ಕರ್ತವ್ಯಭ್ರಷ್ಟರನ್ನು ಶಿಕ್ಷಿಸಿ

7

ಕರ್ತವ್ಯಭ್ರಷ್ಟರನ್ನು ಶಿಕ್ಷಿಸಿ

Published:
Updated:

ಅಪೌಷ್ಟಿಕತೆ ನಿವಾರಣೆಯಲ್ಲಿ ವಿಫಲಗೊಂಡಿರುವುದಕ್ಕಾಗಿ ಹೈಕೋರ್ಟ್ ಹಿಂದೆಯೇ ಕಿವಿ ಹಿಂಡಿದ್ದರೂ ರಾಜ್ಯ ಸರ್ಕಾರ ಬುದ್ಧಿ ಕಲಿತಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಮೂರ್ತಿಗಳು ವಾಸ್ತವ ಸ್ಥಿತಿಯನ್ನು ಅರಿಯಲು ಹಿರಿಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು.ಅದು ಇಲ್ಲಿಯವರೆಗೆ ನಡೆಸಿರುವ ಅಧ್ಯಯನದ ಬಗ್ಗೆ ನೀಡಿರುವ ವರದಿ ಸರ್ಕಾರದ ನಿಷ್ಕ್ರಿಯತೆ ಮತ್ತು ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಅಪೌಷ್ಟಿಕತೆಯಿಂದಾಗಿ ಈಗಲೂ ರಾಜ್ಯದಲ್ಲಿ 68 ಸಾವಿರ ಮಕ್ಕಳು ನರಳುತ್ತಿದ್ದಾರೆ.ರಾಯಚೂರು, ಯಾದಗಿರಿ, ಗುಲ್ಬರ್ಗ, ಬೆಳಗಾವಿ, ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿಯೇ ರಾಜ್ಯದಲ್ಲಿ ಒಬ್ಬರು ಸಚಿವರಿದ್ದಾರೆ. ಮಕ್ಕಳ ಕಲ್ಯಾಣಕ್ಕಾಗಿಯೇ ಕಳೆದ 36 ವರ್ಷಗಳಿಂದ `ಸಮಗ್ರ ಮಕ್ಕಳ ಅಭಿವೃದ್ದಿ ಸೇವಾ ಯೋಜನೆ (ಐಸಿಡಿಎಸ್) ಜಾರಿಯಲ್ಲಿದೆ.

 

ಇದರ ಪ್ರಕಾರ ಕಡುಬಡವರ ಕುಟುಂಬಗಳ ಆರು ವರ್ಷದೊಳಗಿನ ಮಕ್ಕಳನ್ನು ಅಂಗನವಾಡಿಗೆ ಸೇರಿಸಿ ಅಲ್ಲಿ ಪ್ರತಿದಿನ ಕನಿಷ್ಠ 500 ಕ್ಯಾಲೋರಿ ಹಾಲು ಮತ್ತು ಪೌಷ್ಠಿಕ ಆಹಾರ ನೀಡಬೇಕಾಗುತ್ತದೆ. ಇದರ ಜತೆಗೆ ಅನಾರೋಗ್ಯ ಪೀಡಿತ ಮಕ್ಕಳನ್ನೇ ಗುರಿಯಾಗಿಟ್ಟುಕೊಂಡ ಯೋಜನೆಗಳು ಆರೋಗ್ಯ ಇಲಾಖೆಯಲ್ಲಿವೆ.ಹೀಗಿದ್ದರೂ ಅಪೌಷ್ಟಿಕತೆಯಿಂದ ಸಂಭವಿಸುತ್ತಿರುವ ಸಾವು-ನೋವುಗಳು ಕಡಿಮೆಯಾಗಿಲ್ಲ ಎಂದಾದರೆ ಈ ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿಲ್ಲ ಎಂದೇ ಅರ್ಥ.ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯ ಅನುಭವ ಕೂಡಾ ಇದೇ ಆಗಿದೆ. ಅಪೌಷ್ಟಿಕತೆಯ ನಿವಾರಣೆಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ನಿತ್ಯದ ಆಹಾರದ ಜತೆಯಲ್ಲಿ ಹಾಲು ಮತ್ತು ಹಣ್ಣು ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ.  ಬೀದರ್‌ನ ಅಂಗನವಾಡಿ ಕಾರ್ಯಕರ್ತೆಯರಿಗೆ ಇದರ ಅರಿವೇ ಇಲ್ಲದಿರುವುದನ್ನು ಕಂಡು ಅಲ್ಲಿಗೆ ಭೇಟಿ ನೀಡಿದ್ದ ಸಮಿತಿಯ ಸದಸ್ಯರು ದಂಗಾಗಿಹೋಗಿದ್ದಾರೆ.

 

ಹೆಚ್ಚುವರಿ ಪೌಷ್ಟಿಕಾಂಶದ ಆಹಾರ ನೀಡುವುದು ಬಿಡಿ, ಪ್ರತಿಯೊಂದು ಮಗುವಿಗೆ ಪ್ರತಿದಿನ ಆರು ರೂಪಾಯಿಗಳ ಆಹಾರ ನೀಡಬೇಕೆಂಬ ನಿಯಮವನ್ನೂ ಅಂಗನವಾಡಿಗಳು ಪಾಲಿಸದಿರುವುದು ಕಂಡು ಬಂದಿದೆ.  ಅಂಗನವಾಡಿಗಳ ಸುಧಾರಣೆಯಾಗದೆ ಅಪೌಷ್ಟಿಕತೆ ನಿವಾರಣೆಯ ಉದ್ದೇಶ ಈಡೇರಲಾರದು.ಅಲ್ಲಿನ ಅವ್ಯವಸ್ಥೆಗೆ ಅಂಗನವಾಡಿ ಕಾರ್ಯಕರ್ತೆಯರನ್ನಷ್ಟೇ ಹೊಣೆ ಮಾಡಲಾಗದು, ಮೇಲಾಧಿಕಾರಿಗಳ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರ ಇದಕ್ಕೆ ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿಯೇ ಅಪೌಷ್ಟಿಕತೆಯ ನಿವಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.ಅಂಗನವಾಡಿಗಳ ಕರ್ತವ್ಯಲೋಪಕ್ಕೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ಹೇಳಿರುವುದು ಸರಿಯಾದ ಕ್ರಮ. ಈ ಎಚ್ಚರಿಕೆ, ಮಾತಿನಲ್ಲಿಯೇ ಉಳಿಯದೆ ಕಾರ್ಯರೂಪಕ್ಕೆ ಬಂದರೆ ನಿಷ್ಕ್ರಿಯಮತ್ತು ಭ್ರಷ್ಟರಾಗಿರುವವರಲ್ಲಿ ಭಯ ಹುಟ್ಟಬಹುದು.ಅದೇ ರೀತಿ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳಿಗಾಗಿ ಪ್ರತಿ ಜಿಲ್ಲೆಯಲ್ಲಿ 60 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಆಸ್ಪತ್ರೆಯನ್ನು ತೆರೆಯಬೇಕೆಂಬ ಸಲಹೆ ಕೂಡಾ ಸ್ವಾಗತಾರ್ಹವಾದುದು.ಆಸ್ಪತ್ರೆಗಳನ್ನು ತೆರೆದರಷ್ಟೆ ಸಾಲದು, ಅಲ್ಲಿಗೆ ಔಷಧಿಯೂ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಸಮರ್ಥ ವೈದ್ಯರನ್ನು ನೇಮಿಸಬೇಕು. ಇವೆಲ್ಲವು ಸಾಧ್ಯವಾಗಬೇಕಾದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾನವೀಯತೆಯಿಂದ ನಡೆದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry