ಶುಕ್ರವಾರ, ಮೇ 27, 2022
27 °C

ಕರ್ನಾಟಕದಲ್ಲಿ ನರ್ಸಿಂಗ್ ಮಾಫಿಯಾ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ರಾಜ್ಯದ ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಯ ಖಾಸಗಿ ನರ್ಸಿಂಗ್ ಕಾಲೇಜುಗಳಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು ಅಂಥ ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಹೇಳಿದರು.ಅವರು ಗುಲ್ಬರ್ಗದ ಆಸ್ಪತ್ರೆಗಳ ಪರಿಶೀಲನೆಯ ಸಂದರ್ಭದಲ್ಲಿ ಈ ವಿಷಯವನ್ನು ಸ್ಪಷ್ಟ ಪಡಿಸಿದರು. ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶ ನೀಡಿ ಯಾವುದೇ ತರಬೇತಿ, ಪ್ರಾಯೋಗಿಕ ಅನುಭವ ಅಥವಾ ಉಪನ್ಯಾಸಗಳಿಲ್ಲದೇ, ಪರೀಕ್ಷೆಗೆ ಅನುವು ಮಾಡಿಕೊಡಲಾಗುತ್ತದೆ.ನಂತರ ಸಾಮೂಹಿಕ ನಕಲು ಮೂಲಕ ಉತ್ತೀರ್ಣರಾಗುವಂತೆ ಮಾಡಲಾಗುತ್ತದೆ. ಯಶಸ್ವಿಯಾಗಿ ಪದವಿ ಪಡೆದು ಹೊರಬರುವ ಈ ಮಾಫಿಯಾದ ಬಗ್ಗೆ ಡಾ.ವೆಂಕಟೇಶ್ ವಿಚಾರಣಾ ಸಮಿತಿಯು ವರದಿ ನೀಡಿದೆ ಎಂದು ವಿವರಿಸಿದರು.ಈ ಸಾಲಿನ ಫಲಿತಾಂಶ ಪ್ರಕಟಿಸುವ ಮುನ್ನ ಉತ್ತರ ಪತ್ರಿಕೆಗಳನ್ನು ಮರು ಪರಿಶೀಲಿಸಲಾಗುವುದು. ಸಾಮೂಹಿಕ ನಕಲಿನ ಸಾಧ್ಯತೆಗಳಿದ್ದಲ್ಲಿ, ಫಲಿತಾಂಶ ತಡೆ ಹಿಡಿದು, ವಿಚಾರಿಸಲಾಗುವುದು ಎಂದರು.ಹೆಚ್ಚುವರಿ ವೈದ್ಯಕೀಯ ಕಾಲೇಜುಗಳಿಲ್ಲ: ಈ ವರ್ಷ ಹೆಚ್ಚುವರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ಸದ್ಯ ಇರುವ ಕಾಲೇಜುಗಳಲ್ಲಿ ಪ್ರವೇಶ ಸಂಖ್ಯೆಯನ್ನು 2,250ಕ್ಕೆ ಹೆಚ್ಚಿಸಲಾಗುವುದು. ಸ್ನಾತಕೋತ್ತರ ಪದವಿಯನ್ನು 334ರಿಂದ 500 ಹೆಚ್ಚಿಸಲು ಚಿಂತಿಸಲಾಗುತ್ತಿದೆ. ಆದರೆ ಖಂಡಿತವಾಗಿಯೂ ಹೊಸ ಕಾಲೇಜನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಸತ್ತ ನಾಯಿಗಳು: ಅಧಿಕಾರಿಗೆ ನೋಟಿಸ್ಗುಲ್ಬರ್ಗ: ‘ಎಕ್ಸ್‌ಟ್ರೀಮ್‌ಲಿ ಸಾರಿ’, ಯಾರಾದರೂ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡಿದರೆ, ಏನು ಸಜೆ ಅಂತ ಗೊತ್ತಾ? ಈ ಬೆಂಕಿ, ಈ ಹೊಲಸು, ಹೊಗೆ, ತ್ಯಾಜ್ಯ ನಿರ್ವಹಣೆಯ ಕನಿಷ್ಠ ಜ್ಞಾನವೂ ಇಲ್ಲವೇ? ಅಧಿಕಾರಿಯನ್ನು ಈ ಕೂಡಲೇ ಅಮಾನತುಗೊಳಿಸಿ  ಎಂದು ಗುಡುಗಿದವರು ವೈದ್ಯಕೀಯ ಸಚಿವ ಎಸ್.ಎ.ರಾಮದಾಸ್.ಸ್ಥಳ: ಸಾರ್ವಜನಿಕ ಆಸ್ಪತ್ರೆಯ ಶವಾಗಾರ ಬಳಿ ಇರುವ ತ್ಯಾಜ್ಯ ವಿಲೇವಾರಿ ಗುಂಡಿ. ಸಂದರ್ಭ: ರಾಮದಾಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವಾಗ, ಸಾರ್ವಜನಿಕರು ಆ ಗುಂಡಿಯಲ್ಲಿ ಮೂರು ಸತ್ತ ನಾಯಿಗಳ ಅವಶೇಷಗಳಿರುವ ಬಗ್ಗೆ  ಗಮನ ಸೆಳೆದಾಗ.ಇದಿಷ್ಟು ನಡೆದಿದ್ದು ಭಾನುವಾರ ಎಸ್.ಎ.ರಾಮದಾಸ್ ಗುಲ್ಬರ್ಗಕ್ಕೆ  ಭೇಟಿ ನೀಡಿ, ಸಾರ್ವಜನಿಕ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜು ವಸತಿ ನಿಲಯವನ್ನು ಪರಿಶೀಲಿಸಿದಾಗ ಈ ಘಟನೆ ಜರುಗಿತು. ಸ್ಥಾನಿಕ ವೈದ್ಯಾಧಿಕಾರಿ ಡಾ.ಆಸಿಫ್ ಅಲಿ ಅವರಿಗೆ ವಿವರಣೆ ಕೇಳಿ ನೋಟಿಸ್ ನೀಡುವಂತೆ ತಾಕೀತು ಮಾಡಿದರು. ಸ್ವಾಸ್ಥ್ಯ ರಕ್ಷಣೆಯ ನಿರ್ವಹಣೆಯ ಹೊಣೆ ಹೊತ್ತವರೇ ಹೀಗಾಡಿದರೆ ಹೇಗ್ರಿ? ಜನರ ಪಾಡು, ನಾಯಿ ಪಾಡಾಗಿದೆಯಲ್ರೀ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.

ಶವಾಗಾರದ ದುಸ್ಥಿತಿ ಬಗ್ಗೆ ಈ ಹಿಂದೆ ‘ಪ್ರಜಾವಾಣಿ’ ಫೋಕಸ್ ಅಂಕಣದಲ್ಲಿ ವರದಿಯನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.