ಭಾನುವಾರ, ಜೂನ್ 13, 2021
24 °C

ಕರ್ತವ್ಯಲೋಪ: ಹಳೆಯ ಕಾರು: ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಹಕರೊಬ್ಬರಿಗೆ 2011ರ ಮಾಡೆಲ್ ಕಾರು ನೀಡುವುದಾಗಿ ಹೇಳಿ 2010ರ ಮಾಡೆಲ್ ಕಾರು ನೀಡಿ ಕರ್ತವ್ಯಲೋಪ ಎಸಗಿದ `ವಿನಾಯಕ ಕಾರ್ ಲಿಮಿಟೆಡ್ `ಗೆ ಒಂದು ಲಕ್ಷ ರೂ. ದಂಡ ವಿಧಿಸಿ  3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ಅರ್ಜಿದಾರರಾಗಿರುವ ಇಂದಿರಾನಗರದ ನಿವಾಸಿ ಎಸ್.ಪ್ರಿನ್ಸ್‌ಟನ್ ಅವರಿಗೆ ನೀಡುವಂತೆ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ನಿರ್ದೇಶಿಸಿದೆ.ಅರ್ಜಿದಾರರು 2011 ಮಾಡೆಲ್‌ನ ಸ್ಕೋಡಾ ಲೋರಾ ಕಾರಿಗೆ ಬುಕಿಂಗ್ ಮಾಡಿದ್ದರು. ಕಂಪೆನಿ ಕಾರು ನೀಡಿತು. ಆದರೆ ಅದಕ್ಕೆ ಸಂಬಂಧಿಸಿದ ದಾಖಲೆ ನೀಡಲು ವಿಳಂಬವಾಯಿತು. ನಂತರ ದಾಖಲೆ ಪರಿಶೀಲಿಸಿದಾಗ ಅದು 2010ರ ಮಾಡೆಲ್ ಕಾರು ಎನ್ನುವುದು ತಿಳಿಯಿತು.ಒಂದು ವರ್ಷ ಹಳೆಯ ಕಾರು ನೀಡಿರುವ ಹಿನ್ನೆಲೆಯಲ್ಲಿ ಕಾರಿನ ಬೆಲೆಯನ್ನು ಕಡಿಮೆ ಮಾಡುವಂತೆ ಕಂಪೆನಿಗೆ ಹಲವು ಬಾರಿ ಕೋರಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆದುದರಿಂದ ಅವರು ವೇದಿಕೆ ಮೊರೆ ಹೋದರು.ಕಂಪೆನಿ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯ ಪಟ್ಟಿತು. ಪರಿಹಾರದ ಜೊತೆಗೆ 5ಸಾವಿರ ರೂ. ನ್ಯಾಯಾಲಯದ ವೆಚ್ಚವನ್ನೂ ನೀಡುವಂತೆ ವೇದಿಕೆ ಆದೇಶಿಸಿದೆ.25ಸಾವಿರ ದಂಡ

ಹಣಕಾಸಿನ ವಿವಾದವೊಂದಕ್ಕೆ ಸಂಬಂಧಿಸಿದಂತೆ ಜನತಾ ನ್ಯಾಯಾಲಯದಲ್ಲಿ ಸಮಸ್ಯೆ ಬಗೆಹರಿದಿದ್ದರೂ, ಗ್ರಾಹಕರೊಬ್ಬರಿಗೆ ಹಣ ಪಾವತಿಸುವಂತೆ ಪೀಡಿಸುತ್ತಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ  25 ಸಾವಿರ ರೂ. ದಂಡ ವಿಧಿಸಿ 3ನೇ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ಹಣವನ್ನು ಪರಿಹಾರದ ರೂಪದಲ್ಲಿ ರಾಧೇಕೃಷ್ಣ ಎನ್ನುವವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.ಈ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಿಂದ ಸೋನಿ ಅವರು 4ಸಾವಿರ ರೂಪಾಯಿ ಪಾವತಿಸಿ ವಿಮಾನದ ಟಿಕೆಟ್ ಪಡೆದುಕೊಂಡಿದ್ದರು. ಈ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡಿದ್ದರೂ, ಹಣ ಪಾವತಿಗೆ ಬ್ಯಾಂಕ್ ನೋಟಿಸ್ ನೀಡತೊಡಗಿತು.ಹಣ ಪಾವತಿಗೆ ಸಂಬಂಧಿಸಿದಂತೆ ಕೆಲವೊಂದು ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜನತಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು.  ಅರ್ಜಿದಾರರು ಹಣ ಪಾವತಿ ಮಾಡಿರುವ ಕುರಿತು ನ್ಯಾಯಾಲಯದಲ್ಲಿ ಬ್ಯಾಂಕ್ ಒಪ್ಪಿಕೊಂಡಿತು. ಇದಾದ ಮೇಲೂ ಹಣ ಪಾವತಿ ಮಾಡುವಂತೆ ಅರ್ಜಿದಾರರಿಗೆ ಪುನಃ ಕಿರುಕುಳ ನೀಡಲಾಯಿತು. ಇದರಿಂದ ಬೇಸತ್ತ ಸೋನಿ ಅವರು ವೇದಿಕೆ ಮೊರೆ ಹೋಗಿದ್ದರು. 30 ದಿನಗಳಲ್ಲಿ ಪರಿಹಾರದ ಹಣ ನೀಡುವಂತೆ ವೇದಿಕೆ ಬ್ಯಾಂಕ್‌ಗೆ ಆದೇಶಿಸಿದೆ.ನೀಡದ ನಿರಾಕ್ಷೇಪಣಾ ಪತ್ರ

ಗ್ರಾಹಕರೊಬ್ಬರು ಪಡೆದುಕೊಂಡ ವಾಹನ ಸಾಲವನ್ನು ವಾಪಸು ಮಾಡಿದರೂ, ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ ಟಾಟಾ ಮೋಟಾರ್ಸ್‌ಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.ಈ ದಂಡವನ್ನು ಪರಿಹಾರದ ರೂಪದಲ್ಲಿ ಬಸವನಗುಡಿ ನಿವಾಸಿ ಜಿ. ರಂಗನಾಥ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ ಸೂಚಿಸಿದೆ. 2007ರ ಮೇ ತಿಂಗಳಿನಲ್ಲಿ ರಂಗನಾಥ್ ಅವರು ಸಾಲ ಪಡೆದುಕೊಂಡಿದ್ದರು. ಸಂಪೂರ್ಣ ಹಣವನ್ನು ವಾಪಸು ಮಾಡಿದ್ದರೂ ನಿರಾಕ್ಷೇಪಣಾ ಪತ್ರ ಅವರ ಕೈ ಸೇರಲಿಲ್ಲ. ಇದರಿಂದ ಅವರು ಗ್ರಾಹಕರ ವೇದಿಕೆ ಮೊರೆ ಹೋದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.