ಕರ್ನಾಟಕ ಸೊಗಡಿನ ಮಾಂಸದೂಟ

7

ಕರ್ನಾಟಕ ಸೊಗಡಿನ ಮಾಂಸದೂಟ

Published:
Updated:

 


ಬಾಯಲ್ಲಿ ನೀರೂರಿಸುವ ಬೋಟಿ ಫ್ರೈ, ರುಚಿರುಚಿಯಾದ ತಲೆಮಾಂಸ, ಮಟನ್ ಫ್ರೈ, ನಾಟಿ ಕೋಳಿ ಸಾರಿನ ಜತೆಗೆ ರಾಗಿಮುದ್ದೆಯನ್ನು ಅದ್ದಿಕೊಂಡು ತಿನ್ನುತ್ತಿದ್ದರೆ ಸಿಗುವ ಮಜವೇ ಬೇರೆ. ಇವೇ ಈ ರೆಸ್ಟೋರಾದ ರುಚಿ ರುಚಿಯಾದ ಖಾದ್ಯಗಳು.ಕರ್ನಾಟಕ ಶೈಲಿಯಲ್ಲಿ ಸಿದ್ಧಗೊಂಡಿರುವ ಇಲ್ಲಿನ ನಾಟಿಕೋಳಿ ಬಿರಿಯಾನಿ ರುಚಿಯಂತೂ ವ್ಹಾಹ್! ಅನಿಸುವಂತಿದೆ. ದೇಸಿ ರುಚಿಯಲ್ಲಿ ತಯಾರಾದ ಖಾದ್ಯಗಳ ಬಗೆ ಒಂದೇ, ಎರಡೇ... ಈ ರೆಸ್ಟೋರಾದ ಎಲ್ಲ ಮಾಂಸಾಹಾರಿ ಖಾದ್ಯಗಳ ರುಚಿಯೂ ಅದ್ಭುತ. 

 

ಸದಾ ಕಾಂಟಿನೆಂಟಲ್, ಚೈನೀಸ್ ಹಾಗೂ ಥಾಯ್ ಖಾದ್ಯಗಳನ್ನು ತಿಂದು ಬೇಸತ್ತಿರುವವರು ಒಮ್ಮೆ ಇಲ್ಲಿಗೆ ಬಂದು ಕರ್ನಾಟಕದ ದೇಸಿ ಊಟವನ್ನು ಸವಿದರೆ ಮತ್ತೆ ಯಾವತ್ತಿಗೂ ಜನರು ಆ ತಿನಿಸುಗಳನ್ನು ಬಯಸುವುದಿಲ್ಲ ಅಂತ ಮಾತಿಗಿಳಿದರು ನ್ಯೂ ಪ್ರಶಾಂತ್ ಹೋಟೆಲ್‌ನ ಮಾಲೀಕ ರಮೇಶ್. 

 

`ನಮ್ಮಲ್ಲಿ ಸಿಗ್ನೇಚರ್ ಡಿಷ್ ಅಂತ ಯಾವುದೂ ಇಲ್ಲ. ಯಾಕಂದ್ರೆ ನಮ್ಮ ಹೋಟೆಲ್‌ನಲ್ಲಿ ಸಿಗುವ ಎಲ್ಲ ಆಹಾರದ ರುಚಿಯೂ ಅಚ್ಚುಕಟ್ಟಾಗಿದೆ. ಇಲ್ಲಿ ಊಟ ಸವಿದ ಗ್ರಾಹಕರೆಲ್ಲರೂ ಕೊನೆಯಲ್ಲಿ ಊಟ ತುಂಬಾ ಚೆನ್ನಾಗಿದೆ ಅಂತ ಕಾಂಪ್ಲಿಮೆಂಟ್ಸ್ ನೀಡಿ ಹೋಗುತ್ತಾರೆ. ಗ್ರಾಹಕರಿಗೆ ಇಷ್ಟವಾಗದ ಖಾದ್ಯಗಳಿಗೆ ನಮ್ಮ ಮೆನುವಿನಲ್ಲಿ ಜಾಗವಿಲ್ಲ' ಅನ್ನುತ್ತಾ ಮಾತು ಮುಂದುವರಿಸಿದರು ಅವರು. 

 

ಅರಿಶಿನ, ಧನಿಯಾ, ಮೆಣಸಿನಕಾಯಿ, ಮೆಣಸು ಹಾಗೂ ಮಾಂಸಾಹಾರಿ ಖಾದ್ಯಗಳ ತಯಾರಿಕೆಗೆ ಬೇಕಾದ ಎಲ್ಲ ಬಗೆಯ ಮಸಾಲೆ ಹಾಗೂ ಸಾಂಬಾರ ಪದಾರ್ಥಗಳನ್ನು ಅವರು ಮನೆಯಲ್ಲಿಯೇ ಸಿದ್ಧಪಡಿಸುತ್ತಾರೆ. ಅವುಗಳನ್ನೇ ಅಡುಗೆಗೆ ಬಳಸುತ್ತಾರೆ. `ಯಾವುದೇ ಟೇಸ್ಟಿಂಗ್ ಪುಡಿ ಬಳಸದೇ ಮನೆಯಲ್ಲಿ ಅಡುಗೆ ತಯಾರು ಮಾಡುವ ಮಾದರಿಯಲ್ಲಿ ಮಾಡುವುದು ನಮ್ಮ ವಿಶೇಷ. ಹಾಗಾಗಿ ಇಲ್ಲಿನ ನಾಟಿಕೋಳಿ ಬಿರಿಯಾನಿ, ಸಾರು, ಫ್ರೈ, ತಲೆಮಾಂಸ ಹಾಗೂ ಬೋಟಿ ಸ್ವಾದ ಚೆನ್ನಾಗಿರುತ್ತದೆ. ಗ್ರಾಹಕರು ಹೋಟೆಲ್‌ನ ರುಚಿಗೆ ಮನಸೋತಿದ್ದಾರೆ' ಎನ್ನುತ್ತಾರೆ ರಮೇಶ್. 

 

`ಮಾಂಸಾಹಾರಿ ಖಾದ್ಯ ತಯಾರಿಕೆಗೆ ನಾವು ನಾಟಿ ಟಗರುಗಳನ್ನು ಮಾತ್ರ ಬಳಸುತ್ತೇವೆ. ಸಿಂಧೂರು, ಎಳಗಿನ ಮರಿ, ಕರಿ ಕುರಿ ಅಥವಾ ಹೆಣ್ಣು ಕುರಿ, ಆಡುಗಳನ್ನು ಬಳಸುವುದಿಲ್ಲ. ಇವುಗಳ ಮಾಂಸವನ್ನು ಬಳಸಿ ಮಾಡಿದ ಅಡುಗೆ ಅಷ್ಟು ರುಚಿಯಾಗಿರುವುದಿಲ್ಲ. ಹಾಗಾಗಿ ನಾಟಿ ಕುರಿ ಮಾಂಸವನ್ನೇ ಬಳಸುತ್ತೇವೆ. ಅಂತಿಮವಾಗಿ ಗ್ರಾಹಕರನ್ನು ತೃಪ್ತಿಪಡಿಸುವುದೇ ನಮ್ಮ ಉದ್ದೇಶ. ಆದ್ದರಿಂದ ಮಾಂಸ ಖರೀದಿಯಿಂದ ಹಿಡಿದು ಖಾದ್ಯಗಳನ್ನು ತಯಾರಿಸಿ ಅವುಗಳನ್ನು ಟೇಬಲ್‌ಗೆ ಸರ್ವ್ ಮಾಡುವವರೆಗಿನ ಉಸ್ತುವಾರಿಯನ್ನು ನಾನೇ ನೋಡಿಕೊಳ್ಳುತ್ತೇನೆ' ಎನ್ನುತ್ತಾರೆ ಅವರು.

 

ಚಿಕನ್‌ನಲ್ಲಿ ನಾಟಿ ಕುರ್ಮಾ, ಚಿಕನ್ ಮಸಾಲ, ಬಟರ್ ಚಿಕನ್, ಟಗರಿನ ಮಾಂಸದಲ್ಲಿ ತಯಾರಾದ ಮಟನ್ ಚಾಪ್ಸ್, ತಲೆಮಾಂಸ ಹಾಗೂ ಬೋಟಿ ಫ್ರೈ ಇಲ್ಲಿನ ವಿಶೇಷ ತಿನಿಸುಗಳು. ಅಪ್ಪಟ ಮನೆಯ ಸಂಬಾರ ಪದಾರ್ಥಗಳಲ್ಲೇ ಸಿದ್ಧಗೊಂಡಿರುವುದರಿಂದ ಇವುಗಳ ರುಚಿಯೂ ಅದ್ಭುತ. ಗ್ರಾಹಕರು ಕೇಳಿದಾಗಲೇ ಇಲ್ಲಿ ರಾಗಿ ಮುದ್ದೆಯನ್ನು ಮಾಡಿಕೊಡುವುದು ಮತ್ತೊಂದು ವಿಶೇಷ. ಹಸಿರು ಬಾಳೆಲೆಯ ಮೇಲೆ ಬಿಸಿ ಬಿಸಿಯಾದ ರಾಗಿ ಮುದ್ದೆಯನ್ನು ನಾಟಿಕೋಳಿ ಸಾರಿನೊಂದಿಗೆ ಸವಿಯುವಾಗ ಮನೆಯೂಟ ನೆನಪಾಗದೇ ಇರದು. 

 

ಚಿಕನ್ ಕರಿ, ಮಟನ್ ಫ್ರೈ ಜತೆಗೆ ಚಿಕನ್ ಮಂಚೂರಿ, ಚಿಕನ್ 65, ಚಿಲ್ಲಿ, ಹುರಿದ ತಲೆಮಾಂಸ, ಲಿವರ್ ಫ್ರೈ, ಚಿಕನ್ ಪೆಪ್ಪರ್ ಡ್ರೈ, ಮಟನ್ ಬಿರಿಯಾನಿ ಲಭ್ಯವಿದೆ. ಸಾಗರ ಖಾದ್ಯಗಳಲ್ಲಿ ಫಿಶ್ ಫ್ರೈ, ಪ್ರಾನ್ಸ್ ಫ್ರೈ, ಪ್ರಾನ್ಸ್ ಪೆಪ್ಪರ್ ಡ್ರೈ. ಪ್ರಾನ್ಸ್ ಮಂಚೂರಿಯ ಸವಿಯನ್ನು ಅನುಭವಿಸಬಹುದು. ಸಸ್ಯಾಹಾರಿಗಳಿಗೂ ವಿವಿಧ ಬಗೆಯ ತಿನಿಸುಗಳು ಇಲ್ಲಿ ಲಭ್ಯವಿದೆ. 

 

ಬೆಲೆಯೂ ಹೆಚ್ಚಿಗೆ ಇಲ್ಲದ, ಮನೆಯ ಮಾದರಿ ಊಟವನ್ನು ಕ್ಲಾಸ್ ಹಾಗೂ ಮಾಸ್ ವರ್ಗದ ಜನರಿಗೆ ತಲುಪಿಸುತ್ತಿರುವುದು ಈ ರೆಸ್ಟೋರಾದ ಹೆಗ್ಗಳಿಕೆ. 

 

`ಒಮ್ಮೆ ಇಲ್ಲಿಗೆ ಬಂದು ಆಹಾರ ಸವಿದ ಗ್ರಾಹಕರು ಮತ್ತೊಮ್ಮೆ ಕುಟುಂಬ ಸಮೇತರಾಗಿ ಬರುತ್ತಾರೆ. ಅಲ್ಲದೇ ಅವರ ಮನೆಗಳಲ್ಲಿ ಶುಭ ಸಮಾರಂಭಗಳಿದ್ದರೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಬೇಡಿಕೆಯನ್ನು ಇಡುತ್ತಾರೆ. ಇನ್ನು ಕೆಲವರು ಹೋಂ ಡೆಲಿವರಿ ಬೇಕು ಎಂಬ ಪ್ರೀತಿಯ ಒತ್ತಡವನ್ನು ಹೇರುತ್ತಾರೆ. ಗ್ರಾಹಕರ ಆಹಾರ ಪ್ರೀತಿಗೆ ಮನಸೋತು ನಾವು ಇವೆಲ್ಲ ಸೇವೆಯನ್ನು ಆರಂಭಿಸಿದ್ದೇವೆ. ಎರಡು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗ್ರಾಹಕರು ಕರೆಮಾಡಿದರೆ ಯಾವುದೇ ಸರ್ವಿಸ್ ಚಾರ್ಜ್ ಇಲ್ಲದೇ ಹೋಂ ಡೆಲಿವರಿ ನೀಡುತ್ತೇವೆ' ಎನ್ನುತ್ತಾರೆ ರಮೇಶ್. 

 

ರುಚಿಗೆ ಹಿತವೆನಿಸುವಷ್ಟು ಮಸಾಲೆಯಿಂದ ತಯಾರಾದ ನಾಟಿ ಟಗರಿನ ಖಾದ್ಯಗಳು, ಬಿಸಿ ಬಿಸಿ ರಾಗಿಮುದ್ದೆ, ನೆಂಜಿಕೊಳ್ಳಲು ಬೋಟಿ ಫ್ರೈ, ನಾಟಿ ಕೋಳಿ ಬಿರಿಯಾನಿ ಮಾಂಸಾಹಾರಿ ಪ್ರಿಯರಿಗೆ ಇಲ್ಲಿನ ಖಾದ್ಯಗಳು ನಿಜಕ್ಕೂ ಇಷ್ಟವಾಗಲಿವೆ. ದೇಸಿ ಊಟವನ್ನು ಸವಿಯುವ ಇಚ್ಛೆಯಿದ್ದವರು ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು.  

 

ಸ್ಥಳ: ನ್ಯೂ ಪ್ರಶಾಂತ್ ಹೋಟೆಲ್, ನಂ, 119/ಎ/36, ಗಾರ್ಲಾ ಗಾರ್ನೆಟ್, 2ನೇ ಮಹಡಿ, 9ನೇ ಮೇನ್, ಕೆಫೆ ಕಾಫಿ ಡೇ ಮೇಲ್ಬಾಗ, ಜೆಸಿಸಿಎ ಕ್ಲಬ್ ಎದುರು, 4ನೇ ಹಂತ, ಜಯನಗರ. ಮಧ್ಯಾಹ್ನ 12ರಿಂದ 4 ಹಾಗೂ ಸಂಜೆ 7ರಿಂದ 11ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ. ಮಾಹಿತಿ ಮತ್ತು ಟೇಬಲ್ ಕಾಯ್ದಿರಿಸಲು: 080 3255 9420. 99642 99545.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry