ಭಾನುವಾರ, ಏಪ್ರಿಲ್ 18, 2021
33 °C

ಕರ್ನಾಟಕ ಎಚ್ಚೆತ್ತುಕೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ನೀರು ಹಂಚಿಕೆಯ ವಿವಾದದಲ್ಲಿ ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ಅವಧಿ ಸೂಕ್ಷ್ಮವಾದುದು. ಪ್ರಾರಂಭದಿಂದಲೂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ನೀರು ಹಂಚಿಕೆಯ ವಿವಾದದ ಕದನ ನಡೆದುಕೊಂಡು ಬಂದಿರುವುದು ಇದೇ ಅವಧಿಯಲ್ಲಿ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಬಿದ್ದಾಗ ಇಲ್ಲದ ಜಗಳ ಅನಾವೃಷ್ಟಿ ಕಾಲಿಡುತ್ತಿದ್ದಂತೆ ಪ್ರಾರಂಭವಾಗುವುದು ರೂಢಿ.ಈ ಬಾರಿ ಬರ ಪರಿಸ್ಥಿತಿಯ ನಿರೀಕ್ಷೆಯಲ್ಲಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಮೂರು ತಿಂಗಳ ಹಿಂದೆಯೇ ಇಂತಹ ಜಗಳಕ್ಕೆ ಸಿದ್ಧತೆ ನಡೆಸಿದ್ದರು. ಅವರು ಮೊದಲು ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯುವಂತೆ ಕಳೆದ ಮೇ ತಿಂಗಳಲ್ಲಿ ಒತ್ತಾಯಿಸಿದ್ದರು, ನಂತರ ತಮಿಳುನಾಡಿಗೆ 25 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು.

 

ಈಗ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಮೊರೆ ಹೋಗಿದ್ದಾರೆ. ಅವರ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸದೆ ಸದ್ಯಕ್ಕೆ ಕರ್ನಾಟಕವನ್ನು ಸಂಕಷ್ಟದಿಂದ ಪಾರು ಮಾಡಿದೆ, ಅಷ್ಟರಮಟ್ಟಿಗೆ ತಮಿಳುನಾಡು ರಾಜ್ಯಕ್ಕೆ ಹಿನ್ನಡೆಯಾಗಿದೆ.ತಮಿಳುನಾಡಿನ ಈ ನಡವಳಿಕೆ ಕರ್ನಾಟಕಕ್ಕೆ ಹೊಸದೇನಲ್ಲ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೈಕೊಡುತ್ತಿರುವ ಸೂಚನೆ ಸಿಕ್ಕ ಕೂಡಲೇ ಅದು ಇಂತಹ ತಗಾದೆಯನ್ನು ತೆಗೆಯುತ್ತಲೇ ಬಂದಿದೆ. ಇವೆಲ್ಲವೂ ಗೊತ್ತಿದ್ದರೂ ಕರ್ನಾಟಕ ಸರ್ಕಾರ ಏನು ಮಾಡುತ್ತಿದೆ ಎನ್ನುವುದಷ್ಟೇ ಈಗಿನ ಪ್ರಶ್ನೆ.ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯಲು ಜಯಲಲಿತಾ ಅವರು ಮೊದಲ ಬಾರಿ ಒತ್ತಾಯಿಸಿದಾಗಲೇ ಕರ್ನಾಟಕ ಎಚ್ಚೆತ್ತುಕೊಂಡು ರಾಜ್ಯದ ಬರ ಪರಿಸ್ಥಿತಿಯನ್ನು ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನಿಯವರ ಗಮನಕ್ಕೆ ತರಬಹುದಿತ್ತು. ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ಕಲಾಪವನ್ನು ಗಮನಿಸಿದರೆ ಕರ್ನಾಟಕದ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ನಮ್ಮ ವಕೀಲರಿಗೂ ಸಾಧ್ಯವಾಗಿಲ್ಲವೇನೋ ಎಂಬ ಅನುಮಾನ ಮೂಡುತ್ತದೆ.ಈ ರೀತಿಯ ನಿರ್ಲಕ್ಷ್ಯ, ನಿರಾಸಕ್ತಿ ಮತ್ತು ಕರ್ತವ್ಯಲೋಪದಿಂದಾಗಿಯೇ ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಅನ್ಯಾಯಕ್ಕೀಡಾಗುತ್ತಾ ಬಂದಿರುವುದು. ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ವಾಸ್ತವದ  ಚಿತ್ರವನ್ನು ಕಾವೇರಿ ನದಿ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟಿನ ಮುಂದೆ ಇಡಬೇಕು.ಮೊದಲನೆಯದಾಗಿ ತಮಿಳುನಾಡು ನೀಡುತ್ತಿರುವ ಬಾಕಿನೀರಿನ ಲೆಕ್ಕಕ್ಕೆ ಮೆಟ್ಟೂರಿನಲ್ಲಿ ದಾಖಲಾಗಿರುವ ನೀರಿನ ಪ್ರಮಾಣ ಆಧಾರ. ಕರ್ನಾಟಕ ನೀಡುತ್ತಿರುವ ಲೆಕ್ಕ ಬಿಳಿಗುಂಡ್ಲು ಜಲಮಾಪನ ಕೇಂದ್ರದ ದಾಖಲೆಯದ್ದು. ಕಾವೇರಿ ನ್ಯಾಯಮಂಡಳಿ ಕೂಡಾ ಇದನ್ನು ಒಪ್ಪಿಕೊಂಡಿದೆ. ಎರಡನೆಯದಾಗಿ ತಮಿಳುನಾಡಿನಲ್ಲಿ ನೀರಿನ ಕೊರತೆ ಉಂಟಾಗಲು ಆ ರಾಜ್ಯ ಏಪ್ರಿಲ್-ಜುಲೈ ಅವಧಿಯ ಕುರುವೈ ಬೆಳೆ ಪ್ರದೇಶವನ್ನು ಹೆಚ್ಚಿಸುತ್ತಾ ಹೋಗಿರುವುದೂ ಕೂಡಾ ಕಾರಣ.

 

ಈ ಬೆಳೆಯ ಬದಲಿಗೆ ಆಗಸ್ಟ್-ನವೆಂಬರ್ ಅವಧಿಯ ಸಾಂಬಾ ಬೆಳೆಪ್ರದೇಶವನ್ನು ಹೆಚ್ಚಿಸಬೇಕೆಂದು ಕಾವೇರಿ ನ್ಯಾಯಮಂಡಳಿಯಲ್ಲಿಯೂ ಕರ್ನಾಟಕ ಸಲಹೆ ನೀಡಿತ್ತು. ಈ ಎಲ್ಲ ಸಂಗತಿಗಳನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಮೂಲಕ ತಮಿಳುನಾಡಿನ ವಾದದಲ್ಲಿನ ಪೊಳ್ಳುತನವನ್ನು ಬಯಲು ಮಾಡಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.