ಬುಧವಾರ, ಡಿಸೆಂಬರ್ 11, 2019
22 °C

ಕರ್ನಾಟಕದಲ್ಲಿ ಕೊನೆಯ ಗಂಧರ್ವ ಗಾಯನ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ಕೊನೆಯ ಗಂಧರ್ವ ಗಾಯನ..

ಹುಬ್ಬಳ್ಳಿ: ‘ಭೀಮಣ್ಣ ಕೊನೆಯ ಬಾರಿ ಹಾಡಿದ್ದು ಕರ್ನಾಟಕದಲ್ಲಿ. 2004ರಲ್ಲಿ ಮೈಸೂರಿನ ದಸರಾ ಮಹೋತ್ಸವದಲ್ಲಿ ಹಾಡಿದ್ದೇ ಕೊನೆ. ಮತ್ತೆ ಅವನು ಹಾಡಲಿಲ್ಲ. ಅವನ ಆರೋಗ್ಯ ಕೆಟ್ಟಿತ್ತು. ಹೀಗಾಗಿ ಮತ್ತೆ ಹಾಡಲಾಗಲಿಲ್ಲ’ ಎಂದು ಭೀಮಸೇನ ಜೋಷಿ ಕುರಿತು ನೆನಪಿಸಿಕೊಂಡರು ಗಂಗೂಬಾಯಿ ಹಾನಗಲ್ ಪುತ್ರ ಬಾಬುರಾವ್ ಹಾನಗಲ್.

ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ನೆನಪುಗಳು ಇಲ್ಲಿವೆ.‘ಭೀಮಣ್ಣನನ್ನು ಏಕವಚನದಲ್ಲೇ ಮಾತಾಡಿಸುತ್ತಿದ್ದೆವು. ಅಷ್ಟೊಂದು ಸಲಿಗೆ ಇತ್ತು. ನಮ್ಮ ತಾಯಿ ಹಾಗೂ ಭೀಮಣ್ಣ ಒಟ್ಟಿಗೇ ಸವಾಯಿ ಗಂಧರ್ವರ ಬಳಿ ಶಾಸ್ತ್ರೀಯ ಸಂಗೀತ ಕಲಿತರು. ಆಗ ಕುಂದಗೋಳದಲ್ಲಿಯ ಸವಾಯಿ ಗಂಧರ್ವರ ಮನೆಯಲ್ಲಿಯೇ ಭೀಮಣ್ಣ ಇದ್ದ. ಗುರುಕುಲ ಪದ್ಧತಿಯಂತೆ ಕಲಿಯುತ್ತಿದ್ದ. ಅದು 1940ರ ಅಂದಾಜು ಇರಬಹುದು. ಆಗ ನಳ ಇರಲಿಲ್ಲ. ಹೊಂಡದಿಂದ 15-20 ಕೊಡ ನೀರನ್ನು ನಿತ್ಯ ತರುತ್ತಿದ್ದ. ನಮ್ಮ ತಾಯಿ ನಿತ್ಯ ಸಂಜೆ ಐದು ಗಂಟೆಯ ರೈಲು ಹಿಡಿದುಕೊಂಡು ಹುಬ್ಬಳ್ಳಿಯಿಂದ ಕುಂದಗೋಳಕ್ಕೆ ಹೋಗುತ್ತಿದ್ದರು. ಅಲ್ಲಿ ಸವಾಯಿ ಗಂಧರ್ವರ ಬಳಿ ಕಲಿತು ರಾತ್ರಿ 11ರ ರೈಲಿಗೆ ವಾಪಸು ಬರುತ್ತಿದ್ದರು. ಆಗ ಕುಂದಗೋಳದಲ್ಲಿ ಕರೆಂಟಿರಲಿಲ್ಲ. ಭೀಮಣ್ಣನೇ ಕಂದೀಲು ಹಿಡಿದುಕೊಂಡು ನಮ್ಮ ತಾಯಿಯನ್ನು ರೈಲು ನಿಲ್ದಾಣದವರೆಗೆ ಬಿಡುತ್ತಿದ್ದ. ಆಗ ಅವನಿಗೆ 20 ವರ್ಷ ಇರಬೇಕು. ನಾಲ್ಕು ವರ್ಷಗಳವರೆಗೆ ಕುಂದಗೋಳದಲ್ಲಿದ್ದ. ಕಾಯಿಪಲ್ಲೆಗೆ, ಔಷಧಿಗೆ ಹೀಗೆ ಎಲ್ಲಕ್ಕೂ ಹುಬ್ಬಳ್ಳಿಗೆ ಬರಬೇಕಿತ್ತು. ಬಂದಾಗೆಲ್ಲ ನಮ್ಮನೆಗೆ ತಪ್ಪದೇ ಬರುತ್ತಿದ್ದ.‘1946ರಲ್ಲಿ ಭೀಮಣ್ಣ ಶಿಷ್ಯತ್ವ ಪಡೆದ. ಅದಕ್ಕೆ ಗಂಡಾ ಸಮಾರಂಭ ಎನ್ನುತ್ತಾರೆ. ಅದು ನಡೆದದ್ದು ಹುಬ್ಬಳ್ಳಿಯಲ್ಲೇ. ಗುಡ್‌ಶೆಡ್ ರಸ್ತೆಯಲ್ಲಿದ್ದ ರೈಲ್ವೆ ಇನ್‌ಸ್ಟಿಟ್ಯೂಟ್ ಸಂಸ್ಥೆಯಲ್ಲಿ. ಸವಾಯಿ ಗಂಧರ್ವರು ತಮ್ಮ ಶಿಷ್ಯನೆಂದು ಸ್ವೀಕರಿಸಿದರು ಆಗ. ಹುಬ್ಬಳ್ಳಿಯಲ್ಲಿಯೇ ಭೀಮಣ್ಣನ ಮೊದಲ ಸಂಗೀತ ಕಛೇರಿ ನಡೆದದ್ದು. ನಮ್ಮ ತಂದೆ ಗುರಾಚಾರ್ಯ ಕೌಲಗಿ ಕಛೇರಿ ಏರ್ಪಡಿಸಿದ್ದರು. 1944ರಲ್ಲಿ ಹುಬ್ಬಳ್ಳಿ ಆರ್ಟ್ ಸರ್ಕಲ್ ಎಂಬ ಸಂಸ್ಥೆಯನ್ನು ಶುರು   ಮಾಡಿದೆವು. ಒಟ್ಟು 25 ಸಂಗೀತ ಕಛೇರಿಯನ್ನು ಭೀಮಣ್ಣ ಕೊಟ್ಟ. ಆರ್ಟ್ ಸರ್ಕಲ್ಲಿನ ಬೆಳ್ಳಿಹಬ್ಬಕ್ಕೆ (1970) ಹಾಗೂ ಸುವರ್ಣ ಮಹೋತ್ಸವಕ್ಕೆ (1994) ಬಂದು ಕಛೇರಿ ಕೊಟ್ಟಿದ್ದ.

ಸಂತವಾಣಿ

 ಮರಾಠಿಯಲ್ಲಿ ನಾಟ್ಯ ಸಂಗೀತ ಹಾಡುತ್ತಿದ್ದ ಭೀಮಣ್ಣ ಶಾಸ್ತ್ರೀಯ ಸಂಗೀತದಲ್ಲಿ ಶಿಖರ ಮುಟ್ಟಿದವರು. ಜೊತೆಗೆ ಉಪಶಾಸ್ತ್ರೀಯ ಸಂಗೀತದ ಠುಮ್ರಿ, ದಾಧ್ರಾ ಗಾಯನವನ್ನು ಹಾಡುತ್ತಿದ್ದ.ಮುಖ್ಯವಾಗಿ ಸಂತವಾಣಿಯನ್ನು ಪರಿಚಯಿಸಿ, ಅದನ್ನು ಪ್ರಸಿದ್ಧಿಗೊಳಿಸಿದ. ಕನ್ನಡ, ಮರಾಠಿ ಹಾಗೂ ಹಿಂದಿ ಭಕ್ತಿಗೀತೆ ಹಾಡುತ್ತಿದ್ದ. ಹೀಗಾಗಿ ಆತ ಸಂತವಾಣಿ ಕಾರ್ಯಕ್ರಮ ನೀಡಿದ. ಈಗ ಹಾಡಿದರೆ, ಇನ್ನೊಬ್ಬರು ವಿವರಣೆ ಕೊಡುತ್ತಿದ್ದರು. ಆಮೇಲೆ ದಾಸವಾಣಿ, ವಚನವಾಣಿ ಶುರುವಾದವು. ಹುಬ್ಬಳ್ಳಿಯಲ್ಲಿ ಶಂಕರಮಠ ಕಟ್ಟಲು ಹಾಗೂ ಧಾರವಾಡದಲ್ಲಿ ಪವನ್ ಇಂಗ್ಲಿಷ್ ಮಾಧ್ಯಮ ಶಾಲೆ ಕಟ್ಟಲು ಸಹಾಯಾರ್ಥವಾಗಿ ಸಂತವಾಣಿ ಕಾರ್ಯಕ್ರಮಗಳನ್ನು ನೀಡುತ್ತಿದ್ದ.

ಪ್ರತಿಕ್ರಿಯಿಸಿ (+)