ಮಂಗಳವಾರ, ನವೆಂಬರ್ 19, 2019
27 °C

ಕರ್ನಾಟಕ ಡಿಜಿಪಿ ವಿರುದ್ಧ ಹಕ್ಕುಚ್ಯುತಿ

Published:
Updated:

ಮುಂಬೈ (ಪಿಟಿಐ): ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್ ವಿರುದ್ಧ ಕರ್ನಾಟಕ ಪೊಲೀಸರು ಎಫ್‌ಐಆರ್ ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ ಶಾಸಕ ಶಶಿಕಾಂತ್ ಶಿಂಧೆ ಅವರು ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಡಿಜಿಪಿ ವಿರುದ್ಧ ಗುರುವಾರ ಹಕ್ಕುಚ್ಯುತಿ ಮಂಡಿಸಿದ್ದಾರೆ.ಸದನದಲ್ಲಿ ಮಾತನಾಡಿದ ಅವರು, `ಗೃಹ ಸಚಿವರ ವಿರುದ್ಧ ನೆರೆಯ ರಾಜ್ಯವು ದುರುದ್ದೇಶದಿಂದ ಪ್ರಕರಣ ದಾಖಲಿಸಿದೆ' ಎಂದು ಟೀಕಿಸಿದ್ದಾರೆ.  ಪಾಟೀಲ್ ಅವರು ದ್ವೇಷ ಪ್ರಚೋದಿಸುವಂತಹ ಭಾಷಣ ಮಾಡಿದ್ದರೆಂಬ ಆಪಾದನೆ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆದರೆ, ಅವರು ಸಾರ್ವಜನಿಕವಾಗಿ ಈ ಭಾಷಣ ಮಾಡಿಲ್ಲ. ಬೆಳಗಾವಿಯಲ್ಲಿರುವ ಮರಾಠಿಗರ ಹಕ್ಕು ಕಾಯ್ದುಕೊಳ್ಳುವ ಬಗ್ಗೆ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು' ಎಂದಿದ್ದಾರೆ.ಇದು ಹೇಗೆ ಗುಂಪುಗಳ ನಡುವೆ ದ್ವೇಷ ಉದ್ದೀಪಿಸುತ್ತದೆ. ಸಮುದಾಯಗಳ ನಡುವಿನ ಸೌಹಾರ್ದವನ್ನು ಕದಡುತ್ತದೆ' ಎಂದು ಪ್ರಶ್ನಿಸಿ ಜನಪ್ರತಿನಿಧಿ ಕಾಯ್ದೆಯಡಿಯಲ್ಲಿ ಅವರು ಈ ನೋಟಿಸ್ ಮಂಡಿಸಿದ್ದಾರೆ.`ಬೆಳಗಾವಿ ನಗರಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿರುವುದರಿಂದ ಕರ್ನಾಟಕಕ್ಕೆ ಮುಖಭಂಗವಾಗಿದೆ. ಜೊತೆಗೆ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಮರಾಠಿ ಭಾಷಿಗರು ತಮ್ಮ ಶಕ್ತಿಯನ್ನು ತೋರಬಹುದೆಂದು ಕರ್ನಾಟಕ ಹೆದರಿಕೊಂಡಿದೆ' ಎಂದು ಅವರು ಮೂದಲಿಸಿದ್ದಾರೆ.ಹಿನ್ನೆಲೆ: ಬೆಳಗಾವಿಯಲ್ಲಿ ಭಾಷಣ ಮಾಡಿದ ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವಂತಹ ನುಡಿಗಳನ್ನಾಡಿದ್ದಾರೆಂಬ ಆಪಾದನೆ ಮೇಲೆ ಅವರ ವಿರುದ್ಧ ಏಪ್ರಿಲ್ 19ರಂದು ಎಫ್‌ಐಆರ್ ದಾಖಲಾಗಿದೆ.

ಪ್ರತಿಕ್ರಿಯಿಸಿ (+)