ಕರ್ತವ್ಯಲೋಪವಾದರೆ ಗದಾಪ್ರಹಾರ: ಸಿಎಂ ಎಚ್ಚರಿಕೆ

7

ಕರ್ತವ್ಯಲೋಪವಾದರೆ ಗದಾಪ್ರಹಾರ: ಸಿಎಂ ಎಚ್ಚರಿಕೆ

Published:
Updated:
ಕರ್ತವ್ಯಲೋಪವಾದರೆ ಗದಾಪ್ರಹಾರ: ಸಿಎಂ ಎಚ್ಚರಿಕೆ

ಮಂಡ್ಯ: ಆಡಳಿತದಲ್ಲಿ ಪಾರದರ್ಶಕತೆ ಇರಲಿ. ಸಾರ್ವಜನಿಕರ ಅರ್ಜಿಗಳು ಮತ್ತು ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಒತ್ತು ನೀಡಬೇಕು. ಅದೇ ಸಂದರ್ಭದಲ್ಲಿ ಕರ್ತವ್ಯಲೋಪ ಸಂದರ್ಭದಲ್ಲಿ ಸರ್ಕಾರ ಗದಾಪ್ರಹಾರ ಮಾಡಲು ಹಿಂದೆ ಸರಿಯುವುದ್ಲ್ಲಿಲ ಎಂಬುದನ್ನು ಅಧಿಕಾರಿಗಳು ಗಮನಿಸಬೇಕು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಶುಕ್ರವಾರ ಎಚ್ಚರಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿದ ಅವರು, ವಸತಿ, ಗಂಗಾ ಕಲ್ಯಾಣ ಯೋಜನೆ ಸೇರಿ ಕೆಲ ಯೋಜನೆ ಗಳಲ್ಲಿ ಸಾಧನೆ ತೃಪ್ತಿಕರವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನೀರು, ಆರೋಗ್ಯ, ಶಿಕ್ಷಣ, ರಸ್ತೆ ಮತ್ತು ವಸತಿ ತಮ್ಮ ಸರ್ಕಾರದ ಆದ್ಯತಾ ಕ್ಷೇತ್ರಗಳು. ಮುಖ್ಯಮಂತ್ರಿಯಾಗಿ ಪಾರದರ್ಶಕ ಆಡಳಿತ ನೀಡಲು ನಾನು ಒತ್ತು ನೀಡಿದ್ದು, ಜಿಲ್ಲಾಮಟ್ಟ ಸೇರಿದಂತೆ ಎಲ್ಲ ಹಂತದಲ್ಲಿಯೂ ಇದನ್ನೇ ನಿರೀಕ್ಷಿಸುತ್ತೇನೆ. ತ್ವರಿತಗತಿಯ ಕಡತ ವಿಲೇವಾರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.ಲೋಕೋಪಯೋಗಿ ಮತ್ತು ಸೆಸ್ಕ್‌ನ ಕೆಲ ಅಧಿಕಾರಿಗಳಿಗೆ ಎಚ್ಚರಿಕೆಯ ಮಾತೂ ಆಡಿದ ಅವರು, ಮೊದಲ ಭೇಟಿಯಲ್ಲೇ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಭಾವಿಸಬೇಡಿ. `ಡಿ ಗ್ರೂಪ್~ ನೌಕರರ ಜೊತೆಗೂ ಚೆನ್ನಾಗಿ ಮಾತನಾಡಲು ಬಯಸುವವ ನಾನು. ಗದೆ ಬಗಲಲ್ಲೇ ಇರುತ್ತದೆ. ಅಗತ್ಯ ಬಂದರೆ ಗದಾಪ್ರಹಾರ ಮಾಡುವುದು ಖಚಿತ ಎಂದು ನಿಲುವು ಸ್ಪಷ್ಟಪಡಿಸಿದರು.ಚಟಾಕಿ: ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಮೊದಲ ಸಭೆಯಲ್ಲಿಯೇ ಎಚ್ಚರಿಕೆಯ ಮಾತುಗಳ ನಡುವೆಯೇ ಹಾರಿಸಿದ ಅವರು ಮೇಲಿನ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಯನ್ನು ವಿಶ್ವಾಶಕ್ಕೆ ಪಡೆದು ಕೆಲಸ ಮಾಡಿಸಬೇಕು ಎಂದರು.ಸೆಸ್ಕ್ ಇಲಾಖೆಯ ಅಧಿಕಾರಿಯೊಬ್ಬರ ವಿರುದ್ಧ ಶಾಸಕರಾದ ಪುಟ್ಟರಾಜು, ಸುರೇಶ್‌ಗೌಡ ಅವರು ಕಟುಟೀಕೆ ಮಾಡಿದಾಗ, `ನೀವು ಇಲ್ಲೇ ಕೆಲಸ ಮಾಡಬೇಕಾ, ಬೇರೆ ಕಡೆ ಹೋಗಲು ಸಿದ್ಧರಿದ್ದೀರಾ~ ಎಂದು ಪ್ರಶ್ನಿಸಿದರು.

ಅವರನ್ನು ಕಳುಹಿಸಿ ಎಂದು ಶಾಸಕರು ಒತ್ತಾಯಿಸಿದಾಗ, `ಪಾಕಿಸ್ತಾನಕ್ಕೆ ಕಳುಹಿಸಲು ಆಗುತ್ತದಾ? ಬೇರೆ ಜಿಲ್ಲೆಗೆ ಕಳುಹಿಸಬೇಕು. ಅಲ್ಲಿಯೂ ಅದೇ. ಮಂಡ್ಯದ್ಲ್ಲಲೇ ಅವರನ್ನು ಸರಿಪಡಿಸಲು ಆಗದಿದ್ದರೇ ಹೇಗೆ? ಎಂದು ಪ್ರಶ್ನಿಸಿದರು.ಶಾಸಕ ಎ.ಬಿ.ರಮೇಶ್‌ಬಾಬು ಅವರು, ರಸ್ತೆ ಅಭಿವೃದ್ಧಿಗೆ ಪ್ರತಿ ತಾಲ್ಲೂಕಿಗೂ ಐದು ಕೋಟಿ ಕೊಡಬೇಕು ಎಂಬ ಮನವಿಯನ್ನು ಮತ್ತೆ ಮತ್ತೆ ಉಲ್ಲೇಖಿಸಿದಾಗ, `ನೀವು ಮೈಕ್ ಬೇರೆಯವರಿಗೆ ಕೊಡಿ. ಇಲ್ಲದಿದ್ದರೆ ಕೊಡುವುದಿಲ್ಲ~ ಎಂದರು.ಮಲತಾಯಿ ಧೋರಣೆ: ಜಿಲ್ಲೆಯ ಬಗೆಗೆ ಎಲ್ಲ ಮುಖ್ಯಮಂತ್ರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ನೀವು ಹಾಗೇಮಾಡಬೇಡಿ ಎಂದು ರಮೇಶ್‌ಬಾಬು ಕೋರಿದಾಗ, `ಎಂಥ ದೊಡ್ಡ ಅಪವಾದ~ ಎಂದರು.

ಹಿಂದೆಯೇ, ಆದರೂ ಎಸ್.ಎಂ.ಕೃಷ್ಣ ಮತ್ತು ಎಚ್.ಡಿ.ದೇವೇಗೌಡ ಅವರ ಬಗೆಗೂ ನೀವು ಇಂಥ ಆರೋಪ ಮಾಡಬಾರದಿತ್ತು ಎಂದು ವ್ಯಂಗ್ಯವಾಡಿದರು. ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ವಿವಿಧ ಅಭಿವೃದ್ಧಿಕಾರ್ಯಗಳ ಪ್ರಗತಿಯ ವಿವರ ನೀಡಿದರು.`ಪರಿಶಿಷ್ಟರ ಪ್ರಗತಿಗೆ ಶೇ 25 ಹಣ ಕಾದಿರಿಸಿ: ದಲಿತ ಸಂಘರ್ಷ ಸಮಿತಿ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟರ ಪ್ರಗತಿಗಾಗಿ ಶೇ 25ರಷ್ಟು ಹಣವನ್ನು ಕಾದಿರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲಾಪಂಚಾಯಿತಿ ಆವರಣದಲ್ಲಿ ಧರಣಿ ನಡೆಸಿ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ದಸಂಸ ಮುಖಂಡರು, ಕಾರ್ಯಕರ್ತರು, ರಾಜ್ಯದೆಲ್ಲಡೆ ಮಲ ಹೊರುವ ಪದ್ಧತಿ ಮರುಕಳಿಸದಂತೆ ಕ್ರಮವಹಿಸಬೇಕು. ಈಗ ಕೋಲಾರದಲ್ಲಿ ಚರಂಡಿ ಸ್ವಚ್ಛಗೊಳಿಸುವಾಗ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಪಡಿಸಿದರು.ಕನ್ನಡ ಶಾಲೆಗಳನ್ನು ಮುಚ್ಚಬಾರದು, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗಿರುವ ಸಾಲ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿದ್ದ ಮನವಿಯನ್ನು ಸಲ್ಲಿಸಲಾಯಿತು.

ಮುಖಂಡರಾದ ವೆಂಕಟಗಿರಿಯಯ್ಯ, ಅಂದಾನಿ ಸೋಮನಹಳ್ಳಿ, ಸತ್ಯ, ಮರಂಕಯ್ಯ, ಡಿ.ಕೆ.ಅಂಕಯ್ಯ, ನಾಗರಾಜು ಮತ್ತಿತರರು ಪ್ರತಿಭಟನೆಯಲ್ಲಿದ್ದರು.ಮೂಲಸೌಕರ್ಯ ಒದಗಿಸಿ: ಮನವಿ

ಮಂಡ್ಯ ನಗರದ ಬೀಡಿ ಕಾರ್ಮಿಕರ ಬಡಾವಣೆಗೆ ಮೂಲಸೌಕರ್ಯ ಒದಗಿಸ ಬೇಕು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಮತ್ತು ಕರವೇ ಕಾರ್ಯಕರ್ತರು ಶುಕ್ರವಾರ ಪ್ರತಿಭಟಿಸಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದರು.ಜಿಲ್ಲಾ ಘಟಕದ ಆಧ್ಯಕ್ಷ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮನಿವಾಸಿಗಳು, ಬಡಾವಣೆಯಲ್ಲಿ ನೀರು,ಚರಂಡಿ, ರಸ್ತೆ ಸೌಲಭ್ಯವು ಇಲ್ಲದೇನಿವಾಸಿಗಳು ಇನ್ನಿಲ್ಲದ ಪಡಿಪಾಟಲು ಪಡುವಂತಾಗಿದೆ ಎಂದರು.ಈ ಸಂಬಂಧ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಜಿಲ್ಲಾಡಳಿತ, ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಸರ್ಕಾರ ಇತ್ತ ಗಮನಹರಿಸಬೇಕು ಎಂದು ಕೋರಲಾಗಿದೆ. ಕರವೇ ಮುಖಂಡರಾದ ಅಶೋಕ, ಮಹಮ್ಮದ್, ಪೀರ್‌ಪಾಶಾ, ನಂಜೇಗೌಡ, ಉಮ್ಮರ್ ದರಾಜ್ ಮತ್ತಿತರರು ಇದ್ದರು.ಪಿಎಸ್‌ಎಸ್‌ಕೆ ಅಭಿವೃದ್ಧಿಗೆ ಮುಂದಿನ ಬಜೆಟ್‌ನಲ್ಲಿ ಹಣ: ಭರವಸೆ

ಪಾಂಡವಪುರ:
ಪಿಎಸ್‌ಎಸ್‌ಕೆ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಿ ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು. ಪಿಎಸ್‌ಎಸ್‌ಕೆಯ ಕಬ್ಬು ಬೆಳೆಗಾರರ ಸಂಘ ಶುಕ್ರವಾರ ಕಾರ್ಖಾನೆಯ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಸರ್ಕಾರ ಈಗಾಗಲೇ 42 ಕೋಟಿ ಹಣ ನೀಡಿದೆ. ಕಾರ್ಖಾನೆಯಲ್ಲಿ ವಿದ್ಯುತ್ ಉತ್ಫಾದನಾ ಘಟಕ, ಡಿಸ್ಟಿಲರಿ, ಎಥೆನಾಲ್ ಹಾಗೂ ರಸಗೊಬ್ಬರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಅಗತ್ಯವಾದ ಸುಮಾರು 185 ಕೋಟಿ ಹಣಕಾಸು ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದರು.ಈ ಸಂಬಂಧ ಚರ್ಚಿಸಲು  ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ, ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ಹಾಗೂ ಕಾರ್ಖಾನೆಯ ಮಾಜಿ ಅಧ್ಯಕ್ಷ ಕೆ.ಎಸ್. ನಂಜುಂಡೇಗೌಡ ಅವರನ್ನು ವಿಧಾನಸೌಧಕ್ಕೆ  ಆಹ್ವಾನಿಸಿರುವ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ಕಾರ್ಖಾನೆ ಅಭಿವೃದ್ಧಿ ಬಗ್ಗೆ  ಚರ್ಚೆ ನಡೆಸಿ ಕ್ರಿಯಾಯೋಜನೆ ಸಿದ್ಧಪಡಿಸಿದ ನಂತರ ಮುಂದಿನ ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.ಇಚ್ಚಾಶಕ್ತಿಯ ಕೊರತೆಯಿಂದಾಗಿ ಈ ಹಿಂದಿನ ಸರ್ಕಾರಗಳು ಕಾರ್ಖಾನೆಯ ಅಭಿವೃದ್ಧಿಯ ಬಗ್ಗೆ ಯಾವುದೇ ಕ್ರಮತೆಗೆದುಕೊಂಡಿಲ್ಲ, ಆದರೆ ರೈತರ ಸಂಕಷ್ಟದ ಅರಿವು ತಮಗೆ ತಿಳಿದಿರುವುದರಿಂದ ತಾವು ರೈತರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದಾಗಿ ತಿಳಿಸಿದರು.ಕಳೆದ ವರ್ಷ ಅತಿವೃಷ್ಟಿಯಿಂದ ಬಳಲಿದ ರೈತ ಈ ವರ್ಷ ಅನಾವೃಷ್ಟಿಯ ಹೊಡೆತಕ್ಕೆ ಸಿಕ್ಕಿ ನಲುಗಿದ್ದಾನೆ. ರೈತನ ಉತ್ಪಾದನಾ ವೆಚ್ಚ ದಿನದಿಂದದಿನಕ್ಕೆ ಹೆಚ್ಚುತ್ತಿದ್ದು ಆತನ ಬೆಳೆಗೆ ಮಾತ್ರ ಸೂಕ್ತ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ. ಈ ಎಲ್ಲ ಬೆಳವಣಿಗೆಗಳು ತಮಗೆ ತಿಳಿದಿದ್ದು ರೈತನ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಿಎಂ ಸದಾನಂದಗೌಡ, ಅರಣ್ಯ ಮಂತ್ರಿ ಯೋಗೇಶ್ವರ್, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ, ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪರವರನ್ನು ಕಬ್ಬು ಬೆಳೆಗಾರರ ಸಂಘದಿಂದ ಅಭಿನಂದಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry