ಕಲಾಂ ವ್ಯಕ್ತಿ ಚಿತ್ರಣಕ್ಕೆ ಯಶಸ್ವಿ ರಂಗರೂಪ

ಭಾನುವಾರ, ಜೂಲೈ 21, 2019
22 °C

ಕಲಾಂ ವ್ಯಕ್ತಿ ಚಿತ್ರಣಕ್ಕೆ ಯಶಸ್ವಿ ರಂಗರೂಪ

Published:
Updated:

ಅವುಲ್ ಫಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ (ಎಪಿಜೆ ಅಬ್ದುಲ್ ಕಲಾಂ) ಹೆಸರು ಎಷ್ಟು ದೊಡ್ಡದೋ ಕಲಾಂ ಅವರ ವ್ಯಕ್ತಿತ್ವ ಅದಕ್ಕಿಂತಲೂ ದೊಡ್ಡದು!ರಾಮೇಶ್ವರದ ಬೀದಿಯಲ್ಲಿ ಪೇಪರ್ ಹಂಚುತ್ತಿದ್ದ ಬಾಲಕ ನಂತರದ ವರ್ಷಗಳಲ್ಲಿ ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಆಗಿ ಮೇರು ಶಿಖರವನ್ನೇರಿದ್ದಾರೆ. ಅವರು ಸಾಗಿಬಂದ ಜೀವನ ಮಕ್ಕಳಲ್ಲಿ ದೊಡ್ಡ ಕನಸನ್ನು ಕಾಣುವುದನ್ನು ಕಲಿಸುತ್ತದೆ. ಅವರ `ಅಗ್ನಿಯ ರೆಕ್ಕೆಗಳು~ ಆತ್ಮಚರಿತ್ರೆಯ ಪುಸ್ತಕ ಮಾರಾಟದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತ್ತು. ಈ ಕೃತಿಯನ್ನು ಆಧಾರವನ್ನಾಗಿಟ್ಟುಕೊಂಡು ಜಯಪ್ರಕಾಶ ಪುತ್ತೂರು `ಕಲಾಂ~ ನಾಟಕವನ್ನು ರಚಿಸಿದ್ದಾರೆ (ಮೂಲ ನಿರೂಪಣೆ: ಅರುಣ್ ತಿವಾರಿ). ಯುವ ನಾಟಕ ಶಿಕ್ಷಕರಾಗಿರುವ ಎಸ್.ಎಲ್. ಸಂತೋಷ್ ದಾವಣಗೆರೆಯ ವಿದ್ಯಾಸಾಗರ ಪ್ರೌಢಶಾಲೆಯ ಮಕ್ಕಳಿಗಾಗಿ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕವು ಈಗಾಗಲೇ ಹತ್ತು ಪ್ರಯೋಗಗಳನ್ನು ಕಂಡಿವೆ.ಮಕ್ಕಳ ಬಗ್ಗೆ ಅತೀವ ಮಮತೆ ಇರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ವ್ಯಕ್ತಿ ಚಿತ್ರಣವನ್ನು ಮಕ್ಕಳೇ ಅನಾವರಣಗೊಳಿಸುವ ಕಲ್ಪನೆ ಅದ್ಭುತವಾದದ್ದು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ `ಸಮಾನ ಮನಸ್ಕರು~ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ `ಕಲಾಂ~ ನಾಟಕವನ್ನು ಪ್ರದರ್ಶಿಸಲಾಯಿತು.ನಿರ್ದೇಶಕರ ಜಾಣ್ಮೆಗೆ ಕನ್ನಡಿ ಹಿಡಿದ ಈ ನಾಟಕ, ಮಕ್ಕಳ ನಾಟಕವೋ ಅಥವಾ ನಿರ್ದೇಶಕರ ನಾಟಕವೋ ಎನ್ನುವಷ್ಟರ ಮಟ್ಟಿಗೆ ಗಾಢವಾದ ಪರಿಣಾಮ ಬೀರಿತು. ಕಲಾಂ ಅವರಲ್ಲಿ ಅಂತರ್ಗತವಾದ ಕಲಾವಂತಿಕೆಯನ್ನು ಅಭಿವ್ಯಕ್ತಿಸಲು ನಾಟಕದ ಆರಂಭದಲ್ಲಿ ವೀಣೆ ನುಡಿಸುವ ಕಲಾಂ ಅವರನ್ನು ತೋರಿಸಲಾಯಿತು. ನಂತರ ಅವರ ಬಾಲ್ಯದ ದಿನಗಳು, ಕಾಲೇಜು ದಿನಗಳು, ಕೆಲಸಕ್ಕಾಗಿ ಓಡಾಡಿದ್ದು, ಎಸ್.ಎಲ್.ವಿ. ತಯಾರಿಕೆಯಲ್ಲಿ ಅವರ ಪರಿಶ್ರಮ, ಪ್ರಥಮ ಯತ್ನವು ವಿಫಲವಾದಾಗ ಅವರ ಮನಸ್ಸಿನ ಮೇಲೆ ಆದ ಪರಿಣಾಮ, ಪ್ರೊ. ವಿಕ್ರಂ ಸಾರಾಭಾಯ್ ಮತ್ತು ಎಂಜಿಕೆ ಮೆನನ್ ಆಡಿದ ಪ್ರಭಾವೀ ನುಡಿಗಳಿಂದಾಗಿ ಇವರು ಮತ್ತೆ ಛಲ ಹೊತ್ತು ಉಡಾವಣೆಯಲ್ಲಿ ಯಶಸ್ಸು ಗಳಿಸಿದ್ದು... ಹೀಗೆ ಸನ್ನಿವೇಶಗಳು ರಂಗದ ಮೇಲೆ ಅನಾವರಣಗೊಳ್ಳುತ್ತಾ ಹೋಗುತ್ತವೆ. ಭಾರತದ ರಾಷ್ಟ್ರಪತಿಯಾಗಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಮಾದರಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಕಲಾಂ ಪಾತ್ರರಾಗುತ್ತಾರೆ. ಮಕ್ಕಳೆಲ್ಲ ಕೈಯಲ್ಲಿ ಕಾಗದದ ವಿಮಾನ ಹಿಡಿದು ಕಲಾಂ ಅವರನ್ನು ಮುತ್ತಿಕೊಳ್ಳುವ ಅಂತಿಮ ದೃಶ್ಯ ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂಥದ್ದು.ಯಾವುದೇ ಆಡಂಬರದ ರಂಗ ಸಜ್ಜಿಕೆಯಿಲ್ಲದೆ ಕೇವಲ ಕೆಲವು ಪೆಟ್ಟಿಗೆಗಳನ್ನು ಮಾತ್ರ ಆಯಾ ಸನ್ನಿವೇಶಕ್ಕೆ ಬಳಸಿಕೊಳ್ಳಲಾಗಿದೆ. ನಿರೂಪಕರಾಗಿ, ಪಾತ್ರಗಳಾಗಿ, ರಂಗಸಜ್ಜಿಕೆಯನ್ನು ವ್ಯವಸ್ಥೆಗೊಳಿಸುವವರಾಗಿ ಮಕ್ಕಳು ನಿರ್ವಹಿಸಿದ ಜವಾಬ್ದಾರಿ ಶ್ಲಾಘನೀಯ.ನಾಟಕಕ್ಕೆ ಪೂರಕವಾದ ಸಂಗೀತ, ಬೆಳಕು ಸಂಯೋಜನೆ ಹೀಗೆ ಎಲ್ಲ ವಿಧದಲ್ಲಿಯೂ ನಿರ್ದೇಶಕರು ಸಾಕಷ್ಟು ಎಚ್ಚರಿಕೆ ವಹಿಸಿದ್ದು ಕಂಡುಬಂತು. ಕಲಾಂ ಪಾತ್ರಧಾರಿಯ ಅಭಿನಯ ಯಾವ ಪರಿಣತ ನಟನಿಗೂ ಕಡಿಮೆ ಇರಲಿಲ್ಲ!.ಮಕ್ಕಳಲ್ಲಿ ನಾಟಕದ ಆಸಕ್ತಿ ದಿನೇದಿನೇ ಕಡಿಮೆಯಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ಮಕ್ಕಳಿಂದಲೇ ಇಂತಹ ಪ್ರಬುದ್ಧವಾದ ನಾಟಕವನ್ನು ಪ್ರದರ್ಶಿಸಿದ್ದು ಅನುಕರಣೀಯ. ಇಂತಹ ಉತ್ತಮ ನಾಟಕವನ್ನು ಪ್ರಯೋಗಿಸಿದ ದಾವಣಗೆರೆಯ ವಿದ್ಯಾ ಪ್ರೌಢಶಾಲಾ ತಂಡದ ಎಲ್ಲ ಮಕ್ಕಳು ತಾಂತ್ರಿಕ ವರ್ಗ ಹಾಗೂ ನಾಟಕವನ್ನು ನಿರ್ದೇಶಿಸಿದ ಎಸ್.ಎಲ್. ಸಂತೋಷ್ ಅಭಿನಂದನಾರ್ಹರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry