ಬುಧವಾರ, ಅಕ್ಟೋಬರ್ 23, 2019
23 °C

ಕರ್ಮಯೋಗಿ ಸೊನ್ನಲಗಿ ಸಿದ್ಧರಾಮ

Published:
Updated:

ಬಸವನ ಮೂರ್ತಿ ಧ್ಯಾನಕ್ಕೆ ಮೂಲ

ಬಸವನ ಕೀರ್ತಿ ಜ್ಞಾನಕ್ಕೆ ಮೂಲ

ಬಸವ, ಬಸವ ಎಂಬುದೇ ಭಕ್ತಿ ಕಾಣಾ ಕಪಿಲ ಸಿದ್ಧರಾಮವಿಶ್ವಗುರು, ವಿಶ್ವವಿಭೂತಿ ಜ್ಞಾನ ಭಂಡಾರಿ ಬಸವಣ್ಣ ಸ್ಥಾಪಿಸಿದ ವಿನೂತನ ಧರ್ಮದ ಅನುಯಾಯಿಯಾಗಿ ಸಮಾಜ ಪರಿವರ್ತನೆ ಮಾಡಿದ ಮಹಾಶರಣರು ಸಿದ್ಧರಾಮರು.ಹನ್ನೆರಡನೇ ಶತಮಾನ ಹಾಗೂ ಅದರ ಪೂರ್ವದಲ್ಲಿ ಜನರು ತೊಂದರೆಗೀಡಾಗಿ ಒದ್ದಾಡುತ್ತಿದ್ದಾಗ, ಆ ಜನರ ಅಂತರಂಗ ಹಾಗೂ ಬಹಿರಂಗ ಎರಡೂ ಕೂಡಾ ಮಲಿನವಾಗಿದ್ದವು. ಇಂಥ ಕೊಳೆಯನ್ನು ಹೊಗಲಾಡಿಸಿ ಅಂಥಲ್ಲಿ ಸುವಾಸನೆ ಉಂಟುಮಾಡಿದ ಪುಣ್ಯ ಪುರುಷರು ನಮ್ಮ ನಾಡಿನಲ್ಲಿ ಆಗಿ ಹೋಗಿದ್ದಾರೆ. ಅವರು ಬಹುದೊಡ್ಡ ಕ್ರಾಂತಿ ಕೂಡ ಮಾಡಿದ್ದಾರೆ. ಅಲ್ಲಿ ಕ್ರಾಂತಿಯ ಅರ್ಥ; ವೈಚಾರಿಕ ಕ್ರಾಂತಿ. ಆದರೂ ಇಂದು ಸಮಾಜದಲ್ಲಿ ವರ್ಣಬೇಧ, ಜಾತಿಬೇಧ, ಲಿಂಗಬೇಧ, ಭ್ರಷ್ಟಾಚಾರ, ಹಿಂಸೆ, ಮೋಸ, ವಂಚನೆ, ಅಂಧ ಶ್ರದ್ಧೆ, ಪ್ರಾಣಿಬಲಿ, ಮೂಢನಂಬಿಕೆ, ಅಜ್ಞಾನ, ಶೋಷಣೆ, ಭಾಷೆ-ಪ್ರಾದೇಶಿಕ ಭೇದಗಳಂಥ ಕ್ರೂರ ನಡವಳಿಕೆ ಕಂಡು ಬರುತ್ತಿದೆ. ಇದರಿಂದ ದೇಶ ನರಳುತ್ತಿದೆ. ಸಮಾಜದಲ್ಲಿ ಇಂಥ ಭೇದಗಳನ್ನು ನಿವಾರಿಸಿ ವ್ಯಕ್ತಿಯ ಮೇಲೆ ಪ್ರತಿಭೆ ಮತ್ತು ನೈತಿಕತೆಗೆ ಮಹತ್ವ ಕೊಟ್ಟವರು ಶರಣರು.

ಶರಣರ, ಸಂತರ, ಮಹಾಂತರ, ದಾರ್ಶನಿಕರ ಚಿಂತನಗಳು ಸಾರ್ವಕಾಲಿಕ ಸತ್ಯವನ್ನು ಒಳಗೊಂಡಿವೆ. ಇವತ್ತು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳು ಕೂಡಾ ಶರಣ ವಚನ ಸಾಹಿತ್ಯದಲ್ಲಿ ಅಡಗಿದೆ.ಶರಣರ ವಚನಗಳಿಂದ ಬೆಳಕು ಹರಿಯ ತೊಡಗಿದಂತೆ ಕತ್ತಲೆ ದೂರವಾಗತೊಡಗಿತು. `ದಿ ಡೆಸ್ಟಿನಿ ಆಫ್ ದಿ ನೇಷನ್ ಬಿಲ್ಡ್ಸ್ ಇನ್ ದಿ ಕ್ಲಾಸ್‌ರೂಮ್~ ದೇಶದ ಭವಿಷ್ಯ ಪಾಠ ಶಾಲೆಯಲ್ಲಿ ರೂಪಿತವಾಗುತ್ತದೆ. ಇಂದಿನ ಬಾಲಕ, ನಾಳಿನ ನಾಗರಿಕ. ಉತ್ತಮ ನಾಗರಿಕರನ್ನಾಗಿ ಮಾಡಬೇಕಾದರೆ, ಶಾಲೆಯ ಅಭ್ಯಾಸ ಕ್ರಮದಲ್ಲಿ ಇನ್ನಷ್ಟು ಹೆಚ್ಚಿನ ಶರಣರ ಸಾಹಿತ್ಯವನ್ನು ವಿಜ್ಞಾನ ಆಧಾರವಾಗಿಟ್ಟುಕೊಂಡು ಅಳವಡಿಸಿಕೊಳ್ಳಬೇಕು.ಮಕ್ಕಳಲ್ಲಿ ಭಾವೈಕ್ಯ, ಜಾತ್ಯತೀತ, ಸಮಾನತೆ, ಹೃದಯವಂತಿಕೆ, ಆಧ್ಯಾತ್ಮಿಕ, ವೈಜ್ಞಾನಿಕ ಮನೋಭಾವ, ದಯೆ, ತ್ಯಾಗ, ಸೌಹಾರ್ದ, ಮಹತ್ವವಾದ ರಾಷ್ಟ್ರೀಯ ಭಾವನೆ, ಕಾಯಕ ಪ್ರಜ್ಞೆ ಹಾಗೂ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಇತ್ಯಾದಿ ಸದ್ಗುಣ ಬಿತ್ತಿ ಬೆಳೆಸುವ ಶಕ್ತಿ ವಚನ ಸಾಹಿತ್ಯದಲ್ಲಿದೆ. ಜನರಲ್ಲಿ ವಿಶ್ವಾಸ ಮೂಡಲು ಇದು ಕಾರಣವಾಗಿದೆ.ವಚನ ಸಾಹಿತ್ಯ ಇದು ಮಾನವನ ಧರ್ಮಗ್ರಂಥ. ಈ ವಚನ ಸಾಹಿತ್ಯ ರಚನೆಯಲ್ಲಿ ಶಿವಯೋಗಿ ಸಿದ್ಧರಾಮರ ಕೊಡುಗೆ ಅಪಾರ. ಸಿದ್ಧರಾಮರ ವ್ಯಕ್ತಿತ್ವ ವಿಶಿಷ್ಟವಾಗಿತ್ತು. ಇವರು ಕಾಯಕದ ಮೇಲೆ ಒತ್ತು ಕೊಟ್ಟಿದ್ದರು.ನಡೆ-ನುಡಿ ಗಾಂಭೀರ್ಯವಾಗಿತ್ತು. ಮಾತು ಬೆಳ್ಳಿ ಮೌನ ಬಂಗಾರದಂತೆ ಮೌನಯೋಗಿಯಾಗಿದ್ದರು. ಇವರು ತಮ್ಮ ಕಠೋರ, ನೇರ ನುಡಿಗಳಿಂದ ಸಾಮಾನ್ಯರ ಜೀವನವನ್ನು ಪರಿವರ್ತನೆ ಮಾಡಿದರು. ಇವರ ನುಡಿಗಳು ಬೆಂಕಿಯ ಜ್ವಾಲೆಯಂತೆ, ಬೇಸಿಗೆಯ ಸೂರ್ಯನ ಉರಿಬಿಸಿಲಿನಂತಿದ್ದವು.ಕಾಯಕ ಯೋಗಿ,,ಜ್ಞಾನ ಯೋಗಿ, ಧ್ಯಾನಯೋಗಿ, ಮೌನ ಯೋಗಿಯಾದ ಸೊನ್ನಲಾಪುರದ ಸಿದ್ಧರಾಮರು 12ನೇ ಶತಮಾನದ ಶರಣರಲ್ಲಿ ಪ್ರಮುಖರಾಗಿದ್ದರು. ಇವರಿಗೆ ಹಠಯೋಗಿ, ಛಲಯೋಗಿ, ಕೋಪಯೋಗಿ ಎಂದು ಕೂಡ ಕರೆಯುವರು.ಸಿದ್ಧರಾಮರ ವೈಚಾರಿಕತೆಯನ್ನು ಪರಿವರ್ತನೆ ಮಾಡಿದವರು ಅಲ್ಲಂಪ್ರಭುಗಳು. ಸಿದ್ಧರಾಮನಿಗೆ ಅಲ್ಲಮರು ಕೇಳುತ್ತಾರೆ, `ಒಂದು ಕಲ್ಲನ್ನು ಕಾಲಲ್ಲಿ ತುಳಿದು ಇನ್ನೊಂದು ಕಲ್ಲಿಗೆ ಕೈಮುಗಿಯುವ ನಿನ್ನನ್ನು

ಏನೆಂದು ಕರೆಯಲಿ? ನೀನು ಮಾಡಿದ ಕಾರ್ಯವನ್ನು ಒಮ್ಮೆ ಅವಲೋಕಿಸು~ ಎಂದು ತಿಳಿಸಿ ಕುರುವಿಟ್ಟು ಕುರುಹ ಅಳಿಯಬೇಕೆಂದು ತಿಳಿಸಿದರು.ಅಲ್ಲಮಪ್ರಭು ಸಿದ್ಧರಾಮನನ್ನು ಕಲ್ಯಾಣದ ಅನುಭವ ಮಂಟಪಕ್ಕೆ ಕರೆದುಕೊಂಡು ಹೋದರು. ಈ ಘಟನೆ ಸಿದ್ಧರಾಮರ ಜೀವನದಲ್ಲಿ ಹೊಸ ತಿರುವು ನೀಡಿತು, ಚೆನ್ನಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು, ಅನುಭವ ಗೋಷ್ಠಿಯಲ್ಲಿ ಭಾಗವಹಿಸಿದರು. ಅಂದಿನಿಂದ ಸಿದ್ಧರಾಮರು ವಚನ ಬರೆಯಲು ಪ್ರಾರಂಭಿಸಿದರು. ಚೆನ್ನಬಸವಣ್ಣನವರನ್ನು ತನ್ನ ಗುರುವಾಗಿ ಸ್ವೀಕರಿಸಿದರು.ಮರ್ತ್ಯವನ್ನು ಅಮರ್ತ್ಯವನ್ನಾಗಿಸಿದ, ಅನುಭವ ಮಂಟಪದ ಪ್ರಮುಖ ವ್ಯಕ್ತಿಯಾಗಿ ಶೂನ್ಯ ಪೀಠದ ಮೂರನೇ ಅಧಿಕಾರಿಗಳಾದ ಅಧ್ಯಾತ್ಮದ ದಿವ್ಯ ಚೇತನ ಶಿವಯೋಗಿ ಸಿದ್ಧರಾಮರು. ಇವರ ಜೀವನ ಸಮತೆ, ಸಮ್ಯಕ್‌ಜ್ಞಾನ ಸದ್ಭಕ್ತಿಗಳ ಸಮ್ಮಿಲನವಾಗಿದೆ. ಇಷ್ಟಲಿಂಗ ಧರಿಸಿ, ಅರಿವು, ಆಚಾರ, ಅನುಭಾವದ ಶಿವಯೋಗ ಸಾಧನೆಯಲ್ಲಿ ನಿರತರಾದರು. ವಚನ ಸಾಹಿತ್ಯ ರತ್ನ ಎಂದೇ ಖ್ಯಾತಿ ಪಡೆದರು. ಸಮತೆಯ ಸಾಕಾರ ರೂಪಿ ಇವರು. ಸಿದ್ಧರಾಮರ ಜೀವನ ಜ್ಞಾನ ಪಿಪಾಸುಗಳಿಗೆ, ಮುಮುಕ್ಷುಗಳಿಗೆ ಮಾರ್ಗದರ್ಶನವಾಗಿದೆ. ಕಪಿಲಸಿದ್ಧ ಮಲ್ಲಿಕಾರ್ಜುನ ಎಂಬ ವಚನಾಂಕಿತದಿಂದ ವಚನಗಳನ್ನು ರಚಿಸಿದರು. ಇವರ ಒಂದೊಂದು ವಚನಗಳು ಅನುಭವದ ಅಣಿಮುತ್ತುಗಳು, ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಅದ್ವೀತಿಯ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)