ಗುರುವಾರ , ನವೆಂಬರ್ 14, 2019
23 °C
ಹೃದ್ರೋಗಿಗೂ ಚುನಾವಣಾ ಕೆಲಸ ಕಡ್ಡಾಯ!

ಕರ್ತವ್ಯದ ವೇಳೆ ಕಾಲು ಮುರಿದುಕೊಂಡರೂ ಕೇಳುವವರಿಲ್ಲ!

Published:
Updated:

ಮಂಗಳೂರು:   `ಚುನಾವಣಾ ಕರ್ತವ್ಯವನ್ನು ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ವಹಿಸಿದ ಕೆಲಸ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ...'ಸರ್ಕಾರಿ ನೌಕರರಲ್ಲದ ಅಂಗನವಾಡಿ ಕಾರ್ಯಕರ್ತೆಯರನ್ನು ಅಧಿಕಾರಿಗಳು ಬೆದರಿಸುವ ಪರಿ ಇದು. ಆದರೆ, ಚುನಾವಣಾ ಕರ್ತವ್ಯದ ವೇಳೆ ಬಿದ್ದು ಕಾಲು ಮುರಿದುಕೊಂಡರೆ ಯಾವ ಅಧಿಕಾರಿಯೂ ಅತ್ತ ನೋಡುವುದಿಲ್ಲ...!ಕಾವೂರಿನ ನಿವಾಸಿ ತೇಜಾಕ್ಷಿ ಮರಕಡದ ಅಂಗನವಾಡಿ ಕಾರ್ಯಕರ್ತೆ. ಅವರಿಗೆ ಹೃದಯ ಕವಾಟಗಳ ಆಪರೇಷನ್ ಆಗಿ ವರ್ಷವಾಗಿಲ್ಲ. ಆದರೂ ಆಕೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಆಗಿ ಮುಂದುವರಿಯಬೇಕಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪರಿಷ್ಕರಣೆಯ ಎಲ್ಲಾ ಕೆಲಸವನ್ನೂ ಅವರು ನಿಭಾಯಿಸಬೇಕು.ಏ.15ರಂದು ಅವರಿಗೆ ಕರೆ ಮಾಡಿದ ಸ್ಥಳೀಯ ಗ್ರಾಮ ಲೆಕ್ಕಿಗರು, ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ವಿದೇಶದಲ್ಲಿ ನೆಲೆಸಿದವರು ಹಾಗೂ ಮೃತರ ಪಟ್ಟಿಯನ್ನು ಶೀಘ್ರ ಒದಗಿಸುವಂತೆ ಸೂಚಿಸಿದ್ದರು. ಚುನಾವಣಾ ಕರ್ತವ್ಯ ತಪ್ಪಿಸಬಾರದು ಎಂಬ ನಿಟ್ಟಿನಲ್ಲಿ ತೇಜಾಕ್ಷಿ ಅವರು ಮನೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದರು. ಮರಕಡದಲ್ಲಿ ಒಂದು ಮನೆಯ ಬಳಿ ಸಾಗುವಾಗ ತಲೆ ಸುತ್ತಿ ಕಂದಕಕ್ಕೆ ಬ್ದ್ದಿದು ಅವರ ಬಲಗಾಲಿನ ಮೂಳೆ ಮುರಿದಿದೆ. ಮೊದಲೇ ಹ್ರದ್ರೋಗದಿಂದ ತತ್ತರಿಸಿದ್ದ ಅವರು ಈಗ ಕಾಲು ಮುರಿತದ ಬಾಧೆಯನ್ನೂ ಎದುರಿಸಬೇಕಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ತೇಜಾಕ್ಷಿ ಅವರು ನಗರದ ಫಾದರ್ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.`ನಮ್ಮದು ಬಡ ಕುಟುಂಬ. ಹ್ರದ್ರೋಗವಿದ್ದರೂ ನಾನು ಚುನಾವಣಾ ಕರ್ತವ್ಯಕ್ಕೆ ಹಿಂದೇಟು ಹಾಕಿಲ್ಲ. ಆದರೆ ಗಾಯಗೊಂಡ ಬಳಿಕ ಅಧಿಕಾರಿಗಳು ಯಾರೂ ನನ್ನನ್ನು ಭೇಟಿ ಮಾಡುವ ಸೌಜನ್ಯವನ್ನೂ ತೋರಿಲ್ಲ' ಎಂದು ತೇಜಾಕ್ಷಿ `ಪ್ರಜಾವಾಣಿ' ಬಳಿ ಅಳಲು ತೋಡಿಕೊಂಡರು.ಸಮಸ್ಯೆಗಳ ಸರಮಾಲೆ: ಚುನಾವಣಾ ಕರ್ತವ್ಯದ ಹೆಸರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಡೆಯುವ ಶೋಷಣೆಗೆ ತೇಜಾಕ್ಷಿ ಅವರ ಪ್ರಕರಣ ಒಂದು ಉದಾಹರಣೆ ಮಾತ್ರ. ಅವರು ಎದುರಿಸುತ್ತಿರುವ ಸಮಸ್ಯೆಗಳು ಇನ್ನಷ್ಟು ಇವೆ ಎನ್ನುತ್ತಾರೆ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ.  `ಸರ್ಕಾರಿ ನೌಕರರಿಗೆ ಚುನಾವಣೆ ಬಂದಾಗ ಮಾತ್ರ ಅದರ ಕೆಲಸಕ್ಕೆ ನಿಯೋಜಿಸುತ್ತಾರೆ. ಆದರೆ, ನಾವು ವರ್ಷ ಪೂರ್ತಿ ಬಿಎಲ್‌ಒಗಳಾಗಿ ಕೆಲಸ ಮಾಡಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಲ್ಲಿರುವ ಲೋಪಗಳನ್ನು ಸರಿಪಡಿಸಲು ಮತದಾರರಿಂದ ಅರ್ಜಿ ಸ್ವೀಕಾರ, ಹೊಸ ಗುರುತಿನ ಚೀಟಿ ಮತ್ತು ಪರಿಷ್ಕೃತ ಗುರುತಿನ ಚೀಟಿಯನ್ನು ಮತದಾರರಿಗೆ ತಲುಪಿಸುವ ಜವಾಬ್ದಾರಿಯೂ ನಮ್ಮದು. ಈ ಕೆಲಸಕ್ಕೆ ನಮಗೆ ವರ್ಷಕ್ಕೆ ನೀಡುವ ಹಣ ಕೇವಲ 3 ಸಾವಿರ ರೂಪಾಯಿ. ಚುನಾವಣೆ ಘೋಷಣೆ ಆದ ಬಳಿಕ ನಾವು ತರಬೇತಿಗಾಗಿ ತಾಲ್ಲೂಕು ಕೇಂದ್ರಕ್ಕೆ ಪದೇ ಪದೇ ಹೋಗಬೇಕು. `ಸ್ವೀಪ್' ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ಖರ್ಚು ಮಾಡುವ ಚುನಾವಣಾ ಆಯೋಗ ಬಿಎಲ್‌ಒಗಳಿಗೆ ಪ್ರಯಾಣ ವೆಚ್ಚವನ್ನೂ ನೀಡುವುದಿಲ್ಲ. ನಮಗೆ ಇಎಸ್‌ಐ ಸವಲತ್ತೂ ಇಲ್ಲ. ನಮಗೆ ತಿಂಗಳಿಗೆ ಬರುವ ರೂ 4 ಸಾವಿರ ಸಂಬಳವನ್ನೂ ಈ ಕೆಲಸಕ್ಕೆ ವಿನಿಯೋಗಿಸಬೇಕಾದ ಸ್ಥಿತಿ ಇದೆ' ಎಂದು ಜಯಲಕ್ಷ್ಮಿ ಬೇಸರ ತೋಡಿಕೊಂಡರು.`ಚುನಾವಣಾ ಕರ್ತವ್ಯ ನಿಭಾಯಿಸಲು ನಾವು ಹಿಂದೇಟು ಹಾಕುವುದಿಲ್ಲ. ಆದರೆ, ಕೆಲಸಕ್ಕೆ ತಕ್ಕ ಸಂಬಳ ನೀಡಿ ಎಂಬುದಷ್ಟೇ ನಮ್ಮ ಬೇಡಿಕೆ. ಬಿಎಲ್‌ಒಗಳಿಗೆ ತಿಂಗಳಿಗೆ ಕನಿಷ್ಠ 3 ಸಾವಿರ ರೂಪಾಯಿಯನ್ನಾದರೂ ನೀಡಬೇಕು' ಎಂದು ಅವರು ಒತ್ತಾಯಿಸಿದರು.`ಕಾರ್ಯಕರ್ತರಿಗೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಪುರಭವನದಲ್ಲಿ ತರಬೇತಿ ನೀಡುವ ಬಗ್ಗೆ ಮಧ್ಯಾಹ್ನ 1.30ಕ್ಕೆ ಸಂದೇಶ ಬಂತು. ಅದರ ಬೆನ್ನಿಗೆ ಸಭೆಯ ಸ್ಥಳ ಬದಲಾಗಿದ್ದು, ಪಾಲಿಕೆ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಮತ್ತೊಂದು ಸಂದೇಶ ಬಂತು. ಅಲ್ಲಿಗೆ ಹೋದಾಗ, ಸಭೆ ಪುರಭವನದಲ್ಲೇ 3 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು. ಆಟೊ ರಿಕ್ಷಾದಲ್ಲಿ ಅತ್ತಿಂದಿತ್ತ ಓಡಾಡಿದ್ದಕ್ಕೆ ಯಾವ ಹಣವೂ ಸಿಗದು. ಈ ತುರ್ತು ತರಬೇತಿಗಾಗಿ ಕೆಲವು ಕಾರ್ಯಕರ್ತೆಯರು 30 ಕಿ.ಮೀ. ದೂರದಿಂದ ಟ್ಯಾಕ್ಸಿ ಮಾಡಿಕೊಂಡು ಬರಬೇಕಾಯಿತು. ನಮಗೆ ಪ್ರಯಾಣ ವೆಚ್ಚವೂ ಸಿಗುವುದಿಲ್ಲ' ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು. `ಮತದಾರರ ಪಟ್ಟಿಯಲ್ಲಿ ಗುರುತಿನ ಚೀಟಿಯಲ್ಲಿ ಲೋಪ ಸರಿಪಡಿಸಲು ಜನ ಪದೇ ಪದೇ ಅರ್ಜಿ ಸಲ್ಲಿಸಿದರೂ ಅದನ್ನು ಹಿರಿಯ ಅಧಿಕಾರಿಗಳು ಸರಿಪಡಿಸಿಕೊಡುವುದಿಲ್ಲ. ಜನರಿಗೆ ಸುಲಭವಾಗಿ ಸಿಗುವ ನಾವು ಅವರಿಂದ ಕೇಳಬಾರದ ಬೈಗುಳಗಳನ್ನು ಕೇಳಬೇಕು' ಎಂದು ಅವರು ದೂರಿದರು.

ಪ್ರತಿಕ್ರಿಯಿಸಿ (+)