ಶುಕ್ರವಾರ, ಜನವರಿ 17, 2020
20 °C

ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ: ನಾಳೆ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಕುರಿತು ಸಂವಿಧಾನದ 131 (ಬಿ) ಕಲಂ ಅಡಿ  ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿ­ರುವ ಮೊಕದ್ದಮೆಯ ಅಂಗೀಕಾರ ಅರ್ಹತೆ­ಯನ್ನೇ ಡಿ.10ರಂದು ನಡೆ­ಯುವ ವಿಚಾರಣೆ­ಯಲ್ಲಿ ರಾಜ್ಯ ಸರ್ಕಾರವು ಪ್ರಶ್ನಿಸಲಿದೆ.‘ಸುಪ್ರೀಂ ಕೋರ್ಟ್‌ ಮೊಕದ್ದಮೆ­ಯನ್ನು ಅನೂರ್ಜಿತ­ಗೊಳಿಸಿದರೆ ಈ ವಿವಾದವೇ ಮುಗಿಯಲಿದೆ’ ಎಂದು ಗಡಿ ವಿವಾದ ವಿಶೇಷ ಕಾನೂನು ಸಲಹಾ ಸಮಿತಿ ಸದಸ್ಯ ಕೆ.ಎನ್‌. ಬೆಂಗೇರಿ ಭಾನುವಾರ ಇಲ್ಲಿ ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.

ವಿಚಾರಣೆಗೆ ತೆಗೆದುಕೊಳ್ಳ­ಬೇಕಾದ ಪ್ರಾಥಮಿಕ ವಿಷಯಗಳ ಕುರಿತು ವರದಿಯನ್ನು ನೀಡುವಂತೆ ಎರಡೂ ರಾಜ್ಯಗಳ ವಕೀಲರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.ಅದರಂತೆ ವಕೀಲರ ನಡುವೆ ನಡೆದ ಗಂಭೀರ ಚರ್ಚೆ­ಗಳ ಬಳಿಕ  2012ರ  ಡಿಸೆಂಬರ್ 13ರಂದು ತಾವು ಒಪ್ಪಿ­ಕೊಂಡ ವಿಷಯಗಳ ವರದಿಯನ್ನು ಸಲ್ಲಿಸಿ­ದ್ದಾರೆ. ಸಂವಿ­ಧಾನದ 131 ಕಲಂ ಅಡಿಯಲ್ಲಿ ಈ ದಾವೆಯನ್ನು ನಡೆ­ಸಲು ಯೋಗ್ಯವಾಗಿದೆಯೇ ಎಂಬುದೂ ಒಂದು ಪ್ರಮುಖ ಅಂಶವಾಗಿದೆ. 131 ಕಲಂ  ಪ್ರಕಾರ ರಾಜ್ಯಗಳ ವಿಂಗ­ಡಣೆ ಮಾಡುವ ಸಂವಿಧಾನಬದ್ಧ ಅಧಿಕಾರ ಸಂಸ­ತ್ತಿಗೆ ಇದೆ. ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಸಂಸತ್‌ ನಿರ್ಮಿ­ಸಿ­ರುವ ರಾಜ್ಯಗಳ ಗಡಿಯನ್ನು ವಿರೋಧಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಮೊಕದ್ದಮೆಯ ಅಂಗೀಕಾರ ಅರ್ಹತೆ­ಯನ್ನೇ ನಮ್ಮ ವಕೀಲರು ಮಂಗಳವಾರ ನಡೆಯುವ ವಿಚಾರಣೆ ಸಂದರ್ಭದಲ್ಲಿ ಪ್ರಶ್ನಿಸಲಿದ್ದಾರೆ’ ಎಂದರು.

ಪ್ರತಿವಾದ ಸಿದ್ಧ: ‘ಮಹಾರಾಷ್ಟ್ರ ಸರ್ಕಾರವು 300 ಪುಟ­ಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಅದಕ್ಕೆ ಸರಿ ಸಮಾನವಾಗಿ ರಾಜ್ಯ ಸರ್ಕಾರವೂ ಸುಪ್ರೀಂ ಕೋರ್ಟ್‌­ನಲ್ಲಿ ಪ್ರತ್ಯುತ್ತರ ಸಲ್ಲಿಸಿದೆ. ನ್ಯಾಯಮೂರ್ತಿ ವೆಂಕಟಾಚಲಯ್ಯ ಹಾಗೂ ನ್ಯಾಯಮೂರ್ತಿ ವಿ.ಎಸ್‌. ಮಳಿಮಠ ಅವರ ಮಾರ್ಗದರ್ಶನದಲ್ಲಿ 131 ಕಲಂನಡಿ 15 ಪುಟಗಳ ಪ್ರತಿವಾದ ಸಿದ್ಧಪಡಿಸಲಾಗಿದೆ’ ಎಂದು ವಿವರ ನೀಡಿದರು.‘2004ರಿಂದ 2013ರ ವರೆಗೆ ಮಹಾರಾಷ್ಟ್ರ ಸರ್ಕಾರವು ವಿವಾದಿತ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಮಾಡಬೇಕು ಎಂಬುದು ಸೇರಿದಂತೆ 10 ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಬಳಸಿಕೊಂಡು ಚಳವಳಿ  ಮುಂದುವರೆ­ಸಲು ಎಲ್ಲ ಪ್ರಯತ್ನ ಮಾಡುತ್ತಿದೆ.ಸಂವಿಧಾನದ 263 (ಬಿ) ಹಾಗೂ (ಸಿ) ಕಲಂ ಅಡಿ ‘ಅಂತರರಾಜ್ಯ ಪರಿಷತ್ತು’ ರಚಿಸುವಂತೆ ವಕೀಲ ಎಂ.ವಿ. ಚವಾಣ ಹಾಗೂ ಮಧ್ಯ­ವರ್ತಿ ಎಂಇಎಸ್‌ ಅಧ್ಯಕ್ಷ ವಸಂತರಾವ್‌ ಪಾಟೀಲ ಮತ್ತು ಇನ್ನಿತರ 15 ಜನರಿಂದ ರಾಷ್ಟ್ರಪತಿಗಳಿಗೆ ಮನವಿ­ಯನ್ನು ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವಾಲಯ ಇದನ್ನು ಪರಿಶೀಲಿಸಿ, ಅಂತರ­ರಾಜ್ಯ ಪರಿಷತ್ತಿಗೆ ರಾಜ್ಯಗಳ ನಡುವಣ ವಿವಾದಗಳ ವಿಚಾರಣೆ ಮಾಡ­ಲು ಆಜ್ಞೆ ನೀಡಿಲ್ಲ ಎಂದು ತಿಳಿಸಿದೆ’ ಎಂದು ಬೆಂಗೇರಿ ವಿವರಿಸಿದರು.‘ಮಹಾರಾಷ್ಟ್ರವು ಬೆಳಗಾವಿ, ಉತ್ತರ ಕನ್ನಡ, ಬೀದರ್‌ ಮತ್ತು ಗುಲ್ಬರ್ಗ ಜಿಲ್ಲೆಗಳಿಂದ 814 ಗ್ರಾಮ­ಗಳನ್ನು ಕೇಳಿದ್ದು, ಇದು ಕರ್ನಾಟಕದ ಕಾಲು ಭಾಗ (3,000 ಚದರ್‌ ಮೈಲು) ಆಗಲಿದೆ. ಮಹಾರಾಷ್ಟ್ರದ ಈ ಬೇಡಿಕೆಗೆ ಮನ್ನಣೆ ಸಿಕ್ಕರೆ ಕರ್ನಾಟಕದಲ್ಲಿ ಆರ್ಥಿಕ ವಿಪತ್ತು ಸೃಷ್ಟಿಯಾಗುತ್ತದೆ ಎಂದು ಮಹಾಜನ್‌ ವರದಿ­ಯಲ್ಲಿ ಉಲ್ಲೇಖಿಸ­ಲಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)