ಬುಧವಾರ, ಜನವರಿ 22, 2020
16 °C

ಕಲಬೆರಿಕಿ ಕೊಲವೆರಿ

ಸಿ.ಎನ್. ಕೃಷ್ಣಮಾಚಾರ್ Updated:

ಅಕ್ಷರ ಗಾತ್ರ : | |

ಹಾಲು ಹಾಲಾಹಲವಾಯಿತು ಶಿವಭೋ! ಕುಡಿದವ ಕುಂತಲ್ಲೆ ಲಬೊ ಲಬೋ! ಬಿಳಿಹಾಲು, ಬಿಳಿಬಣ್ಣ, ಬಿಳಿಸುಣ್ಣ, ಕಲಸು ಮೇಲೋಗರವಾಗಿ ಎಲ್ಲವೂ ನಾಕೆಮ್ಮೆ ಕರೆದ ಬಿಳಿಯ ನೊರೆ ಹಾಲೆ! ನೀರೆರೆದರೆ ನೊರೆಗಟ್ಟುವ ನವನವೀನ ಚೌಳುಪ್ಪು, ರಸಗೊಬ್ಬರ, ಕರಿನಾಯಿ ತೊಗಲು ತೀಡಿ ಬಿಳಿನಾಯಿ ಮಾಡುವ ಕರಾಮತ್ತಿನ ದ್ರವ, ಅದರ ನೆತ್ತಿಯ ಮೇಲೆರೆದ ಎಣ್ಣೆ ಎಲ್ಲವೂ ಸಫೇದು.

 

ಮತ್ತೆ ಅದನ್ನು ವರ್ಣ, ರೂಪ, ರಸ, ಗಂಧವಿರದ ವೆಲ್ ಯಾ   ಬೋರ್‌ವೆಲ್‌ನ ನೀರಿಗೆರೆದು ಸಬ್‌ಲುಂಡಾ ಮಾಡಿ, ಹಂಡೆಯೊಳಗಿಟ್ಟು, ಅಂಡು ಕೆಂಪಾಗುವವರೆಗೆ ಕಾಯಿಸಬೇಕು. ಹದಕ್ಕೆ ಬರುವ ಮುನ್ನ ಎತ್ತಿ, ಗುಡೇಮಾರನಹಳ್ಳಿ ಯಾ ಗೌರಿಬಿದನೂರಿನ ಬಡಕಲು ಹಸು ಕರೆದ ಹಲ್ಕಾ ಹಾಲಿಗೆ ಮಿಲಾಯಿಸಬೇಕು.ಮತ್ತೆ ಹಂಡೆಗೆ ಹುಯ್ದ ಅದರ ಕಿಬ್ಬೊಟ್ಟೆಯೊಳಗೊಂದು ಗಳ ಹೆಟ್ಟಿ, ಕುಯ್ಯೋ ಮರ‌್ರೋ ಎಂದು ಕಿರಿಚಿ, ನೊರೆ ಕಕ್ಕುವರೆಗೂ ತಿರತಿರನೆ ತಿರುಗಿಸಬೇಕು. ಖೋಟಾ ಹಾಲಿನ ಚೀಲದ ಮೇಲೆ ಅಸಲಿ ಕಂಪನಿಯ ಹೆಸರನ್ನುಳಿಸಬೇಕು.ಮತ್ತದರೊಳಗೆ ಈಗಾಗಲೇ ತಯಾರಿಸಿದ ವಿಷರಸಾಯನವನ್ನು ಸುರಿಸಿ ಬಾಯಿಗೆ ಬರೆ ಹಾಕಿ ಮನೆ ಮನೆಗೆ ಒಯ್ದು, `ಇಕಾ ತಾಜಾ ಹಾಲುಗಡಲಿನಿಂದಲೇ ಹರಿದು ಬಂದ ಹಾಲವ್ವ, ತಕ~ ಎಂದು ಮನೆಯಾಕೆಯ ಮೂತಿಗೊಡ್ಡಿ, ಆಕೆಯ ಬೆನ್ನಿಗಂಟಿದ ಗಂಡನೆಂಬ ಬಾಯಿಲ್ಲದ ಹುಳದ ತಲೆಗೆ, ಅಣ್ಣಹಜಾರೆ ಟೋಪಿ ಇಕ್ಕಿ, ಹಲ್ಕಿಸಿದು ಕಿಸೆ ತುಂಬಿಸಿಕೊಳ್ಳಬೇಕು.ಈ ಕತೆ ಹೀಗಾದರೆ ಇನ್ನು ದಾವಣಗೆರೆ ದೋಸೆಯ ಬೆಣ್ಣೆಯೊಳಗೆ ಬಕರಾ ಚರ್ಬಿಯಿಂದ ಮುರ್ಗಿ ಹಿಕ್ಕೆಯವರೆಗೆ ಸಿಕ್ಕ ಗಲೀಜನ್ನು ತಕ್ಕಮಟ್ಟಿಗೆ ಬೆರೆಸಿ, ಕಾವಲಿಯ ಮೇಲೆ ಹುಯ್ದು ಹಿಟ್ಟಿನ ಮೋರೆಗೆ ಹದವಾಗಿ ಲಗಾಯಿಸಿ, ಹ್ಯಾಪೆಯಿಂದ ಕೆರೆದೆತ್ತಿದ ದೋಸೆ.

 

ಬೆಂಗಳೂರಿಗನ ನಾಲಿಗೆಯಿಂದ ಜೊಲ್ಲಾವತರಣ. ಮೂವತ್ತೇನು ಮೂನ್ನೂರಾದರೂ ತೆತ್ತು ಮೆಲ್ಲುವ ಸಂಭ್ರಮ, ಇದು ಮಂಡ್ಯದ ಬೆಣ್ಣೆ, ಇದು ಬ್ಯಾಡಗಿಯ ಮಿರ್ಚಿ, ಇದು ಬಳ್ಳಾರಿಯ ಉಳ್ಳಾಗಡ್ಡಿ  ಎಂದು ಒಂದಾನೊಂದು ಕಾಲದಲ್ಲಿ ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳಗಿನ ಛಪ್ಪನ್ನಾರು ಊರು ಕೇರಿಗಳನ್ನು, ವಸುಧಾವಲಯ ವಿಶದ ವಿಷಯ ವಿಶೇಷವನ್ನೂ ನೆನೆನೆನೆದು ಹಿಗ್ಗುವ ಬೆಂಗಳೂರು  `ಘಾ~ ಗಳ ತಿಳಿಗೇಡಿ ತನಕ್ಕೇನೆಂಬುದೈ ಶಿವಭೋ!`ಕೆಟ್ಟು ಪಟ್ಟಣ ಸೇರೆಂಬ~ ಗಾದೆ ಮಾತು, ಈಗ ಬುಡಮೇಲಾಗಿ ಶಹರು ಸೇರು, ಕಬರಸ್ತಾನ್‌ಗೆ ಹಾರು ಎಂದಾಗಿದೆ. ಇಲ್ಲಿ ಗಾಳಿ, ನೀರು, ಎಳೆಗದಿರು, ಹೊಂಗದಿರು, ಬೆಂಗದಿರುಗಳೆಲ್ಲವೂ ಕಲಬೆರೆಕೆ.

 

ಮುಂಜಾನೆಯ ಕುಳಿರ್ಗಾಳಿಯಲ್ಲಿ, ತರು ಮರಗಳ ಹೂ ಬಳ್ಳಿಗಳ ಮೇಲೆ, ನಾರು ಬೇರುಗಳ ಒಳಹೊರಗೆ, ನೆತ್ತಿಯ ಮೇಲೆ ಮಿರುಮಿರುಗುವ ತಳಿರಿನ ನಡುನಡುವೆ ಸುಳಿಯುವ ತಂಬೆಲರಿನಲ್ಲಿ ಕಲಬೆರಕೆಯ ಘಾಟು.ನಿರ್ಬೀಜ ಶರದ್ ದ್ರಾಕ್ಷಿ ಮೂಸಿದರೆ, ದಾಳಿಂಬೆಯ ಮಣಿಗಳಿಗೆ ಮುತ್ತಿಕ್ಕಿದರೆ, ಪರಂಗಿ ಹೋಳಿನೊಳಗೆ ಹಲ್ಲು ತೂರಿಸಿದರೆ ಎಂಥದೋ ಅಪರಿಚಿತ, ಅನ್ಯಗ್ರಹದಿಂದ ಆಮದು ಮಾಡಿದಂಥ, ಮೂಗಿನ ಸೆಲೆ ಸೀಳುವ ನಾತ. ನಾಲಿಗೆಗೆ ಗರಬಡಿಯುವ ರುಚಿ. ಹಾಲು ಕುಡಿದವ ಹರಿಹರಿ, ಹಣ್ಣು ತಿಂದವ ಹರೋಹರ.ಇನ್ನು ಶುದ್ಧ ಸಾತ್ವಿಕ ಮಾಂಸಾಹಾರಿಗಳ ಪಾಡು ಹೇಳತೀರದು, ತಿಂಬ ಕೋಳಿಯೋ ಕಂತ್ರಿ, ಇನ್ನು ಅದು ಹಡೆದ ಮೊಟ್ಟೆ, ಒಡೆದು ಹೊರಬಂದ ಮರಿ, ತಿಂದವನ ಮಂಡೆ ಬಲಿತೀತೆಂಬ ಮಾತು ಹುಸಿಹೋಗುತ್ತದೆ.ಕನ್ನಡ ಶಾಲೆ ತೆರೆಯುತ್ತೇವೆಂದು ಸರ್ಕಲ್ ಮಾರವ್ವನ ಮೇಲಾಣೆ ಹಾಕಿ, ಅನುಮತಿ ಗಿಟ್ಟಿಸಿದವರು ತಮ್ಮ ಕಾನ್ವೆಂಟ್‌ಗಳಲ್ಲೂ ಕಲಬೆರೆಕೆ ಇಂಗ್ಲಿಷ್ ಕಲಿಸುತ್ತಾರೆ. ನಾನೇ ಕಣ್ಣಾರೆ ಕೇಳಿ ಕಿವಿಯಾರೆ ಕಂಡಿದ್ದೇನೆ. ಶಿವಾಜಿನಗರ, ಬೆಂಗಳೂರಿನ ಸೀಮಾಂತ ಪ್ರದೇಶ. ಅಲ್ಲಿಂದ ಮುಂದೆ ಇನ್ನೂ ಕರ್ನಾಟಕ ಏಕೀಕರಣವೇ ಆಗಿಲ್ಲ.ಬಾಣಸವಾಡಿಯ ಹನುಮಂತರಾಯನ ಆಬಾದಿಗೆ ಹೋಗುವ ಹಾದಿಯಲ್ಲಿ ಒಂದು ಕಂಗ್ಲೋತಮ್ಳಿಷ್ ಶಾಲೆ, ಅದೊಂದು ನಡುಹಗಲು. ಭೋಜನ ವಿರಾಮವೇಳೆಯಲ್ಲಿ ಬ್ರೆಡ್, ಬರ್ಗರ್ ತುರುಕಿದ ಬುತ್ತಿ ಬಿಚ್ಚುತ್ತ ಓರ್ವ ಮಿನಿಧಾರಿಣಿ ಕೇಳುತ್ತಾಳೆ- ಇನ್ನಾಡೀ, ಎವೆರಿಡೇ ಯುವರ್ ಮಾಮ್ ಒನ್ಲಿ ಬ್ರಿಂಗ್ಸ್ ಯೂ ಲಂಚಾ? (ಕ್ಷಮಿಸಿ, ಅದು ಲಂಚವಲ್ಲ, ಲಂಚ್!).ಕೇಳಿಸಿಕೊಂಡ  ಇನ್ನೋರ್ವ ಸ್ಕಿನ್ ಶೋ ನಮೂನೆಯ ಹಾಫ್ ಪ್ಯಾಂಟ್ ಹುಡುಗಿ ಹೇಳುತ್ತಾಳೆ-  ಯಾ! ಮೈ ಡ್ಯಾಡ್ ಈಸ್ ಆಲ್‌ವೇಸ್ ಔಟ್ ಆಫ್ ಡೋರ್ಸ್ ನೋ. ಆಲ್‌ವೇಸ್ ಸಿಂಗಾಪೂರ್, ಮಲೇಸಿಯಾನ್ ಚುತ್ತಿಟ್ಟೇ ಇರ್ಪಾರು. ಉಂಗ ಡ್ಯಾಡ್ ಸರ್‌ದಾರ್‌ಜೀಯಾ? ಬಿಸಿನೆಸ್‌ಮನ್?  ನೋ! ಮಾಮ್ ಸರ್ದಾರ್‌ಜೀ, ಡ್ಯಾಡ್ ಕನ್ನಡಕಾರರ್, ನಾನ್ ಬೆಂಗಾಲಿಶ್‌ಮಲೆಯಾಳಿ. ಇನ್ನು ಇವಳಿಗೆ ಕನ್ನಡ ಕಲಬೆರಕೆಯಾಗಿಯಾದರೂ ತಿಳಿದಿರಬೇಕಲ್ಲವೇ? ಇಲ್ಲವೆಂದರೆ ಏನಚ್ಚರಿ! ಇಲ್ಲೂ ತಂಗಿ ಕಲಬೆರೆಕೆ ಎಂದಾಗ  ಕೊಲವೆರಿಯ  ನೆನಪಾಯಿತು.

 

ಕೊಲ (ಕೊಲೆ)-ವೆರಿ (ಉನ್ಮಾದ) ಎಂಬ ಎರಡು ಪದಗಳ ಜೋಡಿ ಕೊಲವೆರಿ,  ಕೊಲೆ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಎಲ್ಲೆಡೆಯೂ ಕೊಲೆಯೇ.  ವೆರಿ ತಮಿಳುಮೂಲ. ಪ್ರಿಯತಮೆಯನ್ನು ಕಂಡರೆ  ಕೊಲವೆರಿ  ಆಗುತ್ಯೆ? ಕನ್ನಡದ ಕೊಲವೆರಿ ಹೇಗಿರುತ್ತೇ? - ಹೀಗಿರಬಹುದೇ?ವೈ ದಿಸ್ ಕೊಲೆವೆರಿ?  ಕೊಲೆವೆರಿ ಕೊಲೆವೆರಿ ಡೌ (ಯಾಕುಡೌ? ಎಂಬಂತೆ)

ಮಿಲ್ಕು ವೈಟೂ, ಪೇಂಟು ವೈಟು ವೈಟು ವೈಟೂ

ಸುಣ್ಣ ವೈಟು,ಬಣ್ಣ ವೈಟು ವೈಟು ವೈಟೂ 

ಪೈಸಾ ಪೈಸಾ ಡಾರ್ಕೂ ಡಾರ್ಕೂ  ಕೊಲೆವೆರಿ ಕೊಲೆವೆರಿ ಕೊಲೆವೆರಿ ಡೌ

ಚೀಕು ವೈಟು, ಟೀತು ವೈಟು ಸ್ಕಿನ್ನು ವೈಟೂ ಸ್ಮೈಲು ವೈಟೂ 

ಹಾರ್ಟು ಡಾರ್ಕೂ ಡಾರ್ಕೂ ಡಾರ್ಕೂ ಕೊಲೆವೆರಿ ಕೊಲೆವೆರಿ ಕೊಲೆವೆರಿ ಡೌ

ಉಡ್ಗಿ ಕಣ್ಣು ಐಸು ಐಸೂ ಐಸು ಕೆಳಗೆ ಕಪ್ಪಿನೊಳಗೆ 

ವಾಟರ್ ಡ್ರಾಪೂ ಹಾಟೂ ಹಾಟೂ  ಓ ಗಾಡ್! ಬ್ಯಾಡಲವ್ವೆ,

ಬ್ಯಾಡ ಡವ್ವೆ ಡವ್ವೆ ಡವ್ವೆ  ಕೊಲೆವೆರಿ ಕೊಲೆವೆರಿ ಕೊಲೆವೆರಿ ಡೌ 

(ಯಾಕುಡೌ ಐಲ್ ಬಡ್ಡೈದ್ನೆ?)

ಪ್ರತಿಕ್ರಿಯಿಸಿ (+)