ಗುರುವಾರ , ಆಗಸ್ಟ್ 22, 2019
25 °C

ಕರ್ಮಕಾಂಡಗಳ `ಕಲಿಗಾಲ'

Published:
Updated:

ಕಟ್ಟಡ ಸುತ್ತುವರಿದಿರುವ ಪೊಲೀಸ್ ಪಡೆ. ಕಟ್ಟಡದೊಳಗೆ ಅವಿತಿರುವ ದುಷ್ಕರ್ಮಿಗಳಿಗೆ ಹೊರ ಬರುವಂತೆ ಎಚ್ಚರಿಕೆ ನೀಡುತ್ತಿರುವ ಪೊಲೀಸ್ ಅಧಿಕಾರಿ. ಖಾಕಿಯ ಜೊತೆ ಅವಿನಾಭಾವ ಸಂಬಂಧದ ಪಾತ್ರಗಳನ್ನು ಹೊಂದಿರುವ ನಟ ಸಾಯಿಕುಮಾರ್ ತಮ್ಮ ಎಂದಿನ ಖಡಕ್ ಶೈಲಿಯ ಪೊಲೀಸ್ ಪಾತ್ರದಲ್ಲಿ ಎಚ್ಚರಿಕೆ ರವಾನಿಸುತ್ತಿದ್ದರೆ ಇಡೀ ಶೂಟಿಂಗ್ ಸ್ಪಾಟ್ ನಿಶ್ಶಬ್ದಕ್ಕೆ ಜಾರಿತ್ತು.ಅದು `ಕಲಿಗಾಲ' ಚಿತ್ರದ ಚಿತ್ರೀಕರಣ. ಇಡೀ ವಾತಾವರಣವೇ ಖಾಕಿಯ ಖದರಿನಲ್ಲಿ ಮುಳುಗಿತ್ತು. ತಮ್ಮ 97ನೇ ಚಿತ್ರ `ಕಲಿಗಾಲ'ದ ವಿಶೇಷಗಳನ್ನು ನಿರ್ದೇಶಕ ಸಾಯಿಪ್ರಕಾಶ್ ಹಂಚಿಕೊಂಡರು.ಕಲಿಗಾಲದಲ್ಲಿನ ಕರ್ಮಕಾಂಡಗಳೇ ತಮ್ಮ ಚಿತ್ರದ ಕಥಾವಸ್ತು. ಸಂಬಂಧಗಳು ವಿಕೃತಗೊಂಡು ನಡೆಯುತ್ತಿರುವ ಅತ್ಯಾಚಾರ, ಕಿರುಕುಳವನ್ನು ಪ್ರಧಾನವಾಗಿಟ್ಟುಕೊಂಡು `ಕಲಿಗಾಲ' ಕಟ್ಟಲಾಗಿದೆ. ವಿವಾಹಿತೆಯೊಬ್ಬಳ ಮೇಲೆ ಪೊಲೀಸ್ ಅಧಿಕಾರಿಯೊಬ್ಬನ ಮಗನಿಗೆ ಮೂಡುವ ವ್ಯಾಮೋಹದ ಎಳೆಯನ್ನು ಹಿಡಿಡು ಕಲಿಗಾಲದ ಕಥನವನ್ನು ನಿರೂಪಿಸಲಾಗಿದೆ. ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಸೇರಿದಂತೆ ಸ್ವಾಸ್ಥ್ಯ ಸಮಾಜಕ್ಕೆ ಕಂಟಕವಾಗಿರುವ ಘಟನೆಗಳು ಚಿತ್ರದಲ್ಲಿ ಬರಲಿವೆ ಎಂದು ಸಾಯಿಪ್ರಕಾಶ್ ಹೇಳಿದರು.ಚಿತ್ರದ ನಾಯಕ ಸಾಯಿಕುಮಾರ್ ಪೊಲೀಸ್ ಪಾತ್ರಧಾರಿಯಾದರೂ, ಅವರು ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವುದು ಮಫ್ತಿಯಲ್ಲಿ. ಭಾವನಾತ್ಮಕ ಮತ್ತು ಸಂದೇಶ ಹೊತ್ತ ಚಿತ್ರ ಇದಂತೆ.ಚಾರುಲತಾ `ಕಲಿಗಾಲ'ದ ನಾಯಕಿ. ಆರು ವರ್ಷದ ಬಿಡುವಿನ ನಂತರ ಅವರು ಮತ್ತೆ ಕನ್ನಡದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಯಿಪ್ರಕಾಶ್‌ರ `ನಾಗದೇವತೆ'ಯಲ್ಲಿ ಸಾಯಿಕುಮಾರ್ ಜತೆ ನಟಿಸಿದ್ದನ್ನು ಅವರು ನೆನಪು ಮಾಡಿಕೊಂಡರು. ಸಾಯಿಪ್ರಕಾಶ್‌ರ ಕೋರಿಕೆ ಮತ್ತು ಒತ್ತಡದಿಂದಾಗಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.ಚಿತ್ರದಲ್ಲಿ ಕರಾಟೆ ಪಟುವಾಗಿ ಕಾಣಿಸಿಕೊಂಡಿರುವ ಶಮಾ ಸಿಂಗ್, `ಹೆಣ್ಣು ಮಕ್ಕಳು ತಮ್ಮ ರಕ್ಷಣೆಗಾಗಿ ಸಾಹಸ ಕಲೆಗಳನ್ನು ಕಲಿಯಬೇಕಾದ ಅವಶ್ಯಕತೆಯನ್ನು ಒತ್ತಿಹೇಳುವ ಪಾತ್ರ ತಮ್ಮದು' ಎಂದರು.ಅಂದಹಾಗೆ, `ಕಲಿಗಾಲ'ವನ್ನು ತೆಲುಗಿಗೆ ಡಬ್ ಮಾಡಲು ನಿರ್ದೇಶಕ ಸಾಯಿಪ್ರಕಾಶ್ ಉದ್ದೇಶಿಸಿದ್ದು, ಅಲ್ಲಿ `ಜನ್ಮಸ್ಥಾನಂ' ಹೆಸರಿನಲ್ಲಿ ತೆರೆಕಾಣಲಿದೆ. 

Post Comments (+)