ಕಲಾಂಗೆ ಅವಮಾನ: ಭಾರತದ ಪ್ರತಿರೋಧ

7

ಕಲಾಂಗೆ ಅವಮಾನ: ಭಾರತದ ಪ್ರತಿರೋಧ

Published:
Updated:
ಕಲಾಂಗೆ ಅವಮಾನ: ಭಾರತದ ಪ್ರತಿರೋಧ

ನವದೆಹಲಿ (ಪಿಟಿಐ): ಭದ್ರತಾ ತಪಾಸಣಾ ವಿನಾಯ್ತಿ ಪಡೆದಿದ್ದರೂ ಸಹ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ (ಜೆಎಫ್‌ಕೆ) ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆಗೆ ಒಳಪಡಿಸುವ ಮೂಲಕ ಅವಮಾನ ಮಾಡಿರುವ ಘಟನೆ ವರದಿಯಾಗಿದೆ.ಘಟನೆಯನ್ನು ಖಂಡಿಸಿರುವ ಭಾರತ, ರಾಜತಾಂತ್ರಿಕ ಮಾರ್ಗದಲ್ಲಿಯೇ ಅಮೆರಿಕದ ಗಣ್ಯ, ಅತಿಗಣ್ಯ ವ್ಯಕ್ತಿಗಳನ್ನು ಭದ್ರತಾ ತಪಾಸಣೆಗೆ ಒಳಪಡಿಸುವ ಮೂಲಕ ಪ್ರತಿಕಾರದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.ಕಲಾಂ ಅವರ ಜ್ಯಾಕೆಟ್ ಮತ್ತು ಬೂಟುಗಳನ್ನು ತೆಗೆದು ಸ್ಫೋಟಕಗಳಿವೆಯೇ ಎಂದು ತಪಾಸಣೆ ಮಾಡಲಾಗಿದೆ. 80 ವರ್ಷದ ಕಲಾಂ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದು, ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು ಸೆಪ್ಟೆಂಬರ್ 29ರಂದು ಸ್ವದೇಶಕ್ಕೆ ವಾಪಾಸಾಗುವ ಸಂದರ್ಭದಲ್ಲಿ ಜೆಎಫ್‌ಕೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಲಾಂ ಅವರನ್ನು ತಪಾಸಣೆಗೆ ಒಳಪಡಿಸಿ ಅಚ್ಚರಿ ಮೂಡಿಸಿದ್ದಾರೆ.ಕಲಾಂ ಅವರು ವಿಮಾನದಲ್ಲಿ ತಮ್ಮ ಆಸನದಲ್ಲಿ ಕುಳಿತ ನಂತರ ಅಲ್ಲಿಗೆ ಬಂದ ಭದ್ರತಾ ಅಧಿಕಾರಿಗಳು ನಿಮ್ಮನ್ನು ಪುನಃ ತಪಾಸಣೆಗೆ ಒಳಪಡಿಸಬೇಕಾಗಿದೆ ಎಂದರು. ಆದರೆ ಇದನ್ನು ಏರ್ ಇಂಡಿಯಾ ಅಧಿಕಾರಿಗಳು ತೀವ್ರವಾಗಿ ಪ್ರತಿಭಟಿಸಿದರು.ಆದರೆ ಭದ್ರತಾ ಸಿಬ್ಬಂದಿ ವಿಮಾನದಲ್ಲಿನ ಪ್ರಯಾಣಿಕರನ್ನು ಪುನಃ ತಪಾಸಣೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಇದಕ್ಕೆ ಕಲಾಂ ಪ್ರತಿರೋಧ ತೋರಿಸಲಿಲ್ಲ. ನಂತರ ಭದ್ರತಾ ಸಿಬ್ಬಂದಿ ಕಲಾಂ ಅವರ ಜ್ಯಾಕೆಟ್ ಮತ್ತು ಬೂಟುಗಳನ್ನು ತೆಗೆಸಿ ತಪಾಸಣೆಗೆ ತೆಗೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ ಅವುಗಳನ್ನು ಕಲಾಂ ಅವರಿಗೆ ಹಿಂತಿರುಗಿಸಿದರು.ಇದರಿಂದ ಏರ್ ಇಂಡಿಯಾ ಸಿಬ್ಬಂದಿ ತೀವ್ರ ಮುಜುಗರಕ್ಕೆ ಒಳಗಾದರು. ಕಲಾಂ ಅವರ ನಿಕಟವರ್ತಿಗಳ ಪ್ರಕಾರ ಈ ಘಟನೆ ಬಗ್ಗೆ ಅವರು ಹೆಚ್ಚಿನ ತಲೆಕೆಡಿಸಿಕೊಳ್ಳಲಿಲ್ಲ ಹಾಗೂ ಯಾರಿಗೂ ದೂರು ನೀಡಲಿಲ್ಲ. ಆದರೆ ಅವರು ಭಾರತಕ್ಕೆ ಹಿಂತಿರುಗಿದ ನಂತರ ಅವರ ಕಚೇರಿಯ ಸಿಬ್ಬಂದಿ ಘಟನೆ ಕುರಿತು ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದೆ.ಏರ್ ಇಂಡಿಯಾ ಭದ್ರತಾ ವಿಭಾಗದ ನಿರ್ದೇಶಕ ಎಸ್.ಮಾಥೂರ್ ಅವರು ಘಟನೆ ಕುರಿತು ವಿಸ್ತೃತ ವರದಿ ತಯಾರಿಸಿ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿದೇಶಾಂಗ ಇಲಾಖೆಗೆ ಅಕ್ಟೋಬರ್‌ನಲ್ಲಿ ಸಲ್ಲಿಸ್ದ್ದಿದಾರೆ.ಘಟನೆ ಅಮೆರಿಕ ನೆಲದಲ್ಲಿ ನಡೆದಿದೆ. ಈ ಕುರಿತು ಅಲ್ಲಿನ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ನಸೀಮ್ ಜೈದಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಸಲುವಾಗಿ ಉಭಯ ದೇಶಗಳ ಅಧಿಕಾರಿಗಳು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದಕ್ಕಾಗಿ ಗಣ್ಯ, ಅತಿಗಣ್ಯ ವ್ಯಕ್ತಿಗಳ ಪಟ್ಟಿಯನ್ನು ತಯಾರಿಸಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.ಈ ಹಿಂದೆ 2009ರಲ್ಲಿ ಅಮೆರಿಕ ವಾಯುಯಾನ ಸಂಸ್ಥೆ ಕಾಂಟಿನೆಂಟಲ್ ಏರ್‌ಲೈನ್ಸ್‌ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಭದ್ರತಾ ತಪಾಸಣೆಗೆ ಒಳಗಾಗುವ ಮೂಲಕ ಮುಜಗರ ಅನುಭವಿಸಿದ್ದರು.

 

`ಈ ಘಟನೆ ಸಹಿಸಲ್ಲ~

ನವದೆಹಲಿ (ಪಿಟಿಐ):
ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಭದ್ರತಾ ತಪಾಸಣೆಗೆ ಒಳಪಡಿಸಿರುವ ಅಲ್ಲಿನ ಅಧಿಕಾರಿಗಳ ಕ್ರಮವನ್ನು ಭಾರತ ಕಟುವಾಗಿ ಖಂಡಿಸಿದೆ.

ಇಂತಹ ಘಟನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜತಾಂತ್ರಿಕ ನಿಯಮಗಳ ಪ್ರಕಾರವೇ ಅಮೆರಿಕದ ಗಣ್ಯ, ಅತಿಗಣ್ಯ ವ್ಯಕ್ತಿಗಳನ್ನು ಭಾರತದಲ್ಲಿ ಇಂತಹ ತಪಾಸಣೆಗೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು, ಅಮೆರಿದಲ್ಲಿರುವ ಭಾರತದ ರಾಯಭಾರಿ ನಿರುಪಮಾ ರಾವ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅಮೆರಿಕ ಸರ್ಕಾರದ ಉನ್ನತ ಮಟ್ಟದಲ್ಲಿ ವಿಷಯವನ್ನು ಚರ್ಚಿಸುವಂತೆ ಸೂಚಿಸಿದ್ದಾರೆ.ಜತೆಗೆ ಘಟನೆ ಕುರಿತು ರಾಯಭಾರ ಕಚೇರಿ ವಿಸ್ತೃತ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದ್ದಾರೆ.

ಕ್ಷಮೆಯಾಚಿಸಿದ ಅಮೆರಿಕ

ನವದೆಹಲಿ (ಐಎಎನ್‌ಎಸ್):
ಎಪಿಜೆ ಅಬ್ದುಲ್ ಕಲಾಂ ಅವರನ್ನು ತಪಾಸಣೆಗೆ ಒಳಪಡಿಸಿದ ಬಗ್ಗೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಘಟನೆ ಕುರಿತು ಅಮೆರಿಕ ಕ್ಷಮೆಯಾಚಿಸಿದೆ.ಶಿಷ್ಟಾಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರ ಭಾರತ ಮತ್ತು ವೈಯಕ್ತಿಕವಾಗಿ ಕಲಾಂ ಅವರ ಕ್ಷಮೆ ಯಾಚಿಸಿದೆ. ನಿರುಪಮಾ ರಾವ್ ವಿಷಯವನ್ನು ಅಮೆರಿಕದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಭಾರತದ ಆಕ್ಷೇಪ ಮತ್ತು ರಾಜತಾಂತ್ರಿಕ ಮಾರ್ಗದಲ್ಲಿಯೇ ಪ್ರತಿಕಾರ ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದರು. ಕಲಾಂ ಬಗ್ಗೆ ಅಮೆರಿಕಕ್ಕೆ ಅತ್ಯಂತ ಗೌರವ ಇದ್ದು, ನಡೆದಿರುವ ಘಟನೆ ಬಗ್ಗೆ ಕ್ಷಮೆ ಯಾಚಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ನವದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಪೀಟರ್ ಬುರ್ಲೇಗ್ ಅವರು ಅಮೆರಿಕ ಸಾರಿಗೆ ಭದ್ರತಾ ಆಡಳಿತದ ಪರವಾಗಿ ಬರೆದಿರುವ ಕ್ಷಮಾಪಣೆ ಪತ್ರವನ್ನು ಕಲಾಂ ಅವರಿಗೆ ತಲುಪಿಸಿ ಕ್ಷಮೆಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry