ಕರ್ನಾಟಕ ಕ್ರೀಡಾ ಅಕಾಡೆಮಿ ಸ್ಥಾಪನೆ

7

ಕರ್ನಾಟಕ ಕ್ರೀಡಾ ಅಕಾಡೆಮಿ ಸ್ಥಾಪನೆ

Published:
Updated:
ಕರ್ನಾಟಕ ಕ್ರೀಡಾ ಅಕಾಡೆಮಿ ಸ್ಥಾಪನೆ

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲಿ ಅತ್ಯುತ್ತಮ ಮಟ್ಟದ ಪ್ರದರ್ಶನ ನೀಡಿ ಪದಕ ಗಳಿಸಲು ನೆರವಾಗುವ ಉದ್ದೆೀಶದಿಂದ ಸರ್ಕಾರವು ಕರ್ನಾಟಕ ಕ್ರೀಡಾ ಅಕಾಡೆಮಿ (ಕರ್ನಾಟಕ ಸ್ಪೋರ್ಟ್ಸ್ ಅಕಾಡೆಮಿ ಫಾರ್ ಎಕ್ಸಲೆನ್ಸ್) ಸ್ಥಾಪಿಸಲು ಮುಂದಾಗಿದೆ.ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸೋಮವಾರ ಸಂಜೆ ಸಾಧಕ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಈ ವಿಷಯ ಪ್ರಕಟಿಸಿದರು.12 ಮಂದಿ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಹಾಗೂ ಪಿ.ಎಸ್.ವಿಶ್ವನಾಥ್ (ಕ್ರಿಕೆಟ್) ಮತ್ತು ಎಂ.ಎಸ್.ಮಾದೇಗೌಡ (ವಾಲಿಬಾಲ್) ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಾಧಕರಿಗೆ ಒಂದು ಲಕ್ಷ ರೂಪಾಯಿ ಹಣ, ಫಲಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.`2016ರ ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ತಯಾರಿಸುವುದು ರಾಜ್ಯದ ಗುರಿ. ಆ ಕೂಟದಲ್ಲಿ ಪದಕ ಗಳಿಸಲು ಅಗತ್ಯವಿರುವ ನೆರವು ನೀಡುವ ಉದ್ದೇಶದಿಂದ ಈ ಅಕಾಡೆಮಿ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ಕ್ರೀಡಾಪಟುಗಳಿಗೆ ವೈಜ್ಞಾನಿಕ ತರಬೇತಿ ನೀಡಲಾಗುವುದು~ ಎಂದು ಮುಖ್ಯಮಂತ್ರಿ ತಿಳಿಸಿದರು.`ರಾಜ್ಯದಲ್ಲಿ ಮೊದಲ ಬಾರಿಗೆ ಕ್ರೀಡಾನೀತಿಯನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಹಾಗೇ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯನ್ನು ಪುನಃರಚಿಸಿ ಅದನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ನುಡಿದರು.ರಾಷ್ಟ್ರೀಯ ಯುವಜನೋತ್ಸವವನ್ನು ಸಂಘಟಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ್ದು ಮುಂದಿನ ಜನವರಿಯಲ್ಲಿ ಅದನ್ನು ಆಯೋಜಿಸಲಾಗುವುದು. ರಾಜ್ಯ ಒಲಿಂಪಿಕ್ ಕ್ರೀಡಾಕೂಟವನ್ನು ಈ ವರ್ಷ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಸದಾನಂದಗೌಡ ಹೇಳಿದರು.`ನಾಲ್ಕು ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ಉನ್ನತ ದರ್ಜೆಗೆ ಏರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ವರ್ಷ ಹೊಸದುರ್ಗ, ಗುಲ್ಬರ್ಗ, ಶಿವಮೊಗ್ಗ, ಮಂಗಳೂರು ಮತ್ತು ಮೈಸೂರಿನಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. 2 ರಾಜ್ಯ ಮಟ್ಟದ ಕ್ರೀಡಾ ಶಾಲೆ, 23 ಜಿಲ್ಲಾ ಮಟ್ಟದ ಕ್ರೀಡಾಶಾಲೆ ಹಾಗೂ 5 ಕ್ರೀಡಾ ನಿಲಯಗಳನ್ನು ಹೊಸದಾಗಿ ಪ್ರಾರಂಭಿಸಿದೆ. 15 ಕೋಟಿ ರೂ.ಗಳ ವೆಚ್ಚದಲ್ಲಿ ಕೂಡಿಗೆ ಕ್ರೀಡಾಶಾಲೆ ಹಾಗೂ ವಿದ್ಯಾನಗರ ಕ್ರೀಡಾಶಾಲೆಗಳಲ್ಲಿ ಅತ್ಯುನ್ನತ ಮಟ್ಟದ ಕ್ರೀಡಾ ಸೌಲಭ್ಯಗಳನ್ನು ನೀಡಲಾಗಿದೆ. ~ ಎಂದು ಅವರು ವಿವರಿಸಿದರು.`ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಯುವ ಕ್ರೀಡಾಪಟುಗಳ ಈ ಸಾಧನೆ ಉಳಿದವರಿಗೆ ಸ್ಫೂರ್ತಿಯಾಗಬೇಕು. ಆದರೆ ಪ್ರಶಸ್ತಿಯಲ್ಲಿ ಅನುಮಾನವಿದ್ದ ಕಾರಣ ರೋಷನ್ ಫರಾರೋ (ಬಾಡಿ ಬಿಲ್ಡಿಂಗ್), ಎಸ್.ನವೀನ್ (ಕರಾಟೆ) ಹಾಗೂ ಪಿ.ಸೋಮಶೇಖರ್ (ಅಂಗವಿಕಲ ಕ್ರೀಡಾಪಟು) ಅವರಿಗೆ ಪ್ರಶಸ್ತಿ ನೀಡಿಲ್ಲ.ಈ ಕ್ರೀಡಾಪಟುಗಳ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು~ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್ ತಿಳಿಸಿದರು.ಸಮಾರಂಭದಲ್ಲಿ ಶಾಸಕ ಚಂದ್ರಕಾಂತ್ ಬೆಲ್ಲದ್, ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಬಿ.ಎನ್.ಸುರೇಶ್ ಹಾಗೂ ಜಂಟಿ ನಿರ್ದೇಶಕ ವೈ.ಆರ್.ಕಾಂತರಾಜ್ ಉಪಸ್ಥಿತರಿದ್ದರು.ಪ್ರಶಸ್ತಿ ಪುರಸ್ಕೃತರ ಹೆಸರು: ಎಚ್.ಎಂ.ಜ್ಯೋತಿ (ಅಥ್ಲೆಟಿಕ್ಸ್), ವೈನಿ ಅಂಟೋನಿಯೊ ಡಿ . ಚುನ್ನಾ (ಚೆಸ್), ರಾಬಿನ್ ಉತ್ತಪ್ಪ (ಕ್ರಿಕೆಟ್), ಅಮೂಲ್ಯ ಕಮಲ್ (ಪುಟ್‌ಬಾಲ್), ಎಸ್.ಜೀವ ಕುಮಾರ್ (ಕಬಡ್ಡಿ), ಸಿ.ಆರ್.ಸಂತೋಷ್  (ಕೊಕ್ಕೊ), ಪೂಜಾಶ್ರೀ ವೆಂಕಟೇಶ್    (ಟೆನಿಸ್), ವಿ.ನೇತ್ರಾವತಿ (ಪವರ್ ಲಿಫ್ಟಿಂಗ್), ಶರಣ್ಯಾ ಮಹೇಶ್ (ರೋಲರ್ ಸ್ಕೇಟಿಂಗ್), ಶುಭಾ ಚಿತ್ತರಂಜನ್ (ಈಜು), ರವಿ ಕುಮಾರ್ (ವಾಲಿಬಾಲ್) ಹಾಗೂ  ಸಿ.ಪಿ.ಆರ್.ಸುಧೀರ್ ಕುಮಾರ್ (ವೇಟ್‌ಲಿಫ್ಟಿಂಗ್).ಜೀವಮಾನ ಸಾಧನೆ: ಪಿ.ಎಸ್. ವಿಶ್ವನಾಥ್ (ಕ್ರಿಕೆಟ್) ಹಾಗೂ ಎಂ.ಎಸ್. ಮಾದೇಗೌಡ (ವಾಲಿಬಾಲ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry