ಕರ್ನಾಟಕದ ತೇಜಸ್ವಿನಿಗೆ ಅರ್ಜುನ ಪ್ರಶಸ್ತಿ, ಗಗನ್‌ಗೆ ಖೇಲ್ ರತ್ನ ಪ್ರದಾನ

7

ಕರ್ನಾಟಕದ ತೇಜಸ್ವಿನಿಗೆ ಅರ್ಜುನ ಪ್ರಶಸ್ತಿ, ಗಗನ್‌ಗೆ ಖೇಲ್ ರತ್ನ ಪ್ರದಾನ

Published:
Updated:
ಕರ್ನಾಟಕದ ತೇಜಸ್ವಿನಿಗೆ ಅರ್ಜುನ ಪ್ರಶಸ್ತಿ, ಗಗನ್‌ಗೆ ಖೇಲ್ ರತ್ನ ಪ್ರದಾನ

ನವದೆಹಲಿ (ಪಿಟಿಐ): ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನದ ಪದಕ ಜಯಿಸಿರುವ ಖ್ಯಾತ ಶೂಟರ್ ಗಗನ್ ನಾರಂಗ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು `ರಾಜೀವ್ ಗಾಂಧಿ ಖೇಲ್ ರತ್ನ~ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ 7.5 ಲಕ್ಷ ರೂಪಾಯಿ ಒಳಗೊಂಡಿದೆ.28 ವರ್ಷದ ರೈಫಲ್ ಶೂಟರ್ ನಾರಂಗ್ 2012ರ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎನ್ನುವ ಗೌರವ ಪಡೆದಿದ್ದಾರೆ. ಅಷ್ಟೇ ಅಲ್ಲ ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಕರ್ನಾಟಕದ ತೇಜಸ್ವಿನಿ ಬಾಯಿ ಸಹ ರಾಷ್ಟ್ರಪತಿಯಿಂದ `ಅರ್ಜುನ~ ಪ್ರಶಸ್ತಿ ಸ್ವೀಕರಿಸಿದರು. ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಗುವಾಂಗ್ ಜೌ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕಬಡ್ಡಿ ತಂಡ ಚಿನ್ನದ ಪದಕ ಜಯಿಸಿತ್ತು. ಆಗ ತೇಜಸ್ವಿನಿ ಭಾರತ ತಂಡದ ನೇತೃತ್ವವಹಿಸಿದ್ದರು.ಕರ್ನಾಟಕದ ಅಥ್ಲೀಟ್ ವಿಕಾಸ್ ಗೌಡ ಈ ಸಮಾರಂಭಕ್ಕೆ ಗೈರು ಹಾಜರಾದರು. ಡೇಗುವಿನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಪಾಲ್ಗೊಂಡಿದ್ದಾರೆ.ಜಹೀರ್, ಸೋಮದೇವ್ ಗೈರು:  ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ವೇಗಿ ಜಹೀರ್ ಖಾನ್ ಸಮಾರಂಭಕ್ಕೆ ಗೈರು ಹಾಜರಾದರು. ಸ್ನಾಯು ಸೆಳೆತದ ತೊಂದರೆಯಿಂದ ಬಳಲುತ್ತಿರುವ ಅವರು ಸದ್ಯಕ್ಕೆ ಇಂಗ್ಲೆಂಡ್‌ನಲ್ಲಿದ್ದಾರೆ. ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸಿರುವ ಸೋಮದೇವ್ ದೇವವರ್ಮನ್ ಹಾಗೂ ಜಿಮ್ನಾಷ್ಟಿಕ್ ಸ್ಪರ್ಧಿ ಆಶಿಷ್ ಕುಮಾರ್ ಸಹ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ, ತೇಜಸ್ವಿನಿ ಸಾವಂತ್ (ಶೂಟಿಂಗ್), ಸುರಂಜಯ್ ಸಿಂಗ್ (ಬಾಕ್ಸಿಂಗ್), ಸುನಿಲ್ ಚೆಟ್ರಿ (ಫುಟ್‌ಬಾಲ್), ಭಾರತ ಹಾಕಿ ತಂಡದ ನಾಯಕ ರಾಜ್ಪಾಲ್ ಸಿಂಗ್ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.ಕಳೆದ ಮೂರು ವರ್ಷದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಹುಲ್ ಬ್ಯಾನರ್ಜಿ (ಆರ್ಚರಿ), ಪ್ರೀಜಾ ಶ್ರೀಧರನ್ (ಅಥ್ಲೆಟಿಕ್ಸ್), ವೀರಧವಳ್ ಖಾಡೆ (ಈಜು), ರವಿ ಕುಮಾರ್ (ವೇಟ್ ಲಿಫ್ಟಿಂಗ್), ರವೀಂದರ್ ಸಿಂಗ್ (ಕುಸ್ತಿ), ಸಂಧ್ಯಾ ರಾಣಿ (ವುಶೂ), ಪ್ರಸಂತ್ ಕರ್ಮಕರ್ (ಈಜು), ಸಂಜಯ್ ಕುಮಾರ್ (ವಾಲಿಬಾಲ್), ರಾಕೇಶ್ ಕುಮಾರ್ (ಕಬಡ್ಡಿ) ಅವರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ 5 ಲಕ್ಷ ರೂಪಾಯಿ ಮೊತ್ತವನ್ನು ಒಳಗೊಂಡಿದೆ.ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ: ಬಾಕ್ಸಿಂಗ್ ಕೋಚ್ ಇಂಕುರ್ತಿ ವೆಂಕಟೇಶ್ವರರಾವ್ ಸೇರಿದಂತೆ ಒಟ್ಟು ಐದು ಕೋಚ್‌ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.ದೇವಿಂದರ್ ಕುಮಾರ್ (ಜಿಮ್ನಾಷ್ಟಿಕ್), ರಾಂಪಾಲ್ (ಕುಸ್ತಿ), ಕುಂತಲ್ ರಾಯ್ (ಅಥ್ಲೆಟಿಕ್ಸ್) ಹಾಗೂ ರಾಜೀಂದರ್ ಸಿಂಗ್ (ಹಾಕಿ) ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು.ಜೀವಮಾನದ ಶ್ರೇಷ್ಠ ಸಾಧನೆಗೆ ನೀಡಲಾಗುವ ಧ್ಯಾನಚಂದ್ ಪ್ರಶಸ್ತಿಯನ್ನು ಶಬ್ಬೀರ್ ಅಲಿ (ಫುಟ್‌ಬಾಲ್), ಸುಶೀಲ್ ಕೊಹ್ಲಿ (ಈಜು) ಹಾಗೂ ರಾಜ ಕುಮಾರ (ಕುಸ್ತಿ) ಅವರಿಗೆ ಕೊಡ ಮಾಡಲಾಯಿತು. ಈ ಪ್ರಶಸ್ತಿಯು 5 ಲಕ್ಷ ರೂ. ಮೊತ್ತ ಒಳಗೊಂಡಿದೆ.ಗಗನ್ ಸಂತಸ: ತಡವಾಗಿಯಾದರೂ ಕೊನೆಗೂ `ಖೇಲ್ ರತ್ನ~ ದೊರೆತಿದೆ. ತುಂಬಾ ಖುಷಿಯಾಗಿದೆ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ನಾರಂಗ್ ಹೇಳಿದರು.`ಮುಂದಿನ ದಿನಗಳು ತುಂಬಾ ಕಷ್ಟದಾಯಕವಾಗಿವೆ. ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದರಿಂದ ಅಲ್ಲಿಯೂ ಪ್ರಶಸ್ತಿ ಜಯಿಸಬೇಕು ಎನ್ನುವ ಕನಸಿದೆ. ಆದ್ದರಿಂದ ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡಿ ಕಸರತ್ತು ನಡೆಸಿದ್ದೇನೆ~ ಎಂದರು. ಏಷ್ಯನ್ ಕ್ರೀಡಾಕೂಟದ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಜಯಿಸಿದ್ದರು.ಮತ್ತಷ್ಟು ಸಾಧನೆಗೆ ಪ್ರೇರಣೆ: ಅರ್ಜುನ ಪ್ರಶಸ್ತಿ ದೊರೆತಿರುವುದು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ. ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಪ್ರಶಸ್ತಿ ಸ್ವೀಕರಿಸಿದ ನಂತರ ಸುನಿಲ್ ಚೆಟ್ರಿ ಪ್ರತಿಕ್ರಿಯಿಸಿದರು.ಫುಟ್‌ಬಾಲ್ ಜೀವನವನ್ನು ಆರಂಭಿಸಿದ ಮೋಹನ್ ಬಾಗನ್ ಕ್ಲಬ್ ಹಾಗೂ ನನ್ನ ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುವುದಾಗಿ ಚೆಟ್ರಿ ಹೇಳಿದರು. ಫುಟ್‌ಬಾಲ್‌ನಿಂದ ಸಮಾಜದಲ್ಲಿ ನನಗೆ ಅತ್ಯುತ್ತಮ ಸ್ಥಾನಮಾನ ದೊರೆತಿದೆ. ಪ್ರಶಸ್ತಿ ಬರುವ ನಿರೀಕ್ಷೆಯಿರಲಿಲ್ಲ. ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರು ಬಂದ ಮೇಲೆ ಸಂತಸಕ್ಕೆ ಪಾರವೇ ಇಲ್ಲದಂತಾಯಿತು ಎಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಅವರು ಮಾಧ್ಯಮದವರೊಂದಿಗೆ ಸಂತಸ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry