ಗುರುವಾರ , ಮೇ 19, 2022
25 °C
ರಾಷ್ಟ್ರೀಯ ಜೂನಿಯರ್ ಈಜು: ಶ್ರದ್ಧಾ `ಚಿನ್ನ'ದ ಸಾಧನೆ

ಕರ್ನಾಟಕಕ್ಕೆ ಮತ್ತೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಜೂನಿಯರ್ ವಿಭಾಗದಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿರುವ ಕರ್ನಾಟಕ ತಂಡ `ಮುತ್ತಿನ ನಗರಿ'ಯಲ್ಲಿ ಭಾನುವಾರ ಕೊನೆಗೊಂಡ 40ನೇ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 566 ಪಾಯಿಂಟ್‌ಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು.1993ರಿಂದ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಜಯಿಸುತ್ತಾ ಬಂದಿರುವ ಕರ್ನಾಟಕದ ಸ್ಪರ್ಧಿಗಳು ಸತತ 21ನೇ ಸಲ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಮೂಲಕ ಜೂನಿಯರ್ ವಿಭಾಗದಲ್ಲಿ `ನಾವೇ ಚಾಂಪಿಯನ್ನರು' ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಕರ್ನಾಟಕ ಒಟ್ಟು 70 (32 ಚಿನ್ನ, 23 ಬೆಳ್ಳಿ ಹಾಗೂ 15 ಕಂಚು) ಪದಕ ಗೆದ್ದುಕೊಂಡಿತು. ಮಹಾರಾಷ್ಟ್ರ ಒಟ್ಟು 67 (22 ಚಿನ್ನ, 18 ಬೆಳ್ಳಿ ಮತ್ತು 27 ಕಂಚು) ರನ್ನರ್ ಅಪ್ ಸ್ಥಾನ ಪಡೆಯಿತು.ಶ್ರದ್ಧಾಗೆ ಮೂರು ಪದಕ: ನೆಟ್ಟಕಲ್ಲಪ್ಪ ಈಜು ಕೇಂದ್ರದ ಶ್ರದ್ಧಾ ಸುಧೀರ್ ಕೊನೆಯ ದಿನವಾದ ಭಾನುವಾರ ಮೂರು ಪದಕಗಳನ್ನು ಗೆದ್ದುಕೊಂಡರು. ಬಾಲಕಿಯರ ಗುಂಪು-2ರ 400ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಶ್ರದ್ಧಾ (ಕಾಲ: 5:33.57ಸೆ) ಬೆಳ್ಳಿ ಜಯಿಸಿದರೆ, 200ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ (2:56.61ಸೆ.) ಚಿನ್ನ ಜಯಿಸಿದರು. ಕರ್ನಾಟಕದ ಸ್ಪರ್ಧಿಗೆ ಇನ್ನೊಂದು ಪದಕ 4ಗಿ100ಮೀ. ಮೆಡ್ಲೆ ರಿಲೇಯಲ್ಲಿ ಬಂತು. ಎಚ್. ರಂಜನಾ, ಶ್ರದ್ಧಾ, ದಾಮಿನಿ ಕೆ. ಗೌಡ ಮತ್ತು ಕೆ. ಚಂದನಾ ಅವರನ್ನೊಳಗೊಂಡ ರಿಲೇ ತಂಡ ನಾಲ್ಕು ನಿಮಿಷ 55.32ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಸ್ವರ್ಣ ಸಾಧನೆ ಮಾಡಿತು.ಕರ್ನಾಟಕದ ಸ್ಪರ್ಧಿಗಳಾದ ಮಿತೇಶ್ ಮನೋಜ್ ಕುಂಟೆ (800ಮೀ. ಫ್ರೀಸ್ಟೈಲ್, ಕಾಲ: 8:46.62ಸೆಕೆಂಡ್)-ಚಿನ್ನ, ಮಹಮ್ಮದ್ ಯಾಕೂಬ್ ಸಲೀಂ (800ಮೀ. ಫ್ರೀಸ್ಟೈಲ್, ಕಾಲ: 8:48.30ಸೆಕೆಂಡ್)-ಬೆಳ್ಳಿ, ಎಸ್.ಪಿ. ಲಿಖಿತ್ (200ಮೀ. ಬ್ರೆಸ್ಟ್ ಸ್ರೋಕ್, ಕಾಲ: 2:26.44ಸೆ.)-ಚಿನ್ನ, ರಕ್ಷಿತ್ ಯು. ಶೆಟ್ಟಿ (100ಮೀ. ಬಟರ್ ಫ್ಲೈ, ಕಾಲ: 57.66) -ಬೆಳ್ಳಿ, ಆರ್. ಸಂಜೀವ್ (ಗುಂಪು-2ರ 1500ಮೀ. ಫ್ರೀಸ್ಟೈಲ್, ಕಾಲ: 17:06.71) -ಕಂಚು, ಸಂಜೀವ್ (100ಮೀ. ಬಟರ್ ಫ್ಲೈ, ಕಾಲ: 1:03.86ಸೆ.) ಚಿನ್ನ ಜಯಿಸಿದರು.4ಗಿ100ಮೀ. ಮೆಡ್ಲೆ ರಿಲೇಯಲ್ಲಿ ಎಂ. ಅರವಿಂದ್, ಲಿಖಿತ್, ರಕ್ಷಿತ್ ಹಾಗೂ ಮಿತೇಶ್ ಅವರನ್ನೊಳಗೊಂಡ ಕರ್ನಾಟಕ ತಂಡ (ಕಾಲ: 4:04.56ಸೆ.) ಗುರಿ ಮುಟ್ಟಿ ಕರ್ನಾಟಕದ ಸ್ಪರ್ಧಿಗಳೇ 2011ರಲ್ಲಿ ನಿರ್ಮಿಸಿದ್ದ ದಾಖಲೆ (ಕಾಲ: 4:07.71ಸೆ.) ಅಳಿಸಿ ಹಾಕಿದರು.ಬಾಲಕಿಯರ ಗುಂಪು-1ರ 100ಮೀ. ಫ್ರೀಸ್ಟೈಲ್‌ನಲ್ಲಿ ವಿ. ಮಾಳವಿಕಾ (ಕಾಲ: 1:01.59ಸೆ)-ಬೆಳ್ಳಿ, ಗುಂಪು-2ರ 100ಮೀ. ಫ್ರೀಸ್ಟೈಲ್‌ನಲ್ಲಿ ಚಂದನಾ (ಕಾಲ: 1:04.46ಸೆ.)-ಬೆಳ್ಳಿ ಜಯಿಸಿತು. 4ಗಿ100ಮೀ. ಮೆಡ್ಲೆ ರಿಲೇಯಲ್ಲಿ ಕೆ. ಹರಿಶ್ರೀ ಜೆ. ರಾಯ್, ಚಾರು ಹಂಸಿನಿ, ಸಿಯಾ ಮಂಜೇಶ್ವರಿ ಮತ್ತು ಮಾಳವಿಕಾ ಅವರನ್ನೊಳಗೊಂಡ ಕರ್ನಾಟಕ (ಕಾಲ: 4:52.97ಸೆ.) ಕಂಚಿಗೆ ತೃಪ್ತಿಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.