ಕರ್ತವ್ಯ ನಿರ್ಲಕ್ಷಿಸಿದರೆ ಕ್ರಮ: ಡಿ.ಸಿ ಎಚ್ಚರಿಕೆ

7
ವಿಟ್ಲ ಪಂಚಲಿಂಗೇಶ್ವರ ದೇಗುಲ ಬ್ರಹ್ಮಕಲಶೋತ್ಸವ

ಕರ್ತವ್ಯ ನಿರ್ಲಕ್ಷಿಸಿದರೆ ಕ್ರಮ: ಡಿ.ಸಿ ಎಚ್ಚರಿಕೆ

Published:
Updated:

ವಿಟ್ಲ: `ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇಳೆ ಎಲ್ಲ ಇಲಾಖೆಯ ಅಧಿಕಾರಿ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಂತಹವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು' ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜ. 9ರಿಂದ 21ರ ತನಕ ನಡೆಯುವ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಬುಧವಾರ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಅನಂತೇಶ್ವರ ದೇಗುಲದ ಅನಂತ ಸದನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್. ಎನ್. ಕೂಡೂರು ಸಿದ್ಧತೆಗಳ ಬಗ್ಗೆ ತಿಳಿಸಿದರು. ಪೇಟೆಯ ಪ್ರಮುಖ ರಸ್ತೆಗಳ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಲೋಡ್ ಶೆಡ್ಡಿಂಗ್, ಪವರ್‌ಕಟ್ ಮಾಡಬಾರದೆಂದು ತಿಳಿಸಲಾಯತು.ಕುಡಿಯುವ ನೀರಿನ ಪರೀಕ್ಷೆ, ಶೌಚಾಲಯ, ತ್ಯಾಜ್ಯ ಗುಂಡಿ, ಫಾಗಿಂಗ್, ಶುಚಿತ್ವಗೊಳಿಸುವ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಯಿತು. ವಿಟ್ಲದ ಪೇಟೆ ಅತ್ಯಂತ ಇಕ್ಕಟ್ಟಾಗಿದ್ದು, ಲಕ್ಷಾಂತರ ಜನ ಸೇರುವ ವೇಳೆ ವಾಹನ ದಟ್ಟಣೆ ಆಗದಂತೆ ವಾಹನಗಳನ್ನು ಪಾರ್ಕಿಂಗ್ ಮಾಡುವ ಸ್ಥಳಗಳನ್ನು ಸೂಚಿಸಲಾಯಿತು. ಈ ವ್ಯವಸ್ಥೆ ಸಮರ್ಪಕವಾಗಿ ನಿಭಾಯಿಸಲು ಸಾರಿಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಸೂಚಿಸಿದರು.  ಲೋಕೋಪಯೋಗಿ ಇಲಾಖೆ ವತಿಯಿಂದ ಆಗಬೇಕಾದ ಎಲ್ಲಾ ಸಿದ್ಧತೆ ಕಾರ್ಯಗಳನ್ನು ಶೀಘ್ರವಾಗಿ ಪೂರೈಸಲು ಅಧಿಕಾರಿಗಳಿಗೆ ಸೂಚಿಸಿದರು. ದೇವಸ್ಥಾನ ರಸ್ತೆಯಲ್ಲಿ ಸಂತೆ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಹೆಚ್ಚುವರಿ ಸಿಬ್ಬಂದಿ ನೀಡುವಂತೆ ಸೂಚಿಸಲಾಯಿತು. ಬ್ರಹ್ಮಕಲಶೋತ್ಸವದ ಪ್ರಮುಖ ದಿನಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿರ್ಣಯಿಸಲಾಯಿತು.ಎರಡು ತಾಸುಗಳ ವರೆಗೆ ಈ ಸಭೆ ನಡೆಯಿತು. ಈ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀಧಾಮ ಮಾಣಿಲ ಮೋಹನದಾಸ ಸ್ವಾಮೀಜಿ, ಕಾರ್ಯಾಧ್ಯಕ್ಷ ಎಚ್.ಜಗನ್ನಾಥ ಸಾಲ್ಯಾನ್, ಶಾಸಕಿ ಮಲ್ಲಿಕಾಪ್ರಸಾದ್ ಭಂಡಾರಿ, ಜಿ.ಪಂ. ಸದಸ್ಯೆ ಕೆ.ಟಿ.ಶೈಲಜಾ ಭಟ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಗೋಪಾಲ ನಾಯಕ್, ವಿಭಾಗಾಧಿಕಾರಿ ವೆಂಕಟೇಶ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಕೃಷ್ಣಪ್ಪ, ಪುತ್ತೂರು ಎಎಸ್‌ಪಿ ಅನುಚೇತ್ ಮೊದಲಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry