ಕರ್ನಾಟಕದ ನಿರಾಸೆ ಮರೆಸಿದ ಕುನಾಲ್

7
ರಣಜಿ ಕ್ರಿಕೆಟ್: ಡ್ರಾ ಪಂದ್ಯದಲ್ಲಿ ಹರಿಯಾಣ, ಉತ್ತಪ್ಪ ಶತಕ

ಕರ್ನಾಟಕದ ನಿರಾಸೆ ಮರೆಸಿದ ಕುನಾಲ್

Published:
Updated:

ಹುಬ್ಬಳ್ಳಿ: ರಣಜಿ ಪಂದ್ಯವೊಂದರ ಎರಡೂ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ ದಾಖಲೆ ನಿರ್ಮಿಸಿದ ಕರ್ನಾಟಕದ ಏಕೈಕ ಆಟಗಾರನಾಗಿ ಉದಯಿಸಿದ ಕುನಾಲ್ ಕಪೂರ್ ಮತ್ತು ಶತಕದ ಮೂಲಕ `ಕ್ರಿಸ್‌ಮಸ್' ಆಚರಿಸಿದ ರಾಬಿನ್ ಉತ್ತಪ್ಪ ಮಂಗಳವಾರ ಆತಿಥೇಯರ ನಿರಾಸೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದರು!ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ  `ಡ್ರಾ'ದಲ್ಲಿ ಮುಕ್ತಾಯವಾದ ರಣಜಿ ಟ್ರೋಫಿ `ಬಿ' ಗುಂಪಿನ ಪಂದ್ಯದಲ್ಲಿ ಕೇವಲ ಒಂದು ಪಾಯಿಂಟ್ ಗಳಿಸುವಲ್ಲಿ ಇವರಿಬ್ಬರ ಆಟ ಪ್ರಮುಖ ಪಾತ್ರ ವಹಿಸಿತು. ಆದರೆ ಕ್ವಾರ್ಟರ್‌ಫೈನಲ್ ಪ್ರವೇಶದ ಅವಕಾಶ ಮಾತ್ರ ಮರೀಚಿಕೆಯಾಗಿದೆ.ಹರಿಯಾಣ ತಂಡವು ಮೊದಲ ಇನಿಂಗ್ಸ್‌ನಲ್ಲಿ ನೀಡಿದ 587 ರನ್ನುಗಳಿಗೆ ಉತ್ತರವಾಗಿ ಕೇವಲ 272 ರನ್ ಗಳಿಸಿದ್ದ ಕರ್ನಾಟಕ ತಂಡ, 315 ರನ್‌ಗಳ ಹಿನ್ನಡೆ ಅನುಭವಿಸಿತ್ತು ನಂತರ ಫಾಲೋಆನ್ ಪಡೆದು ಎರಡನೇ ಇನಿಂಗ್ಸ್‌ನಲ್ಲಿ ಮಂಗಳವಾರ ಬಾಕಿ ಚುಕ್ತಾ ಮಾಡಿತು. ಸೋಮವಾರ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಕೇವಲ ಮೂರು ಪಂದ್ಯ ಆಡಿದ ಅನುಭವದ ಆಟಗಾರ ಕುನಾಲ್ ಕಪೂರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ (106 ರನ್) ಗಳಿಸಿದ್ದರು.  ಮಂಗಳವಾರ ಎರಡನೇ ಶತಕ (ಔಟಾಗದೇ 100; 213ಎಸೆತ, 217ನಿ, 15ಬೌಂಡರಿ) ಸಿಡಿಸಿ ದಾಖಲೆ ನಿರ್ಮಿಸಿದ್ದು ಹೈಲೈಟ್. ಜೊತೆಗೆ ಪ್ರಸಕ್ತ ಋತುವಿನಲ್ಲಿ ಮೊದಲ ಶತಕ ದಾಖಲಿಸಿದ ರಾಬಿನ್ ಉತ್ತಪ್ಪ ((137; 266ನಿ, 172ಎಸೆತ, 22ಬೌಂಡರಿ) ಭರಪೂರ ಮನರಂಜನೆ ನೀಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರಿಗೆ ಇದು 13ನೇ ಶತಕ. ರಾಬಿನ್ ಮಂಗಳವಾರ  ಆಕ್ರಮಣಕಾರಿಯಾದರು. ಚುರುಕುಬಿಸಿಲಿನಲ್ಲಿ ಹರಿಯಾಣದ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ವೊದಲ ವಿಕೆಟ್‌ಗೆ ಕೆ.ಎಲ್. ರಾಹುಲ್ ಜೊತೆಗೆ 90 ರನ್ ಸೇರಿಸಿದರು. ದಿನದ 11ನೇ ಓವರ್‌ನಲ್ಲಿ ಮಧ್ಯಮವೇಗಿ ಮೋಹಿತ್  ಶರ್ಮಾಗೆ ರಾಹುಲ್ ಕ್ಲೀನ್‌ಬೌಲ್ಡ್ ಆದರು. ಆಗ 49 ರನ್ ಗಳಿಸಿದ್ದ ಉತ್ತಪ್ಪ, ಕುನಾಲ್ ಕಪೂರ್ ಜೊತೆಗೆ ಮಿಂಚಿನ ಆಟ ಆರಂಭಿಸಿದರು. ಜೋಗಿಂದರ್ ಶರ್ಮಾ ಎಸೆತದಲ್ಲಿ ಮೂರು ರನ್ ಗಳಿಸಿದ ಅರ್ಧಶತಕದ ಗಡಿ ದಾಟಿದ ಉತ್ತಪ್ಪ ನಂತರ ಇನ್ನಷ್ಟು ಬಿರುಸಿನ ಆಟವಾಡಿದರು. ಮೋಹಿತ್ ಶರ್ಮಾ ಅವರ 15ನೇ ಓವರ್‌ನಲ್ಲಿ ಮೂರು ಸತತ ಬೌಂಡರಿ ಬಾರಿಸಿದ ಅವರು ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 71 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದ ಅವರು, ಮುಂದೆ ಕೇವಲ 61 ಎಸೆತಗಳಲ್ಲಿ ಇನ್ನೂ 50 ರನ್ ಗಳಿಸಿ ಶತಕ ಪೂರೈಸಿದರು. ಅದರಲ್ಲಿ 17 ಬೌಂಡರಿಗಳಿದ್ದವು.  ಆಗ ಕೇವಲ 34 ರನ್ ಗಳಿಸಿ ಆಡುತ್ತಿದ್ದ ಕುನಾಲ್ ಕಪೂರ್, ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗಳಿಸಿದ್ದ ಹರ್ಷಲ್ ಪಟೇಲ್‌ರ ಒಂದೇ ಓವರ್‌ನಲ್ಲಿ ಎರಡು ತತ ಬೌಂಡರಿ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.ಊಟದ ನಂತರವೂ ಉತ್ತಪ್ಪ ಬ್ಯಾಟಿಂಗ್ ಪ್ರತಾಪ ಮುಂದುವರೆಯಿತು. 137 ರನ್ ಗಳಿಸಿದ್ದ ಅವರು 63ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ಎಸೆತವನ್ನು ಹೊಡೆಯುವ ಯತ್ನದಲ್ಲಿ, ವಿಕೆಟ್‌ಕೀಪರ್ ನಿತಿನ್ ಸೈನಿಗೆ ಕ್ಯಾಚಿತ್ತು ಹೊರನಡೆದರು.  ಆಗಿನ್ನೂ ಮೊದಲ ಇನಿಂಗ್ಸ್‌ನ 73 ರನ್‌ಗಳ ಬಾಕಿ ಉಳಿದಿತ್ತು.ಕ್ರೀಸ್‌ಗೆ ಬಂದ ಸಿ.ಎಂ. ಗೌತಮ್ ಖಾತೆ ತೆರೆಯುವ ಮುನ್ನವೇ ಒಂದು ಜೀವದಾನ ಪಡೆದರು. ಜೋಗಿಂದರ್ ಬೌಲಿಂಗ್‌ನಲ್ಲಿ ಗೌತಮ್ ಬ್ಯಾಟ್ ಅಂಚು ಸವರಿದ್ದ ಚೆಂಡನ್ನು ಪಡೆಯುವಲ್ಲಿ ವಿಕೆಟ್‌ಕೀಪರ್ ಸೈನಿ ವಿಫಲರಾದರು.ಮೈಸೂರಿನಲ್ಲಿ ದ್ವಿಶತಕ ಗಳಿಸಿದ್ದ ಗೌತಮ್ ಬೀಸಾಟಕ್ಕೆ ನಿಂತರು. ಕುನಾಲ್ ಕಪೂರ್ ಕೂಡ ಸಹನೆಯ ಆಟವಾಡುತ್ತಿದ್ದರು. ಇದರಿಂದಾಗಿ ಚಹಾ ವೇಳೆಗೆ ಸ್ಕೋರ್ ಬೋರ್ಡ್‌ನಲ್ಲಿ 284/2 ಮೊತ್ತ ಇತ್ತು. ಮೊದಲ ಇನಿಂಗ್ಸ್‌ನ 31 ರನ್‌ಗಳ ಬಾಕಿಯೂ ಇತ್ತು. 88 ರನ್ ಗಳಿಸಿದ್ದ ಕುನಾಲ್ ವಿರಾಮದ ನಂತರ ನಿಧಾನವಾಗಿ ಆಡಿ, ಶತಕದತ್ತ ಸಾಗಿದರು,90ನೇ ಓವರ್‌ನಲ್ಲಿ ಹರಿಯಾಣದ ಮೊದಲ ಇನಿಂಗ್ಸ್ ಬಾಕಿಯನ್ನು ದಾಟುವಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಯಶಸ್ವಿಯಾದರು.ಕುನಾಲ್, ಅಮಿತ್ ಮಿಶ್ರಾ ಅವರ 21ನೇ ಓವರ್‌ನಲ್ಲಿ ಒಂದು ರನ್ ಗಳಿಸಿ, ಶತಕ ಪೂರೈಸಿದರು. ಒಂದೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಪೂರೈಸಿದ ಅವರ ಸಾಧನೆಗೆ ಕರ್ನಾಟಕ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಸಹ ಆಟಗಾರರಿಂದ ಚಪ್ಪಾಳೆಯ ಅಭಿನಂದನೆ. ಇದರೊಂದಿಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಿ, ಸ್ಥಗಿತಗೊಳಿಸಲಾಯಿತು.

ಹರಿಯಾಣ ಪ್ರಥಮ ಇನಿಂಗ್ಸ್ 176.4 ಓವರ್‌ಗಳಲ್ಲಿ 9 ವಿಕೆಟ್‌ಗೆ 587 ಡಿಕ್ಲೇರ್ಡ್

ಕರ್ನಾಟಕ 70.4 ಓವರ್‌ಗಳಲ್ಲಿ 272

ದ್ವಿತೀಯ ಇನಿಂಗ್ಸ್ ಕರ್ನಾಟಕ: 93.4 ಓವರ್‌ಗಳಲ್ಲಿ 2 ವಿಕೆಟ್‌ಗೆ 332

(ಸೋಮವಾರದ ಅಂತ್ಯಕ್ಕೆ 16 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 63)

ಕೆ.ಎಲ್. ರಾಹುಲ್ ಬಿ ಮೋಹಿತ್  37

ಉತ್ತಪ್ಪ ಸಿ ನಿತಿನ್ ಸೈನಿ ಬಿ ಹರ್ಷಲ್ ಪಟೇಲ್  137

ಕುನಾಲ್ ಕಪೂರ್ ಔಟಾಗದೇ  100

ಸಿ.ಎಂ. ಗೌತಮ್ ಔಟಾಗದೇ   51

ಇತರೆ: 7 (ಬೈ 1, ಲೆಗ್‌ಬೈ 2, ವೈಡ್1, ನೋಬಾಲ್ 3)

ವಿಕೆಟ್ ಪತನ: 1-90 (26.3 ರಾಹುಲ್), 2-242 (62,4, ಉತ್ತಪ್ಪ).

ಬೌಲಿಂಗ್ ವಿವರ: ಮೋಹಿತ್ ಶರ್ಮಾ 27-6-119-1 (ನೋಬಾಲ್ 2, ವೈಡ್ 1), ಜೋಗಿಂದರ್ ಶರ್ಮಾ 26-3-94-0, ಹರ್ಷಲ್ ಪಟೇಲ್ 19-6-50-1, ಅಭಿಮನ್ಯು ಖೋಡ್ 1-0-4-0, ಅಮಿತ್ ಮಿಶ್ರಾ 20.4-2-63-0 (ನೋಬಾಲ್ 1).

ಫಲಿತಾಂಶ: ಡ್ರಾ. ಅಂಕಗಳು: ಹರಿಯಾಣ -3, ಕರ್ನಾಟಕ -1

ಪಂದ್ಯದ ಆಟಗಾರ: ಅಮಿತ್ ಮಿಶ್ರಾ (ಹರಿಯಾಣ)

ಕರ್ನಾಟಕದ ಮುಂದಿನ ಪಂದ್ಯ: ಮಹಾರಾಷ್ಟ್ರವಿರುದ್ಧ (ಪುಣೆ) ದಿನಾಂಕ: ಡಿಸೆಂಬರ್ 29ರಿಂದ 1 ಜನವರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry