ಶನಿವಾರ, ನವೆಂಬರ್ 23, 2019
17 °C

ಕಲಾಪ ನುಂಗಿ ಹಾಕಿದ `ಕಲ್ಲಿದ್ದಲು'

Published:
Updated:

ನವದೆಹಲಿ: ಕಲ್ಲಿದ್ದಲು ಮತ್ತು ತರಂಗಾಂತರ ಹಗರಣ ಮಂಗಳವಾರ ಸಂಸತ್ತಿನಲ್ಲಿ ಬಿರುಗಾಳಿ ಎಬ್ಬಿಸಿದವು. `ಕಲ್ಲಿದ್ದಲು ಹಗರಣ ಸಂಬಂಧ ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಸಿಬಿಐ ಸಿದ್ಧಪಡಿಸಿದ ವರದಿ ಮೇಲೆ ಪ್ರಭಾವ ಬೀರಲು ಸರ್ಕಾರ ಪ್ರಯತ್ನಿಸಿದೆ' ಎಂದು ಆರೋಪಿಸಿದ ಬಿಜೆಪಿ ರಾಜ್ಯಸಭೆಯಲ್ಲಿ ಪ್ರಧಾನಿ ಸಿಂಗ್ ರಾಜೀನಾಮೆಗೆ ಒತ್ತಾಯಿಸಿತು. ಲೋಕಸಭೆಯಲ್ಲಿ ಇವೆರಡೂ ಹಗರಣಗಳು ಪ್ರತಿಧ್ವನಿಸಿದ್ದರಿಂದ ಕಲಾಪಕ್ಕೆ ಅಡ್ಡಿ ಉಂಟಾಯಿತು.ಪ್ರಮುಖ ಹಗರಣಗಳ ಜತೆ ಲಡಖ್ ಭಾಗದಲ್ಲಿ ಚೀನಾ ಅತಿಕ್ರಮಣ, ಪ್ರತ್ಯೇಕ ತೆಲಂಗಾಣ ಬೇಡಿಕೆ, ತೃಣಮೂಲ ಕಾಂಗ್ರೆಸ್ ಮೇಲೆ ಎಡಪಕ್ಷಗಳು ಮಾಡಿದ ಆರೋಪ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಮತಾ ಪಕ್ಷ ನಡೆಸಿದ ವಾಗ್ದಾಳಿ ಮಂಗಳವಾರ ಸಂಸತ್ತಿನ ಬಹುತೇಕ ಕಲಾಪವನ್ನು ನುಂಗಿ ಹಾಕಿತು. ರಾಜ್ಯಸಭೆ ಮಧ್ಯಾಹ್ನದ ಬಳಿಕ ಮತ್ತೆ ಸೇರಿತು. ಲೋಕಸಭೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.`ಪ್ರಧಾನಿ ಸಿಂಗ್ ಕಲ್ಲಿದ್ದಲು ಹಗರಣದಲ್ಲಿ ರಾಜೀನಾಮೆ ನೀಡಬೇಕು' ಎಂದು ರಾಜ್ಯ ಸಭೆಯಲ್ಲಿ ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ ಸಭಾಪತಿ ಪೀಠದ ಮುಂದೆ ಜಮಾಯಿಸಿ ಗದ್ದಲ ಎಬ್ಬಿಸಿದರು. ರಾಜ್ಯಸಭೆ ಮಧ್ಯಾಹ್ನ 12ಕ್ಕೆ ಎರಡನೆ ಸಲ ಸೇರಿದಾಗಲೂ ಪ್ರಧಾನಿ ರಾಜೀನಾಮೆ ನೀಡಬೇಕೆಂಬ ಘೋಷಣೆಗಳು ಮೊಳಗಿದವು. ಇದರಿಂದಾಗಿ ಮತ್ತೆ ಸದನವನ್ನು ಎರಡು ಗಂಟೆವರೆಗೆ ಮುಂದಕ್ಕೆ ಹಾಕಲಾಯಿತು.ಲೋಕಸಭೆಯಲ್ಲಿ, ಕಲ್ಲಿದ್ದಲು ಹಗರಣ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಸಿಬಿಐ ಸಿದ್ಧಪಡಿಸಿರುವ ವರದಿಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪಕ್ಕೆ ಒಳಗಾಗಿರುವ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಅವರನ್ನು ವಜಾ ಮಾಡಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಡಿಎಂಕೆ ಸದಸ್ಯರು ಎರಡನೇ ತಲೆಮಾರಿನ ತರಂಗಾಂತರ ಹಗರಣದ ವಿಚಾರಣೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸದನ ಸಮಿತಿ ಅಧ್ಯಕ್ಷ ಪಿ.ಸಿ. ಚಾಕೋ ರಾಜೀನಾಮೆಗೆ ಒತ್ತಾಯಿಸಿದರು.ಒಂದು ಹಂತದಲ್ಲಿ ಹಿರಿಯ ಬಿಜೆಪಿ ಸದಸ್ಯ ಯಶವಂತ ಸಿನ್ಹ ಡಿಎಂಕೆ ಸದಸ್ಯ ಟಿ.ಆರ್.ಬಾಲು ಅವರ ಆಸನದ ಬಳಿ ಹೋಗಿ ಏನೋ ಮಾತುಕತೆ ನಡೆಸಿದರು. ಸಮಾಜವಾದಿ ಪಕ್ಷದ ಸದಸ್ಯರು ಲಡಖ್ ಭಾಗದಲ್ಲಿ ಚೀನಾ ನಡೆಸಿರುವ ಅತಿಕ್ರಮಣ ಕುರಿತು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದರು. ತೃಣಮೂಲ ಕಾಂಗ್ರೆಸ್ ಸದಸ್ಯರು ಪಶ್ಚಿಮ ಬಂಗಾಳದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು. ತೆಲಂಗಾಣ ಕಾಂಗ್ರೆಸ್ ಮತ್ತು ಟಿಡಿಪಿ ಸದಸ್ಯರು ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಗೆ ಅಂಟಿಕೊಂಡರು.ದಿನದ ಮೊದಲಿಗೆ ಬೆಳಿಗ್ಗೆ 11ಕ್ಕೆ ಸೇರಿದ ಲೋಕಸಭೆ ಕಲಾಪವನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ ಒಂದು ಗಂಟೆ ಮುಂದೂಡ ಲಾಯಿತು. ಮಧ್ಯಾಹ್ನ 12ಕ್ಕೆ ಕೆಳ ಮನೆ ಪುನಃ ಸೇರಿದಾಗ ಬಿಜೆಪಿ, ಎಸ್‌ಪಿ, ಎಡ ಪಕ್ಷಗಳು, ಡಿಎಂಕೆ ಸದಸ್ಯರು ಘೋಷಣೆಗಳನ್ನು ಮುಂದುವರಿಸಿದರು. ಎಲ್ಲ ಸದಸ್ಯರು ಘೋಷಣೆಗಳನ್ನು ಕೂಗಿ ಸಭಾಧ್ಯಕ್ಷರ ಪೀಠದ ಮುಂದಿನ ಆವರಣದಲ್ಲಿ ಜಮಾಯಿಸಿದರು.ಕಾಂಗ್ರೆಸ್ ಮತ್ತು ಟಿಡಿಪಿ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು `ಪ್ರತ್ಯೇಕ ತೆಲಂಗಾಣ' ರಾಜ್ಯಕ್ಕಾಗಿ ಪಟ್ಟು ಹಿಡಿದರು. ಎಡ ಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದ ಬೆಂಬಲದಿಂದ ಹಿಂಸಾಚಾರ ನಡೆಯುತ್ತಿದೆ ಎಂದು ಟೀಕಿಸಿದರು. ಡಿಎಂಕೆ ಮುಖಂಡ ಬಾಲು ಟೆಲಿಕಾಂ ವಿಷಯ ಕುರಿತು ಪ್ರಸ್ತಾಪಿಸಲು ಪ್ರಯತ್ನಿಸಿದರು. ಸದನದಲ್ಲಿ ಕೋಲಾಹಲ ಮುಂದುವರಿದಿದ್ದರಿಂದ ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.

ಸಿಬಿಐ ಮೂಲ ವರದಿ ಬಹಿರಂಗಕ್ಕೆ ಬಿಜೆಪಿ ಆಗ್ರಹ

ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಪ್ರಧಾನಿ ಅವರ ನಿಲುವನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಪ್ರಕರಣದಲ್ಲಿ ತನಿಖೆ ತಡೆಸುತ್ತಿರುವ ಸಿಬಿಐ ಸಲ್ಲಿಸಿದ ವಸ್ತುಸ್ಥಿತಿಯ ಮೂಲ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದೆ.ಪ್ರಧಾನಿ ರಾಜೀನಾಮೆ ನೀಡಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಸೋನಿಯಾ ತಳ್ಳಿಹಾಕಿದ್ದು, `ಅವರ ಈ ಪ್ರತಿಕ್ರಿಯೆ ನನಗೇನೂ ಆಶ್ಚರ್ಯ ತಂದಿಲ್ಲ' ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಅರುಣ್ ಜೇಟ್ಲಿ ಹೇಳಿದರು.ಕಲ್ಲಿದ್ದಲು ಹಗರಣದಲ್ಲಿ ಡಾ. ಸಿಂಗ್ ಅವರ ಮೇಲಿರುವ ಆರೋಪವನ್ನು ಸೋನಿಯಾ ಅವರು `ಸದ್ಗುಣ' ಎಂದು ತಿಳಿದಿರಬಹುದು ಆದರೆ ಬಿಜೆಪಿ ಇದನ್ನು `ಹಗರಣ' ಎನ್ನುವುದನ್ನು ಬಿಟ್ಟು ಬೇರೇನೂ ಭಾವಿಸುತ್ತಿಲ್ಲ. ಸಿಬಿಐ ನಿರ್ದೇಶಕರ ಜತೆ ಕಾನೂನು ಸಚಿವರು ಹಾಗೂ ಅಧಿಕಾರಿಗಳು ಸಮಾಲೋಚನೆ ನಡೆಸಿರುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ಜೇಟ್ಲಿ, ವರದಿಯನ್ನು ತಿರುಚುವುದಕ್ಕಾಗಿಯೇ ಇದೆಲ್ಲ ನಡೆದಿದೆ ಎಂದು ಆರೋಪಿಸಿದರು.`ಸಿಬಿಐ ಸಿದ್ಧಪಡಿಸಿದ ವರದಿಯಲ್ಲಿ ತಿದ್ದುಪಡಿ ಮಾಡಲು ಕಾನೂನು ಸಚಿವರು ಯತ್ನಿಸಿರುವುದು ಇದೇ ಮೊದಲು. ಸಿಬಿಐ ಸಲ್ಲಿಸಿರುವ ವರದಿಯ ಮೂಲ ಪ್ರತಿ ಹಾಗೂ ತಿದ್ದುಪಡಿ ಮಾಡಿದ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು' ಎಂದು ರಾಜ್ಯಸಭೆಯಲ್ಲಿ ಬಿಜೆಪಿ ಉಪ ನಾಯಕ ರವಿಶಂಕರ ಪ್ರಸಾದ್ ಒತ್ತಾಯಿಸಿದರು.ವರದಿಯಲ್ಲಿ ಏನೆಲ್ಲ ಬದಲಾವಣೆ ಮಾಡಲಾಗಿದೆ ಎನ್ನುವುದು ಉಲ್ಲೇಖನಿಯ ಅಲ್ಲವಾದರೂ ಸಿಬಿಐ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಹಸ್ತಕ್ಷೇಪಮಾಡುತ್ತಿರುವುದಂತು ಇದರಿಂದ ಸ್ಪಷ್ಟವಾಗಿದೆ ಎಂದು ಜೇಟ್ಲಿ ಹೇಳಿದರು.ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಪ್ರಧಾನಿ ಕಚೇರಿ ನಡುವೆ ನಡೆದಿದೆ ಎನ್ನಲಾದ ಇಮೇಲ್ ಸಂದೇಶಗಳ ರವಾನೆ ವಿಷಯವನ್ನು ಬಹಿರಂಗಗೊಳಿಸಬೇಕು. ಈ ವಿಷಯದಲ್ಲಿ ಪ್ರಧಾನಿ ಡಾ. ಸಿಂಗ್ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು ಎಂದು ಜೇಟ್ಲಿ ಹೇಳಿದರು.

 

ಪ್ರತಿಕ್ರಿಯಿಸಿ (+)