ಶುಕ್ರವಾರ, ಮೇ 14, 2021
21 °C

ಕರ್ತವ್ಯಲೋಪ: 3ಗ್ರಾ.ಪಂ.ಕಾರ್ಯದರ್ಶಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಎಸಗಿದ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಯರೇಹಂಚಿನಾಳ, ಹಿರೇಅರಳಿಹಳ್ಳಿ ಹಾಗೂ ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅಮಾನತುಗೊಳಿಸಿದ್ದಾರೆ.ಪ್ರಕರಣ-1:  ಯರೇಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2011-12ನೇ ಸಾಲಿನ ಉದ್ಯೋಗಖಾತ್ರಿ ಯೋಜನೆಯಲ್ಲಿ ನಿಯಮಬಾಹಿರವಾಗಿ ಸುಮಾರು 80 ಕಾಮಗಾರಿಗಳ ಒಟ್ಟು ರೂ. 1. 43 ಕೋಟಿ ರೂಪಾಯಿ ಖರ್ಚು ಮಾಡಿರುವುದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿ.ಆರ್. ತಮ್ಮಣ್ಣ ಅವರನ್ನು ಅಮಾನತುಗೊಳಿಸಲಾಗಿದೆ.2011-12ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಯಲಬುರ್ಗಾ ತಾಪಂ ತಾಲ್ಲೂಕು ಸಾಮಾಜಿಕ ಲೆಕ್ಕ ಪರಿಶೋಧಕರಿಗೆ ಸೂಚಿಸಲಾಗಿತ್ತು.ಅವರ ವರದಿಯಂತೆ, ಸುಮಾರು 80 ಕಾಮಗಾರಿಗಳ 1. 43 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ಈ ಕಾಮಗಾರಿಗಳ ಅಂದಾಜು ಪತ್ರಿಕೆ, ಆಡಳಿತಾತ್ಮಕ ಮಂಜೂರಾತಿ ಮತ್ತು ತಾಂತ್ರಿಕ ಮಂಜೂರಾತಿ ಬಗ್ಗೆ ಯಾವುದೇ ಕಡತ ಲಭ್ಯವಿರುವುದಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ರಿಜಿಸ್ಟರ್‌ಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ.ಒಂದೇ ಕುಟುಂಬಕ್ಕೆ 4 ರಿಂದ 5 ಉದ್ಯೋಗ ಚೀಟಿ ವಿತರಣೆ, ಉದ್ಯೋಗ ಚೀಟಿ ನವೀಕರಿಸದಿರುವುದು, ಎಂ.ಐ.ಎಸ್. ನಲ್ಲಿ ಸಾಮಗ್ರಿ ಬಿಲ್‌ಗಳನ್ನು ಅಳವಡಿಸದೆ ಸಂದಾಯ ಮಾಡಲಾಗಿದೆ.ನಿಯಮ ಉಲ್ಲಂಘಿಸಿ ಉದ್ಯೋಗಖಾತ್ರಿ ಯೋಜನೆಯ 80 ಕಾಮಗಾರಿಗಳ 1. 43 ಕೋಟಿ ರೂ.ಗಳ ವೆಚ್ಚದಲ್ಲೂ ಲೋಪವೆಸಗಿದ್ದಾರೆ ಎಂದು ಲೆಕ್ಕ ಪರಿಶೋಧಕರು ನೀಡಿದ ವರದಿಯನ್ನು ಯಲಬುರ್ಗಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂಗೆ ಸಲ್ಲಿಸಿದ್ದರು.ಪ್ರಕರಣ-2: ಹಿರೇಅರಳಿಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿರುವ ಸುಶೀಲಬಾಯಿ ಹೊನ್ನಳ್ಳಿ ಅವರನ್ನು ಉದ್ಯೋಗಖಾತ್ರಿ ಯೋಜನೆಯಲಿ ನಿಯಮ ಉಲ್ಲಂಘನೆ ಹಾಗೂ ಕರ್ತವ್ಯ ಲೋಪ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.ಸುಶೀಲಾಬಾಯಿ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಎಂ.ಐ.ಎಸ್. ಅನ್ನು ದುರುಪಯೋಗಪಡಿಸಿಕೊಂಡು, ಅನಧಿಕೃತವಾಗಿ ಡಾಟಾ ಎಂಟ್ರಿ ಮಾಡಿರುತ್ತಾರೆ.  ಇದಕ್ಕೆ ಸಂಬಂಧಪಟ್ಟಂತೆ ವಿವರಣೆ ನೀಡುವಂತೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದರೂ, ಯಾವುದೇ ಉತ್ತರ ನೀಡಿಲ್ಲ.ಉದ್ಯೋಗಖಾತ್ರಿ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿವಸಗಳ ಉದ್ಯೋಗ ಒದಗಿಸಲು ಅವಕಾಶವಿದ್ದು, ಇವರು ಈ ಗ್ರಾ.ಪಂ. ವ್ಯಾಪ್ತಿಯ ಸುಮಾರು 80 ಕುಟುಂಬಗಳಿಗೆ ನೂರು ದಿನಕ್ಕಿಂತ ಹೆಚ್ಚಿನ ಉದ್ಯೋಗವನ್ನು ನಿಯಮ ಉಲ್ಲಂಘಿಸಿ ನೀಡಿದ್ದಾರೆ. ಯಾವುದೇ ಸಭೆಗಳಿಗೆ ಹಾಜರಾಗದೆ, ಕರ್ತವ್ಯಲೋಪವೆಸಗಿರುವುದು ಕಂಡುಬಂದಿದೆ.ಪ್ರಕರಣ-3: ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2011-12ನೇ ಸಾಲಿನ 13ನೇ ಹಣಕಾಸು ಯೋಜನೆಯ ಅನುದಾನ 4. 52 ಲಕ್ಷ ರೂಪಾಯಿ  ನಿಯಮಬಾಹಿರವಾಗಿ ಖರ್ಚು ಮಾಡಿದ್ದಲ್ಲದೆ, ವೆಚ್ಚದ ಯಾವುದೇ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದ ಆರೋಪದ ಮೇಲೆ ಕಾರ್ಯದರ್ಶಿ ಶರಣಬಸಯ್ಯಸ್ವಾಮಿ ಮಳೀಮಠ ಅವರನ್ನು ಅಮಾನತುಗೊಳಿಸಲಾಗಿದೆ.ಶರಣಬಸಯ್ಯಸ್ವಾಮಿ ಸರ್ಕಾರದಿಂದ ಗ್ರಾಪಂಗೆ ನೇರವಾಗಿ ಬಂದ 2011-12ನೇ ಸಾಲಿನ 13ನೇ ಹಣಕಾಸು ಯೋಜನೆಯ 4. 52 ಲಕ್ಷ ರೂ.ಗಳ ಅನುದಾನಕ್ಕೆ ಸೂಕ್ತ ಕ್ರಿಯಾ ಯೋಜನೆಯನ್ನು ತಯಾರಿಸಿ, ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ, ತಮಗಿಷ್ಟ ಬಂದ ರೀತಿ ಖರ್ಚು ಮಾಡಿದ್ದರು. ವೆಚ್ಚದ ಬಗ್ಗೆ ಯಾವುದೇ ದಾಖಲೆಗಳನ್ನು ನಿರ್ವಹಿಸಿಲ್ಲ.ನಗದು ಪುಸ್ತಕ ನಿರ್ವಹಣೆ ಮಾಡಿರುವುದಿಲ್ಲ. 2011-12ನೇ ಸಾಲಿಗೆ ಬಿಡುಗಡೆಯಾದ ಅನುದಾನದ ಪೂರ್ಣ ಖರ್ಚಿನ ನಂತರವೂ, ಸುಮಾರು 51800 ರೂ.ಗಳ ನಾಲ್ಕು ಚೆಕ್ ನೀಡಿ, ಕರ್ತವ್ಯ ಲೋಪವೆಸಗಿದ್ದಾರೆ.  ಈ ಹಿನ್ನೆಲೆಯಲ್ಲಿ ಇವರ ಕರ್ತವ್ಯಲೋಪ ಆರೋಪದ ಮೇಲೆ ಗ್ರಾ.ಪಂ. ಕಾರ್ಯದರ್ಶಿ ಶರಣಬಸಯ್ಯಸ್ವಾಮಿ ಮಳೀಮಠ ಅವರನ್ನು ಅಮಾನತುಗೊಳಿಸಲಾಗಿದೆ.ಬರ ಪರಿಸ್ಥಿತಿಯಲ್ಲಿ ಮುಷ್ಕರ ಸಲ್ಲ- ಮನವಿ

ಕೊಪ್ಪಳ:
ಕೊಪ್ಪಳ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಇಂತಹ ಸಂದರ್ಭದಲ್ಲಿ ಯಾವುದೇ ಮುಷ್ಕರವನ್ನು ಮುಂದುವರೆಸದೆ, ತಮ್ಮ ಕರ್ತವ್ಯಕ್ಕೆ ಮರಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಮುಷ್ಕರ ನಿರತ ಗ್ರಾ.ಪಂ. ನೌಕರರಿಗೆ ಮನವಿ ಮಾಡಿದ್ದಾರೆ. ಬಾಕಿ ವೇತನ ಪಾವತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು, ಮುಷ್ಕರ ನಡೆಸುತ್ತಿರುವ ಗ್ರಾಮ ಪಂಚಾಯಿತಿಗಳ ಕರ ವಸೂಲಿಗಾರರು, ನೀರಗಂಟಿಗಳು ಮುಂತಾದ ಸಿಬ್ಬಂದಿ ಮುಷ್ಕರ ಸ್ಥಗಿತಗೊಳಿಸಿ, ಕರ್ತವ್ಯಕ್ಕೆ ಹಿಂದಿರುಗಬೇಕು. ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬಿಸಿಲಿನ ಪ್ರಖರಕ್ಕೆ ಜನ, ಜಾನುವಾರುಗಳು ತತ್ತರಗೊಂಡಿದ್ದು, ಬೇಸಿಗೆಯ ತಿಂಗಳುಗಳು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ ಎಂದಿದ್ದಾರೆ.ಬರದ ಈ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸಿಬ್ಬಂದಿ ಕರ್ತವ್ಯದ ಹೊಣೆಗಾರಿಕೆಯನ್ನು ಮರೆತು, ಮುಷ್ಕರ ನಡೆಸುವುದು ಯಾರಿಗೂ ಶೋಭೆ ತರುವಂತಹ ವಿಷಯವಲ್ಲ. ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗುವ ವಿಷಯಗಳಾಗಿವೆ. ಜಿಲ್ಲಾ ಮಟ್ಟದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಬರ ಪರಿಸ್ಥಿತಿಯ ಸಂದರ್ಭದಲ್ಲಿ ಆತಂಕದಲ್ಲಿರುವ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಸೂಕ್ತ ಮೇವು ಒದಗಿಸುವ ನಿಟ್ಟಿನಲ್ಲಿ ಎಲರ‌್ಲೂ ಕೈಜೋಡಿಸುವುದು ಅಗತ್ಯವಾಗಿದೆ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ನೌಕರರು ಮುಷ್ಕರವನ್ನು ನಿಲ್ಲಿಸಿ, ಕರ್ತವ್ಯಕ್ಕೆ ಹಿಂದಿರುಗುವಂತೆ ಮನವಿ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.