ಕಲಘಟಗಿ: ಸೌಲಭ್ಯ ವಂಚಿತ ಸಿದ್ಧಿ ಜನಾಂಗ

7

ಕಲಘಟಗಿ: ಸೌಲಭ್ಯ ವಂಚಿತ ಸಿದ್ಧಿ ಜನಾಂಗ

Published:
Updated:

ಕಲಘಟಗಿ: ಇದೊಂದು ನೋವಿನ ಕಥೆ. ನಮ್ಮಡನಿದ್ದೂ ನಮ್ಮಂತಾಗದೇ, ನಾಗರಿಕ ಜಗತ್ತಿನ ನಡುವಿದ್ದೂ, ದಟ್ಟಡವಿಯಲ್ಲಿ ದಾರಿ ತಪ್ಪಿದ ಮಕ್ಕಳಂತೆ ಬದುಕುತ್ತ ಎಲ್ಲೋ ಕಳೆದು ಹೋದಂತಿರುವ ಒಂದು ಜನಾಂಗ ತನ್ನ ಮುಗ್ಧತೆ, ಬಡತನದಿಂದಾಗಿಯೇ ಹಿಂದುಳಿದಿದೆ.ಇವರೇ ತಾಲ್ಲೂಕಿನ ಪಶ್ಚಿಮ ಭಾಗದ ಕಾಡಿನ ನಡುವೆ ಅಲ್ಲಲ್ಲಿ, ಅಲ್ಲದೇ ಧಾರವಾಡದ ಮಾವಿನಕೊಪ್ಪದ ಕೆಲ ಪ್ರದೇಶಗಳಲ್ಲಿ ಹರಡಿಕೊಂಡಿರುವ ಸಿದ್ಧಿಗಳು. ಕಡುಕಪ್ಪು ದೇಹ, ಚಪ್ಪಟೆ ಮೂಗು, ತೀರ ಚಿಕ್ಕದಾಗಿ, ಸುರುಳಿಯಾಕಾರದ ಕೂದಲಿನವರನ್ನು ಕಂಡಾಗ ಪೇಟೆಯ ಜನರಿಗೆ ಇವರು ದಕ್ಷಿಣ ಆಫ್ರಿಕಾದ ನೀಗ್ರೋಗಳಿರಬಹುದೇ ಎಂದು ಸಂಶಯದಿಂದ ನೋಡುವಂತೆ ಮಾಡುವ ಈ ಸಿದ್ಧಿಗಳು ಇಲ್ಲಿನವರೇ ಆಗಿದ್ದಾರೆ. ಯಾವ ನಿರ್ದಿಷ್ಟ ಆಚರಣೆ ಧರ್ಮ ಸಂಪ್ರದಾಯಗಳ ಹಂಗಿಲ್ಲದ ಕೇವಲ ಹೊಟ್ಟೆಯ ಪಾಡಿಗಾಗಿಯೇ ಬದುಕುತ್ತಿರುವ ಇವರು ಜಿಲ್ಲೆಯಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.ಸುಮಾರು 400 ವರ್ಷಗಳ ಹಿಂದೆಯೇ ದಕ್ಷಿಣ ಆಫ್ರಿಕಾದಿಂದ ಗೋವಾದ ಮೂಲಕ ಭಾರತದ ಪಶ್ಚಿಮ ಕರಾವಳಿಗೆ ವಲಸೆ ಬಂದ ಸಿದ್ಧಿಗಳು ಇಷ್ಟು ದೀರ್ಘಕಾಲದ ವಾಸದ ನಂತರವೂ ಈ ನೆಲದ ನಾಗರಿಕ ಸೌಲಭ್ಯವನ್ನು ಪಡೆಯುವಲ್ಲಿ ಹಿಂದುಳಿದಿದ್ದಾರೆ. ತೀರ ಇತ್ತೀಚಿನವರೆಗೂ ಅಲೆಮಾರಿ ಜೀವನವನ್ನೇ ನಡೆಸಿದ ಇವರು ಈಗ  ಕಾಡಿನಂಚಿನ ನೆಲವನ್ನೇ ತಮ್ಮದೆಂದು ಭಾವಿಸಿ ಕಾಡುಜನರಂತೆ ಬದುಕುತ್ತಿದ್ದಾರೆ.

 

ಆದರೆ ಆ ನೆಲೆಯನ್ನೂ ಅರಣ್ಯ ಅತಿಕ್ರಮಣ ಎಂದು ಅರಣ್ಯದಿಂದ ಹೊರದೂಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಈ ಜನರಲ್ಲಿ ಅಕ್ಷರಸ್ಥರು ಇಲ್ಲವೆಂದರೆ ತಪ್ಪಲ್ಲ. ಇದರೊಂದಿಗೆ ಹೊರ ಪ್ರಪಂಚದ ಸಂಪರ್ಕವೂ ಕಡಿಮೆಯೇ. ತಮ್ಮ ನಿತ್ಯದ ಕೆಲಸವೆಂದರೆ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ, ಮತ್ತೆ ಅಲ್ಲಿಯೇ ಚಿಕ್ಕ ಬೇಲಿ ಹಾಕಿಕೊಂಡು ವ್ಯವಸಾಯ ಮಾಡುತ್ತ ಜೀವನ ಸವೆಸುತ್ತಿರುವ ಸಿದ್ದಿಗಳಿಗೆ ಬಡತನ ಬೆನ್ನಿಗಂಟಿದ ಶಾಪ.ಕೇವಲ ಇಪ್ಪತ್ತು ಕುಟುಂಬಗಳು ತಾಲ್ಲೂಕಿನ ಬೈಚವಾಡ ಎಂಬ ಪುಟ್ಟ ಹಾಡಿಯಲ್ಲಿದ್ದು, ತಾಲ್ಲೂಕಿನಲ್ಲಿ ಒಟ್ಟು ಒಂದು ನೂರು ಕುಟುಂಬಗಳಿವೆ. ಇಲ್ಲಿನ ಅರ್ಧಕ್ಕೂ  ಹೆಚ್ಚು ಕುಟುಂಬಗಳಿಗೆ ಉಳಲು ಹೊಲವೂ ಇಲ್ಲ. ಇರುವ ಮನೆಯೂ ಸ್ವಂತದ್ದಲ್ಲ. ಮಳೆಗಾಲ ಬಂತೆಂದರೆ ಭತ್ತದ ಗದ್ದೆಯಲ್ಲಿ ಕಳೆ ತೆಗೆಯುವ ಕೂಲಿ ಕೆಲಸ ನಂತರ ಬೆಳೆ ಕಟಾವು ಮಾಡುವ ಕೆಲಸವಾದರೆ ಬೆಳೆ ಮುಗಿದ ನಂತರ ಉದ್ಯೋಗ ಅರಸಿ ವಲಸೆ ಹೋಗುವುದೇ ದಿಕ್ಕು. ಆದರೂ ಮುಖದಲ್ಲಿ ನಗೆ ಮಾಸಿಲ್ಲ. ಬಡತನ ಇವರನ್ನು ಕಾಡುತ್ತಿಲ್ಲ. ಪ್ರಕೃತಿಯೊಂದಿಗೆ ಒಂದಾಗಿ ಬದುಕುತ್ತಿರುವ ಇವರ ಕಾಡಿನ ನಡುವಿನ ಮನೆಗೆ ಬಾಗಿಲೂ ಇಲ್ಲ.ಹೊಸ ದಿಕ್ಕು: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ ಭಾಗಗಳಲ್ಲಿ ಹರಡಿಕೊಂಡಿರುವ ಇವರು ಹಿಂದೂ, ಮುಸ್ಲಿಂ, ಹಾಗೂ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದರೂ, ಧರ್ಮದ ಹಂಗಿಲ್ಲದೇ, ಹೆಣ್ಣು ಗಂಡಿನ ಕೊಡುಕೊಳ್ಳುವಿಕೆಗಳಾಗುತ್ತವೆ. ಇವರಿಗೆ ಈ ಧರ್ಮ ಒಂದು ಬಂಧನ ಎನಿಸದೇ, ಯಾವ ಧರ್ಮವಾದರೇನು ಎಂಬ ಮುಗ್ಧ ಭಾವ.

 

ಯಲ್ಲಾಪುರದ ಶೋಭಾ ಸಿದ್ಧಿ ಎಂಬ ಯುವತಿಯನ್ನು ಸೂಳಿಕಟ್ಟಿ ಪಕ್ಕದ ಹಳ್ಳಿಯ ನಜೀರನಿಗೆ ವಿವಾಹ ಮಾಡಿಕೊಡಲಾಗಿದೆ. ಯಾವ ಧಾರ್ಮಿಕ ವಿವಾದವೂ ಕಾಡದೇ ಸಹಜವೆಂಬಂತೆ ಜರುಗಿ ಹೋಗಿದೆಯಲ್ಲದೇ, ಇಂತಹ ಹಲವಾರು ಉದಾಹರಣೆಗಳು ಇಲ್ಲಿನ ಹಾಡಿಯುದ್ದಕ್ಕೂ ಸಿಗುತ್ತದೆ. ತಮ್ಮದೇ ಒಂದು ಸಾಂಸ್ಕೃತಿಕ ಪರಂಪರೆ ಹೊಂದಿರದ ಈ ಬುಡಕಟ್ಟು ಜನಾಂಗ ಹವ್ಯಾಸವಾಗಿ ಪ್ರಾಣಿ ಸಾಕಣೆಯನ್ನು ಮಾಡುತ್ತಾರೆ. ತಾಲ್ಲೂಕಿನ ಜುಂಜನಬೈಲ, ದಿಂಬುವಳ್ಳಿ, ಕಂದ್ಲಿ, ಸೂಳಿಕಟ್ಟಿ, ಮಸಳಿಕಟ್ಟಿ, ಸಂಗಮೇಶ್ವರ, ತಂಬೂರ, ಅಲ್ಲದೇ ಧಾರವಾಡ ತಾಲ್ಲೂಕಿನ ಮಾವಿನಕೊಪ್ಪ ಗ್ರಾಮಗಳಲ್ಲಿಯೂ ಹರಡಿಕೊಂಡಿರುವ ಈ ಜನರಿಗೆ ಸ್ವಾವಲಂಬಿಗಳಾಗಿ ಬದುಕುವ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿದೆ. ಇಲ್ಲಿನ ಕೆಲ ಕುಟುಂಬಗಳು ಒಂದು ಅರ್ಧ ಎಕರೆ ಭೂಮಿಯನ್ನು ಹೊಂದಿದ್ದು, ಇನ್ನುಳಿದ ಕುಟುಂಬಗಳು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿವೆ. ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭಿಸಿದ್ದು, ಇನ್ನಷ್ಟು ಅತಂತ್ರಕ್ಕೆ ಸಿಲುಕುತ್ತಿದ್ದಾರೆ.ಈ ಸಿದ್ಧಿಗಳ ಬುಡಕಟ್ಟಿಗೆ ಒಂದು ಕುಟುಂಬಕ್ಕೆ ಕನಿಷ್ಠ ಭೂಮಿಯನ್ನು ಒದಗಿಸಿ, ವ್ಯವಸಾಯಕ್ಕೆ ಪ್ರೇರೇಪಿಸುವದರೊಂದಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವ ಅಗತ್ಯವಿದೆ.ಚೌಕಟ್ಟಿಲ್ಲದ ಚಿತ್ರದಂತೆಯೇ ಕಳೆದು ಹೋಗುತ್ತಿರುವ ಈ ಜನಾಂಗಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಿ ಕೊಡುವ ಮೂಲಕ ಆಡಳಿತದ ಜವಾಬ್ದಾರಿ ಹೊತ್ತ ನೇತಾರರು ಇತ್ತ ಕಡೆ ಗಮನ ಹರಿಸುವುದು ತೀರ ಅಗತ್ಯದ ಸಂಗತಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry