ಕಲಾತ್ಮಕ ನಿರ್ದೇಶಕರು ಮತ್ತು ಡಿಸೆಂಬರ್ 31...

7

ಕಲಾತ್ಮಕ ನಿರ್ದೇಶಕರು ಮತ್ತು ಡಿಸೆಂಬರ್ 31...

Published:
Updated:
ಕಲಾತ್ಮಕ ನಿರ್ದೇಶಕರು ಮತ್ತು ಡಿಸೆಂಬರ್ 31...

ನಮ್ಮಲ್ಲಿನ ಬಹುತೇಕ ಕಲಾತ್ಮಕ ನಿರ್ದೇಶಕರು ಡಿಸೆಂಬರ್ 31ರ ನಿರ್ದೇಶಕರು!

ವಿ.ಎಚ್.ಸುರೇಶ್ ಅವರ ಮಾತಿನಲ್ಲಿ ವ್ಯಂಗ್ಯ ಸ್ಪಷ್ಟವಾಗಿಯೇ ಇಣುಕುತ್ತಿತ್ತು. `ಒಂದು ಕಾಲವಿತ್ತು. ಅದು ಸುವರ್ಣ ಕಾಲ. ರಾಷ್ಟ್ರೀಯ ಮಟ್ಟದಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳಿಗೆ ಮಾನ್ಯತೆಯಿತ್ತು. ಆದರೆ ಈಗ ಕಲಾತ್ಮಕ ಚಿತ್ರಗಳನ್ನು ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭಿಸಿ ಡಿಸೆಂಬರ್‌ನಲ್ಲಿ ಮುಗಿಸುತ್ತಾರೆ. ಡಿ.31ರೊಳಗೆ ಸೆನ್ಸಾರ್ ಮಾಡಿಸಿ, ಆ ವರ್ಷದ ರಾಷ್ಟ್ರಪ್ರಶಸ್ತಿಗೆ ತಮ್ಮ ಚಿತ್ರವನ್ನು ಕಳುಹಿಸುವುದು ಅವರ ಉದ್ದೇಶ. ಪ್ರಶಸ್ತಿಗಾಗಿ ಸಿನಿಮಾ ಮಾಡುವ ಇಂಥ ಕೆಲವು ನಿರ್ದೇಶಕರ ಕಾರಣದಿಂದಾಗಿ ಕಲಾತ್ಮಕ ಚಿತ್ರಗಳ ನಿರ್ದೇಶಕರ ಬಗ್ಗೆ ಗೌರವ ಕಡಿಮೆಯಾಗಿದೆ~.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಗಳಾದ ಸುರೇಶ್ ಅವರು ಮಾತನಾಡುತ್ತಿದ್ದುದು, ಡಿಸೆಂಬರ್‌ನಲ್ಲಿ ನಡೆಯುವ ಬೆಂಗಳೂರು ಅಂತರರಾಷ್ಟ್ರೀಯ ಸಿನೆಮೋತ್ಸವದ ಅಂಗವಾಗಿ ಈಚೆಗೆ ನಡೆದ ವಿಚಾರಸಂಕಿರಣ ಒಂದರಲ್ಲಿ. `ಕನ್ನಡ ಚಿತ್ರಗಳಿಗೆ ಜಾಗತಿಕ ಮಟ್ಟದಲ್ಲಿ ಜಾಗತಿಕ ಪಾಲನೆ ಪೋಷಣೆ~ ಎನ್ನುವ ವಿಷಯದ ಬಗ್ಗೆ ಮಾತನಾಡುತ್ತಿದ್ದ ಅವರು, ಆಡಿದ್ದೆಲ್ಲ ವೇದನೆಯ ಮಾತುಗಳೇ. ಅವರಿಗ್ಯಾಕೋ ಕಲಾತ್ಮಕ ಚಿತ್ರಗಳ ನಿರ್ದೇಶಕರ ಬಗ್ಗೆ ಸಿಟ್ಟು ಬಂದಂತಿತ್ತು. ಆದರೆ ಯಾರ ಹೆಸರುಗಳನ್ನೂ ಉಲ್ಲೇಖಿಸುವ ಗೋಜಿಗೆ ಅವರು ಹೋಗಲಿಲ್ಲ.

ಸುರೇಶರ ಮಾತು ಹೊರಳಿದ್ದು ನಾಯಕರತ್ತ. `ಈ ವರ್ಷದ ಸೂಪರ್‌ಹಿಟ್ ಚಿತ್ರ ಸಾರಥಿ. ನಾಯಕನಟ ದರ್ಶನ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಊರೂರಿಗೂ ಹೋಗಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಉಳಿದ ನಟರಿಗೂ ದರ್ಶನ್ ಮಾದರಿಯಾಗಬೇಕು. ಆದರೆ, ಕೆಲವು ನಟರು ದರ್ಶನ್‌ರನ್ನು ಬೇರೆಯದೇ ರೀತಿಯಲ್ಲಿ ಅನುಕರಿಸಲಿಕ್ಕೆ ಹೋಗಿ ಸುದ್ದಿಯಾಗುತ್ತಿದ್ದಾರೆ~ ಎಂದರು. `ಅದು ನಿಜವೇ! ಯಾತ್ರೆಗೆ ಹೊರಡುವ ಮನಸ್ಥಿತಿ ಬರಲಿಕ್ಕೆ ಮೊದಲು ಮನೆಯಲ್ಲೊಂದು ಕುರುಕ್ಷೇತ್ರ ನಡೆಯಬೇಕಲ್ಲವೇ?~ ಎಂದು ಸಭಿಕರೊಬ್ಬರು ಸಣ್ಣದನಿಯಲ್ಲಿ ಕೆಣಕಿದರಾದರೂ, ತಮ್ಮದೇ ಲಹರಿಯಲ್ಲಿದ್ದ ಸುರೇಶ್‌ರ ಚಿತ್ತ ಚಿತ್ತಾಗಲಿಲ್ಲ.

ಸುರೇಶ್‌ರ ಕಲಾತ್ಮಕ ಚಿತ್ರಗಳ ನಿರ್ದೇಶಕರ ಬಗೆಗಿನ ನಿಲುವು ಹಾಗೂ ದರ್ಶನ್ ಮಾದರಿಯನ್ನು ಲಘುವಾಗಿ ಪರಿಗಣಿಸಬಹುದಾದರೂ, ಅವರು ಮಂಡಿಸಿದ ಕೆಲವು ಅಂಕಿಅಂಶಗಳು ಕುತೂಹಲ ಹಾಗೂ ಆತಂಕ ಉಂಟುಮಾಡುವಂತಿದ್ದವು. ಸುರೇಶ್‌ರ ಪ್ರಕಾರ, ಆಂಧ್ರಪ್ರದೇಶದಲ್ಲಿ ಶೇ.38ರಷ್ಟು ಜನರಿಗೆ ನಿಯಮಿತವಾಗಿ ಸಿನಿಮಾ ನೋಡುವುದು ಜೀವನಶೈಲಿಯ ಭಾಗವಾಗಿದೆ. ಈ ಪ್ರಮಾಣ ತಮಿಳುನಾಡಿನಲ್ಲಿ ಶೇ.36ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ.16 ಜನ ಮಾತ್ರ ನಿಯಮಿತವಾಗಿ ಸಿನಿಮಾ ನೋಡುತ್ತಾರೆ. ಈ ಹದಿನಾರು ಮಂದಿ ಕೂಡ ಕನ್ನಡಕ್ಕಷ್ಟೇ ನಿಷ್ಠರಾದವರಲ್ಲ. ಎಲ್ಲ ಭಾಷೆಯ ಸಿನಿಮಾಗಳೂ ಅವರಿಗೆ ಇಷ್ಟವೇ.

ಅಂತೆಯೇ, ಸಿನಿಮಾಗಳಿಂದ ವರ್ಷಕ್ಕೆ ಸುಮಾರು 200 ಕೋಟಿ ರೂಪಾಯಿ ನಿವ್ವಳ ಆದಾಯ ಕರ್ನಾಟಕದಿಂದ ಹುಟ್ಟುತ್ತಿದ್ದು, ಅದರಲ್ಲಿ ಕನ್ನಡ ಸಿನಿಮಾಗಳ ಪಾಲು ಶೇ.20 ಮಾತ್ರ! ಉಳಿದ ಆದಾಯವೆಲ್ಲ ಪರಭಾಷಾ ಚಿತ್ರಗಳಿಗೆ.

ಸುರೇಶ್ ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಕೂಡ ನಟನಟಿಯರ ಬಗ್ಗೆ ಟೀಕಾಸ್ತ್ರ ಪ್ರಯೋಗಿಸಿದರು. `ಒಂದು ಕಾಲದಲ್ಲಿ ನಿರ್ದೇಶಕರಿಗಿದ್ದ ಗೌರವ ಕ್ರಮೇಣ ನಿರ್ಮಾಪಕರಿಗೆ ಬಂತು. ಅದೀಗ ನಟನಟಿಯರ ಪಾಲಿಗೆ ಬಂದಿದೆ. ಈ ಸ್ಥಿತ್ಯಂತರವೇ ಚಿತ್ರರಂಗದ ಇಂದಿನ ದುಸ್ಥಿತಿಗೆ ಕಾರಣ~ ಎಂದವರು ವಿಷಾದಿಸಿದರು.

`ಮುಂಗಾರು ಮಳೆ~ ಚಿತ್ರದ ನಂತರ ವಿತರಕರ ಮಹತ್ವ ಕುಸಿತ ಕಂಡಿದೆ. ಈಗಿನ ನಿರ್ಮಾಪಕರಿಗೆ ಸಾಲದ ಅವಶ್ಯಕತೆಯೇ ಇಲ್ಲ. ಸ್ವಂತ ದುಡ್ಡಿನಲ್ಲೇ ಸಿನಿಮಾ ನಿರ್ಮಿಸುತ್ತಾರೆ. ಆದರೂ ಸೋಲುತ್ತಾರೆ. ಅದಕ್ಕೆ ಅವರ ಅನನುಭವವೇ ಕಾರಣ~ ಎಂದರು. ಚಂದ್ರಶೇಖರ್ ಅವರು ಪ್ರಸ್ತಾಪಿಸಿದ ಮತ್ತೊಂದು ವಿಚಾರ- `ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ~.

ವಾಣಿಜ್ಯ ಮಂಡಳಿಯ ಕೇಂದ್ರಸ್ಥಾನದಲ್ಲಿರುವ ಚಂದ್ರಶೇಖರ್ ಹಾಗೂ ಸುರೇಶ್‌ರ ಮಾತುಗಳಲ್ಲಿ ಉದ್ಯಮದ ಬಗೆಗೆ ವಸ್ತುನಿಷ್ಠ ಟೀಕೆಟಿಪ್ಪಣಿಗಳಿದ್ದವು. ಅದು ಸರಿಯೇ. ಪ್ರಶ್ನೆ ಇರುವುದು- ಈ ಸಮಸ್ಯೆಗಳು ಸೃಷ್ಟಿಯಾಗುವಲ್ಲಿ ಉದ್ಯಮದ ಭಾಗವಾದ ಅವರುಗಳ ಪಾತ್ರವೂ ಇದೆಯಲ್ಲವೇ ಎನ್ನುವುದು ಹಾಗೂ ಅವುಗಳನ್ನು ಬಗೆಹರಿಸುವುದರಲ್ಲಿ ಮಂಡಳಿ ಮೂಲಕ ಅವರು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ, ಹಮ್ಮಿಕೊಳ್ಳಲಿದ್ದಾರೆ ಎನ್ನುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry