ಕರ್ತವ್ಯಪ್ರಜ್ಞೆ ರೂಢಿಸಿಕೊಂಡರೆ ಬದಲಾವಣೆ

7

ಕರ್ತವ್ಯಪ್ರಜ್ಞೆ ರೂಢಿಸಿಕೊಂಡರೆ ಬದಲಾವಣೆ

Published:
Updated:
ಕರ್ತವ್ಯಪ್ರಜ್ಞೆ ರೂಢಿಸಿಕೊಂಡರೆ ಬದಲಾವಣೆ

ಶಿವಮೊಗ್ಗ: ಉತ್ತಮ ನಾಡು ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂಬ ಕರ್ತವ್ಯಪ್ರಜ್ಞೆಯನ್ನು ಎಲ್ಲರೂ ರೂಢಿಸಿಕೊಂಡಾಗ ಮಾತ್ರ ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅಭಿಪ್ರಾಯಪಟ್ಟರು.ನಗರದ ನೆಹರೂ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಉತ್ತಮ ನಾಡು ಕಟ್ಟುವುದೆಂದರೆ ಬರೀ ಕೇವಲ ದೊಡ್ಡ ಕಟ್ಟಡಗಳು, ಕಾರ್ಖಾನೆಗಳು, ರಸ್ತೆ- ಸೇತುವೆ, ಮೆಟ್ರೋ ರೈಲುಗಳನ್ನು ನಿರ್ಮಿಸುವುದಲ್ಲ.ನಾಡಿನ ನೆಲ, ಜಲ, ಪರಿಸರ, ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವುದರ ಜತೆಗೆ ನಾಡಿನ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಾಗಿ ಬದುಕುವ ವಾತಾವರಣ ಸೃಷ್ಟಿಯಾಗಬೇಕು ಎಂದರು.ರಾಜ್ಯ ಮತ್ತು ರಾಷ್ಟ್ರದಲ್ಲಿನ ಪ್ರಸ್ತುತ ಆಗುಹೋಗುಗಳನ್ನು ಗಮನಿಸಿದರೆ ನಾವು ಎತ್ತ ಸಾಗುತ್ತಿದ್ದೇವೆಂಬ ಆತಂಕ ಕಾಡುತ್ತದೆ. ಈ ಹಾದಿಯನ್ನು ಸರಿಪಡಿಸುವ ಆವಶ್ಯಕತೆ ಇದೆ ಎಂಬ ಮಾತುಗಳಿವೆ. ಅಭಿವೃದ್ಧಿಯಾಗಬೇಕು; ಬದಲಾವಣೆಯಾಗಬೇಕು ಎಂಬುದಾಗಿ ಎಲ್ಲರೂ ಹೇಳುತ್ತಾರೆ.ಹಾಗಾದರೆ ಮಾಡುವವರು ಯಾರು ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತದೆ. ಯಾರೋ ವೀರಪುರುಷ ಬಂದು ಬದಲಾವಣೆ ತರುತ್ತಾರೆ ಎಂಬುದನ್ನು ಬದಿಗಿಟ್ಟು ಬದಲಾವಣೆಗೆ ನಾವೇ ಮುಂದಾಗಬೇಕೆಂಬ ಜಾಗೃತಿ ಎಲ್ಲರಲ್ಲಿಯೂ ಬರಬೇಕಿದೆ ಎಂದು ಹೇಳಿದರು.ಪ್ರಜೆಗಳೇ ಎಲ್ಲರೂ ರಾಜನ ಸ್ಥಾನಕ್ಕೆ ಬಂದೇ ಬದಲಾವಣೆ ತರಬೇಕೆಂಬ ನಿಯಮವೇನೂ ಇಲ್ಲ. ಕಾನೂನು ಪಾಲನೆ, ವೈಯಕ್ತಿಕ ಹಿತಕ್ಕಿಂತ ಸಮಾಜ, ರಾಜ್ಯ ಹಾಗೂ ರಾಷ್ಟ್ರದ ಹಿತಮುಖ್ಯವೆಂಬ ಮನೋಭಾವನೆಯನ್ನು ಬೆಳೆಸಿಕೊಂಡರೆ ಇದಕ್ಕಿಂತ ದೊಡ್ಡ ಸುಧಾರಣೆ, ಬದಲಾವಣೆ ಅಥವಾ ಕ್ರಾಂತಿ ಮತ್ತೊಂದಿಲ್ಲ ಎಂದರು.ಬೇರೆಯವರ ತಪ್ಪು-ಒಪ್ಪುಗಳನ್ನು ಹುಡುಕುತ್ತಾ ತನ್ನ ಕರ್ತವ್ಯವನ್ನೇ ಮರೆಯುವುದು ಸಹಜವಾಗಿದೆ. ಅಧಿಕಾರದಲ್ಲಿದರೆ ಮಾತ್ರ ಬದಲಾವಣೆ ತರಲು ಸಾಧ್ಯವೆಂಬ ಭ್ರಮೆಯನ್ನು ಬದಿಗಿಟ್ಟು ತನ್ನ ಕರ್ತವ್ಯವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಾಗ ಸಮಾಜ, ರಾಜ್ಯ, ರಾಷ್ಟ್ರ ಎಲ್ಲವೂ ತಾನಾಗಿ ಅಭಿವೃದ್ಧಿ ಹೊಂದಲಿದೆ ಎಂದು ವಿಶ್ಲೇಷಿಸಿದರು.ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಅರ್ಥೈಸಿಕೊಂಡು ಶಿಸ್ತುಬದ್ಧ, ಸಮೃದ್ಧ ನಾಡುಕಟ್ಟುವ ಮಹತ್ಕಾರ್ಯಕ್ಕೆ ನಾವೆಲ್ಲ ಕೈಜೋಡಿಸಿ, ನಮ್ಮ ಜವಾಬ್ದಾರಿ ಮತ್ತು ಕರ್ತವ್ಯಪ್ರಜ್ಞೆ ವೆುರೆಯಬೇಕು ಎಂದರು.

 ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ, ರಾಜ್ಯ  ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ, ಎಂಎಡಿಬಿ ಅಧ್ಯಕ್ಷ ಎ.ಬಿ. ಪದ್ಮನಾಭಭಟ್, ಜಿ.ಪಂ. ಸಿಇಒ ಡಾ.ಸಂಜಯ್ ಬಿಜ್ಜೂರ್, ಎಂಎಡಿಬಿ ಕಾರ್ಯದರ್ಶಿ ಸ್ಮಿತಾ ಬಿಜ್ಜೂರ್, ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಗಣ್ಯರು ಭಾಗವಹಿಸಿದ್ದರು.ಆಕರ್ಷಕ ನೃತ್ಯ

ಕಾರ್ಯಕ್ರಮದಲ್ಲಿ ವಾಸವಿ ವಿದ್ಯಾಶಾಲೆ, ಸರ್ವೋದಯ ವಿದ್ಯಾಶಾಲೆ, ಮಹಾವೀರ ಪ್ರೌಢಶಾಲೆ ಮತ್ತು ಅಯ್ಯಪ್ಪ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಸಮಾರಂಭಕ್ಕೆ ಮೊದಲು ನಗರದ ಸೈನ್ಸ್ ಮೈದಾನದಿಂದ  ಹೊರಟ ಭುವನೇಶ್ವರಿಯ ಮೆರವಣಿಗೆಯಲ್ಲಿ ನಗರದ ಎಲ್ಲಾ ಶಾಲೆಗಳ ಸಮವಸ್ತ್ರಧಾರಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡು ನಗರದ  ಪ್ರಮುಖ ಬೀದಿಗಳಲ್ಲಿ  ಸಂಚರಿಸಿ, ನೆಹರು ಮೈದಾನದಲ್ಲಿ ಸಮಾವೇಶಗೊಂಡರು.

 

ಮೆರವಣಿಗೆಯಲ್ಲಿ ಶಿಕ್ಷಣ, ರೇಷ್ಮೆ, ಕೃಷಿ, ಆರೋಗ್ಯ ಹಾಗೂ ವಾರ್ತಾ ಇಲಾಖೆಯ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಆಕರ್ಷಕ ಮಯೂರ ನರ್ತನ, ಬಾಲ ವಿಧೂಷಕರು, ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ, ನಂದಿಕೋಲು ಕುಣಿತ, ನಾಡಿನ ಆದರ್ಶ ಪುರುಷರ ಪಾತ್ರಧಾರಿಗಳು ಹಾಗೂ ವಿಶೇಷವಾಗಿ ನಾಡಿನ ಕವಿಗಳು ಏರಿದ್ದ ಸಾರೋಟು ವಿಶೇಷ ಗಮನ ಸೆಳೆದವು.ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ  ಸ್ತಬ್ಧಚಿತ್ರಗಳಲ್ಲಿ ರೇಷ್ಮೆ ಇಲಾಖೆ ಸ್ತಬ್ಧಚಿತ್ರಕ್ಕೆ ಪ್ರಥಮ, ಸರ್ವಶಿಕ್ಷಣ ಅಭಿಯಾನಕ್ಕೆ ದ್ವಿತೀಯ, ವಾರ್ತಾ ಇಲಾಖೆ ಮತ್ತು ಕೃಷಿ ಇಲಾಖೆ ಸ್ತಬ್ಧಚಿತ್ರಕ್ಕೆ ಕ್ರಮವಾಗಿ ತೃತೀಯ ಬಹುಮಾನ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry