ಭಾನುವಾರ, ಜೂನ್ 20, 2021
23 °C

ಕರ್ನಾಟಕ ವಾಲಿಬಾಲ್ ಲೀಗ್‌ ಟೂರ್ನಿ ಎಂಇಜಿ ತಂಡಕ್ಕೆ ಗೆಲುವು

ಪ್ರಜಾವಾಣಿ ಚಿತ್ರ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮದ್ರಾಸ್‌ ಎಂಜಿನಿಯರಿಂಗ್ ಗ್ರೂಪ್‌ (ಎಂಇಜಿ) ತಂಡದವರು ಕರ್ನಾಟಕ ವಾಲಿಬಾಲ್‌ ಸಂಸ್ಥೆ (ಕೆವಿಎ) ಆಶ್ರಯದ ಐದನೇ ಹಾಗೂ ಅಂತಿಮ ಹಂತದ ಕರ್ನಾಟಕ ವಾಲಿಬಾಲ್ ಲೀಗ್‌ (ಕೆವಿಎಲ್‌) ಟೂರ್ನಿಯಲ್ಲಿ ಗೆಲುವು ದಾಖಲಿಸಿದ್ದಾರೆ.ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಎಂಇಜಿ 25–17, 25–22, 25–16ರಲ್ಲಿ ಕರ್ನಾಟಕ ವಾಲಿಬಾಲ್‌ ಕ್ಲಬ್‌ (ಕೆವಿಸಿ) ತಂಡವನ್ನು ಸೋಲಿಸಿತು.ಎಂಇಜಿ ಪರ ಪ್ರಭು, ಭರತ್‌ ಮತ್ತು ಜಲೀಲ್ ಅಮೋಘ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಹಿಂದಿನ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ್ದ ಕೆವಿಸಿ ಈ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಯಿತು.ಜೆಎಸ್‌ಡಬ್ಲ್ಯುಗೆ ಜಯ: ದಿನದ ಎರಡನೇ ಪಂದ್ಯದಲ್ಲಿ ಜೆಎಸ್‌ಡಬ್ಲ್ಯು ತಂಡ 26–28, 25–19, 23–25, 25–23, 15–6ರಲ್ಲಿ ಪೋಸ್ಟಲ್‌ ತಂಡವನ್ನು ಮಣಿಸಿತು.107 ನಿಮಿಷಗಳ ತೀವ್ರ ಪೈಪೋಟಿ ಯಲ್ಲಿ  ಆಕಾಶ್‌, ಗುರ್ಜಿಂದರ್‌ ಸಿಂಗ್‌, ಹರ್ಮಿಂದರ್‌ ಸಿಂಗ್ ಮತ್ತು ದರ್ಶನ್‌ ಬಲಿಷ್ಠ ಸ್ಮ್ಯಾಸ್‌ಗಳನ್ನು ಸಿಡಿಸಿದರಲ್ಲದೆ ಹೊಂದಾಣಿಕೆಯ ಆಟವಾಡಿ ಜೆಎಸ್‌ಡಬ್ಲ್ಯು ತಂಡಕ್ಕೆ ಗೆಲುವು ತಂದುಕೊಟ್ಟರು.ಪೋಸ್ಟಲ್‌ ತಂಡದ ಯಶವಂತ್‌, ಸೆಂಥಿಲ್‌ ಮತ್ತು ಎ. ಕಾರ್ತಿಕ್‌ ಅವರ ಶ್ರಮ ಸಾಕಾಗಲಿಲ್ಲ.ಡಿವೈಇಎಸ್‌ಗೆ ಸುಲಭ ಜಯ: ದಿನದ ಅಂತಿಮ ಪಂದ್ಯದಲ್ಲಿ ಡಿವೈಇಎಸ್‌ ತಂಡ 25–21, 25–21, 25–20ರಲ್ಲಿ ಬಿಎಸ್‌ಎನ್‌ಎಲ್‌ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು.60 ನಿಮಿಷಗಳ ಹೋರಾಟದಲ್ಲಿ ಡಿವೈಇಎಸ್‌ನ ಶರವಣ, ಗಣೇಶ್, ಸೂರಜ್‌ ಮತ್ತು ಶರವಣ ಯಾದವ್‌ ಅದ್ಭುತ ಪ್ರದರ್ಶನ ತೋರಿ ಮಿಂಚಿದರು.

ಬಿಎಸ್‌ಎನ್‌ಎಲ್‌ ತಂಡದ ಗಣೇಶ್ ರೈ, ರವಿಕುಮಾರ್‌ ಮತ್ತು ಟಿ.ಬಿ ರವೀಂದ್ರ ಸೋಲಿನ ನಡುವೆಯೂ ಗಮನಾರ್ಹ ಪ್ರದರ್ಶನ ನೀಡಿದರು.ಒಟ್ಟು ಐದು ದಿನಗಳ ಟೂರ್ನಿಯಲ್ಲಿ ಈಗಾಗಲೇ ಮೂರು ದಿನಗಳ ಆಟ ಮುಕ್ತಾಯಗೊಂಡಿದ್ದು ಉಳಿದ ಎರಡು ದಿನಗಳ ಆಟದಲ್ಲಿ  ಗೆಲುವು ದಾಖಲಿ ಸುವ ಮೂಲಕ ಪ್ರಶಸ್ತಿ ಎತ್ತಿಹಿಡಿಯಲು ಎಲ್ಲಾ  ತಂಡಗಳು ಕಾತರವಾಗಿವೆ.ಟೂರ್ನಿಯ ನಾಲ್ಕನೇ ದಿನವಾದ ಶನಿವಾರ ನಡೆಯುವ ಒಟ್ಟಾರೆ 10 ಮತ್ತು ದಿನದ ಮೊದಲ  ಪಂದ್ಯದಲ್ಲಿ ಜೆಎಸ್‌ಡಬ್ಲ್ಯು ತಂಡ ಬಿಎಸ್‌ಎನ್‌ಎಲ್‌  ತಂಡದ ಸವಾಲನ್ನು ಎದುರಿಸಲಿದೆ. ಟೂರ್ನಿಯಲ್ಲಿ ಈಗಾಗಲೇ ಅಮೋಘ ಪ್ರದರ್ಶನ ತೋರಿರುವ ಜೆಎಸ್‌ಡಬ್ಲ್ಯು  ಈ ಪಂದ್ಯವನ್ನೂ ಗೆದ್ದು ಪಾಯಿಂಟ್‌ ಹೆಚ್ಚಿಸಿಕೊಳ್ಳುವ ಗುರಿ ಹೊಂದಿದೆ. ದಿನದ ಇತರ ಪಂದ್ಯಗಳಲ್ಲಿ ಡಿವೈಇಎಸ್‌ ಮತ್ತು ಕೆವಿಸಿ ಹಾಗೂ ಪೋಸ್ಟಲ್‌ ಮತ್ತು ಎಂಇಜಿ ತಂಡಗಳು  ಸೆಣಸಾಟ ನಡೆಸಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.