ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಮಾನ್ಯ ಸಭೆ

7

ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಮಾನ್ಯ ಸಭೆ

Published:
Updated:

ಧಾರವಾಡ: ಕನ್ನಡ ನಾಡು, ನುಡಿ, ಜಲ, ನೆಲ ರಕ್ಷಣೆಗೆ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿ, ಇದೇ 19ಕ್ಕೆ ಮುಂದೂಡಲ್ಪಟ್ಟ ಪ್ರಸಂಗ ಭಾನುವಾರ ನಡೆಯಿತು.ಸಭೆ ಆರಂಭವಾಗುತ್ತಿದ್ದಂತೆ ಅನೇಕ ಸದಸ್ಯರು ವರದಿ ಹಾಗೂ ಆಯವ್ಯಯ ಪತ್ರಿಕೆಯನ್ನು ಸಭೆಗಿಂತ 10 ದಿವಸ ಮೊದಲೇ ಸದಸ್ಯರಿಗೆ ಕಳುಹಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡಿಲ್ಲ ಎಂದು ಆಪಾದಿಸಿ ಸಭೆಯನ್ನು ಮುಂದೂಡ ಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಗದ್ದಲದ ವಾತಾವರಣ ಉಂಟಾಗಿ, ಸಭೆಯಲ್ಲಿ ಏನು ನಡೆಯು ತ್ತಿದೆ ಎಂಬುದೇ ಕೆಲವು ಸದಸ್ಯರಿಗೆ ಗೊತ್ತಾಗಲಿಲ್ಲ.ಆಯವ್ಯಯ ಪತ್ರಿಕೆಯಲ್ಲಿಯ ಕೆಲವು ಅಂಶಗಳು ಸರಿಯಿಲ್ಲ ಎಂದು ಸದಸ್ಯರ ಆರೋಪಿಸಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರ ಅನೇಕ ಪ್ರಶ್ನೆಗಳಿಗೆ ಹಲಗತ್ತಿ ಉತ್ತರಿಸುವಲ್ಲಿ ತಡವರಿಸಿದರು. ಕೆಲವು ಸದಸ್ಯರಂತೂ ಸಂಘದ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನೇರವಾಗಿಯೇ ಆರೋಪಿಸಿದರು.ಯಾವುದೇ ಕಾರಣಕ್ಕೂ ಇಂದು ಸಭೆ ನಡೆಸಬಾರದು. ಇಂದಿನ ಸಭೆ ಕಾನೂನು ಬಾಹಿರವಾಗಿದೆ. ಆದ್ದರಿಂದ ಸಭೆಯನ್ನು ಮುಂದೂಡಬೇಕು ಎಂದು ಪಟ್ಟು ಹಿಡಿದರು. ಸಭೆ ಮುಂದೂಡಲು ಸದಸ್ಯರ ಸಹಮತವಿದೆಯೇ, ಹಾಗಿದ್ದರೆ ಕೈ ಎತ್ತಬೇಕು ಎಂದು ಹಲಗತ್ತಿ ಹೇಳುತ್ತಿದ್ದಂತೆ, ಬಹುತೇಕ ಸದಸ್ಯರು ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯ ಬಸವಪ್ರಭು ಹೊಸಕೇರಿ ಮಾತನಾಡಲು ಮುಂದಾಗುತ್ತಿದ್ದಂತೆ ಯೇ ಸದಸ್ಯರು ವೇದಿಕೆ ಎದುರಿಗೆ ಹೋಗಿ ವಿರೋಧ ವ್ಯಕ್ತಪಡಿಸಿದರು. ಅಧ್ಯಕ್ಷರು ಮಾತ್ರ ಸಭೆ ಮುಂದೂಡಿದ ಬಗ್ಗೆ ರೂಲಿಂಗ್ ನೀಡಬೇಕು. ಯಾರಿಗೂ ಮಾತನಾಡಲು ಅವಕಾಶವಿಲ್ಲ ಎಂದು ಸದಸ್ಯರು ಹೇಳುತ್ತಿದ್ದಂತೆ ಕೋಲಾಹಲದ ವಾತಾವರಣ ಉಂಟಾಯಿತು.ಅಧ್ಯಕ್ಷ ಡಾ. ಪಾಟೀಲ ಪುಟ್ಟಪ್ಪ ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿ ದರು. `ಸಭೆಯು ವ್ಯವಸ್ಥಿತ ರೀತಿಯಿಂದ ನಡೆಯಬೇಕು. ಸದಸ್ಯರ ಈ ರೀತಿಯ ವರ್ತನೆ ನನಗೆ ನಾಚಿಕೆ ತರುವಂಥದ್ದು. ನಾನೇನು ಅಧ್ಯಕ್ಷನಾಗಿ ಇರಬೇಕು ಎಂದೇನಿಲ್ಲ~ ಎಂದು ಖಾರವಾಗಿ ಹೇಳಿದರು.ಸದಸ್ಯರು ಶಾಂತರೀತಿಯಿಂದ ಚರ್ಚೆ ನಡೆಸಬೇಕು. ಸದಸ್ಯರ ಅಭಿಪ್ರಾಯಕ್ಕೆ ಬೆಲೆ ಇದೆ, ಕಡೆಗಣಿಸುವ ಪ್ರಶ್ನೆ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಸಕಾರದಿಂದ ಅನುದಾನ ಪಡೆಯುವ ಸಂಸ್ಥೆಯಲ್ಲಿ ಎಲ್ಲ ಕೆಲಸದಲ್ಲಿಯೂ ಪಾರದರ್ಶಕತೆ ಇರ ಬೇಕು ಎಂದು ಸಲಹೆ ನೀಡಿದರು.

 

ನಂತರ ಪ್ರಧಾನ ಕಾರ್ಯದಶಿ ಶಂಕರ ಹಲಗತ್ತಿ ಅವರು ಇದೇ 19 ರಂದು ಸಂಜೆ 4ಕ್ಕೆ ಸಾಮಾನ್ಯ ಸಭೆ ನಡೆಸಲಾ ಗುವುದು ಎಂದು ಅಧಿಕೃತವಾಗಿ ಪ್ರಕಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry