ಕರ್ತವ್ಯ ಲೋಪ: ಸೇವೆಯಿಂದ ಅಧಿಕಾರಿಗಳ ವಜಾ

ಗುರುವಾರ , ಜೂಲೈ 18, 2019
28 °C

ಕರ್ತವ್ಯ ಲೋಪ: ಸೇವೆಯಿಂದ ಅಧಿಕಾರಿಗಳ ವಜಾ

Published:
Updated:

ಮೂಡಿಗೆರೆ: ಅರಣ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಇಲಾಖೆಯ ಪಿಸಿಸಿಎಫ್(ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು) ಅವರು ಸೇವೆಯಿಂದಲೇ ವಜಾಗೊಳಿಸಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ.ಅರಣ್ಯ ಇಲಾಖೆಯ ಮೂಡಿಗೆರೆ ವೃತ್ತದಲ್ಲಿ 2007-08 ನೇ ಸಾಲಿನಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ಎಂ.ಸಿ. ಸುರೇಂದ್ರ ಮತ್ತು ಬಣಕಲ್ ವಿಭಾಗದಲ್ಲಿ ಫಾರೆಸ್ಟರ್ ಆಗಿದ್ದ ಕೆ.ಎಂ. ರಾಮಚಂದ್ರ ಸೇವೆಯಿಂದ ವಜಾಗೊಂಡವರು.2007-08 ನೇ ಸಾಲಿನಲ್ಲಿ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಬಣಕಲ್ ವಿಭಾಗದ ಗುತ್ತಿ ಗ್ರಾಮದ ಕಾಲೋನಿಯ ಸಮೀಪದ ಅರಣ್ಯದಲ್ಲಿ ಲಕ್ಷಾಂತರ ಮೌಲ್ಯದ ಕಾಡು ಜಾತಿಯ ಮರಗಳನ್ನು ಕಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂಬ ಆರೋಪ ಇಲಾಖೆಯ ನಾಲ್ವರು ವ್ಯಕ್ತಿಗಳ ಮೇಲಿತ್ತು.ಅದರಲ್ಲಿ ಪ್ರಮುಖವಾಗಿ ವಲಯ ಅರಣ್ಯಾಧಿಕಾರಿಯಾಗಿದ್ದ ಎಂ.ಸಿ. ಸುರೇಂದ್ರ ಮತ್ತು ಬಣಕಲ್ ವಿಭಾಗದಲ್ಲಿ ಫಾರೆಸ್ಟರ್ ಆಗಿದ್ದ ಕೆ.ಎಂ. ರಾಮಚಂದ್ರ ಎಂಬುವರನ್ನು ಕಳೆದ ಜೂನ್ 25 ರಂದು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಇನ್ನುಳಿದ ಜಿ.ಇ. ಮಂಜೇಗೌಡ ಮತ್ತು ಉಪ ವಲಯ ಅರಣ್ಯಾಧಿಕಾರಿ ಟಿ. ಶಿವಪ್ಪ ಎಂಬುವವರಿಗೆ ಒಂದೊಂದು ಭಡ್ತಿ ಕಡಿತದ ಶಿಕ್ಷೆ ವಿಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶಿಸಿದ್ದಾರೆ. ಪ್ರಕರಣದ ಮತ್ತೊರ್ವರಾದ ದಯಾಕರ್ ಎಂಬುವವರನ್ನು ಖುಲಾಸೆಗೊಳಿಸಲಾಗಿದೆ.ಘಟನೆಯ ವಿವರ: 2007 ರ ಜನವರಿ ತಿಂಗಳಿನಲ್ಲಿ ಬಾಳೂರು ಮೀಸಲು ಅರಣ್ಯಕ್ಕೆ ಸೇರಿದ ಗುತ್ತಿ ಕಾಲೋನಿಯ ಸಮೀಪದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅರಣ್ಯ ಜಾಗದಲ್ಲಿ ಲಕ್ಷಾಂತರ ಬೆಲೆ ಬಾಳುವ ಕಾಡು ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಲು ಯತ್ನಿಸಿದ ಪ್ರಕರಣವೊಂದು ದಾಖಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವಾಗ, ದೂರಿನ ಸಾರಂಶವನ್ನು ಮೇಲಧಿಕಾರಿಗಳಿಗೆ ನೀಡುವಾಗ ಮತ್ತು ದೂರಿನ ತನಿಖೆಯ ವೇಳೆ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಇಲಾಖೆಯಲ್ಲಿ ಮೇಲಿನ ಐವರು ವ್ಯಕ್ತಿಯ ಜೊತೆಗೆ  ಈ ದೂರಿನ ವಿಚಾರಣೆ ನಡೆಸಲು ಇಲಾಖೆಯು ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕಗೊಳಿಸಲಾಗಿತ್ತು. ಆದರೆ ಆ ನ್ಯಾಯಾಧೀಶರು ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ಇನ್ನೋರ್ವ ನ್ಯಾಯಾಧೀಶರನ್ನು ನೇಮಕಗೊಳಿಸಿ ಇಲಾಖೆ ತನಿಖೆ ನಡೆಸಲಾಯಿತು.ತನಿಖೆಯ ವೇಳೆ ಕರ್ತವ್ಯಲೋಪ ಕಂಡು ಬಂದ ಹಿನ್ನೆಲೆಯಲ್ಲಿ  ವಲಯ ಅರಣ್ಯಾಧಿಕಾರಿಯಾಗಿದ್ದ ಎಂ.ಸಿ. ಸುರೇಂದ್ರ ಮತ್ತು ಬಣಕಲ್ ವಿಭಾಗ ಫಾರೆಸ್ಟರ್ ಆಗಿದ್ದ ಕೆ.ಎಂ. ರಾಮಚಂದ್ರ ವಜಾಗೊಳಿಸಿ, ಉಳಿದ ಇಬ್ಬರು ಅಧಿಕಾರಿಗಳಿಗೆ ಭಡ್ತಿ ಕಡಿತಗೊಳಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.2007 ರಲ್ಲಿ ಈ ಪ್ರಕರಣವನ್ನು ಕುರಿತು ಅರಣ್ಯ ಇಲಾಖೆಯ ಸಿಬ್ಬಂದಿ ಶಾಮೀಲಾಗಿ ಸರ್ಕಾರಿ ಅರಣ್ಯದಲ್ಲಿ ಮರ ಕಡಿದು ಸಾಗಾಟ ನಡೆಸಿದ್ದಾರೆ ಎಂಬ ಆರೋಪದ ಮಾತುಗಳು ಸಾರ್ವಜನಿಕ ವಲಯದಿಂದ ಬಲವಾಗಿ ಕೇಳಿ ಬಂದಿದ್ದವು. ಮಲೆನಾಡಿನ ಇತಿಹಾಸದಲ್ಲಿ ಅರಣ್ಯ ಅಧಿಕಾರಿಗಳು ಪ್ರಕರಣವೊಂದರಲ್ಲಿ ಸಿಲುಕಿ ವಜಾಗೊಂಡಿರುವ ಪ್ರಥಮ ಘಟನೆ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry