ಕಲಕೇರಿಯಲ್ಲಿ ಜಾಗೃತಿ ಯಾತ್ರಾ ತಂಡ

7
15 ದಿನಗಳ ಯಾತ್ರೆ, 10 ಸ್ಥಳಗಳಲ್ಲಿ ನಿಲ್ಲಲಿದೆ ರೈಲು

ಕಲಕೇರಿಯಲ್ಲಿ ಜಾಗೃತಿ ಯಾತ್ರಾ ತಂಡ

Published:
Updated:

ಧಾರವಾಡ: ಕಳೆದ ಡಿ 24ರಂದು ಮುಂಬೈನಿಂದ ಆರಂಭವಾದ ಐದನೇ ಆವೃತ್ತಿಯ ಜಾಗೃತಿ ಯಾತ್ರೆಯು ಬುಧವಾರ ಹುಬ್ಬಳ್ಳಿಗೆ ಆಗಮಿಸಿ ಅಲ್ಲಿಂದ ತಾಲ್ಲೂಕಿನ ಕಲಕೇರಿಯ ಸಂಗೀತ ವಿದ್ಯಾಲಯದಲ್ಲಿ ಇಡೀ ದಿನ ಚರ್ಚೆ, ಸಂವಾದ ನಡೆಸಿತು.ಮ್ಯೋಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಹರೀಶ್ ಹಂದೆ ಅವರ ಸೆಲ್ಕೊ ಸಂಸ್ಥೆ ಹಾಗೂ ಅಥಣಿಯಲ್ಲಿ ತಯಾರಾಗುವ ಕೊಲ್ಲಾಪುರ ಚಪ್ಪಲಿಯ ತಯಾರಿಕೆ ಹಾಗೂ ಮಾರುಕಟ್ಟೆಯ ಬಗ್ಗೆ ಸುಮಾರು 450ಕ್ಕೂ ಅಧಿಕ ಯುವ ಯಾತ್ರಿಗಳು ಮಾಹಿತಿ ಪಡೆದರು. ಚಿತ್ರಕಲೆ, ಹಾಡು ಸೇರಿದಂತೆ ವಿವಿಧ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗಿತ್ತು.ಮುಂಬೈನಿಂದಲೇ 20 ಬೋಗಿಗಳ ರೈಲನ್ನು 15 ದಿನಗಳವರೆಗೆ ಬಾಡಿಗೆ ಪಡೆದಿರುವ ಜಾಗೃತಿ ಯಾತ್ರಾ ಸಂಘಟಕರು ರಾಜ್ಯದ ಹುಬ್ಬಳ್ಳಿ, ಬೆಂಗಳೂರು, ತಮಿಳುನಾಡಿನ ಮದುರೆ, ಚೆನ್ನೈ, ಆಂಧ್ರಪ್ರದೇಶದ ವಿಶಾಖಪಟ್ಟಣ, ಒಡಿಶಾದ ಭುವನೇಶ್ವರ, ಪಟ್ನಾ, ದಿಯೋರಿಯಾ, ದೆಹಲಿ. ಗುಜರಾತ್‌ನ ತಿಲೋನಿಯಾ ಮೂಲಕ ಮರಳಿ ಜನವರಿ 8ರಂದು ಮುಂಬೈ ತಲುಪಲಿದ್ದಾರೆ. ಹುಬ್ಬಳ್ಳಿವರೆಗೆ ರೈಲಿನ ಮೂಲಕ ಬಂದ ಯುವಕರು ಕಲಕೇರಿ ಗ್ರಾಮದ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ತೆರಳಿದರು.ತಮ್ಮಂದಿಗೇ ಅಡುಗೆ ಸಿಬ್ಬಂದಿಯನ್ನು ಕರೆತಂದಿರುವ ಅವರು ಮಧ್ಯಾಹ್ನ ಭೋಜನ ಸವಿದು ಸಂವಾದ ಗೋಷ್ಠಿಗಳಲ್ಲಿ ಭಾಗವಹಿಸಿ ಸಂಜೆ ಹುಬ್ಬಳ್ಳಿ ಮೂಲಕ ಮುಂಬೈನತ್ತ ತೆರಳಿದರು.`ಉದ್ಯಮಿಗಳಾಗುವ ಮೂಲಕ ದೇಶವನ್ನು ಕಟ್ಟುವೆವು' ಎಂಬ ಘೋಷಣೆಯ ಮೂಲಕ ಈ ಯಾತ್ರೆಯನ್ನು ಆರಂಭಿಸಿರುವ ಈ ಯಾತ್ರಿಗಳಿಗೆ ಡೆಲ್, ಗೂಗಲ್, ಬಜಾಜ್ ಗ್ರೂಪ್ ಹಾಗೂ ಕೋಕಾ ಕೋಲಾ ಸಂಸ್ಥೆಗಳು ಸಹಕಾರ ನೀಡಿವೆ. 1997ರಿಂದ ಆರಂಭವಾದ ಈ ಯಾತ್ರೆ 2007ರವರೆಗೆ ಮತ್ತೆ ನಡೆದಿರಲಿಲ್ಲ. 2008ರಲ್ಲಿ ಮತ್ತೆ ಆರಂಭವಾಗಿದ್ದು ಇಲ್ಲಿಯವರೆಗೂ 1800 ಯುವಕ-ಯುವತಿಯರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 150 ಮಂದಿ ಯಾತ್ರೆಯಿಂದ ಪ್ರಭಾವಿತರಾಗಿ ಉದ್ಯಮ ಆರಂಭಿಸಿದ್ದಾರೆ ಎಂದು ಯಾತ್ರೆಯ ಸಂಘಟನಾ ಮಂಡಳಿ ನಿರ್ದೇಶಕ ಅಶುತೋಷ್ ತಿಳಿಸಿದರು.ದೆಹಲಿ, ಪಂಜಾಬ್, ಹರಿಯಾಣ, ಗುಜರಾತ್, ಉತ್ತರ ಪ್ರದೇಶ, ಉತ್ತರಾಂಚಲ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಕರ್ನಾಟಕ ರಾಜ್ಯಗಳಲ್ಲದೆ ಫ್ರಾನ್ಸ್, ಅಮೆರಿಕಾ, ಇಂಗ್ಲೆಂಡ್, ಘಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದ ಹಲವು ಪ್ರತಿನಿಧಿಗಳೂ ಇಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry