ಕರ್ನಾಟಕ-ವಿದರ್ಭ ಪಂದ್ಯ ಡ್ರಾ

7
ರಣಜಿ ಟ್ರೋಫಿ: ಮಿಂಚಿದ ಅಭಿಮನ್ಯು ಮಿಥುನ್, ಆತಿಥೇಯ ತಂಡಕ್ಕೆ ಮೂರು ಅಂಕ

ಕರ್ನಾಟಕ-ವಿದರ್ಭ ಪಂದ್ಯ ಡ್ರಾ

Published:
Updated:
ಕರ್ನಾಟಕ-ವಿದರ್ಭ ಪಂದ್ಯ ಡ್ರಾ

ಮೈಸೂರು: ಮೊದಲ ಮೂರು ದಿನ ರನ್ನುಗಳ ಹೊಳೆ ಹರಿಸಿದ್ದ ಗಂಗೋತ್ರಿ ಗ್ಲೇಡ್ಸ್ ಅಂಗಳ ಮಂಗಳವಾರ ಕರ್ನಾಟಕದ `ಬೌಲಿಂಗ್ ಶಕ್ತಿ'ಗೆ ಶರಣಾಯಿತು!ಇದರ ಫಲವಾಗಿ ರಣಜಿ ಟೂರ್ನಿಯ ಬಿ ಗುಂಪಿನ ಆರನೇ ಪಂದ್ಯ ಡ್ರಾದಲ್ಲಿ ಮುಕ್ತಾಯವಾದರೂ, ಆತಿಥೇಯ ಕರ್ನಾಟಕ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಮೂರು ಅಂಕಗಳನ್ನು ಗಳಿಸಿತು. ವಿದರ್ಭ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಇದರಿಂದಾಗಿ ಬಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಕರ್ನಾಟಕ ತಂಡವು ಐದನೇ ಸ್ಥಾನಕ್ಕೇರಿದೆ. ಒಟ್ಟು ಆರು ಪಂದ್ಯಗಳಿಂದ 14 ಪಾಯಿಂಟ್ ಗಳಿಸಿರುವ ತಂಡವು ಕ್ವಾರ್ಟರ್‌ಫೈನಲ್ ಹಂತಕ್ಕೆ ಅರ್ಹತೆ ಗಳಿಸಬೇಕಾದರೆ, ಹುಬ್ಬಳ್ಳಿಯಲ್ಲಿ ಡಿಸೆಂಬರ್ 22ರಿಂದ ಹರಿಯಾಣ ವಿರುದ್ಧ ಮತ್ತು ಡಿಸೆಂಬರ್ 29ರಿಂದ ಪುಣೆಯಲ್ಲಿ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆದ್ದು ಸಂಪೂರ್ಣ ಅಂಕ ಗಿಟ್ಟಿಸಬೇಕು.ಮೈಸೂರಿನ ಪಂದ್ಯದ ಮೊದಲ ಮೂರು ದಿನಗಳಲ್ಲಿ ಒಟ್ಟು 921 ರನ್ (ಕರ್ನಾಟಕ 619 ಮತ್ತು ವಿದರ್ಭ 302) ಹರಿದಿದ್ದ ಗ್ಲೇಡ್ಸ್ ಅಂಗಳದಲ್ಲಿ ಕೊನೆದಿನದಂದು ವಿದರ್ಭದ ಎಂಟು ಮತ್ತು ಎರಡನೇ ಇನಿಂಗ್ಸ್ ಆಡಿದ ಕರ್ನಾಟಕದ 3 ವಿಕೆಟ್‌ಗಳು ಸೇರಿದಂತೆ ಒಟ್ಟು 11 ವಿಕೆಟ್‌ಗಳು ಬಿದ್ದವು. ಮೊದಲ ಇನಿಂಗ್ಸ್‌ನಲ್ಲಿ ಡಿಕ್ಲೆರ್ ಮಾಡಿಕೊಂಡಿದ್ದ ಕರ್ನಾಟಕ ನೀಡಿದ 619 ರನ್‌ಗಳಿಗೆ ಉತ್ತರವಾಗಿ ವಿದರ್ಭಕ್ಕೆ ಕೇವಲ 447 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. 172 ರನ್‌ಗಳಿಂದ ಹಿಂದೆ ಉಳಿದ ವಿದರ್ಭಕ್ಕೆ ಫಾಲೋಆನ್ ನೀಡುವ ಅವಕಾಶವಿದ್ದರೂ, ಕರ್ನಾಟಕ ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮಧ್ಯಾಹ್ನ 3.35ಕ್ಕೆ ಪಂದ್ಯವನ್ನು ಅಂಪೈರ್‌ಗಳು ಮುಕ್ತಾಯ ಎಂದು ಘೋಷಿಸುವ ಮುನ್ನ 24 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು. ಗ್ಲೇಡ್ಸ್ ಮೈದಾನದಲ್ಲಿ ನಾಲ್ಕು ದಿನಗಳಲ್ಲಿ ಒಟ್ಟು 1147 ರನ್ನುಗಳು ದಾಖಲಾದವು.ಮಿಥುನ್ ಮ್ಯಾಜಿಕ್: ಪಂದ್ಯದ ಮೂರನೇ ದಿನವಾದ ಸೋಮವಾರ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಶತಕ ಗಳಿಸಿದ್ದ ಆಮೋಲ್ ಉಬರಾಂದೆ ಮತ್ತು ಶಲಭ್ ಶ್ರೀವಾಸ್ತವ ಕರ್ನಾಟಕದ ಬೌಲರ್‌ಗಳ ಎಲ್ಲ ತಂತ್ರಗಳಿಗೂ ದಿಟ್ಟ ಉತ್ತರ ನೀಡಿದ್ದರು. ಇದರಿಂದಾಗಿ  ವಿದರ್ಭ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿತ್ತು.  ಮಂಗಳವಾರ ಆಟ ಮುಂದುವರೆಸಿದ ವಿದರ್ಭಕ್ಕೆ'ಪಿಣ್ಯ ಎಕ್ಸ್‌ಪ್ರೆಸ್' ಅಭಿಮನ್ಯು ಮಿಥುನ್ (32.2-10-60-4)  ತಮ್ಮ ಮೊದಲ ಸ್ಪೆಲ್‌ನಲ್ಲಿಯೇ  (9-3-15-2) ಪೆಟ್ಟು ನೀಡಿದರು.  ಶಲಭ್ ಶ್ರೀವಾಸ್ತವ (97; 323ನಿ, 247ಎಸೆತ, 11ಬೌಂಡರಿ) ಅವರಿಗೆ ಶತಕ ಗಳಿಸಲು ಬಿಡಲಿಲ್ಲ. ದಿನದ ಒಂಬತ್ತನೇ ಓವರ್‌ನಲ್ಲಿ ನಿಧಾನಗತಿಯ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದ ಶಲಭ್ ಬ್ಯಾಟಿಗೆ ಮುತ್ತಿಕ್ಕಿದ ಚೆಂಡು, ಶಾರ್ಟ್ ಮಿಡ್‌ವಿಕೆಟ್‌ನಲ್ಲಿದ್ದ ಬದಲೀ ಫೀಲ್ಡರ್ ಅಮಿತ್ ವರ್ಮಾ ಬೊಗಸೆಯಲ್ಲಿ ಬಂದಿಯಾಯಿತು.  ನಾಯಕ ಆರ್. ವಿನಯಕುಮಾರ್ ಅನುಪಸ್ಥಿತಿಯಲ್ಲಿ ಸಾರಥ್ಯ ವಹಿಸಿದ ಸ್ಟುವರ್ಟ್ ಬಿನ್ನಿ ಮಿಥುನ್‌ಗೆ ಹೆಚ್ಚು ಬೌಲಿಂಗ್ ನೀಡಿ, ಉತ್ತಮ ಫೀಲ್ಡಿಂಗ್ ತಂತ್ರ ರೂಪಿಸಿದ್ದರು. ಕ್ರೀಸ್‌ಗೆ ಬಂದ ಅನುಭವಿ ಆಟಗಾರ ಹೇಮಂಗ್ ಬದಾನಿ ಜೊತೆಗೆ ರನ್ ಗಳಿಕೆಗೆ ವೇಗ ನೀಡುವ ಯತ್ನದಲ್ಲಿದ್ದ ಅಮೋಲ್ ಉಬರಾಂದೆಗೂ ಮಿಥುನ್ ಪೆವಿಲಿಯನ್ ದಾರಿ ತೋರಿದರು. ಬೌನ್ಸ್‌ರ್ ಅನ್ನು ಪುಲ್ ಮಾಡಿದ ಅಮೋಲ್ ಬ್ಯಾಟಿನಿಂದ ಚಿಮ್ಮಿದ ಚೆಂಡನ್ನು ಸ್ಕ್ವೇರ್ ಲೆಗ್‌ನಲ್ಲಿದ್ದ ಮನೀಶ್ ಪಾಂಡೆ ತಮ್ಮ ಬಲಭಾಗಕ್ಕೆ ಡೈವ್ ಮಾಡಿ ಪಡೆದ ಕ್ಯಾಚ್ ಅದ್ಭುತವಾಗಿತ್ತು. ಸೋಮವಾರ 129 ರನ್ ಗಳಿಸಿದ್ದ ಆಮೋಲ್ ಇವತ್ತು ಮತ್ತೆ ಎಂಟು ರನ್ ಸೇರಿಸಿಕೊಂಡರು. ಇದಕ್ಕೂ ಮೊದಲಿನ ಅಪ್ಪಣ್ಣ ಓವರ್‌ನಲ್ಲಿ ಹೇಮಂಗ್ ಬದಾನಿ ಸ್ಟಂಪಿಂಗ್ ಅಪಾಯದಿಂದ ಪಾರಾಗಿ, ವಿಕೆಟ್ ಕೀಪರ್ ಸಿ.ಎಂ. ಗೌತಮ್‌ರಿಂದ ಜೀವದಾನ ಪಡೆದಿದ್ದರು. ಆದರೆ 131ನೇ ಓವರ್‌ನಲ್ಲಿ ಅಪ್ಪಣ್ಣ ಬೌಲಿಂಗನಲ್ಲಿ,  ಆಫ್‌ಸ್ಟಂಪ್‌ನತ್ತ ತಿರುಗುತ್ತಿದ್ದ ಎಸೆತವನ್ನು ಆಡಿದ ಬದಾನಿ ಬ್ಯಾಟಿನ ಅಂಚಿಗೆ ಬಡಿದ ಚೆಂಡು ವಿಕೆಟ್‌ಕೀಪರ್ ಗೌತಮ್ ಪ್ಯಾಡಿಗೆ ಬಡಿದು ಮೇಲೆ ಹಾರಿತು.  ಸ್ಲಿಪ್‌ನಲ್ಲಿದ್ದ ರಾಬಿನ್ ಉತ್ತಪ್ಪ ಜಿಗಿದು  ಕ್ಯಾಚ್ ಪಡೆದರು. 

ಊಟಕ್ಕೂ ಮುನ್ನ ಎಚ್.ಎಸ್. ಶರತ್ ಬೌಲಿಂಗ್‌ನಲ್ಲಿ ಉತ್ತಪ್ಪ ಬಿಟ್ಟ ಕ್ಯಾಚ್‌ನಿಂದ ಜೀವದಾನ ಪಡೆದಿದ್ದ ಅಪೂರ್ವ್ ವಾಂಖೆಡೆ (19; 46ನಿ, 29ಎಸೆತ, 3ಬೌಂಡರಿ), ಶರತ್ ಹಾಕಿದ ಇನ್ನೊಂದು ಓವರ್‌ನಲ್ಲಿಯೇ  ವಿಕೆಟ್‌ಕೀಪರ್‌ಗೆ ಕ್ಯಾಚಿತ್ತರು. ವಿರಾಮದ ನಂತರ ಬಿರುಸಿನ ಆಟ ಆರಂಭಿಸಿದ  ಗೌರವ್ ಉಪಾಧ್ಯಾಯ (38; 80ನಿ, 73ಎಸೆತ, 5ಬೌಂಡರಿ, 1ಸಿಕ್ಸರ್) ಮತ್ತು ನಾಯಕ ಸಾಯಿರಾಜ್ ಬಹುತುಳೆ (ಔಟಾಗದೇ 48, 97ನಿ, 77ಎಸೆತ, 4ಬೌಂಡರಿ, 3ಸಿಕ್ಸರ್) ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಇನಿಂಗ್ಸ್‌ನ 153ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಗೌರವ್ ಬಿದ್ದರು.  ನಂತರ ಗಣೇಶ್ ಸತೀಶ್ ಓವರ್‌ನಲ್ಲಿ ಶ್ರೀಕಾಂತ್ ವಾಘ್ ಕ್ಲೀನ್‌ಬೌಲ್ಡ್ ಆದರು. ಸಂದೀಪ್ ಸಿಂಗ್ ಒಂದು ಬೌಂಡರಿ ಗಳಿಸಿ ಅಪ್ಪಣ್ಣನ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ನಾಯಕ ಸಾಯಿರಾಜ್, ಗಣೇಶ್ ಓವರ್‌ನಲ್ಲಿ ಒಂದು ಸಿಕ್ಸರ್ ಹೊಡೆದರು. ನಂತರ ಅಪ್ಪಣ್ಣನ ಒಂದೇ ಓವರ್‌ನಲ್ಲಿ  ಅವರು ಎತ್ತಿದ ಎರಡು ಸಿಕ್ಸರ್‌ಗಳು ಕೆಎಸ್‌ಸಿಎ `ಅಮೃತ ಮಹೋತ್ಸವ ಪೆವಿಲಿಯನ್' ಮುಂದೆ ಹೋಗಿ ಬಿದ್ದವು. ಗಣೇಶ್ ಬದಲಿಗೆ ಮತ್ತೆ ಚೆಂಡನ್ನು ಕೈಗೆತ್ತಿಕೊಂಡ ಮಿಥುನ್ ಎರಡನೇ ಎಸೆತದಲ್ಲಿ  ರವಿ ಠಾಕೂರ್ ಔಟಾಗುವುದರ ಜೊತೆಗೆ ಇನಿಂಗ್ಸ್‌ಗೆ ತೆರೆಬಿತ್ತು. ಫಾಲೋಅನ್ ನೀಡಿ ಮತ್ತೆ ಫೀಲ್ಡಿಂಗ್ ಮಾಡಿ ದಣಿಯುವ ಬದಲು  ಬ್ಯಾಟಿಂಗ್ ಮಾಡಲು ಕರ್ನಾಟಕ ನಿರ್ಧರಿಸಿತು. ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಶತಕ ಗಳಿಸಿದ್ದ ರಾಹುಲ್ ಬೇಗನೆ ಔಟಾದರು. ಎರಡನೇ ವಿಕೆಟ್ ರೂಪದಲ್ಲಿ ಎಲ್‌ಬಿಡಬ್ಲ್ಯು ಆದ ರಾಬಿನ್ ಉತ್ತಪ್ಪ ನಂತರ ಬಂದ ಕುನಾಲ್ ಕಪೂರ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಗಣೇಶ್ ಸತೀಶ್ ಮತ್ತು ಮನೀಶ್‌ಪಾಂಡೆ ವಿದರ್ಭ ಬೌಲರ್‌ಗಳ ಎಸೆತಗಳನ್ನು ಬೌಂಡರಿ ದಾಟಿಸುತ್ತ, ಮೈದಾನದಲ್ಲಿ ಸೇರಿದ್ದ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನಿಂಗ್ಸ್ 155 ಓವರ್‌ಗಳಲ್ಲಿ 619ಕ್ಕೆ8 ಡಿಕ್ಲೇರ್ಡ್

ವಿದರ್ಭ ಪ್ರಥಮ ಇನಿಂಗ್ಸ್ 163.2 ಓವರ್‌ಗಳಲ್ಲಿ 447

(ಸೋಮವಾರದ ಅಂತ್ಯಕ್ಕೆ 115 ಓವರ್‌ಗಳಲ್ಲಿ

2 ವಿಕೆಟ್‌ಗೆ 302)


ಆಮೋಲ್ ಉಬರಾಂದೆ ಸಿ ಮನೀಶ್ ಪಾಂಡೆ ಬಿ ಮಿಥುನ್ 137

ಶಲಭ್ ಶ್ರೀವಾಸ್ತವ ಸಿ ಅಮಿತ್ ವರ್ಮಾ (ಬದಲಿ ಫೀಲ್ಡರ್)         ಬಿ ಮಿಥುನ್  97

ಹೇಮಂಗ್ ಬದಾನಿ ಸಿ ಉತ್ತಪ್ಪ ಬಿ ಅಪ್ಪಣ್ಣ  11

ಅಪೂರ್ವ್ ವಾಂಖೆಡೆ ಸಿ ಗೌತಮ್ ಬಿ ಶರತ್  19

ಗೌರವ್ ಉಪಾಧ್ಯಾಯ ಎಲ್‌ಬಿಡಬ್ಲ್ಯು ಅಪ್ಪಣ್ಣ  38

ಸಾಯಿರಾಜ್ ಬಹುತುಳೆ ಔಟಾಗದೇ 48

ಶ್ರೀಕಾಂತ್ ವಾಘ್ ಬಿ ಗಣೇಶ್ ಸತೀಶ್  00

ಸಂದೀಪ್ ಸಿಂಗ್ ಎಲ್‌ಬಿಡಬ್ಲ್ಯು ಅಪ್ಪಣ್ಣ  04

ರವಿ ಠಾಕೂರ್ ಸಿ ಗೌತಮ್ ಬಿ ಮಿಥುನ್  00

ಇತರೆ: 18 (ಬೈ 6, ಲೆಗ್‌ಬೈ 9, ವೈಡ್ 1, ನೋಬಾಲ್ 2)ವಿಕೆಟ್ ಪತನ: 3-321 (123.5, ಶಲಭ್), 4-330 (127.2 ಆಮೋಲ್), 5-338 (130.5 ಬದಾನಿ), 6-368 (137.3, ಅಪೂರ್ವ್), 7-406 (152.2, ಉಪಾಧ್ಯಾಯ), 8-407 (153.3 ವಾಘ್), 9-417 (156.6 ಸಿಂಗ್), 10-447 (163.2, ಠಾಕೂರ್).

ಬೌಲಿಂಗ್: ಆರ್. ವಿನಯಕುಮಾರ್ 13-3-45-0, ಅಭಿಮನ್ಯು ಮಿಥುನ್ 32.2-10-60-4, ಸ್ಟುವರ್ಟ್ ಬಿನ್ನಿ 21-4-74-1 (ವೈಡ್ 1, ನೋಬಾಲ್ 1), ಎಚ್.ಎಸ್. ಶರತ್ 28-5-90-1 (ನೋಬಾಲ್1), ಕೆ.ಪಿ. ಅಪ್ಪಣ್ಣ 50-13-109-3, ಗಣೇಶ್ ಸತೀಶ್ 13-0-47-1, ಕುನಾಲ್ ಕಪೂರ್ 6-3-7-0.ಕರ್ನಾಟಕ ದ್ವಿತೀಯ ಇನಿಂಗ್ಸ್24 ಓವರ್‌ಗಳಲ್ಲಿ

3 ವಿಕೆಟ್‌ಗೆ 81


ರಾಬಿನ್ ಉತ್ತಪ್ಪ ಎಲ್‌ಬಿಡಬ್ಲ್ಯು ಶ್ರೀಕಾಂತ್ ವಾಘ್  18

ಕೆ.ಎಲ್. ರಾಹುಲ್ ಸಿ ಉಪಾಧ್ಯಾಯ ಬಿ ಸಂದೀಪ್ ಸಿಂಗ್  06

ಕುನಾಲ್ ಕಪೂರ್ ಸ್ಟಂಪ್ಡ್ ಆಮೋಲ್ ಬಿ ಸಂದೀಪ್‌ಸಿಂಗ್  07

ಗಣೇಶ್ ಸತೀಶ್ ಔಟಾಗದೆ  14

ಮನೀಶ್ ಪಾಂಡೆ ಔಟಾಗದೆ  28ಇತರೆ:   (ಬೈ-4 , ಲೆಗ್‌ಬೈ-2 ,  ನೋಬಾಲ್-2)  08

ವಿಕೆಟ್ ಪತನ: 1-9 (3.1 ರಾಹುಲ್), 2-33 (8.5, ಉತ್ತಪ್ಪ), 3-33 (9.4, ಕಪೂರ್),

ಬೌಲಿಂಗ್: ಶ್ರೀಕಾಂತ್ ವಾಘ್  7-0-37-1 (ನೋಬಾಲ್ 2), ಸಂದೀಪ್ ಸಿಂಗ್ 6-3-7-2, ಗೌರವ್ ಉಪಾಧ್ಯಾಯ 6-0-18-0, ರವಿ ಠಾಕೂರ್ 5-0-13-0ಫಲಿತಾಂಶ:  ಪಂದ್ಯ ಡ್ರಾ (ಕರ್ನಾಟಕಕ್ಕೆ ಒಂದು ಇನಿಂಗ್ಸ್ ಮುನ್ನಡೆ)

ಅಂಕಗಳು: ಕರ್ನಾಟಕ -3, ವಿದರ್ಭ -1

ಪಂದ್ಯದ ಆಟಗಾರ: ಸಿ.ಎಂ. ಗೌತಮ್ (ಕರ್ನಾಟಕ).

ಕರ್ನಾಟಕದ ಮುಂದಿನ ಪಂದ್ಯ: ಹರಿಯಾಣ ವಿರುದ್ಧ (ಹುಬ್ಬಳ್ಳಿ, ಡಿಸೆಂಬರ್ 21ರಿಂದ 24)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry