ಕರ್ನಾಟಕದಲ್ಲಿ ರಾವಣ ರಾಜ್ಯ: ಯುವ ಕಾಂಗ್ರೆಸ್ ಟೀಕೆ

7

ಕರ್ನಾಟಕದಲ್ಲಿ ರಾವಣ ರಾಜ್ಯ: ಯುವ ಕಾಂಗ್ರೆಸ್ ಟೀಕೆ

Published:
Updated:

ಹುಬ್ಬಳ್ಳಿ: ರಾಮನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿಯು ಕರ್ನಾಟಕದಲ್ಲಿ ರಾವಣ ರಾಜ್ಯ ನಡೆಸುತ್ತಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ಸಾತವಾ ಟೀಕಿಸಿದರು.ಗುರುವಾರ ನಗರದ ಗದಗ ರಸ್ತೆಯಲ್ಲಿನ ಚಿಲ್ಲಿ ಮೈದಾನದಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ‘ಯುವ ಹಾಗೂ ಸ್ವಚ್ಛ ರಾಜಕಾರಣಕ್ಕಾಗಿ ಯುವ ಜಾಗೃತಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.ದೆಹಲಿಯಲ್ಲಿರುವ ಬಿಜೆಪಿ ನಾಯಕರು ಭ್ರಷ್ಟಾಚಾರದ ವಿರುದ್ಧ ವಿವಿಧೆಡೆ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಈ ರ್ಯಾಲಿ ಆಯೋಜಿಸಲು ಹಣ ಬರುತ್ತಿರುವುದು ಕರ್ನಾಟಕದಿಂದಲೇ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದ ಬಿಜೆಪಿ ನಾಯಕರಿಗೆ ಕೋಟಿಗಟ್ಟಲೇ ಹಣವನ್ನು ನೀಡುತ್ತಿದ್ದಾರೆ. ಈ ಹಣ ಸಂಗ್ರಹಿಸಲು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದರು.ಕಾಂಗ್ರೆಸ್ ಪಕ್ಷದಲ್ಲಿಯೂ ಅನೇಕ ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಇಂತಹ ಕಳಂಕಿತ ನಾಯಕರ ರಾಜೀನಾಮೆಯನ್ನು ತಕ್ಷಣವೇ ಪಡೆದುಕೊಂಡಿದೆ ಎಂದು ಅವರು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಅವರು, ‘ಕರ್ನಾಟಕದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನೋಡಿದರೆ, ಯಾವೊಬ್ಬ ಯುವಕನಿಗೂ ರಾಜಕೀಯದ ಆಸಕ್ತಿ ಉಳಿಯುವುದಿಲ್ಲ’ ಎಂದರು.ರಾಜಕೀಯದಲ್ಲಿ ಯುವಕರನ್ನು ಸೆಳೆಯುವ ಮೂಲಕ ಪರಿವರ್ತನೆ ತರಲು ರಾಹುಲ್ ಗಾಂಧಿ ಚಿಂತನೆ ನಡೆಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಎಲ್ಲರಿಗೂ ಮುಕ್ತಗೊಳಿಸಲಾಗಿದೆ. ಸದಸ್ಯತ್ವ ಅಭಿಯಾನ ನಡೆಸಿದ ನಂತರ ಬೂತ್ ಮಟ್ಟದಿಂದ ಮೇಲ್ಮಟ್ಟದವರೆಗೂ ಚುನಾವಣೆಯ ಮೂಲಕವೇ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಿದಂತಾಗುತ್ತದೆ. ಅಲ್ಲದೆ, ಕಾರ್ಯಕರ್ತರ ಅಭಿಪ್ರಾಯಕ್ಕೂ ಬೆಲೆ ದೊರೆತು ನೆಲಮಟ್ಟದಿಂದಲೇ ಪಕ್ಷಕ್ಕೆ ಶಕ್ತಿ ದೊರೆಯುತ್ತದೆ. ಯುವ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಈ ಮೌನ ಕ್ರಾಂತಿ ಬೇರೆಲ್ಲೂ ಈ ಮೊದಲು ನಡೆದಿಲ್ಲ ಎಂದು ಅವರು ಹೇಳಿದರು.ಕೇಡರ್ ಆಧರಿತವಾಗಿ ಪಕ್ಷದ ಸಂಘಟನೆಯನ್ನು ಕಟ್ಟಲು ಕಾರ್ಯಕ್ರಮಗಳನ್ನು ಯುವ ಕಾಂಗ್ರೆಸ್ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ, ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ಮುಂಬರುವ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಮಾಟಮಂತ್ರದ ನೆಪ ಹೇಳಿಕೊಂಡು ವಿಧಾನಸೌಧಕ್ಕೆ ಹೋಗಲು ಅಂಜುತ್ತಿರುವ ಮುಖ್ಯಮಂತ್ರಿ ಬಿ.ಎಎಸ್.ಯಡಿಯೂರಪ್ಪ ಅವರು ಆರು ಕೋಟಿ ಜನರನ್ನು ಹೇಗೆ ರಕ್ಷಿಸುತ್ತಾರೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಪ್ರಶ್ನಿಸಿದರು.

ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ವಿಶ್ವರಂಜನ್ ಮೊಹಂತಿ, ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷೆ ಶಾನಿಮೋಳ ಉಸ್ಮಾನ್ ಅವರೂ ಮಾತನಾಡಿದರು.ಮಾಜಿ ಸಚಿವರಾದ ಕೆ.ಎನ್.ಗಡ್ಡಿ, ಕೆ.ಬಿ.ಕೋಳಿವಾಡ, ಎ.ಎಂ.ಹಿಂಡಸಗೇರಿ, ಬಿ.ಆರ್.ಯಾವಗಲ್, ಮಾಜಿ ಉಪಸಭಾಪತಿ ಮನೋಹರ ತಹಸೀಲ್ದಾರ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮಾಜಿ ಸಂಸದರಾದ ಐ.ಜಿ.ಸನದಿ, ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಸಿ.ಎಸ್.ಶಿವಳ್ಳಿ, ಜಿ.ಎಸ್.ಪಾಟೀಲ, ಡಿ.ಆರ್.ಪಾಟೀಲ, ಅಜ್ಜಂಪೀರ್ ಖಾದ್ರಿ, ವಿನಯ ಕುಲಕರ್ಣಿ, ಶಿವಾ ನಾಯ್ಕ, ರುಕ್ಮಿಣಿ ಸಾವಕಾರ, ಎಫ್.ಎಚ್.ಜಕ್ಕಪ್ಪನವರ, ಲಕ್ಷ್ಮಿ ಹೆಬ್ಬಾಳಕರ, ಶಕೀರ ಸನದಿ ಮೊದಲಾದವರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮೋಹನ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry