ಕಲಹಳ್ಳಿ ವೆಂಕಟೇಶ್ವರ

7

ಕಲಹಳ್ಳಿ ವೆಂಕಟೇಶ್ವರ

Published:
Updated:
ಕಲಹಳ್ಳಿ ವೆಂಕಟೇಶ್ವರ

ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದ ಗುಡ್ಡದ ವೆಂಕಟೇಶ್ವರ ದೇವಸ್ಥಾನಕ್ಕೆ ಸುಮಾರು ಐದು ಶತಮಾನಗಳಿಗೂ ಹೆಚ್ಚು (538 ವರ್ಷ) ಇತಿಹಾಸವಿದೆ. ಜಮಖಂಡಿಯ ದೇಶಪಾಂಡೆ ಮನೆತನದ ನಾಗರಸ ಎಂಬುವರಿಗೆ ವೆಂಕಟೇಶ್ವರ ದೇವರ ಅನುಗ್ರಹದಿಂದ ಸಂತಾನ ಪ್ರಾಪ್ತಿಯಾದ ಹಿನ್ನೆಲೆಯಲ್ಲಿ  ಅವರು ಕಲಹಳ್ಳಿ ಗುಡ್ಡದ ಮೇಲೆ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.ವಿಜಯನಾಮ ಸಂವತ್ಸರದ ಶಕೆ 1395 (1473ನೇ ಇಸ್ವಿ) ಚೈತ್ರಶುದ್ಧ ಪ್ರತಿಪದೆಯ ಶುಕ್ರವಾರದಂದು ಈ ದೇವಸ್ಥಾನದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಲಾಯಿತು.ವಿಜಾಪುರ ಸುಲ್ತಾನರು ಕಲಹಳ್ಳಿ ದೇವಸ್ಥಾನದ ಮೇಲ್ವಿಚಾರಣೆಗೆ ಕೊನೇರಿ ಎಂಬುವವರನ್ನು ನೇಮಕ ಮಾಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕೊನೇರಿ ಅವರಿಗೆ  ಪಂಡಿತರೊಬ್ಬರು ಕಲಹಳ್ಳಿಯ ವೆಂಕಟೇಶ್ವರನ ಸೇವೆ ಮಾಡುವಂತೆ ಸೂಚಿಸಿದರು. ಆಗ ಕೊನೇರಿ ಅವರು ಕಲಹಳ್ಳಿಗೆ ಬಂದು ದೇವಸ್ಥಾನದ ಪಶ್ಚಿಮ ದಿಕ್ಕಿನಲ್ಲಿ ಒಂದು ಬಾವಿ ತೆಗೆಯಿಸಿ ಅಲ್ಲಿಯೇ ಸ್ನಾನ ಮಾಡುತ್ತ ವೆಂಕಟೇಶ್ವರನ ಸೇವೆಯಲ್ಲಿ ನಿರತರಾಗಿ ರೋಗದಿಂದ ಗುಣಮುಖರಾದರು. ಇದರಿಂದ ಸಂತಸಗೊಂಡ ಅವರು ದೇವಸ್ಥಾನದಲ್ಲಿ ಪೂಜಾವಿಧಿಗಳು ನಿರಂತರವಾಗಿ ನಡೆಯಲು ಅನುಕೂಲವಾಗುವಂತೆ ಸ್ವಲ್ಪ ಭೂಮಿಯನ್ನು ದೇವಸ್ಥಾನಕ್ಕೆ ದತ್ತಿಯಾಗಿ ನೀಡುವಂತೆ ಸುಲ್ತಾನರ ಮನವೊಲಿಸಿದರು. ಆನಂತರ ಅವರು ತಮ್ಮ ವೆಚ್ಚದಲ್ಲಿ ಪುಷ್ಕರಣಿಯೊಂದನ್ನು ದೇವಸ್ಥಾನ ಆವರಣದಲ್ಲಿ ನಿರ್ಮಿಸಿದರು.ಜಮಖಂಡಿಯ ಅಂದಿನ ಸಂಸ್ಥಾನಿಕರಾದ ಅಪ್ಪಾಸಾಹೇಬ ಪಟವರ್ಧನ ಅವರು ನಿತ್ಯ ಪೂಜೆ ನೆರವಾಗಲು 1769ರಲ್ಲಿ ಒಂದು ತೋಟವನ್ನು ಉಂಬಳಿಯಾಗಿ ನೀಡಿದರು. ನವರಾತ್ರಿ ಉತ್ಸವದಲ್ಲಿ ನೈವೇದ್ಯಕ್ಕಾಗಿಯೇ ಒಂದು ಹೊಲವನ್ನು 1797 ರಲ್ಲಿ ಸನದು ಹಾಕಿ ಕೊಟ್ಟರು. ಆ ಭೂಮಿ ಇಂದಿಗೂ ದೇವಸ್ಥಾನದ ಆಸ್ತಿಯಾಗಿ ಉಳಿದಿದೆ.ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಪಾಲ್ಗೊಂಡು ಸುರಕ್ಷಿತವಾಗಿ ಮರಳಿ ಬಂದ ಜಮಖಂಡಿ ಸಂಸ್ಥಾನಿಕರಾದ ಪರಶುರಾಮ ಭಾವು ಸಾಹೇಬರು ತಮ್ಮ ಪತ್ನಿಯ ಹರಕೆಯಂತೆ ದೇವಸ್ಥಾನದ ಮಹಾದ್ವಾರ ಕಟ್ಟಿಸಿ ಮೇಲೆ ನಗಾರಿ, ಚೌಗಡಗಳ ವಾದ್ಯಗಳು ಮೊಳಗುವಂತೆ ವ್ಯವಸ್ಥೆ ಮಾಡಿದ್ದರು.ವೆಂಕಟೇಶ್ವರ ದೇವಸ್ಥಾನದ ಸುತ್ತ ಹನುಮಂತ, ರಾಮ, ವರಾಹ, ಗಣಪತಿ ಗುಡಿ, ಗರುಡ ದೇವರ ಗುಡಿಗಳಿವೆ. ಗುಡಿ ಹಾಗೂ ಅದರ ಮೇಲೆ ದೀಪಸ್ತಂಭ, ಎರಡು ರಥಗಳು ಮತ್ತು ರಥಮನೆ ಇವೆ. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಗುಡ್ಡದ ಕೆಳಗೆ ಹನಮಂತ ದೇವರು, ಗೋವಿಂದರಾಜ ಹಾಗೂ ಪದ್ಮಾವತಿ ಅಮ್ಮನವರ ದೇವಸ್ಥಾನಗಳು ಮತ್ತು ಪುಷ್ಕರಣಿ ಇದೆ.ದೇವಸ್ಥಾನದ ಆವರಣದಲ್ಲಿ ಕೆಲವೇ ಮಂದಿ ತಂಗಲು ವ್ಯವಸ್ಥೆ ಇದೆ. ಈ ದೇವಸ್ಥಾನ ಜಮಖಂಡಿ 9 ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಬಂದು ಹೋಗಲು ಬಸ್ ವ್ಯವಸ್ಥೆ ಇದೆ. ಜಮಖಂಡಿಯಲ್ಲಿ ಸಾಕಷ್ಟು ಲಾಡ್ಜ್‌ಗಳಿವೆ. ಹೆಚ್ಚಿನ ಮಾಹಿತಿಗೆ ಅರ್ಚಕರಾದ ಮುಕುಂದ (9980036638), ಗೋವಿಂದ (9902024858) ಅವರನ್ನು  ಸಂಪರ್ಕಿಸಬಹುದು.ಸೇವಾ ವಿವರ

* ಪಂಚಾಮೃತ ಅಭಿಷೇಕ:  ರೂ.101

* ಪಲ್ಲಕ್ಕಿ ಉತ್ಸವ:  ರೂ.501

* ನೈವೇದ್ಯ:  ರೂ.101

* ವಸ್ತ್ರ ಕಾಣಿಕೆ:  ರೂ.251

* ಕಾರ್ತಿಕ ದೀಪೋತ್ಸವ:  ರೂ.151

* ತುಪ್ಪದ ನಂದಾ ದೀಪ:  ರೂ.251

* ಎಣ್ಣೆಯ ದೀಪ:  ರೂ.151

* ದೀಡ ನಮಸ್ಕಾರ:  ರೂ.101

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry