ಕರ್ನಾಟಕ ತಂಡದ ಬಿಗಿ ಹಿಡಿತ

7
ರಣಜಿ: ಮತ್ತೊಮ್ಮೆ ಮಿಂಚಿದ ಮಧ್ಯಮ ವೇಗದ ಬೌಲರ್‌ಗಳು

ಕರ್ನಾಟಕ ತಂಡದ ಬಿಗಿ ಹಿಡಿತ

Published:
Updated:
ಕರ್ನಾಟಕ ತಂಡದ ಬಿಗಿ ಹಿಡಿತ

ನವದೆಹಲಿ: ದೆಹಲಿಯ ತೀವ್ರ ಚಳಿ ಕರ್ನಾಟಕ ತಂಡದ ಉತ್ಸಾಹಕ್ಕೆ ಅಡ್ಡಿಪಡಿಸಿದಂತೆ ಕಾಣುತ್ತಿಲ್ಲ. ಈ ಬಾರಿಯೂ ಮಧ್ಯಮ ವೇಗದ ಬೌಲರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡ, ರಣಜಿ ಟ್ರೋಫಿ ‘ಎ’ ಗುಂಪಿನ ಅಂತಿಮ ಲೀಗ್‌ ಪಂದ್ಯದಲ್ಲಿ ದೆಹಲಿ ತಂಡದ ವಿರುದ್ಧದ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಂಡಿತು. ಜತೆಗೆ ವರ್ಷಾರಂಭದಲ್ಲೇ ಸತತ ಐದನೇ ಗೆಲುವಿನತ್ತ ಹೆಜ್ಜೆಯಿಟ್ಟಿತು.ಫಿರೋಜ್‌ ಷಾ ಕೋಟ್ಲಾದಲ್ಲಿ ಬೆಳಕಿನ ಕೊರತೆ ಯಿಂದಾಗಿ ಮೂರನೇ ದಿನವಾದ ಬುಧವಾರವೂ 19 ಓವರುಗಳಷ್ಟು ಆಟ ನಷ್ಟವಾಯಿತು. ಮೂರು ದಿನಗಳ ಆಟದಲ್ಲಿ ಒಟ್ಟಾರೆ 48 ಓವರುಗಳಷ್ಟು ಆಟ ನಷ್ಟವಾದಂತಾಗಿದೆ. ಆದರೆ ಕರ್ನಾಟಕದ ಮೇಲುಗೈಗೆ ಇದರಿಂದೇನೂ ಸಮಸ್ಯೆಯಾಗಲಿಲ್ಲ. 87 ರನ್‌ಗಳ ಇನಿಂಗ್ಸ್‌ ಮುನ್ನಡೆ ಸಂಪಾದಿಸಿದ್ದ ಕರ್ನಾಟಕ ತಂಡ, ಮಂದ ಬೆಳಕಿನಿಂದ ಅರ್ಧ ಗಂಟೆ ಮೊದಲೇ ಆಟ ನಿಲ್ಲಿಸಿದಾಗ ಎರಡನೇ ಇನಿಂಗ್ಸ್‌ನಲ್ಲಿ ದೆಹಲಿ ತಂಡದ ಆರು ವಿಕೆಟ್‌ಗಳನ್ನು 132 ರನ್‌ಗಳಾಗುವಷ್ಟರಲ್ಲಿ ಪಡೆದಿತ್ತು. ಕ್ವಾರ್ಟರ್‌ ಫೈನಲ್‌ ಆಸೆ ಕೈಬಿಟ್ಟಿರುವ ದೆಹಲಿ ತಂಡ 45 ರನ್‌ಗಳಿಂದ ಮುಂದಿದ್ದು, ನಾಲ್ಕು ವಿಕೆಟ್‌ ಗಳನ್ನಷ್ಟೇ ಹೊಂದಿದೆ. ಗುರುವಾರ ಪಂದ್ಯದ ಅಂತಿಮ ದಿನವಾಗಿದೆ.ಮುಂಬೈ ವಿರುದ್ಧ ಎಂಟು ವಿಕೆಟ್‌ ಪಡೆದಿದ್ದ ಎಚ್‌.ಎಸ್‌.ಶರತ್‌ ಮತ್ತೊಮ್ಮೆ ಗಮನ ಸೆಳೆದರು. ಭಾರತ ತಂಡದ ಮಾಜಿ ಆರಂಭಿಕರಾದ ಗೌತಮ್‌ ಗಂಭೀರ್‌ ಮತ್ತು ವೀರೇಂದ್ರ ಸೆಹ್ವಾಗ್ ಅವರ ವಿಕೆಟ್‌ ಉರುಳಿಸಿ ದೆಹಲಿಗೆ ಆಘಾತ ನೀಡಿದರು. ನಂತರ ರೋನಿತ್‌ ಮೋರೆ ಮೂರು ವಿಕೆಟ್‌ ಕಬಳಿಸಿ ಆತಿಥೇಯ ತಂಡದ ಬೆನ್ನೆಲುಬು ಮುರಿದರು.ದೆಹಲಿಯ 202 ರನ್‌ಗಳ ಮೊದಲ ಇನಿಂಗ್ಸ್‌ಗೆ ಉತ್ತರವಾಗಿ ಬೆಳಿಗ್ಗೆ ಕರ್ನಾಟಕ 289 ರನ್‌ಗಳಿಗೆ ಆಲೌಟ್‌ ಆಗಿತ್ತು. ಆರಂಭಿಕ ಆಟಗಾರ ಕರುಣ್‌ ನಾಯರ್‌ 105 ರನ್‌ (334ನಿಮಿಷ, 232 ಎಸೆತ, 1ಸಿಕ್ಸರ್‌, 12 ಬೌಂಡರಿ) ಗಳಿಸಿ ತಮ್ಮ ಚೊಚ್ಚಲ ರಣಜಿ ಶತಕ ದಾಖಲಿಸಿದರು, ಅವರು ದೆಹಲಿ ವಿರುದ್ಧ ಶತಕ ಗಳಿಸಿದ ಕರ್ನಾಟಕದ ಹತ್ತನೇ ಆಟಗಾರ. ಬೆಳಿಗ್ಗೆ 5 ವಿಕೆಟ್‌ಗೆ 226 ರನ್‌ಗಳೊಡನೆ ಆಟ ಮುಂದುವರಿಸಿದ ಕರ್ನಾಟಕ, ಕರುಣ್‌ ಅವರನ್ನು 256ರ ಮೊತ್ತದಲ್ಲಿ ಕಳೆದು ಕೊಂಡಿತು. ಭಾರತ ತಂಡದ ಮಾಜಿ ಎಡಗೈ ವೇಗದ ಬೌಲರ್‌ ಆಶೀಶ್‌ ನೆಹ್ರಾ ಎಸೆತವನ್ನು ರಕ್ಷಣಾತ್ಮಕವಾಗಿ ಆಡುವ ಯತ್ನದಲ್ಲಿ ಅವರು ಎಲ್‌ಬಿಡಬ್ಲ್ಯು ಆದರು.ಎಂಟನೇ ಕ್ರಮಾಂಕದಲ್ಲಿ ಆಡಲು ಇಳಿದಿದ್ದ ಸಿ.ಎಂ.ಗೌತಮ್‌ (15) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೊನೆಯ ಐದು ವಿಕೆಟ್‌ಗಳು 33 ರನ್ನಿಗೆ ಉರುಳಿದವು.

ಭೋಜನ ವಿರಾಮಕ್ಕೆ ದೆಹಲಿ ಎರಡನೇ ಇನಿಂಗ್ಸ್‌ನಲ್ಲಿ 5 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 19 ರನ್‌ಗಳಿಸಿತ್ತು. ಆದರೆ 12ನೇ ಓವರಿನಲ್ಲಿ ಶರತ್‌ ಬೌಲಿಂಗ್‌ನಲ್ಲಿ ಚೆಂಡನ್ನು ಹಿಂದೆ ಸರಿದು ಆಡಲು ಹೋದ ಗಂಭೀರ್‌ (3 ಬೌಂಡರಿಗಳಿದ್ದ 26) ಎಲ್‌ಬಿಡಬ್ಲ್ಯುಗೆ ಬಲಿಯಾದರು. ಸೆಹ್ವಾಗ್‌ (11) ಕೂಡ ಒಳನುಗ್ಗಿದ ಚೆಂಡಿಗೆ ಬ್ಯಾಕ್‌ಫುಟ್‌ ನಲ್ಲಿ ಆಡಲು ಹೋಗಿ ವಿಕೆಟ್‌ ತೆತ್ತರು. ಇದರೊ ಡನೆ ಹಿರಿಯ ಆಟಗಾರ ಸೆಹ್ವಾಗ್‌ ಅವರ ಈ ಸಾಲಿನ ಪ್ರದರ್ಶನ ನಿರಾಶಾದಾಯಕವಾಗೇ (ಒಟ್ಟು 13 ಇನಿಂಗ್ಸ್‌ಗಳಿಂದ 234) ಕೊನೆಗೊಂಡಿತು.ವಿನಯ್‌ ಕುಮಾರ್‌ ಬದಲು ದಾಳಿಗಿಳಿದಿದ್ದ ರೋನಿತ್‌ ಮೋರೆ ತಮ್ಮ ಮೂರನೇ ಓವರಿನಲ್ಲೇ ಮನನ್‌ ಶರ್ಮಾ ಅವರ ವಿಕೆಟ್‌ ಪಡೆದರು. ಈ ಹಂತದಲ್ಲಿ (3 ವಿಕೆಟ್‌ಗೆ 41) ಜತೆಗೂಡಿದ ಮಿಥುನ್‌ ಮನ್ಹಾಸ್‌ (43 ಎಸೆತಗಳಲ್ಲಿ 32) ಮತ್ತು ರಜತ್‌ ಭಾಟಿಯಾ (71 ಎಸೆತಗಳಲ್ಲಿ 30) ದೆಹಲಿಯ ನೆರವಿಗೆ ಬರುವಂತೆ ಕಂಡಿತ್ತು. ಇವರಿಬ್ಬರು ಅಳುಕದೇ, ಆಕರ್ಷಕ ಡ್ರೈವ್‌ಗಳ ಮೂಲಕ ನಾಲ್ಕನೇ ವಿಕೆಟ್‌ಗೆ 41 ರನ್‌ ಸೇರಿಸಿದ್ದರು. ಆದರೆ ಶ್ರೇಯಸ್‌ ಗೋಪಾಲ್‌ ತಮ್ಮದೇ ಬೌಲಿಂಗ್‌ನಲ್ಲಿ ಮನ್ಹಾಸ್‌ ಡ್ರೈವ್‌ ಮಾಡಿದ ಚೆಂಡನ್ನು ಕ್ಯಾಚ್‌ ಹಿಡಿದರು.ಶರತ್‌ಗೆ ಉತ್ತಮ ಬೆಂಬಲ ನೀಡಿದ ರೋನಿತ್‌ ಮೋರೆ ಮತ್ತೆರಡು ವಿಕೆಟ್‌ ಪಡೆದಿದ್ದು, ಕರ್ನಾಟಕದ ಹಿಡಿತ ಬಿಗಿಯಾಗಲು ಕಾರಣ ವಾ ಯಿತು. ಆಲ್‌ರೌಂಡರ್‌ ರಜತ್‌ ಭಾಟಿಯಾ ಹೊರಹೋಗುತ್ತಿದ್ದ ಎಸೆತವನ್ನು ವಿಕೆಟ್‌ ಕೀಪರ್‌ ಗೌತಮ್‌ ಕಡೆಗೆ ಆಡಿದರು, ಮೋರೆ ಅವರ ಮರು ಓವರಿನಲ್ಲೇ ರಾಹುಲ್‌ ಯಾದವ್‌ ಅವರ ಬ್ಯಾಟ್‌ ಮತ್ತು ಪ್ಯಾಡ್‌ ನಡುವೆ ವೇಗವಾಗಿ ನುಗ್ಗಿದ ಚೆಂಡು ಸ್ಟಂಪ್‌ಗಳನ್ನು ಉರುಳಿಸಿತು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry