ನಿತ್ಯ 12 ರಿಂದ 15 ಲಕ್ಷ ರೂಪಾಯಿವರೆಗೆ ನಷ್ಟ ಉಂಟಾಗುತ್ತಿದೆ. ಈವರೆಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ. ಆ.7 ರಂದು 32.17 ಲಕ್ಷ ರೂಪಾಯಿ ಆದಾಯ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ, ಕೇವಲ 14.48 ಲಕ್ಷ ರೂಪಾಯಿ ಸಂಗ್ರಹವಾಗಿದೆ. 31.33 ಲಕ್ಷ ರೂಪಾಯಿ ವೆಚ್ಚವಾಗಿದ್ದು, 16.85 ಲಕ್ಷ ರೂಪಾಯಿ ನಷ್ಟವಾಗಿದೆ.

ಸಂಬಳವಿಲ್ಲ: ನಿತ್ಯ 200ಕ್ಕೂ ಹೆಚ್ಚು ಬಸ್ ಸಂಚಾರದ ಮಾರ್ಗಗಳನ್ನು ರದ್ದುಪಡಿಸುತ್ತಿರುವುದರಿಂದ ಕೆಲಸಕ್ಕೆ ಬರುವ 350ಕ್ಕೂ ಹೆಚ್ಚು ನೌಕರರಿಗೆ ಕೆಲಸವಿಲ್ಲದಂತಾಗಿದೆ.ನಿಗಮದ ನಿಯಮಗಳ ಪ್ರಕಾರ ಕೆಲಸ ಮಾಡಿದರಷ್ಟೇ ಸಂಬಳ ನೀಡಲಾಗುತ್ತದೆ. ಇಲ್ಲದಿದ್ದರೆ ಸಂಬಳ ನೀಡುವುದಿಲ್ಲ. ಕೆಲಸ ಇಲ್ಲದಿದ್ದರೆ ಅಂದು ಅವರು ಕಡ್ಡಾಯ ರಜೆ ಹಾಕಬೇಕು ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ಎನ್. ಪ್ರಕಾಶಬಾಬು. ಇದು ನಿತ್ಯ ಕೆಲಸಕ್ಕೆ ಆಗಮಿಸುವ ಚಾಲಕರು ಹಾಗೂ ನಿರ್ವಾಹಕರಿಗೆ ಮುಳುವಾಗಿದೆ. ಅವರು ಕೆಲಸ ಮಾಡಲು ಸಿದ್ಧರಾಗಿ ದಿನ ಬೆಳಿಗ್ಗೆ ಕೆಲಸಕ್ಕೆ ಬರುತ್ತಿದ್ದಾರೆ. ಆದರೆ, ಮಾರ್ಗಗಳು ರದ್ದುಗೊಂಡಿರುವುದರಿಂದ ಕರ್ತವ್ಯಕ್ಕೆ ರಜೆ ಹಾಕಿ ಮರಳಿ ಮನೆಗೆ ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.ಪ್ರತಿ ದಿನ ಬೆಳಿಗ್ಗೆ ಕರ್ತವ್ಯ (ಡ್ಯೂಟಿ) ಪಟ್ಟಿ ಗೊತ್ತಾಗುತ್ತದೆ. ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯ ವರೆಗಿನ ಬಸ್‌ಗಳು ಸಂಚಾರ ಆರಂಭಿಸುತ್ತವೆ. ಕೆಲವು ಬಸ್‌ಗಳು ಒಂದು ಬಾರಿ ಹೋಗಿ ಬಂದ ನಂತರ ಮತ್ತೊಮ್ಮೆ ಹೋಗಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಹೋದ ಬಸ್‌ಗಳು ಸಂಜೆಯ ವರೆಗೂ ಬರುವುದೇ ಇಲ್ಲ. ಕರ್ತವ್ಯ ಆರಂಭಿಸಿದವರಿಗೆ, ಬಸ್ ಒಂದು ಬಾರಿ ಸಂಚರಿಸಿದರೂ ಸಂಬಳ ಸಿಗುತ್ತದೆ.`ಬೆಳಿಗ್ಗೆ ಬಂದು ಡ್ಯೂಟಿ ಹಾಕಲಾಗಿದೆಯೇ ಎಂದು ನೋಡುತ್ತೇವೆ. ಐದು ದಿನಗಳಿಂದ ಹಾಕಿಲ್ಲ. ರಜೆ ಮುಗಿದಿರುವುರಿಂದ ಅದನ್ನೂ ಹಾಕುವಂತ್ಲ್ಲಿಲ. ಹೀಗಾಗಿ ಗೈರುಹಾಜರಿ ಎಂದು ನಮೂದಿಸಿದ್ದಾರೆ. ವಾರಗಟ್ಟಲೇ ಸಂಬಳ ಸಿಗದಿದ್ದರೆ ಸಂಸಾರ ಸಾಗಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ~ ಹೆಸರು ಹೇಳಲಿಚ್ಛಿಸದ ನೌಕರರೊಬ್ಬರು.`ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ, ಡ್ಯೂಟಿ ಹಾಕುತ್ತಿಲ್ಲ. ಇದರಲ್ಲಿ ನಮ್ಮ ತಪ್ಪೇನಿದೆ. ಇಂದು, ನಾಳೆ ಡ್ಯೂಟಿ ಹಾಕಬಹುದು ಎಂದು ನಿತ್ಯ ಡಿಪೋಕ್ಕೆ ಬಂದು ಹೋಗುವುದೇ ಆಗಿದೆ. ಇಂತಹ ಸಂದರ್ಭದಲ್ಲಿ ಸಂಬಳ ನೀಡಬೇಕು ಎಂಬ ಬೇಡಿಕೆಯನ್ನು ಇತ್ತೀಚೆಗೆ ನಡೆಸಿದ ಹೋರಾಟದಲ್ಲಿ ಸೇರಿಸಲಾಗಿದೆ. ಇದಕ್ಕೆ ಒಪ್ಪಿದರೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲದಿದ್ದರೆ ಕುಟುಂಬ ಸಾಗಿಸುವುದು ಕಷ್ಟವಾಗುತ್ತದೆ~ಶ ಎನ್ನುತ್ತಾರೆ ಮತ್ತೊಬ್ಬ ನೌಕರರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry