ಮಂಗಳವಾರ, ಜೂನ್ 22, 2021
22 °C

ಕರ್ತವ್ಯ ನಿರ್ಲಕ್ಷ್ಯ: ವೈದ್ಯರ ವರ್ಗಾವಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೆ ಮಗು ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ. ಗರ್ಭಿಣಿಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಬೇಜವಾಬ್ದಾರಿಯಿಂದ ವರ್ತಿಸುವ ಡಾ.ಶಮಾ ಪರ್ವಿನ್ ಅವರನ್ನು ತಕ್ಷಣ ವರ್ಗಾವಣೆ ಮಾಡಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಮುತ್ತಿಗೆ ಹಾಕಿದ ಸಾರ್ವಜನಿಕರು ಹಲವಾರು ದಿನಗಳಿಂದ ಇಲ್ಲಿನ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನೆ ನಡೆಸಿದರು.ಮಹಿಳೆಯರು ಆಸ್ಪತ್ರೆಗೆ ಬಂದರೆ ಕೂಡಲೇ ಸೂಕ್ತ ಚಿಕಿತ್ಸೆ ನೀಡದೆ ಸತಾಯಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ತುರ್ತು ಚಿಕಿತ್ಸೆಯನ್ನು ಪಡೆಯಲು ಧಾವಿಸುವ ಮಹಿಳೆಯರಿಗೆ ವೈದ್ಯರು ಎಂದೂ ಸಕಾಲಕ್ಕೆ ಲಭ್ಯವಾಗಿಲ್ಲ. ಇದನ್ನು ಪ್ರಶ್ನಿಸಿದರೆ ಅಹಂಕಾರದಿಂದ ವರ್ತಿಸುತ್ತಾರೆ ಎಂದು ಸಾರ್ವಜನಿಕರು ದೂರಿದರು.ಮೂರು ದಿನಗಳ ಹಿಂದೆ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಅವರನ್ನು ಪರೀಕ್ಷಿಸದೆ 6 ರಿಂದ 8 ಗಂಟೆಗಳ ಕಾಲ ಕಾಯಿಸಿದ್ದಾರೆ. ನಂತರ ಪ್ರಶ್ನಿಸಿದಾಗ ದೌರ್ಜನ್ಯದ ಮಾತುಗಳನ್ನಾಡಿ ವಾರ್ಡ್‌ಗೆ ಸೇರಲು ಚೀಟಿ ಬರೆದು ಕೊಟ್ಟಿದ್ದಾರೆ. ಚೀಟಿಯನ್ನು ನರ್ಸ್‌ಗಳಿಗೆ ತೋರಿಸಿದರೆ ಮೇಲೆ ಹೋಗಿ, ಕೆಳಗೆ ಹೋಗಿ ಎಂದು ಗರ್ಭಿಣಿಯನ್ನು ಓಡಾಡಿಸಿದ್ದಾರೆ. ಹೆರಿಗೆ ನೋವು ತೀವ್ರವಾಗಿ ಕೂಡಲೇ ಚಿಕಿತ್ಸೆಗಾಗಿ ಆಗ್ರಹಿಸಿದಾಗ ಜಿಲ್ಲಾಸ್ಪತ್ರೆಗೆ ಹೋಗಲು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ.ಪೋಷಕರು ಕೂಡಲೇ  ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಮಗು ಸಾವಿಗಿಡಾಗಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.ಈ ಹಿಂದೆಯೂ ಈ ರೀತಿ ಹಲವು ಘಟನೆಗಳು ನಡೆದಿವೆ. ಮೇಲಾಧಿಕಾರಿಗಳಿಗೆ ಕ್ರಮ ಜರುಗಿಸಲು ಮನವಿ ಸಲ್ಲಿಸಿದ್ದರೂ ಯಾರೂ ಸಹ ಕ್ರಮ ಕೈಗೊಂಡಿಲ್ಲ. ಹೀಗೆ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕೂರಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.ಪುರಸಭೆ ಸದಸ್ಯ ವಿ.ವೈ.ಪ್ರಮೋದ್, ಪುರಸಭೆ ಮಾಜಿ ಸದಸ್ಯರಾದ ಆರ್.ಪ್ರಸನ್ನಕುಮಾರ್, ಎಂ.ಚೇತನ್‌ಕುಮಾರ್, ಗಾಡಿ ತಿಪ್ಪೇಸ್ವಾಮಿ, ಕಮಲಮ್ಮ, ಪಿ.ಜ್ಯೋತಿ, ಶಬೀನಾ, ನಾಜಿರಬಾನು, ಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.