ಸೋಮವಾರ, ಆಗಸ್ಟ್ 2, 2021
20 °C

ಕಲಬುರ್ಗಿ ಐಟಿ ಹಬ್ ಆಗಲಿ: ಎಸ್‌.ಆರ್‌.ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ ಐಟಿ ಹಬ್ ಆಗಲಿ: ಎಸ್‌.ಆರ್‌.ಪಾಟೀಲ

ಕಲಬುರ್ಗಿ: ‘ಸಿಮೆಂಟ್ ಮತ್ತು ತೊಗರಿ ಉತ್ಪಾದನೆಗೆ ಹೆಸರುವಾಸಿ­ಯಾಗಿರುವ ಕಲಬುರ್ಗಿ ನಗರವು ಐಟಿ ಹಬ್ ಆಗಿ ಹೊರಹೊಮ್ಮಬೇಕು’ ಎಂದು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್.ಆರ್.­ಪಾಟೀಲ ಅಭಿಪ್ರಾಯಪಟ್ಟರು.ನಗರದ  ಹೈದರಾ­ಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ  ಸಂಸ್ಥೆ­ಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಕಲಬುರ್ಗಿ: ಐಟಿ ಕೈಗಾರಿಕೆಗಳ ಬಂಡವಾಳ ಕೇಂದ್ರ’ ಕುರಿತ ವಿಚಾರ­ಗೋಷ್ಠಿಯಲ್ಲಿ ಅವರು ಮಾತನಾ­ಡಿದರು.‘ದೇಶದ ಮೂರನೇ ಒಂದು ಭಾಗದಷ್ಟು ಐಟಿ ಕೈಗಾರಿಕೆಗಳು ಕರ್ನಾಟಕದಲ್ಲಿವೆ. ಹೀಗಾಗಿ, ಬೆಂಗಳೂರು ಸಿಲಿಕಾನ್ ಸಿಟಿ, ಐಟಿ ನಗರಿಯಾಗಿ ಹೊರಹೊಮ್ಮಿದೆ. ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಐಟಿ ಕೈಗಾರಿಕೆ ಸ್ಥಾಪಿಸುವವರಿಗೆ ಸರ್ಕಾರದಿಂದ ಉಚಿತ ಭೂಮಿ, ವಿದ್ಯುತ್‌, ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ, ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೂ ₨ 2 ಸಾವಿರ ಸಹಾಯಧನ ನೀಡಲಾಗುತ್ತಿದೆ’ ಎಂದು ಹೇಳಿದರು.‘ಪಿಡಿಎ ಎಂಜಿನಿಯರಿಂಗ್ ಕಾಲೇಜಿ­ನಲ್ಲಿ ಮೂಲಸೌಕರ್ಯ ಉಳ್ಳ ಐಟಿ ತರಬೇತಿ ಕೇಂದ್ರ (ಇನ್‌ಕ್ಯುಬೇಷನ್ ಸೆಂಟರ್)ವನ್ನು ಆರಂಭಿಸಲಾಗಿದ್ದು, ₨ 40 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಪ್ರಾದೇಶಿಕ ಕೇಂದ್ರವು ಪಿಡಿಎ ಕಾಲೇಜು ಜತೆ ಒಡಂಬಡಿಕೆ (ಎಂಒಯು) ಮಾಡಿಕೊಳ್ಳುವ ಮೂಲಕ ಸಹಾಯ ಪಡೆಯಬಹುದು’ ಎಂದು ತಿಳಿಸಿದರು.‘ವಿಟಿಯು ಪ್ರಾದೇಶಿಕ ಕೇಂದ್ರದ ವಿಶೇಷಾಧಿಕಾರಿ ಬಸವರಾಜ ಗಾದಗೆ ಮಾತನಾಡಿ, ‘ಹೈ.ಕ ಭಾಗದಲ್ಲಿ 10 ಎಂಜಿನಿಯರಿಂಗ್ ಕಾಲೇಜುಗಳಿವೆ. ರಾಜ್ಯದಾದ್ಯಂತ ವಿಟಿಯು ನಾಲ್ಕು ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದು, ಅದರಲ್ಲಿ ಕಲಬು­ರ್ಗಿಯೂ ಒಂದಾಗಿದೆ.

ಬೆಂಗಳೂರಿನ ಐಟಿ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಲ್ಲಿ ಶೇ 30ರಷ್ಟು ಉತ್ತರ ಕರ್ನಾಟಕದವರಾಗಿದ್ದಾರೆ.ಆದ್ದರಿಂದ ಕಲಬುರ್ಗಿಯಲ್ಲಿ ಐಟಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಎಫ್‌ಕೆಸಿಸಿಐ ವಲಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ‘371 (ಜೆ) ತಿದ್ದುಪಡಿಯಿಂದ ನಿರೀಕ್ಷಿಸಿ­ದಷ್ಟು ಅನುಕೂಲವಾಗಿಲ್ಲ. ಆದ್ದರಿಂದ ಅದರಲ್ಲಿರುವ ಲೋಪ­ದೋಷಗಳನ್ನು ತಿದ್ದಿ, ಪರಿಷ್ಕೃತ ಕಲಂ ಅನ್ನು ಜಾರಿಗೆ ತರಬೇಕು’ ಎಂದು ಮನವಿ ಮಾಡಿದರು.ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಅಮರನಾಥ ಸಿ.ಪಾಟೀಲ, ಶಾಸಕ ಅಮರನಾಥ ಪಾಟೀಲ, ಐಟಿ–ಬಿಟಿ ಉಪ ಸಮಿತಿ ಮುಖ್ಯಸ್ಥ ಚನ್ನಬಸಯ್ಯ ನಂದಿಕೋಲಮಠ ಉಪಸ್ಥಿತರಿದ್ದರು.ಮೈಂಡ್ಸ್ ಕಂಪೆನಿಯ ಮಹಮ್ಮದ್ ಇಸ್ಮಾಯಿಲ್ ಉಪನ್ಯಾಸ ನೀಡಿದರು. ನಾಗೇಶ ಸಾಲಿಮಠ, ದೊಡ್ಡಪ್ಪ ನಿಷ್ಠಿ, ಆನಂದ ದಂಡೋತಿ ಕಾರ್ಯಕ್ರಮ ನಿರ್ವಹಿಸಿದರು.‘40 ಲಕ್ಷ ಉದ್ಯೋಗ ಸೃಷ್ಟಿ’

ಕಲಬುರ್ಗಿ: ಮಾಹಿತಿ ತಂತ್ರಜ್ಞಾನ(ಐಟಿ)ದಿಂದಾಗಿ ಕರ್ನಾಟಕದಲ್ಲಿ 10 ಲಕ್ಷ ನೇರ ಹಾಗೂ 30 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. 2020ರ ವೇಳೆಗೆ ಹೊಸದಾಗಿ 40 ಲಕ್ಷ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಸ್‌.ಆರ್‌.ಪಾಟೀಲ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ (ಐಟಿಐಆರ್‌) ಎನ್ನುವ ಹೊಸ ಪರಿಕಲ್ಪನೆ ಅಡಿಯಲ್ಲಿ ದೇವನಹಳ್ಳಿ ಸಮೀಪ 10,500 ಎಕರೆ ಪ್ರದೇಶದಲ್ಲಿ ಐಟಿ ಕಂಪೆನಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತಿದೆ.ಇದರಿಂದ 12 ಲಕ್ಷ ನೇರ ಹಾಗೂ 28 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿವೆ. ಮಾಹಿತಿ ತಂತ್ರಜ್ಞಾನ ಉದ್ದಿಮೆಗಳು ಮಾಲಿನ್ಯ ರಹಿತವಾಗಿರುವುದರಿಂದ ಅವುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ ಪ್ರೋತ್ಸಾಹಿಸಲಾಗುವುದು ಎಂದರು.ರಾಜ್ಯದ ಎರಡು ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ ಮಾಹಿತಿ–ತಂತ್ರಜ್ಞಾನ ಕಂಪೆನಿಗಳನ್ನು ಸ್ಥಾಪಿಸುವುದಕ್ಕೆ ಹಲವು ನೆರವು ಘೋಷಿಸಲಾಗಿದೆ. ಉಚಿತ ಭೂಮಿ ಒದಗಿಸುವುದರ ಜತೆಗೆ, ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಇಎಸ್‌ಐ ಹಾಗೂ ಭವಿಷ್ಯನಿಧಿಯನ್ನು ಸರ್ಕಾರ ಭರಿಸಲಿದೆ.ಹುಬ್ಬಳ್ಳಿ–ಧಾರವಾಡದಲ್ಲಿ ಇನ್ಫೋಸಿಸ್‌ ಕಂಪೆನಿ ಸ್ಥಾಪಿಸಲು ಮುಂದೆ ಬಂದಿದೆ. 2013–14ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ರಫ್ತಿನಿಂದಾಗಿ ದೇಶದಲ್ಲಿ ₨1.84 ಲಕ್ಷ ಕೋಟಿ ಆದಾಯ ಹರಿದು ಬಂದಿದೆ. 2014–15ನೇ ಸಾಲಿನಲ್ಲಿ ಐಟಿ ರಫ್ತು ಪ್ರಮಾಣವು ₨2 ಲಕ್ಷ ಕೋಟಿ ತಲುಪಲಿದೆ. 2020ಕ್ಕೆ ₨4 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಹೇಳಿದರು.ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ಬೆಂಗಳೂರು ನೆಚ್ಚಿನ ತಾಣವಾಗಿದೆ. ಆಂಧ್ರಪ್ರದೇಶ ವಿಭಜನೆಯಿಂದಾಗಿ ಅನೇಕ ಐಟಿ ಕಂಪೆನಿಗಳು ಬೆಂಗಳೂರಿನತ್ತ ಧಾವಿಸುತ್ತಿವೆ. ಬೆಂಗಳೂರಿನಿಂದ ಐಟಿ ಕಂಪೆನಿಗಳು ಹೊರ ಹೋಗುತ್ತಿವೆ ಎಂಬುದು ಸತ್ಯಕ್ಕೆ ದೂರವಾದ ಮಾತು.ಕರ್ನಾಟಕದಲ್ಲೆ ಹುಟ್ಟಿ ಬೆಳೆದಿರುವ ಇನ್ಫೋಸಿಸ್‌ ಕಂಪೆನಿಯು ದೇವನಹಳ್ಳಿ ಐಟಿ ಪಾರ್ಕ್‌ನಿಂದ ಎಲೆಕ್ಟ್ರಾನಿಕ್‌ ಸಿಟಿಗೆ ವರ್ಗಾವಣೆಯಾಗುವ ಬಗ್ಗೆ ಪ್ರಸ್ತಾಪಿಸಿತ್ತು. ಇದೀಗ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದ್ದು, ಮೂರು ತಿಂಗಳಲ್ಲಿ ಕಂಪೆನಿಯ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ತಿಳಿಸಿದರು.ಎಚ್‌ಕೆಸಿಸಿಐ ಬೇಡಿಕೆಗಳು

* ಈಶಾನ್ಯ ಭಾಗಗಳಿಗೆ ಘೋಷಿಸಿರುವ ವಿಶಿಷ್ಟವಾದ ಕೈಗಾರಿಕಾ ನೀತಿ ಮಾದರಿಯಲ್ಲಿ ಹೈ.ಕ ಪ್ರದೇಶದ ಅಭಿವೃದ್ಧಿಗಾಗಿ ವಿಶೇಷ ಕೈಗಾರಿಕಾ ನೀತಿ ರೂಪಿಸಬೇಕು.

* ತೆರಿಗೆ ವಿನಾಯಿತಿ ಹಾಗೂ ಸಬ್ಸಿಡಿ ಒಳಗೊಂಡ ವಿಶೇಷ ಕೈಗಾರಿಕಾ ನೀತಿ (ಎಸ್‌ಇಝೆಡ್)ಯನ್ನು ಈ ಭಾಗಕ್ಕೆ ಘೋಷಿಸಬೇಕು.* ಕಲಬುರ್ಗಿಗೆ ಐಟಿ ಪಾರ್ಕ್ ಮಂಜೂರಾಗಿದ್ದು, ಐಟಿ ಉದ್ದಿಮೆದಾರರನ್ನು ಆಕರ್ಷಿಸುವ ಕೆಲಸವಾಗಬೇಕು.* ಸ್ಥಳೀಯ ಯೋಜನೆಗಳನ್ನು ಕಲಬುರ್ಗಿಯ ಐಟಿ ಪಾರ್ಕ್‌ನಲ್ಲಿ ಪ್ರಾರಂಭಿಸುವ ಸಂಸ್ಥೆಗಳಿಗೆ ನೀಡಬೇಕು.* ಜಾಗತಿಕ ಐಟಿ ಉದ್ದಿಮೆದಾರರನ್ನು ಸೆಳೆಯಲು ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಬೇಕು.* ಸಣ್ಣ ಪ್ರಮಾಣದ ಹೊಸ ಐಟಿ ಉದ್ದಿಮೆಗಳಿಗೆ ತೆರಿಗೆ ವಿನಾಯಿತಿ ನೀಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.