ಕಲಾಕೃತಿಗಳ ಬಣ್ಣಗಳೇ ಮಾತಾದಾಗ...

ಬೆಂಗಳೂರು: ಅಲ್ಲಿನ ಕಲಾಕೃತಿಗಳನ್ನು ನೋಡಿ ನೆರೆದಿದ್ದವರ ಕಣ್ಣುಗಳೆಲ್ಲ ಆನಂದ ಭಾಷ್ಪದಿಂದ ತುಂಬಿ ಹೋಗಿದ್ದವು. ಏಕೆಂದರೆ, ಅತ್ಯಾಕರ್ಷಕ ವರ್ಣ ಸಂಯೋಜನೆಯನ್ನು ಹೊಂದಿದ್ದ ಅಲ್ಲಿನ ಒಂದೊಂದು ಕಲಾಕೃತಿಯೂ ಒಬ್ಬೊಬ್ಬ ಅಂಗವಿಕಲ ಕಲಾ ಸಾಧಕರ ಕಥೆಯನ್ನು ಹೇಳುತ್ತಿತ್ತು.
ಫೌಂಡೇಷನ್ ಫಾರ್ ಆರ್ಟ್ ಅಂಡ್ ಕಲ್ಚರ್ ಫಾರ್ ಡೆಫ್ ಸಂಘಟನೆಯಿಂದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ಯಾವ ಕುಂಚಬ್ರಹ್ಮರ ಕಲಾಕೃತಿಗಳಿಗೂ ಕಡಿಮೆ ಇಲ್ಲದಂತೆ ಅಂಗವಿಕಲರ ಕೃತಿಗಳು ಚಿತ್ರ ಕಾವ್ಯವಾಗಿ ಗೋಚರಿಸುತ್ತಿದ್ದವು.
ನಾಡಿನ ಅಪೂರ್ವ ಚೇತನಗಳ ಈ ಸಾಧನೆಯನ್ನು ಕಣ್ಣಾರೆ ಕಂಡ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪ ಅವರ ಕಣ್ಣುಗಳು ಸಹ ಹನಿಗೂಡಿದವು. ಮಾತನಾಡುವಾಗ ಅವರ ಕಂಠ ಗದ್ಗಿತವಾಯಿತು. ಸಭೆಯಲ್ಲಿ ಹೆಚ್ಚಾಗಿ ವಾಕ್–ಶ್ರವಣ ದೋಷ ಉಳ್ಳವರೇ ಪಾಲ್ಗೊಂಡಿದ್ದರು.
ವೇದಿಕೆ ಮೇಲಿದ್ದವರು ಆಡಿದ ಮಾತುಗಳನ್ನು ಆಂಗಿಕ ಅಭಿನಯದ ಮೂಲಕ ಅವರಿಗೆ ತಿಳಿಸಿ ಹೇಳಲಾಗುತ್ತಿತ್ತು. ಗಣ್ಯರು ಆಡಿದ ಮಾತುಗಳು ಸಂಜ್ಞೆಗಳ ಮೂಲಕ ಅರ್ಥವಾಗುತ್ತಿದ್ದಂತೆ ಅವರೆಲ್ಲ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದರು. ಬಹಳ ದಿನಗಳ ಬಳಿಕ ಭೇಟಿಯಾಗಿದ್ದ ಸ್ನೇಹಿತರೆಲ್ಲ ಸಂಜ್ಞೆಗಳ ಮೂಲಕವೇ ಸಂಭಾಷಿಸುತ್ತಿದ್ದರು, ಹರಟೆ ಹೊಡೆಯುತ್ತಿದ್ದರು!
ಮಹಿಳಾ ದಿನದ ಅಂಗವಾಗಿ ಒಂಬತ್ತು ಜನ ಅಂಗವಿಕಲ ಸಾಧಕಿಯರನ್ನು ಸನ್ಮಾನಿಸಲಾಯಿತು.
ಬಿ.ಡಿ. ಸುಮಾ (ಅಂಧರು, ನೃತ್ಯ ಕಲಾವಿದೆ), ಎಂ.ಆರತಿ (ಪೋಲಿಯೊಪೀಡಿತರು, ಹಿರಿಯ ನಾಗರಿಕರ ಆರೈಕೆ), ಮುನಿರತ್ನಮ್ಮ (ಅಂಧರು, ಉಪನ್ಯಾಸಕಿ), ಕೆ. ಶ್ರೀದೇವಿ (ಪೋಲಿಯೊಪೀಡಿತರು, ಫ್ರೆಂಚ್ ಸೇರಿದಂತೆ ಹಲವು ಭಾಷೆಗಳ ತಜ್ಞೆ), ಎನ್. ಸಾವಿತ್ರಿ (ಮೂಗರು, ಚಿತ್ರಕಲಾವಿದೆ), ಸುನೀಲಾ ಹಿರೇಮಠ (ಕುಬ್ಜರು, ಅಂಗವಿಕಲರಿಗೆ ನೆರವು) ಎನ್.ಮಮತಾ (ಅಂಗವಿಕಲರು, ಅಬಕಾರಿ ಇಲಾಖೆ ಉದ್ಯೋಗಿ), ನಾಗರತ್ನ ಭಟ್ (ಅಂಧರು, ಅಂಗವಿಕಲರಿಗೆ ಆಪ್ತ ಸಮಾಲೋಚಕರು) ಹಾಗೂ ಅನುಷಾ (ಆಟಿಸಂನಿಂದ ಬಳಲುತ್ತಿರುವವರು, ಗಾಯಕಿ) ಅವರೇ ಸನ್ಮಾನಿತರು.
ಸನ್ಮಾನಿತರ ಪರವಾಗಿ ಮಾತನಾಡಿದ ಶ್ರೀದೇವಿ, ‘ನಾವು ಅಂಗವಿಕಲರು ಎಂದುಕೊಳ್ಳುತ್ತಾ ಗಾಯ ಕೆರೆದುಕೊಳ್ಳುವುದು ಏಕೆ’ ಎಂದು ಪ್ರಶ್ನಿಸಿದರು. ‘ಸಿಕ್ಕ ಅವಕಾಶಗಳಲ್ಲೇ ಸಾಧನೆ ಮಾಡೋಣ. ಸ್ವಂತ ಕಾಲ ಮೇಲೆ ನಿಲ್ಲೋಣ’ ಎಂದು ಹುರಿದುಂಬಿಸಿದರು.
‘ದೇಶದ ಶೇ 5ರಷ್ಟು ಜನ ಮಾತ್ರ ಅಂಗವಿಕಲರು. ಮಿಕ್ಕ ಶೇ 95ರಷ್ಟು ಜನ ಒಟ್ಟಾಗಿ ಅವರ ಬದುಕಿನಲ್ಲಿ ಸಂತಸ ಮೂಡಿಸುವುದು ಸಾಧ್ಯವಿಲ್ಲವೇ’ ಎಂದು ಕೋ.ಚೆನ್ನಬಸಪ್ಪ ಕೇಳಿದರು. ‘ಅಂಗವಿಲಕರಿಗೆ ಅನುಕಂಪದ ಅಗತ್ಯ ಇಲ್ಲ. ಅವರಿಗೆ ಆತ್ಮ ವಿಶ್ವಾಸ ತುಂಬಿಸುವ ಕೆಲಸ ಮಾಡಿದರೆ ಸಾಕು’ ಎಂದು ಹೇಳಿದರು.
ಮತ್ತೊಬ್ಬ ಮುಖ್ಯ ಅತಿಥಿ ಪ್ರಮೀಳಾ ನೇಸರ್ಗಿ, ‘ಅಂಗವಿಕಲರಿಗೆ ಚುನಾವಣೆಯಲ್ಲೂ ಮೀಸಲಾತಿ ಸೌಲಭ್ಯ ಸಿಗಬೇಕಿದ್ದು, ಅದಕ್ಕಾಗಿ ನಾವೆಲ್ಲ ಹೋರಾಡಬೇಕಿದೆ’ ಎಂದು ತಿಳಿಸಿದರು.
‘ವೈಟ್ಫೀಲ್ಡ್ನಲ್ಲಿ ನಾನು ಕಲಾ ಗ್ಯಾಲರಿಯೊಂದನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಅಂಗವಿಕಲರಿಗಾಗಿಯೇ ವಿಶೇಷ ವಿಭಾಗ ತೆರೆಯಲಿದ್ದೇನೆ’ ಎಂದು ಭರವಸೆ ನೀಡಿದರು. ಹಿರಿಯ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್, ಚಿತ್ರ ನಿರ್ದೇಶಕ ಸುನಿ, ಸಂಘಟನೆಯ ಎಸ್. ಉಮೇಶ್ ಮತ್ತು ಎಸ್.ಗಿರಿಜಾ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.